Viral News: ಹಾವು ತುಳಿಯದಂತೆ ಮಗುವನ್ನು ರಕ್ಷಿಸಿ ಹೀರೋ ಆದ ಕರಿಯ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಮೆಚ್ಚುಗೆ ಗಳಿಸಿದ ಶ್ವಾನ
Feb 27, 2024 10:37 AM IST
ಕುಕ್ಕೆ ಸುಬ್ರಹ್ಮಣ್ಯ ಬಳಿ ಮಗು ಹಾವು ತುಳಿಯದಂತೆ ರಕ್ಷಿಸಿದ ಶ್ವಾನ ಕರಿಯ
Viral News: ಹಾವು ತುಳಿಯುತ್ತಿದ್ದ ಮಗುವೊಂದನ್ನು ಕರಿಯ ಎಂಬ ಶ್ವಾನವೊಂದು ರಕ್ಷಿಸಿ ಎಲ್ಲರ ಮೆಚ್ಚುಗೆ ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಘಟನೆ ನಡೆದಿದ್ದು ಶ್ವಾನದ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಗಳಿಸಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಇನ್ನೇನು ಸ್ವಲ್ಪ ಹೆಚ್ಚು ಕಡಿಮೆಯಾದರೆ ಆ ಮಗು ಹಾವನ್ನು ತುಳಿದೇ ಬಿಡುತ್ತಿತ್ತು, ಆದರೆ ಶ್ವಾನವೊಂದು ಅದನ್ನು ತುಳಿಯದಂತೆ ಅಡ್ಡನಿಂತು, ಹಾವು ತೆರಳಲು ಅವಕಾಶ ನೀಡಿ ಮಗುವನ್ನು ರಕ್ಷಿಸಿತು. ಅಂದ ಹಾಗೆ ಈ ಘಟನೆ ನಡೆದದ್ದು ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ಆದಿಸುಬ್ರಹ್ಮಣ್ಯದ ಬಳಿ.
ಕರಿಯ ಹೆಸರಿನ ಶ್ವಾನ
ಕುಕ್ಕೆ ಸುಬ್ರಹಣ್ಯ ಕ್ಷೇತ್ರಕ್ಕೆ ಆಗಮಿಸಿ, ರಸ್ತೆಯಲ್ಲಿ ತೆರಳುತ್ತಿದ್ದ ಭಕ್ತರ ಗುಂಪಿನಲ್ಲಿದ್ದ ಮಗುವೊಂದು ಹಾವನ್ನು ತುಳಿಯುವುದನ್ನು ಬೀದಿ ನಾಯಿಯೊಂದು ತಪ್ಪಿಸಿ, ರಕ್ಷಿಸಿದ ಘಟನೆ ಇದು ಎಂಬ ಸಂದೇಶವಿರುವ ಬರಹವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಿಯ ಎಂಬ ಪರೋಪಕಾರಿ ಶ್ವಾನ ಮಗುವನ್ನು ರಕ್ಷಿಸಿ ಹೀರೋ ಆಗಿದೆ.
ಆದಿ ಸುಬ್ರಹ್ಮಣ್ಯ ಬಳಿ ಸಾಗುತ್ತಿದ್ದ ತಂಡದಲ್ಲಿ ಮಹಿಳೆಯೊಬ್ಬರು ಪುಟ್ಟ ಮಗುವನ್ನು ರಸ್ತೆಯಲ್ಲಿ ಬಿಟ್ಟು, ಪಕ್ಕದ ಅಂಗಡಿಗೆ ಹಣ್ಣುಕಾಯಿ ಖರೀದಿಸಲು ತೆರಳಿದ್ದರು. ಆಗ ಮಗು ರಸ್ತೆಯ ಬದಿ ಬಂದಿತ್ತು. ಅದೇ ಸಮಯದಲ್ಲಿ ನಾಗರ ಹಾವೊಂದು ಅಲ್ಲೇ ರಸ್ತೆ ದಾಟುತ್ತಿತ್ತು. ಮಗು ಇನ್ನೇನು ಹಾವನ್ನು ತುಳಿದೇ ಬಿಡುತ್ತದೆ ಎನ್ನುವಷ್ಟರಲ್ಲಿ ಅಲ್ಲೇ ಮಲಗಿದ್ದ ಬೀದಿ ನಾಯಿ ಓಡೋಡಿ ಬಂದು ಮಗುವಿಗೆ ಅಡ್ಡ ನಿಂತು ಹಾವನ್ನು ತುಳಿಯದಂತೆ ರಕ್ಷಿಸಿದೆ. ಹಾಗೇ ಹಾವು ಮುಂದೆ ತೆರಳಲು ಅನುವು ಮಾಡಿಕೊಟ್ಟಿದೆ. ಇದರಿಂದ ಮಗುವಿನ ಪ್ರಾಣ ಉಳಿದಿದೆ. ಪ್ರತ್ಯಕ್ಷ ದರ್ಶಿಗಳು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನರು ಶ್ವಾನದ ಫೋಟೋವನ್ನು ಹಂಚಿಕೊಂಡು ಹೀರೋಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.
ಸುಬ್ರಹ್ಮಣ್ಯ ಪೇಟೆಯಲ್ಲಿರುವ ಈ ಬೀದಿನಾಯಿ ಕರಿಯ ಎಂದೇ ಎಲ್ಲರಿಗೂ ಚಿರಪರಿಚಿತ. ಸದಾ ದೇವಸ್ಥಾನದ ಬಳಿ ಅಡ್ಡಾಡುವ ಈ ಶ್ವಾನ ಎಂದರೆ ಸ್ಥಳೀಯಗರಿಗೆ ಬಹಳ ಪ್ರೀತಿ. ಇದೀಗ ಈ ಶ್ವಾನದ ಸಾಹಸ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಪ್ರತಿದಿನ ಸಾವಿರಾರು ಭಕ್ತರು ಆಗಮಿಸುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ನಾಗಾರಾಧನೆಯ ಶ್ರೇಷ್ಠವಾದ ಸ್ಥಳಗಳಲ್ಲಿ ಒಂದು. ಇಲ್ಲಿ ಸ್ವತಃ ಸುಬ್ರಹ್ಮಣ್ಯ ದೇವರು ಸರ್ಪಗಳ ರಾಜ ವಾಸುಕಿ ಮತ್ತು ಆದಿಶೇಷನ ಜೊತೆ ನೆಲೆ ನಿಂತಿದ್ದಾನೆ ಎಂಬ ಪ್ರತೀತಿ. ಹೀಗಾಗಿ ದೇಶದ ಹಲವು ಕಡೆಗಳಿಂದ ವಿಶೇಷವಾಗಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಹಲವು ಭಾಗಗಳು, ಮಹಾರಾಷ್ಟ್ರ ಸಹಿತ ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥವನ್ನು ದೇವರಲ್ಲಿ ಕೋರುತ್ತಾರೆ. ಇಷ್ಟಾರ್ಥ ಈಡೇರಿದ ತೃಪ್ತಿಗೆ ಕಾಣಿಕೆ ಸಲ್ಲಿಸುತ್ತಾರೆ. ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಬಂದರೆ, ಆದಿಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ವಲ್ಮೀಕ ರೂಪದಲ್ಲಿರುವ (ಹುತ್ತ) ದೇವರ ದರ್ಶನ ಮಾಡಿ, ಮೃತ್ತಿಕಾ ಪ್ರಸಾದ ಸ್ವೀಕರಿಸಬೇಕು ಎಂಬ ನಂಬಿಕೆ ಇದೆ.
ಸರ್ಪಗಳ ಸಂಕುಲದ ರಕ್ಷಣೆಗೆ ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತ ಎಂಬ ನಂಬಿಕೆ ಇಲ್ಲಿದೆ. ಇಲ್ಲಿ ನಾಗ ರೂಪದಲ್ಲಿ ಸುಬ್ರಹ್ಮಣ್ಯನ ಆರಾಧನೆ ನಡೆಯುತ್ತದೆ. ಸಕಲ ನಾಗಸಂಕುಲವೇ ಇಲ್ಲಿ ಹರಿದಾಡುತ್ತಿದೆ ಎಂಬ ನಂಬಿಕೆಯೂ ಇದೆ. ಚರ್ಮರೋಗ ನಿವಾರಣೆ, ಸಂತಾನ ಪ್ರಾಪ್ತಿಗಾಗಿ ಜನರು ಇಲ್ಲಿಗೆ ಬರುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಉತ್ತರಕ್ಕೆ ಸುಮಾರು 500 ಮೀಟರ್ ದೂರದಲ್ಲಿ ಆದಿಸುಬ್ರಹ್ಮಣ್ಯ ದೇವಸ್ಥಾನವಿದೆ.
ದೇವಾಲಯದ ಹೊರ ಪ್ರಾಕಾರದ ಬಡಗು ಪಾರ್ಶ್ವದಲ್ಲಿ ಆದಿಸುಬ್ರಹ್ಮಣ್ಯಕ್ಕೆ ಒಂದು ರಸ್ತೆ ಹೋಗುತ್ತದೆ. ಈ ರಸ್ತೆಯಲ್ಲಿ ಸುಮಾರು ಒಂದು ಫರ್ಲಾಂಗ್ ದೂರ ಹೋಗುವಾಗ ದರ್ಪಣ ತೀರ್ಥದ ಎದುರು ಪಕ್ಕದಲ್ಲಿ ಆದಿಸುಬ್ರಹ್ಮಣ್ಯ ಗುಡಿ ಕಾಣಸಿಗುತ್ತದೆ. ಗರ್ಭ ಗೃಹದೊಳಗೆ ದೊಡ್ಡ ವಲ್ಮೀಕವಿದ್ದು, ಇದಕ್ಕೆ ನಿತ್ಯಪೂಜೆ, ನಂದಾದೀಪ, ನೈವೇದ್ಯಾದಿಗಳು ನಡೆಯುತ್ತವೆ.
ಕ್ಷೇತ್ರ ದರ್ಶನಕ್ಕೆ ಬಂದ ಭಕ್ತರು ಆದಿಸುಬ್ರಹ್ಮಣ್ಯನ ದರ್ಶನ ಮಾಡದೆ ಹೋಗುವುದಿಲ್ಲ. ಪ್ರತಿದಿನವೂ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆ ಆಗುವ ಮೊದಲೇ ಇಲ್ಲಿ ನೈವೇದ್ಯ ಪೂಜಾದಿಗಳು ನಡೆಯುತ್ತವೆ. ಕ್ಷೇತ್ರಕ್ಕೆ ಭೇಟಿಯ ಸಂಪೂರ್ಣ ಫಲ ಲಭಿಸಬೇಕಾದರೆ ಆದಿಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂಬ ನಂಬಿಕೆ ಇದೆ. ಇಲ್ಲಿ ಸರ್ಪಗಳು ಎಲ್ಲೆಂದರಲ್ಲಿ ಹರಿದಾಡುತ್ತವೆ. ಹಾಗೆಂದು ಭಕ್ತರಿಗೆ ತೊಂದರೆಯಾದ ಯಾವುದೇ ಉದಾಹರಣೆಗಳಿಲ್ಲ.
-ವರದಿ: ಹರೀಶ್ ಮಾಂಬಾಡಿ, ಮಂಗಳೂರು