ಶಿಗ್ಗಾಂವಿ ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಟಿಕೆಟ್ ಸಿಗದ ಪಂಚಮಸಾಲಿ ಸಮುದಾಯ ಯಾರ ಬೆಂಬಲಕ್ಕೆ ನಿಲ್ಲಲಿದೆ?
Oct 30, 2024 11:47 PM IST
ಭರತ್ ಬೊಮ್ಮಾಯಿ ಮತ್ತು ಯಾಸೀರ್ ಅಹಮದ್ ಪಠಾಣ್
- Shiggaon By-Election: ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ನಿಂದ ಯಾಸೀರ್ ಅಹಮದ್ ಪಠಾಣ್ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಎರಡು ಪಕ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ಸಿಗದ ಹಿನ್ನಲೆ ಈ ಸಮಾಜ ಯಾರ ಬೆಂಬಲಕ್ಕೆ ನಿಲ್ಲಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. (ವರದಿ-ಎಚ್. ಮಾರುತಿ)
ಬೆಂಗಳೂರು: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರತ್ ಬೊಮ್ಮಾಯಿ (ಬಿಜೆಪಿ) ಮತ್ತು ಯಾಸೀರ್ ಅಹಮದ್ ಪಠಾಣ್ (ಕಾಂಗ್ರೆಸ್) ಅಭ್ಯರ್ಥಿಗಳಾದರೂ ಇಲ್ಲಿ ಚುನಾವಣೆ ನಡೆಯುತ್ತಿರುವುದು ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಡುವೆ ಎನ್ನುವುದು ರಹಸ್ಯವೇನಲ್ಲ. ಕ್ಷೇತ್ರವನ್ನು ಕುಟುಂಬದ ಹಿಡಿತಕ್ಕೆ ತೆಗೆದುಕೊಳ್ಳುವುದು ಬೊಮ್ಮಾಯಿ ಅವರಿಗೆ ಎಷ್ಟು ಮುಖ್ಯವೋ ಅಹಿಂದ ಪಟ್ಟ ಉಳಿಸಿಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಅಷ್ಟೇ ಮುಖ್ಯವಾಗಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಕೃಷಿಯೇ ಪ್ರಧಾನ. ನೀರಾವರಿ, ಮೂಲಭೂತ ಸೌಕರ್ಯ, ನಿರುದ್ಯೋಗ, ಕೃಷಿ ಸಂಬಂಧಿತ ಸಮಸ್ಯೆಗಳಿವೆ. ಆದರೆ ಚರ್ಚೆಯಾಗುತ್ತಿಲ್ಲ ಅಷ್ಟೇ. ಇಲ್ಲಿ 45 ಸಾವಿರ ಪಂಚಮಸಾಲಿ ಮತ್ತು 40 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಜತೆಗೆ ಹಿಂದುಳಿದ ವರ್ಗ ಹಾಗೂ ಎಸ್ ಸಿ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದರೂ ಕಳೆದ ನಾಲ್ಕು ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಗೆಲ್ಲುತ್ತಾ ಬಂದಿದ್ದರು. ಜಾತಿ ಸಮೀಕರಣ ಇವರ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತಿತ್ತು.
ಅಭ್ಯರ್ಥಿ ಆಯ್ಕೆಗೆ ಕೈ ಪಡೆ ತಡ ಮಾಡಿದ್ದು ಏಕೆ?
ಅಭ್ಯರ್ಥಿ ಆಯ್ಕೆಯಲ್ಲಿ ಕೈ ಪಡೆ ತುಂಬಾ ತಡ ಮಾಡಿದ್ದು ಹಿನ್ನಡೆಯಾಗಬಹುದು. ಪಂಚಮಸಾಲಿ ಅಥವಾ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೇ ಎಂದು ನಿರ್ಧರಿಸಲು ನಿಧಾನ ಮಾಡಿತು. ಪಂಚಮಶಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎನ್ನುವ ಒತ್ತಡ ಹೆಚ್ಚಾಗಿತ್ತು. ಆದರೆ, ಕಾಂಗ್ರೆಸ್ ಹಿಂದಿನಂತೆ ಈ ಬಾರಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್ ಮೀಸಲಿಟ್ಟಿದೆ.
ಯಾಸೀರ್ ಅವರು 2023 ರಲ್ಲಿಯೂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ 35,978 ಮತಗಳ ಭಾರೀ ಅಂತರದಿಂದ ಸೋತಿದ್ದರು. 2018ರಲ್ಲಿ ಅಜ್ಜಂಪೀರ್ ಖಾದ್ರಿ ಸ್ಪರ್ಧಿಸಿ ಕಡಿಮೆ ಅಂತರಡಿ ಸೋಲು ಅನುಭವಿಸಿದ್ದರು. ಆದರೂ ಹೈ ಕಮಾಂಡ್ ಪಠಾಣ್ ಅವರಿಗೆ ಮಣೆ ಹಾಕಿದೆ. ಸೋತ ನಂತರವೂ ಪಠಾಣ್ ಕ್ಷೇತ್ರದಲ್ಲೇ ಉಳಿದು ಉತ್ತಮ ಸಂಪರ್ಕ ಹೊಂದಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ ತಳಮಟ್ಟದಲ್ಲಿ ಕೆಲಸ ಮಾಡಿದ ಅನುಭವವಿದೆ. ಆ ಕಾರಣಕ್ಕಾಗಿ ಟಿಕೆಟ್ ನೀಡಲಾಗಿದೆ ಎಂದು ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಜ್ಜಂಪೀರ್ ಖಾದ್ರಿ ನಾಮಪತ್ರ ವಾಪಸ್ ಪಡೆದಿದ್ದು, ಕಾಂಗ್ರೆಸ್ ಹಾದಿ ಸುಗಮವಾಗಿದೆ.
ಮತ್ತೊಂದು ಕಡೆ ಬಸವರಾಜ ಬೊಮ್ಮಾಯಿ, ತಮ್ಮ ಮಗನ ಪರವಾಗಿ ಕಳೆದ ಮೂರು ತಿಂಗಳಿಂದ ಪುತ್ರನಿಗೆ ಕ್ಷೇತ್ರವನ್ನು ಸಜ್ಜುಗೊಳಿಸಿದ್ದಾರೆ. ಇಡೀ ಕ್ಷೇತ್ರದಲ್ಲಿ ಸಂಚರಿಸಿ ವೇದಿಕೆಯನ್ನು ಹದಗೊಳಿಸಿದ್ದರು. ಮೇಲ್ನೋಟಕ್ಕೆ ಮಗನಿಗೆ ಟಿಕೆಟ್ ಬೇಡ ಎಂದು ಹೇಳುತ್ತಲೇ ಒಳೊಳಗೆ ಟಿಕೆಟ್ ನಿಕ್ಕಿ ಮಾಡಿಕೊಂಡಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಲು ಬಯಸಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಅವರು ಪಟ್ಟು ಹಿಡಿದು ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವುದು ಸಂಪ್ರದಾಯವೂ ಹೌದು.
ಪಂಚಮಸಾಲಿ ಸಮುದಾಯ ಅಸಮಾಧಾನ
ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೆ ಗೆಲುವು ಸುಲಭವಾಗುತ್ತಿತ್ತು. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿರುವುದರಿಂದ ಎಂದಿನಂತೆ ಬಿಜೆಪಿ ಗೆಲುವು ಸುಲಭ ಎಂದು ಹೇಳಲಾಗುತ್ತಿದೆ. ಈ ಬಾರಿಯೂ ಪಂಚಮಸಾಲಿ ಸಮುದಾಯ ಸಾರಾಸಗಟಾಗಿ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ಹೇಳುವುದು ಕಷ್ಟ. ಕಾಂಗ್ರೆಸ್ ಟಿಕೆಟ್ ಕೊಡದೆ ಇರುವುದರಿಂದ ಪಂಚಮಸಾಲಿ ಸಮುದಾಯಕ್ಕೆ ಅಸಮಾಧಾನವಾಗಿದೆ ಎಂಬುದು ನಿಜ. ಆದರೆ ಇದೊಂದೇ ಕಾರಣಕ್ಕೆ ಪಂಚಮಸಾಲಿ ಮತದಾರರು ಭರತ್ ಜತೆ ನಿಲ್ಲುತ್ತಾರೆ ಎಂದು ಹೇಳುವಂತಿಲ್ಲ. ದಶಕಗಳಿಂದ ಪಂಚಮಸಾಲಿ ಸಮುದಾಯದವರು ಶಾಸಕರಾಗಿ ಆಯ್ಕೆಯಾಗಿಲ್ಲ. ಈ ಅಪಾಯವನ್ನು ತಪ್ಪಿಸಲು ಭರತ್ ಸೋಲಿಸಿದರೆ ಮುಂದಿನ ಚುನಾವಣೆಯಲ್ಲಿ ನಮ್ಮದೇ ಸಮುದಾಯದ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂಬ ಅಭಿಪ್ರಾಯ ಹರಿದಾಡುತ್ತಿದೆ.
ಇದುವರೆಗೂ ಬೊಮ್ಮಾಯಿ ಮುಸ್ಲಿಂ ಸೇರಿ ಅಹಿಂದ ಮತಗಳನ್ನೂ ಸೆಳೆಯುತ್ತಿದ್ದರು. ಸಿಎಂ ಸಿದ್ದರಾಮಯ್ಯ ಅವರಿಂದಾಗಿ ಈ ವರ್ಗಗಳ ಮತಗಳು ಬೊಮ್ಮಾಯಿಗೆ ಕಷ್ಟ ಸಾಧ್ಯವಾಗಬಹುದು. ಕಾಂಗ್ರೆಸ್ ಗೂ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಹಿಂದೂ ಮುಸ್ಲಿಂ ಧರ್ಮದ ಆಧಾರದಲ್ಲಿ ಚುನಾವಣೆ ನಡೆದರೆ ಗೆಲುವು ಮರೀಚಿಕೆಯಾಗಲಿದೆ. ಮುಸ್ಲಿಂ, ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳ ಜೊತೆಗೆ ಲಿಂಗಾಯತ ಮತಗಳು ಇಬ್ಬಾಗಗೊಂಡರೆ ಮಾತ್ರ ಕಾಂಗ್ರೆಸ್ ಗೆಲುವು ಕಾಣಬಹುದು. ಆದರೆ ಅದು ಅಷ್ಟೊಂದು ಸುಲಭ ಅಲ್ಲ. ಯಾರೇ ಗೆದ್ದರೂ ಕಡಿಮೆ ಅಂತರ ಮಾತ್ರ ಕಡಿಮೆ ಎನ್ನುವುದೂ ಖಚಿತ.