logo
ಕನ್ನಡ ಸುದ್ದಿ  /  Karnataka  /  Vivekananda Jayanti: May Narendra's Stances Be Awakened In Us Too; Sandeep Vasistha In Svym Jnandeepa Webinar

Vivekananda Jayanti: ನರೇಂದ್ರನ ನಿಲುವುಗಳು ನಮ್ಮಲ್ಲೂ ಜಾಗೃತವಾಗಲಿ; ಜ್ಞಾನದೀಪ ವೆಬಿನಾರ್‌ನಲ್ಲಿ ಸಂದೀಪ ವಸಿಷ್ಠ

HT Kannada Desk HT Kannada

Jan 13, 2023 09:22 AM IST

ಶಾಲಾ ಮಕ್ಕಳ ಜ್ಞಾನದೀಪ ವೆಬಿನಾರ್‌ ಕಾರ್ಯಕ್ರಮ

  • Vivekananda Jayanti: ಶಾಲಾ ಮಕ್ಕಳ ಜ್ಞಾನದೀಪ ವೆಬಿನಾರ್‌ ಕಾರ್ಯಕ್ರಮದಲ್ಲಿ ಎಸ್‌ವಿವೈಎಂನ ಶಾಲಾ ಶಿಕ್ಷಣ ಕಾರ್ಯಕ್ರಮದ ಬೆಂಗಳೂರು ಕಾರ್ಯಕ್ರಮ ವ್ಯವಸ್ಥಾಪಕ ಸಂದೀಪ ವಸಿಷ್ಠ ʻವೀರ ನರೇಂದ್ರʼ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಶಾಲಾ ಮಕ್ಕಳ ಜ್ಞಾನದೀಪ ವೆಬಿನಾರ್‌ ಕಾರ್ಯಕ್ರಮ
ಶಾಲಾ ಮಕ್ಕಳ ಜ್ಞಾನದೀಪ ವೆಬಿನಾರ್‌ ಕಾರ್ಯಕ್ರಮ

ಧಾರವಾಡ: ಸ್ವಾಮಿ ವಿವೇಕಾನಂದ ಜಯಂತಿ ದಿನವೇ ರಾಷ್ಟ್ರೀಯ ಯುವದಿನ. ರಾಷ್ಟ್ರಹಿತದ ದೃಷ್ಟಿಯಿಂದ ವೀರ ನರೇಂದ್ರ ನಿಲುವುಗಳು ನಮ್ಮಲ್ಲೂ ಜಾಗೃತವಾಗಬೇಕು ಎಂದು ಎಸ್‌ವಿವೈಎಂನ ಶಾಲಾ ಶಿಕ್ಷಣ ಕಾರ್ಯಕ್ರಮದ ಬೆಂಗಳೂರು ಕಾರ್ಯಕ್ರಮ ವ್ಯವಸ್ಥಾಪಕ ಸಂದೀಪ ವಸಿಷ್ಠ ಹೇಳಿದರು.

ಟ್ರೆಂಡಿಂಗ್​ ಸುದ್ದಿ

Mangalore News: ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ; ಮಕ್ಕಳು, ತಾಯಿ ಸುನಂದಾ ಶೆಟ್ಟಿ ಸಾಥ್

ಕರ್ನಾಟಕ ಹವಾಮಾನ ಏಪ್ರಿಲ್ 28: ತಗ್ಗಿದ ಮಳೆ, ಮುಂದುವರಿದ ತಾಪಮಾನ; ಕೋಲಾರ, ಚಿಕ್ಕಬಳ್ಳಾಪುರ ಸೇರಿ 15 ಜಿಲ್ಲೆಗಳಿಗೆ ಶಾಖದ ಅಲೆಯ ಎಚ್ಚರಿಕೆ

Sankey Tank Lake: ಮಳೆ ಕೊರತೆ, ತಾಪಮಾನ ಹೆಚ್ಚಳ; ಬತ್ತುವ ಹಂತಕ್ಕೆ ಬಂದಿದೆಯಾ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಕೆರೆ

Uttara Kannada News: ಪ್ರವಾಸೋದ್ಯಮಕ್ಕೆ ರಣ ಬಿಸಿಲಿನ ಹೊಡೆತ; ಉತ್ತರ ಕನ್ನಡ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ

ಅವರು ಬುಧವಾರ (ಜ.11), ಶಾಲಾ ಮಕ್ಕಳ ಜ್ಞಾನದೀಪ ವೆಬಿನಾರ್‌ ಕಾರ್ಯಕ್ರಮದಲ್ಲಿ ʻವೀರ ನರೇಂದ್ರʼ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಅದು 1863 ರ ಇಸವಿ. ಅಜ್ಞಾನ, ಅಂಧಕಾರ, ದಾಸ್ಯ , ಮೌಢ್ಯತೆ, ಲಾಲಸೆ, ಕೀಳರಿಮೆ, ಶ್ರೇಷ್ಠತೆಯ ರೋಗಗಳಿಂದ ಭಾರತದ ಸನಾತನ ಸಂಸ್ಕೃತಿ ಮತ್ತು ಧಾರ್ಮಿಕ ಅಸ್ತಿತ್ವಕ್ಕೆ ಗ್ರಹಣ ಹಿಡಿದ ಸಂದರ್ಭ. ಇಂತಹ ಸನ್ನಿವೇಶದಲ್ಲಿ ಇವುಗಳಿಗೆ ಉತ್ತರವೆಂಬಂತೆ ಪುಣ್ಯಭೂಮಿ ಭಾರತದಲ್ಲಿ ಮಹಾಪುರುಷರೊಬ್ಬರ ಜನನ ಸಂಭವಿಸಿತ್ತು. ಆ ಪುಣ್ಯ ಪುರುಷ ಬೇರಾರೂ ಅಲ್ಲ, ವೀರ ನರೇಂದ್ರ. 1863ರ ಜನವರಿ 12 ರಂದು ಕಲ್ಕತ್ತಾದ ಸಂಪ್ರದಾಯಸ್ಥ ದತ್ತ ಕುಟುಂಬದಲ್ಲಿ ತಂದೆ ವಿಶ್ವನಾಥದತ್ತ ಹಾಗೂ ತಾಯಿ ಭುವನೇಶ್ವರಿ ದೇವಿಯ ಪ್ರೀತಿಯ ಪುತ್ರನಾಗಿ ನರೇಂದ್ರ ಜನಿಸಿದರು. ಇವರ ಬಾಲ್ಯದ ಹೆಸರು ನರೇಂದ್ರನಾಥದತ್ತ. ಎಲ್ಲರೂ ಪ್ರೀತಿಯಿಂದ ನರೇಂದ್ರ ಎಂದು ಸಂಭೋದಿಸುತ್ತಿದ್ದರು.

ವೆಬಿನಾರ್‌ನಲ್ಲಿ ಭಾಗವಹಿಸಿದ್ದ ಮಕ್ಕಳು

ದೈವಭಕ್ತೆಯಾಗಿದ್ದ ಭುವನೇಶ್ವರಿ ದೇವಿಯವರು ನರೇಂದ್ರನಿಗೆ ದೈವಭಕ್ತಿ ಮತ್ತು ದೇಶಭಕ್ತಿಯು ತುಂಬಿದ ಕಥೆಗಳನ್ನು ಹೇಳುತ್ತಿದ್ದರು. ಇದರ ಪ್ರತಿಫಲವೋ ಎಂಬಂತೆ ನರೇಂದ್ರನು ಬಾಲ್ಯದಲ್ಲಿ ಹಿಡಿದ ಕೆಲಸವನ್ನು ಬಿಡದೇ ಸಾಧಿಸಿ ತೋರಿಸುವ ಛಲವಾದಿ, ಯಾವುದನ್ನೇ ಆದರೂ ಪರಾಮರ್ಶಿಸಿ ಒಪ್ಪಿಕೊಳ್ಳುವುದು, ಪ್ರಶ್ನೆಗಳನ್ನು ಕೇಳುವುದು, ಹಿರಿಯರ ಕುರಿತು ವಿಧೇಯತೆ ಮತ್ತು ವಿನಯತೆ ಹೊಂದಿರುವುದು ರೂಢಿಸಿಕೊಂಡ. ಸ್ವಾಭಿಮಾನಿಯಾಗಿದ್ದ ನರೇಂದ್ರ ಸಮಾಜದ ಅಂಕು ಡೊಂಕುಗಳನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಉತ್ತಮ ಗ್ರಹಿಕಾ ಸಾಮರ್ಥ್ಯವನ್ನು, ಸಾಧು ಸಂತರ ಬಗ್ಗೆ ಕುತೂಹಲ, ಅಸಹಾಯಕರ ಬಗ್ಗೆ ಅನುಕಂಪ ತೋರಿಸುವುದು, ಇವೆಲ್ಲದಕ್ಕೂ ಹೆಚ್ಚಾಗಿ ಪ್ರೇರಣಾದಾಯಿ ವ್ಯಕ್ತಿತ್ವವು ಇವರದಾಗಿತ್ತು.ಇತ್ತ ಇವರ ತಂದೆ ಕೌಟುಂಬಿಕವಾಗಿ ಸ್ಥಿತಿವಂತರಾದರೂ ಮಗನನ್ನು ಹಣದ ವ್ಯಾಮೋಹದಿಂದ ದೂರವಿರುವಂತೆ ನೋಡಿಕೊಂಡರು. ನರೇಂದ್ರನು ಕೂಡ ತಮ್ಮಂತೆ ವಕೀಲನಾಗಲಿ ಎಂಬುದು ಅವರ ಇಚ್ಛೆಯಾಗಿತ್ತು. ಆದರೆ ನರೇಂದ್ರನಲ್ಲಿ ವೈರಾಗ್ಯವು ಮನೆಮಾಡಿ ಅಧ್ಯಾತ್ಮಿಕದತ್ತ ಸೆಳೆಯುವುದರಲ್ಲಿತ್ತು. ವಿಪರ್ಯಾಸ ಎಂದರೆ ಇದೆ ಅಲ್ಲವೇ , ಮಹಾ ಕಲಿಪುರುಷನೊಬ್ಬನ ಜನನ ಸೀಮಿತದಲ್ಲಿಯೇ ಕೊನೆಗೊಳ್ಳಲು ನಿಯತಿಯಾದರೂ ಹೇಗೆ ಬಿಟ್ಟೀತು ಹೇಳಿ? ಎನ್ನುತ್ತ ವಿವೇಕಾನಂದರ ಬಾಲ್ಯದ ಅನೇಕ ಮಾಹಿತಿಯನ್ನು ಶಾಲಾ ಮಕ್ಕಳಿಗೆ ತಿಳಿಸಿದರು.

ಮುಂದೆ ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ನೆಚ್ಚಿನ ಶಿಷ್ಯರಾಗಿ ನರೇಂದ್ರ ವಿವೇಕಾನಂದರಾದರು. ಭಾರತಕ್ಕಷ್ಟೇ ಅಲ್ಲದೇ, ಇಡೀ ಜಗತ್ತಿಗೆ ವಿವೇಕದ ಊಟವನ್ನು ಉಣಬಡಿಸಿದರು. 1893ರ ಕಾಲಘಟ್ಟ. ಆ ವರ್ಷ ಮೇ 11ರಂದು ಅಮೇರಿಕದ ಷಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತೀಯರ ಬಗೆಗಿದ್ದ ಪಾಶ್ಚಾತ್ಯ ಜಗತ್ತಿನ ಪ್ರಶ್ನೆಗಳಿಗೆ ಅವರ ನೆಲದಲ್ಲಿಯೇ ದಿಟ್ಟ ಉತ್ತರ ನೀಡಿದ ಧೀಮಂತ. ಇತ್ತ ಭಾರತದಾದ್ಯಂತ ಪರ್ಯಟನೆಗೈದು, ಧರ್ಮದ ದಳ್ಳುರಿಯಲ್ಲಿ ಬೇಯುತ್ತಿದ್ದ ಮನುಕುಲಕ್ಕೆ ಸನಾತನ ಧರ್ಮದ ಬೆಳಕು ನೀಡಿದ ಮಹಾನ್ ಚೇತನ. ಜಾತಿ ಪಂಥಗಳ ಬೇಲಿಯನ್ನು ದಾಟಲು ಕರೆಕೊಟ್ಟು, ಆತ್ಮ ಮತ್ತು ಪರಮಾತ್ಮನ ಅನುಸಂಧಾನಕ್ಕೆ ದಾರಿ ತೋರಿಸುತ್ತ, ಯುವಶಕ್ತಿಗೆ "ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ ಕರೆಯನ್ನು ನೀಡಿದರು. ಆ ಮೂಲಕ ಕರ್ತವ್ಯ ಮುಖಿಯಾಗಲು ಪ್ರೇರೇಪಿಸಿ ಯುವಮಾನಸದಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಿ ಭವ್ಯ ಭಾರತದ ಏಕತೆಗೆ ಅಡಿಗಲ್ಲು ಹಾಕಿದ ದಿವ್ಯ ಪುರುಷ ಸ್ವಾಮಿ ವಿವೇಕಾನಂದರು ಎನ್ನುತ್ತ ಹಲವು ನಿದರ್ಶನಗಳನ್ನು ಚುಟುಕಾಗಿ ಪ್ರಸ್ತುತ ಪಡಿಸಿದರು.

ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಬುಧವಾರ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ವೆಬಿನಾರ್‌ಗಳನ್ನು ಸಂಘಟಿಸುತ್ತಿದೆ.

ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 761 ವಿದ್ಯಾರ್ಥಿಗಳು ಮತ್ತು 1092 ವಿದ್ಯಾರ್ಥಿನಿಯರು ಸೇರಿ 1853 ಮಕ್ಕಳು ಪಾಲ್ಗೊಂಡರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು