Karnataka Election: ಚುನಾವಣೆ ಮೇಲೆ ನಿರೀಕ್ಷೆಯಿಟ್ಟ ಸಿದ್ದಿ ಜನಾಂಗ, ಕರ್ನಾಟಕದಲ್ಲಿರುವ ಆಫ್ರಿಕಾ ಮೂಲದ ಜನರ ಕಥೆ-ವ್ಯಥೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election: ಚುನಾವಣೆ ಮೇಲೆ ನಿರೀಕ್ಷೆಯಿಟ್ಟ ಸಿದ್ದಿ ಜನಾಂಗ, ಕರ್ನಾಟಕದಲ್ಲಿರುವ ಆಫ್ರಿಕಾ ಮೂಲದ ಜನರ ಕಥೆ-ವ್ಯಥೆ

Karnataka Election: ಚುನಾವಣೆ ಮೇಲೆ ನಿರೀಕ್ಷೆಯಿಟ್ಟ ಸಿದ್ದಿ ಜನಾಂಗ, ಕರ್ನಾಟಕದಲ್ಲಿರುವ ಆಫ್ರಿಕಾ ಮೂಲದ ಜನರ ಕಥೆ-ವ್ಯಥೆ

ರಾಜ್ಯದಲ್ಲೀಗ ಚುನಾವಣಾ ಹಬ್ಬದ (Karnataka Election) ಸಂಭ್ರಮ. ಆದರೆ, ಉತ್ತರ ಕನ್ನಡದ (Uttara Kannada District) ಉಗ್ಗಿನಕೇರಿ ಸೇರಿದಂತೆ ಸಿದ್ದಿ ಸಮುದಾಯ (Siddi Tribe) ಇರುವೆಡೆ ಯಾವುದೇ ಪ್ರಚಾರದ ಅಬ್ಬರ, ಸಡಗರ ಕಾಣಿಸದು. ಸಿದ್ದಿ ಜನಾಂಗದ ಬದುಕು ಬವಣೆ ಕುರಿತು ಉತ್ತರ ಕನ್ನಡದ ಮುಂಡಗೋಡದ ಗೆರಾರ್ಡ್ ಡಿಸೋಜಾ ಬರೆದ ವಿಶೇಷ ಲೇಖನ ಇಲ್ಲಿದೆ.

In Karnataka, the Siddis, who are around 50,000 in all, enjoy the status of a Scheduled Tribe. (HT photo)
In Karnataka, the Siddis, who are around 50,000 in all, enjoy the status of a Scheduled Tribe. (HT photo)

ಆಗಷ್ಟೇ ಸಂಜೆಯಾಗಿತ್ತು. ಮೋತೇಶ್ ಸಂತಾನ ಸಿದ್ದಿ(52) ಬಿರುಸಾಗಿ ಮನೆಯ ಕಡೆಗೆ ನಡೆಯುತ್ತಿದ್ದರು. ಅವರು ಸೆಕ್ಯುರಿಟಿ ಗಾರ್ಡ್‌ ಮತ್ತು ಅರೆಕಾಲಿಕ ಕೃಷಿ ಕಾರ್ಮಿಕ. ಕತ್ತಲಾಗುವ ಮೊದಲು ಮನೆ ಸೇರಬೇಕಾದರೆ ಹನ್ನೆರಡು ಕಿ.ಮೀ. ಓಡಬೇಕು ಅಥವಾ ದಾರಿಯಲ್ಲಿ ಬರುವ ವಾಹನಗಳಿಗೆ ಕೈ ತೋರಿಸಿ ನಿಲ್ಲಿಸಬೇಕು.

ಆದರೆ, ಹಾವೇರಿಯ ಗಡಿಗೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಪ್ರದೇಶಗಳ ಅಂಚಿನಲ್ಲಿರುವ ಉಗ್ಗಿನಕೇರಿಗೆ ಹೋಗುವ ಏಕ ಪಥದ, ಗುಂಡಿಗಳು ತುಂಬಿರುವ ಗ್ರಾಮೀಣ ರಸ್ತೆಯಲ್ಲಿ ವಾಹನಗಳು ಹೋಗುವುದೇ ವಿರಳ. ಬೇಸಿಗೆ ಕಾಲದಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಮೇ ತಿಂಗಳಿನಲ್ಲಿ ಮಗಳ ಮದುವೆ ಇದೆ. ದುಡಿಯುವುದು ಅನಿವಾರ್ಯ. ಎಷ್ಟು ಕಿಲೋಮೀಟರ್‌ ದೂರದಲ್ಲಿ ಕೆಲಸವಿದ್ದರೂ ಬದುಕಿಗಾಗಿ ಇವರು ನಡೆಯುತ್ತಲೇ ಇರಬೇಕು.

ಇದು ಕೇವಲ ಮೋತೇಶ್ ಸಂತಾನ ಸಿದ್ದಿ ಕಥೆಯಲ್ಲ

ಇದು ಭಾರತದ ಯಾವುದೇ ಕೃಷಿ ಕಾರ್ಮಿಕರ ಸಾಮಾನ್ಯ ಕತೆ-ವ್ಯಥೆಯಾಗಿರಬಹುದು. ಮೋತೇಶ್‌ ಸಂತಾನ ಸಿದ್ದಿಯು ಕರ್ನಾಟಕದ ಸಿದ್ದಿ ಬುಡಕಟ್ಟಿನ ಸದಸ್ಯ. ಗುಲಾಮರಾಗಿ ಭಾರತದ ಗೋವಕ್ಕೆ ಆಗಮಿಸಿದ ಆಫ್ರಿಕನ್ ಮೂಲದ ಸಮುದಾಯವಿದು. ಬಳಿಕ ಇವರು ಪೋರ್ಚುಗೀಸರ ಹಿಡಿತದ ಪ್ರದೇಶಗಳನ್ನು ಬಿಟ್ಟು ಬೆಟ್ಟಗುಡ್ಡಗಳ ಪ್ರದೇಶಗಳಿಗೆ ಓಡಿಹೋದರು. ಅವರ ಚರ್ಮದ ಕಪ್ಪು ಬಣ್ಣ, ದೇಹದ ಪದರಗಳು, ಬಡಕಲು ಜೀವ ಅವರ ಬದುಕಿನ ಬವಣೆಯನ್ನು ಹೇಳುತ್ತದೆ.

ಆಫ್ರಿಕಾದ ವಿವಿಧ ಭಾಗಗಳಿಂದ ಬಂದಿದ್ದ ಸಿದ್ದಿಗಳು ಹಲವು ವರ್ಷಗಳಿಂದ ಒಂದೇ ಬುಡಕಟ್ಟು ಜನಾಂಗವಾಗಿ ಪರಿವರ್ತನೆಗೊಂಡು ಉತ್ತರ ಕನ್ನಡದ ಯಲ್ಲಾಪುರ, ಹಳಿಯಾಳ ಮತ್ತು ಮುಂಡಗೋಡ ಪಟ್ಟಣಗಳ ಸುತ್ತಮುತ್ತ ನೆಲೆಸಿದ್ದಾರೆ. ಅವರು ಕಾಡುಗಳಿಗೆ ಅಂಟಿದ ಕೃಷಿ ಭೂಮಿಯಲ್ಲಿ ವಾಸಿಸುತ್ತಾರೆ. ಇವರಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿದ್ದಾರೆ. ಕೊಂಕಣಿ ಇವರ ಪ್ರಮುಖ ಭಾಷೆ. ಕೆಲವರು ಕನ್ನಡ ಮತ್ತು ಮರಾಠಿ ಮಾತನಾಡಬಲ್ಲರು. ಕರ್ನಾಟಕ ಮಾತ್ರವಲ್ಲದೆ ಸಿದ್ದಿ ಜನಾಂಗವು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿಯೂ ನೆಲೆಸಿದ್ದಾರೆ.

ಕರ್ನಾಟಕದಲ್ಲಿ ಸಿದ್ದಿಗಳ ಸಂಖ್ಯೆ ಸುಮಾರು 50 ಸಾವಿರ ಆಸುಪಾಸಿನಲ್ಲಿದೆ. ಇಲ್ಲಿ ಇವರು ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ಹೊಂದಿದ್ದಾರೆ. ಶಾಂತಾರಾಮ ಸಿದ್ದಿ ಬುಡಕಟ್ಟು ಜನಾಂಗದಿಂದ ರಾಜ್ಯ ಶಾಸಕಾಂಗವನ್ನು ಪ್ರವೇಶಿಸಿದ ಮೊದಲ ವ್ಯಕ್ತಿ. ಜುಲೈ 2020 ರಲ್ಲಿ ಅವರು ಶಾಸಕಾಂಗ ಪ್ರವೇಶಿಸಿದರು. ಅವರನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ರಾಜ್ಯದ ಶಾಸಕಾಂಗ ಮಂಡಳಿಗೆ ನಾಮನಿರ್ದೇಶನ ಮಾಡಿತು. ದೇಶದಲ್ಲಿ ಶಾಸಕಾಂಗ ಮಂಡಳಿಯ ಸದಸ್ಯರಾದ ಆಫ್ರಿಕನ್ ಜನಾಂಗದ ಮೊದಲ ವ್ಯಕ್ತಿ ಎನಿಸಿಕೊಂಡರು.

ಕಷ್ಟ ಮತ್ತು ಕಳಂಕ: ಸಿದ್ದಿ ಜನಾಂಗದ ಜೀವನ ಸುಲಭವಲ್ಲ

"ನಮಗಿರುವ ಪ್ರಮುಖ ಸಮಸ್ಯೆ ಭೂಮಿಯ ಹಕ್ಕು ದೊರಕದೆ ಇರುವುದು. ನಮ್ಮ ಹಕ್ಕುಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ಭೂ ದಾಖಲೆಯ ಸರಿಯಾದ ಕಾಲಂನಲ್ಲಿ ನಮಗೆ ಹಕ್ಕುಗಳನ್ನು ನೀಡಲಾಗಿಲ್ಲ. ಭೂಮಾಲಕರ ಬದಲಿಗೆ ಭೂಮಿಯನ್ನು ವಶಪಡಿಸಿಕೊಂಡವರು ಎಂದು ಮಾತ್ರ ನೋಂದಾಯಿಸಲಾಗುತ್ತದೆ ” ಎಂದು ಉಗ್ಗಿನಕೇರಿಯ ಗ್ರಾ.ಪಂ ಸದಸ್ಯ ಕ್ಸೇವಿಯರ್ ಸಿದ್ದಿ ಹೇಳಿದ್ದಾರೆ. ಉಗ್ಗಿನಕೇರಿಯಲ್ಲಿ ಗಣನೀಯ ಪ್ರಮಾಣದ ಸಿದ್ದಿಯರು ವಾಸಿಸುತ್ತಿದ್ದಾರೆ.

ಭೂಮಾಲೀಕರಾಗಿ ದಾಖಲೆ ಹೊಂದಿದರೆ ಹಲವು ಪ್ರಯೋಜನಗಳಿವೆ. ಸಬ್ಸಿಡಿ ಬೋರ್‌ವೆಲ್‌ಗಳು, ಟ್ರಾಕ್ಟರ್‌ಗಳು, ಅಗ್ಗದ ಕೃಷಿ ಸಾಲಗಳು ಸೇರಿದಂತೆ ಹಲವು ಅವಕಾಶಗಳು ದೊರಕುತ್ತವೆ. ಆದರೆ, ಬಹುತೇಕ ಸಿದ್ದಿಗಳಿಗೆ ಜಮೀನು ಪತ್ರಗಳಿಲ್ಲದಿರುವುದರಿಂದ ಕೆಲಸ ಹುಡುಕಿಕೊಂಡು ಹೋಗುವುದು ಅನಿವಾರ್ಯವಾಗಿದೆ. ಠಿಣ ಶ್ರಮದ ಅಗತ್ಯವಿರುವ ಕೈಗಾರಿಕೆಗಳು ಮತ್ತು ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ಅವರು ಹೇಳಿದರು.

ಕಾಲ ಬದಲಾಗಿದೆ. ಸಿದ್ದಿ ಸಮುದಾಯ ಶಿಕ್ಷಣ ಪಡೆಯುತ್ತಿದೆ. ಹುಡುಗರಿಗಿಂತ ಹುಡುಗಿಯರು ಹೆಚ್ಚು ವಿದ್ಯಾವಂತರಾಗುತ್ತಿದ್ದಾರೆ. "ನಮ್ಮ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಆದರೆ, ಬಹುತೇಕರಿಗೆ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹುಡುಗರು ಶಾಲೆಯಿಂದ ಹೊರಗುಳಿಯುವುದೇ ಹೆಚ್ಚು. ಮದುವೆಯ ಸಮಯದಲ್ಲಿ ಇದರಿಂದ ತೊಂದರೆಯಾಗುವುದೇ ಹೆಚ್ಚು. ಸಿದ್ದಿ ಸಮುದಾಯದ ವಿದ್ಯಾವಂತ ಹೆಣ್ಣಿಗೆ ಸೂಕ್ತವಾದ ವಿದ್ಯಾವಂತ ಗಂಡು ಸಿಗುತ್ತಿಲ್ಲ. ಗಂಭೀರ ಹೊಂದಾಣಿಕೆಯ ಸಮಸ್ಯೆಯಾಗುತ್ತದೆ" ಎಂದು ಅನಿಲ್‌ ಡಿಸೋಜಾ ಹೇಳಿದ್ದಾರೆ. ಅವರು ಸಿದ್ದಿ ಜನಾಂಗದಲ್ಲಿ ಕೆಲಸ ಮಾಡುತ್ತಿರುವ ಜೆಸ್ಯೂಟ್‌ ಪಾದ್ರಿ.

ಸಿದ್ದಿ ಜನಾಂಗ ಸಾಕಷ್ಟು ಅವಮಾನ, ಕಳಂಕ, ಹೋರಾಟದಲ್ಲಿಯೇ ಬದುಕು ಕಳೆಯುತ್ತದೆ.

"ಸಿದ್ದಿ ಜನಾಂಗದವರು ಹಳ್ಳಿ ತೊರೆದಾಗ ಶಿಕ್ಷಕರು ಅಥವಾ ಗೆಳೆಯರಿಂದ ಅವಮಾನ ಅನುಭವಿಸುತ್ತಾರೆ. ಮನಸ್ಸು ಗಾಯಗೊಳ್ಳುತ್ತದೆ. ಬೇಸರದಲ್ಲಿಯೇ ಊರು ಬಿಡುತ್ತಾರೆ. ನೀವು ಎಂದಾದರೂ ಬೀದಿಯಲ್ಲಿ ಅಥವಾ ಶಾಲೆಯ ಮುಂಭಾಗದಲ್ಲಿ ಸಿದ್ದಿ ಜನರು ಸಾಗುವುದನ್ನು ಗಮನಿಸಿರಬಹುದು. ಆ ಸಂದರ್ಭದಲ್ಲಿ ತಮ್ಮ ಗುರುತು ಯಾರೂ ಹಿಡಿಯಬಾರದೆಂದು ಅವರು ಟೋಪಿ ಧರಿಸುತ್ತಾರೆ. ಯಾರಾದರೂ ನೋಡಿ ಗುರುತು ಹಿಡಿದು ಟೀಕಿಸಬಹುದು ಎಂಬ ಅಂಜಿಕೆ ಇರುತ್ತದೆ" ಎಂದು ಡಿಸೋಜಾ ಹೇಳಿದರು.

ಹೊಸ ಅವಕಾಶಗಳು

ಸಿದ್ದಿ ಸಮುದಾಯಕ್ಕೆ ಸಹಾಯದ ಅಗತ್ಯವಿದೆ. ವಿಶೇಷವಾಗಿ ಲಾಭದಾಯಕ ಉದ್ಯೋಗ ಪಡೆಯಲು ಸಹಾಯ ಬೇಕಿದೆ. ಸಮುದಾಯದ ಸದಸ್ಯರು ಕ್ವಿಲ್ಟಿಂಗ್‌ನಲ್ಲಿ(ಗಾದಿ) ವಿಶಿಷ್ಟ ಕೌಶಲ್ಯಗಳನ್ನು ಹೊಂದಿದ್ದರೂ ಉದ್ಯಮದಿಂದ ಅಂತಹ ಪ್ರಯೋಜನ ದೊರಕಿಲ್ಲ. ಸಮುದಾಯದ ಪ್ರಯೋಜನಕ್ಕಾಗಿ ಸ್ಥಾಪಿಸಿರುವ ಟ್ರಸ್ಟ್‌ಗಳು ಕ್ವಿಲ್ಟಿಂಗ್‌ ಉದ್ಯಮವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತದೆ. ಸಿದ್ದಿ ಜನಾಂಗ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಮೈನಶಳ್ಳಿ ಮತ್ತು ಉಗ್ಗಿನಕೇರಿ ಗ್ರಾಮದ ಹೆಲೆನ್ ಮತ್ತು ಸಮಂತಾ ಎಂಬ ಇಬ್ಬರು ಬಾಲಕಿಯರು ಕರ್ನಾಟಕ ರಾಜ್ಯ ಬಾಕ್ಸಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿ ಮಣಿಪುರದಲ್ಲಿ ನಡೆದ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾದದ್ದು ಸಮುದಾಯಕ್ಕೆ ಹೆಮ್ಮೆಯ ಕ್ಷಣ. ಅದೇ ರೀತಿ, ಬೆಂಗಳೂರಿನಲ್ಲಿರುವ ರಾಜ್ಯ ಸರ್ಕಾರದ ಸೌಲಭ್ಯದಲ್ಲಿ ತರಬೇತಿ ಪಡೆಯುತ್ತಿದ್ದ ಸಮುದಾಯದ ಏಳು ಮಂದಿ ಪುದುಚೇರಿಯಲ್ಲಿ ನಡೆದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪದಕಗಳನ್ನು ಪಡೆದಿದ್ದಾರೆ.

ಅಥ್ಲೆಟಿಕ್ಸ್‌ನಲ್ಲಿ ಮುಂಡಗೋಡಿನ ಸಿದ್ದಿ ಸಮುದಾಯದ ಬಾಲಕ ರವಿಕಿರಣ್ ಭಾರತದ ವೇಗದ ಓಟಗಾರನಾಗುವ ಭರವಸೆಯಲ್ಲಿದ್ದಾನೆ. ಪ್ರಸ್ತುತ 10.8 ಸೆಕೆಂಡ್‌ ಡ್ಯಾಶ್‌ನಲ್ಲಿ 100 ಮೀ ವೇಗವನ್ನು ತಲುಪುವ ಅವರು 10.25 ಸೆಕೆಂಡ್‌ಗಳಲ್ಲಿರುವ ರಾಷ್ಟ್ರೀಯ ದಾಖಲೆಗೆ ಹತ್ತಿರದಲ್ಲಿದ್ದಾರೆ.

ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆಯನ್ನು ಒರೆಗೆ ಹಚ್ಚುವ ಸರಕಾರದ ಕಾರ್ಯಕ್ರಮಗಳು ನಿಂತಿವೆ. ಉದಯೋನ್ಮುಖ ಕ್ರೀಡಾಪಟುಗಳು ಬ್ರಿಡ್ಜ್ ಆಫ್ ಸ್ಪೋರ್ಟ್ಸ್ ಫೌಂಡೇಶನ್ ಅನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇದು ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆಯಾಗಿದ್ದು, ಸಿದ್ದಿ ಸಮುದಾಯದ 300 ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಲು ಮುಂದಾಗಿದೆ. ಮಿಷನರಿಗಳ ನೆರವಿನಿಂದ ಬುಡಕಟ್ಟು ಜನಾಂಗದವರು ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸುವ ನೃತ್ಯ ತಂಡವನ್ನು ಕಟ್ಟಿಕೊಂಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ರಾಜ್ಯ ಮತ್ತು ಹೊರರಾಜ್ಯಗಳಿಗೆ ಹೋಗುತ್ತಿದ್ದಾರೆ.

ರಾಜ್ಯದಾದ್ಯಂತ ಚುನಾವಣಾ ಹಬ್ಬದ ಸಡಗರ ಸಂಭ್ರಮ ಕಾಣಿಸುತ್ತಿದೆ. ಆದರೆ, ಉಗ್ಗಿನಕೇರಿಯಲ್ಲಿ ಚುನಾವಣೆಯ ಸಂಭ್ರಮ ಕಾಣಿಸುತ್ತಿಲ್ಲ. ಸಂಜೆ ಪ್ರಾರ್ಥನೆಗಾಗಿ ಸಮುದಾಯವು ಗ್ರಾಮದ ಚರ್ಚ್‌ನ ಹೊರಗೆ ಒಟ್ಟುಗೂಡುತ್ತಾರೆ. ಮಹಿಳೆಯರು ಸಂಜೆ ಅಡಿಕೆ ಮತ್ತು ಜೋಳದ ಹೊಲಗಳಲ್ಲಿ ಕೆಲಸ ಮಾಡಿ ಹಿಂತುರುಗುತ್ತಿದ್ದಾರೆ. ಅಲ್ಲಿ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ಎಲ್ಲವೂ ಹಿಂದಿನಂತಲೇ, ಎಂದಿನಂತಲೇ ನಡೆಯುತ್ತಿದೆ.

ಐದು ವರ್ಷಕ್ಕೊಮ್ಮೆ ರಾಜಕಾರಣಿಗಳಿಗೆ ನೆನಪು

"ಐದು ವರ್ಷಕ್ಕೊಮ್ಮೆ ನಮ್ಮ ಹಳ್ಳಿಗೆ ರಾಜಕಾರಣಿಗಳು ಬರುತ್ತಾರೆ. ಕೆಲವೊಮ್ಮೆ ಅವರು ನಮ್ಮ ಕುರಿತು ಸಂಪೂರ್ಣವಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಕೆಲವು ಬೇಡಿಕೆಗಳನ್ನಾದರೂ ಈಡೇರಿಸುವ ಭರವಸೆಯೊಂದಿಗೆ ನಾವು ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದೇವೆ. ಕರ್ತವ್ಯ ಪ್ರಜ್ಞೆಯಿಂದ ಇಲ್ಲದಿದ್ದರೆ, ಕನಿಷ್ಠ ಕರುಣೆಯಿಂದ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ" ಎಂದು ಕ್ಸೇವಿಯರ್ ಸಿದ್ದಿ ಹೇಳಿದ್ದಾರೆ.

ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ಸಿದ್ದಿ ಸಮುದಾಯವು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಮತದಾರರು. ಆದರೆ, ಇತ್ತೀಚೆಗೆ ಇವರ ಬಿಜೆಪಿಯತ್ತ ಆಸಕ್ತರಾಗಿದ್ದಾರೆ. ಬುಡಕಟ್ಟು ವ್ಯಕ್ತಿಯನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವುದು ಮತ್ತು ಗುಜರಾತ್‌ನ ಸಿದ್ದಿ ಮಹಿಳೆ ಹೀರಾಬಾಯಿ ಇಬ್ರಾಹಿಂ ಲೋಬಿಗೆ ಪದ್ಮ ಪ್ರಶಸ್ತಿ ನೀಡಿರುವುದು ಸೇರಿದಂತೆ ಹಲವು ಕ್ರಮಗಳು ಸಿದ್ದಿ ಜನಾಂಗವನ್ನು ಕೇಸರಿ ಪಕ್ಷದತ್ತ ತಿರುಗಲು ಸಹಾಯ ಮಾಡಿದೆ.

ಗೆರಾರ್ಡ್ ಡಿ ಸೋಜಾ, ಮುಂಡಗೋಡ (ಉತ್ತರ ಕನ್ನಡ)
ಗೆರಾರ್ಡ್ ಡಿ ಸೋಜಾ, ಮುಂಡಗೋಡ (ಉತ್ತರ ಕನ್ನಡ)

ಮೂಲ ಇಂಗ್ಲಿಷ್‌ ಲೇಖನ: ಗೆರಾರ್ಡ್ ಡಿ ಸೋಜಾ, ಮುಂಡಗೋಡ (ಉತ್ತರ ಕನ್ನಡ)

ಕನ್ನಡಕ್ಕೆ ಅನುವಾದ: ಪ್ರವೀಣ್‌ ಚಂದ್ರ ಪುತ್ತೂರು

Whats_app_banner