logo
ಕನ್ನಡ ಸುದ್ದಿ  /  ಕರ್ನಾಟಕ  /  Who Is Umesh Katti: ಉಮೇಶ್‌ ಕತ್ತಿ ಯಾರು? ಅವರ ಕಿರು ಪರಿಚಯ ಇಲ್ಲಿದೆ..

Who is Umesh Katti: ಉಮೇಶ್‌ ಕತ್ತಿ ಯಾರು? ಅವರ ಕಿರು ಪರಿಚಯ ಇಲ್ಲಿದೆ..

Umesh Kumar S HT Kannada

Sep 07, 2022 12:30 AM IST

google News

ಸಚಿವ ಉಮೇಶ್‌ ಕತ್ತಿ

    • ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ಪ್ರತಿಪಾದಕ ಸಚಿವ ಉಮೇಶ್‌ ಕತ್ತಿ ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಅವರ ಕಿರು ಪರಿಚಯ ಇಲ್ಲಿದೆ. 
ಸಚಿವ ಉಮೇಶ್‌ ಕತ್ತಿ
ಸಚಿವ ಉಮೇಶ್‌ ಕತ್ತಿ

ಬೆಂಗಳೂರು: ಕರ್ನಾಟಕ ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.

ಹೃದಯಾಘಾತಕ್ಕೆ ಒಳಗಾದ ಸಚಿವ ಕತ್ತಿ ಅವರನ್ನು ಕೂಡಲೇ ಎಂ.ಎಸ್.‌ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಅವರು ವಿಧಿವಶರಾದರು. ಅವರ ಕಿರು ಪರಿಚಯ ಇಲ್ಲಿದೆ.

ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು. ಎಂಟನೇ ಬಾರಿ ಶಾಸಕರಾಗಿದ್ದ ಅವರು, 1961ರ ಮಾರ್ಚ್ 14ರಂದು ನಿಪ್ಪಾಣಿಯಲ್ಲಿ ಜನಿಸಿದರು. ತಂದೆ, ಮಾಜಿ ಶಾಸಕ ವಿಶ್ವ ನಾಥ್ ಕತ್ತಿ. ಇವರು ಹಿರಿಯ ಪುತ್ರ. ಸಹೋದರ ರಮೇಶ್ ಕತ್ತಿ ಮಾಜಿ ಸಂಸದ. ಉಮೇಶ್ ಕತ್ತಿಯವರಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ.

ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ಕೂಡ ಇದೇ ರೀತಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ನಂತರ, ಉಮೇಶ್‌ ಕತ್ತಿ ಅವರು ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ಬಂದರು.

ಬೆಳಗಾವಿಯಲ್ಲಿರುವ ಕೆಎಲ್‌ಇ ಸೊಸೈಟಿಯ ಲಿಂಗರಾಜ್‌ ಕಾಲೇಜಿನಲ್ಲಿ ಪಿಯುಸಿವರೆಗೆ ಓದಿರುವ ಉಮೇಶ್‌ ಕತ್ತಿ, 1985ರಲ್ಲಿ ಮೊದಲ ಬಾರಿಗೆ ಹುಕ್ಕೇರಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದರು. ಎರಡನೇ ಬಾರಿಗೆ 1989ರಲ್ಲೂ ಗೆಲುವು ಅವರದಾಯಿತು. ಆದರೆ ಅವರು ಜನತಾದಳಕ್ಕೆ ಬಂದಿದ್ದರು. 1994ರಲ್ಲೂ ಅದೇ ಪಕ್ಷದಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ದಿಂದ ಸ್ಪರ್ಧಿಸಿ ನಾಲ್ಕನೇ ಬಾರಿಗೆ ಜಯಭೇರಿ ಬಾರಿಸಿದರು.

ಒಂದೇ ಒಂದು ಸೋಲು !

ರಾಜ್ಯ ವಿಧಾನಸಭೆಗೆ 2004ರ ಚುನಾವಣೆಯ ಸಂದರ್ಭದಲ್ಲಿ ಉಮೇಶ್‌ ಕತ್ತಿ ಅವರು ಕಾಂಗ್ರೆಸ್‌ ಸೇರಿದ್ದರು. ಇದು ಅವರಿಗೆ ಮೊದಲ ಮತ್ತು ಏಕೈಕ ಸೋಲು ಆಯಿತು. ಅಂದು ಕತ್ತಿ ಕೇವಲ 821 ಮತಗಳಿಂದ ಮೊದಲ ಸೋಲು ಕಂಡರು. ವಿಧಾನಸಭೆ ಚುನಾವಣೆಯಲ್ಲಿ ಅವರು ಕಂಡ ಏಕೈಕ ಸೋಲು ಇದು.

ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಬಂದವರು..

ರಾಜ್ಯ ವಿಧಾನಸಭೆಗೆ 2008ರಲ್ಲಿ ಜೆಡಿಎಸ್‌ಗೆ ಬಂದು ಮತ್ತೆ ಗೆಲುವು ಸಾಧಿಸಿದ ಅವರು ನಂತರ ಆಪರೇಷನ್‌ ಕಮಲದ ಫಲವಾಗಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2013 ಮತ್ತು 2018ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ. ಹೀಗೆ ಒಟ್ಟು 8 ಬಾರಿ ಹುಕ್ಕೇರಿ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಸಾಧಿಸಿದ ಹೆಗ್ಗಳಿಕೆಯ ಕತ್ತಿ ಮಗದೊಮ್ಮೆ ಸಚಿವರಾದರು. ಸಕ್ಕರೆ ಕಂಪನಿಗಳ ಮಾಲಿಕರೂ ಆಗಿರುವ ಉಮೇಶ್‌ ಕತ್ತಿ ಈ ಹಿಂದೆ ಸಕ್ಕರೆ, ಲೋಕೋಪಯೋಗಿ, ಬಂಧೀಖಾನೆ, ತೋಟಗಾರಿಕೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವಿ.

ಎಂಟು ಸಲ ಶಾಸಕರು ಮೂವರು ಮಾತ್ರ

ರಾಜ್ಯದಲ್ಲಿ ಇದುವರೆಗೆ ಧರಂ ಸಿಂಗ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತ್ರ 8 ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಅವರ ದಾಖಲೆಯನ್ನು ಕತ್ತಿ ಸರಿಗಟ್ಟಿದ್ದಾರೆ.

ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಿದ್ದರು…

ರಾಜ್ಯದಲ್ಲಿ ಮೊಟ್ಟ ಮೊದಲ ಸಲ ಉಮೇಶ್‌ ಕತ್ತಿ 1996ರಲ್ಲಿ ಮೊದಲ ಬಾರಿ ಸಕ್ಕರೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾದರು. ಇದಾಗಿ, 2008ರಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಆದ ಮೇಲೆ, ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾಗಿದ್ದರು. 2010ರಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವರು, ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಿದ್ದು, ಒಂದು ಮೈಲಿಗಲ್ಲು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ