logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಟ್ಯೊಮೆಟೋ ಬೆಲೆ ಕುಸಿತ; ಕಳೆದು ಹೋದ ವೈಭವ

Vijayapura News: ಟ್ಯೊಮೆಟೋ ಬೆಲೆ ಕುಸಿತ; ಕಳೆದು ಹೋದ ವೈಭವ

HT Kannada Desk HT Kannada

Sep 23, 2023 12:24 PM IST

google News

ಟ್ಯೊಮೆಟೋ ಬೆಲೆ ಕುಸಿತ; ಕಳೆದು ಹೋದ ವೈಭವ

    • ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ರೈತ ಭೀಮು ಲಮಾಣಿ ಎಂಬುವರು ಎರಡು ತಿಂಗಳ ಹಿಂದೆಯಷ್ಟೇ ತಮ್ಮ ಟ್ಯೊಮೆಟೋ ಬೆಳೆ ಕಳ್ಳತನವಾಗದಂತೆ ಕಾವಲುಗಾರರನ್ನು ನೇಮಿಸಿದ್ದಲ್ಲದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.
 ಟ್ಯೊಮೆಟೋ ಬೆಲೆ ಕುಸಿತ; ಕಳೆದು ಹೋದ ವೈಭವ
ಟ್ಯೊಮೆಟೋ ಬೆಲೆ ಕುಸಿತ; ಕಳೆದು ಹೋದ ವೈಭವ

ವಿಜಯಪುರ: ಕೆಲ‌ ದಿನಗಳ ಹಿಂದಿನ ಮಾತು, ಟ್ಯೋಮೆಟೋ ಬೆಲೆ ಗಗನಕ್ಕೇರಿ ಹೊಸ ಅಲೆ ಸೃಷ್ಟಿಸಿತ್ತು. ಒಂದು ರೀತಿ ಬಂಗಾರಕ್ಕಿಂತಲೂ ಟ್ಯೊಮೆಟೋ ಭಾರಿ ಎಂಬ ಟ್ರೋಲ್ ಸದ್ದು ಮಾಡಿತ್ತು‌, ಟ್ಯೊಮೆಟೋ ಬೆಳೆದವರಿಗೆ ಡಿಮ್ಯಾಂಡ ಕೂಡಾ ಅಧಿಕವಾಗಿತ್ತು, ಕಳ್ಳಕಾಕರು ಸಹ ಬಂಗಾರ ಬಿಟ್ಟು ಟ್ಯೊಮೆಟೋ ಕದಿಯುವುದಕ್ಕೆ ಆರಂಭಿಸಿದ್ದರು, ಅನೇಕ ರೈತರು ತಾವು ಬೆಳೆದ ಟ್ಯೊಮೆಟೋ ಬೆಳೆಗೆ ರಕ್ಷಣೆಗಾಗಿ ಕಾವಲುಗಾರ ನೇಮಕ, ಸಿಸಿ ಕ್ಯಾಮೆರಾ ಅಳವಡಿಸಿದ್ದರು‌. ಆದರೆ ಈಗ ಟ್ಯೊಮೆಟೋ ಸಹಜ ಸ್ಥಿತಿಗೆ ಬಂದಿದೆ. ಕ್ಯಾರೆಟ್ 3 ಸಾವಿರ ರೂ. ಮಾರಾಟವಾಗುತ್ತಿದ್ದ ಟ್ಯೊಮೆಟೋ ಈಗ 60 ರೂ.ಗೆ ಸೀಮಿತವಾಗಿದೆ.

ಎರಡು ತಿಂಗಳ ಹಿಂದೆಯಷ್ಟೇ ತಾಲೂಕಿನ ಅಲಿಯಾಬಾದ್ ಗ್ರಾಮದ ರೈತ ಭೀಮು ಲಮಾಣಿ ಎಂಬುವರು ತಮ್ಮ ಟ್ಯೊಮೆಟೋ ಬೆಳೆ ಕಳ್ಳತನವಾಗದಂತೆ ಕಾವಲುಗಾರರನ್ನು ನೇಮಿಸಿದ್ದಲ್ಲದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.

25 ಕೆಜಿಯ ಟ್ಯೊಮೆಟೋ ಕ್ರೇಟ್ ಗೆ 3000 ರೂ. ಬೆಲೆ ಇದ್ದಾಗ ಟ್ಯೊಮೆಟೋ ಕಟಾವು ಮಾಡಿದ ಭೀಮು ಲಮಾಣಿ ಭದ್ರತೆಯಲ್ಲಿ ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಆದರೆ ಇಂದು ಲಮಾಣಿ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿರುವ ಟ್ಯೊಮೆಟೋವನ್ನು ಉಚಿತವಾಗಿ ತೆಗೆದುಕೊಂಡು ಹೋಗಲು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಎರಡು ತಿಂಗಳ ಹಿಂದೆ ಯಾವ ಟ್ಯೊಮೆಟೋ ಕ್ರೇಟ್ 3000 ರೂ. ಗೆ ಮಾರಾಟವಾಗಿತ್ತೊ ಇಂದು ಅದೇ ಒಂದು ಕ್ರೇಟ್ ಬೆಲೆ ಕೇವಲ 60 ರೂ. ಆಗಿದೆ. ಹೀಗಾಗಿ ಇದರಲ್ಲಿ ಲಾಭ ಮಾಡಿಕೊಳ್ಳುವುದಾದರೂ ಬಿಡಿ ಕೂಲಿ ವೆಚ್ಚವು ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತ ವಿವರಿಸಿದರು‌‌.

ಈ ಹಿಂದೆ ಪ್ರತಿ ಕೆಜಿ ಟ್ಯೊಮೆಟೋ ಬೆಲೆ 150-200 ರೂ. ಗಳಾಗಿದ್ದಾಗ ಭೀಮು ಲಮಾಣಿ ಅವರು ಕೇವಲ ಎರಡು ತಿಂಗಳಲ್ಲಿ ಟ್ಯೊಮೆಟೋ ಮಾರಿ 60 ಲಕ್ಷ ರೂ. ಲಾಭ ಗಳಿಸಿದ್ದರು. ಆದರೆ ಸಧ್ಯ ಪ್ರತಿ ಟ್ಯೊಮೆಟೋ ಕ್ರೇಟ್ ನ ಬೆಲೆ ಕೇವಲ 60 ರೂ. ಗೆ ಕುಸಿದಿರುವುದರಿಂದ ಅಪಾರ ನಷ್ಟ ಉಂಟಾಗುತ್ತಿದ್ದು, ಟ್ಯೊಮೆಟೋವನ್ನು ಗೊಬ್ಬರವನ್ನಾಗಿ ಮಾಡಲು ಸುಮ್ಮನೆ ಗದ್ದೆಗೆ ಬಿಡಲು ನಿರ್ಧರಿಸಿರುವುದಾಗಿ ಲಮಾಣಿ ತಿಳಿಸಿದರು.

ಇನ್ನು ಟ್ಯೊಮೆಟೋ ಬೆಳೆ ಬೆಳೆದು ಲಾಭ ಪಡೆಯಬೇಕಾದರೆ ಪ್ರತಿ ಕ್ರೇಟ್ ಬೆಲೆ 300 ರೂ. ಗೂ ಅಧಿಕವಾಗಿರಬೇಕು. ಇದರ ಕೆಳಗಿನ ದರಕ್ಕೆ ಮಾರಾಟ ಮಾಡಿದರೆ ಅದರಿಂದ ಯಾವ ಲಾಭವು ಆಗುವುದಿಲ್ಲಾ ರೈತರಿಗೆ ನಷ್ಟವಾಗುತ್ತದೆ ಎಂದರು.

ಇನ್ನು ಇಷ್ಟು ನಿರೀಕ್ಷೆಗೂ ಮೀರಿ ಲಾಭ ಸಿಗುವುದು ಅಪರೂಪ. ನಾಲ್ಕು ಎಕರೆ ಜಮೀನಿನಲ್ಲಿ ಕೇವಲ 9 ಲಕ್ಷ ರೂ. ಖರ್ಚು ಮಾಡಿ ಟೊಮೆಟೊ ಬೆಳೆ ಬೆಳೆದು 60 ಲಕ್ಷ ಲಾಭವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಬೆಲೆ ಕಡಿಮೆಯಾಗಬಹುದು ಎಂಬ ಅರಿವಿದ್ದ ಕಾರಣ ಹೊಸ ಗಿಡಗಳನ್ನು ಬೆಳೆಸಿಲ್ಲ ಎಂದು ಲಮಾಣಿ ಸ್ಪಷ್ಟಪಡಿಸಿದರು.

ಈಗ ನಾನು ಅಂದುಕೊಂಡಂತೆಯೇ ಆಗಿದೆ. ಇತ್ತೀಚಿಗೆ ಕೆಲವು ರೈತರು ಟ್ಯೊಮೆಟೋ ಬೆಳೆಯಿಂದ ಭಾರಿ ಲಾಭ ಗಳಿಸುತ್ತಿರುವ ಬಗ್ಗೆ ತಿಳಿದ ನಂತರ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ರೈತರು ಅದೇ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದರು. ಇದರಿಂದಾಗಿ ಉತ್ಪಾದನೆಯು ಬೇಡಿಕೆಯನ್ನು ಮೀರಿದ್ದು ಮಾರುಕಟ್ಟೆಯಲ್ಲಿ ಟ್ಯೊಮೆಟೋ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಪ್ರಗತಿಪರ ಕೃಷಿಕರೂ ಆಗಿರುವ ಲಮಾಣಿ ತಮ್ಮ ಅನುಭವದ ಜೊತೆಗೆ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಯಾವುದೇ ಬೆಳೆಯನ್ನು ಬೆಳೆಯದಂತೆ ರೈತರಿಗೆ ಸಲಹೆ ನೀಡಿದ್ದಾರೆ.

ಬೆಳೆಗಳು ಕೊಯ್ಲು ಅವಧಿಯನ್ನು ತಲುಪಲು ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ರೈತರು ಅರಿತುಕೊಳ್ಳಬೇಕು. ಆ ವೇಳೆಗೆ ಮಾರುಕಟ್ಟೆ ಬದಲಾವಣೆಯಾಗಿ ರೈತರು ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದರು.

ತೋಟಗಾರಿಕಾ ರೈತರು ಇಂದು ಬೇಡಿಕೆ ಇರುವ ಬೇಸಾಯ ಮಾಡುವ ಹಿಂದೆ ಹೋಗುವ ಬದಲು ಪ್ರಸ್ತುತ ಬೇಡಿಕೆ ಇಲ್ಲದ ವಿವಿಧ ಬೆಳೆಗಳನ್ನು ಬೆಳೆಯಬೇಕು. ಇದರಿಂದ ರೈತರು ವಿವಿಧ ತರಕಾರಿಗಳನ್ನು ಲಾಭದಾಯಕ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುತ್ತದೆ ಎಂದರು.

(ವರದಿ: ಸಮೀವುಲ್ಲಾ ಉಸ್ತಾದ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ