ನಾನು ನಿಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ, ಲಾಭ ಪಡೆಯುವುದೇಕೆ; ರಾಜೀವ ಹೆಗಡೆ ಬರಹ
Nov 14, 2024 03:11 PM IST
ನಾನು ನಿಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ, ಲಾಭ ಪಡೆಯುವುದೇಕೆ; ರಾಜೀವ ಹೆಗಡೆ ಬರಹ
- ಕರ್ನಾಟಕದಲ್ಲಿ ಬಿಜೆಪಿಯವರೂ ಗ್ಯಾರೆಂಟಿ ಯೋಜನೆಗಳನ್ನು ಪಡೆಯುತ್ತಿಲ್ಲವೇ? ನಾವು ತೆಗೆದುಕೊಳ್ಳುತ್ತಿಲ್ಲ ಇಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ನಾನು ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಲಾಭ ಪಡೆಯುವುದು ಏಕೆಂದರೆ… ಈ ಕುರಿತು ರಾಜೀವ ಹೆಗಡೆ ಬರಹ ಇಲ್ಲಿದೆ ನೋಡಿ..
ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಪ್ರಚಾರ ಪರಿಶುದ್ಧವಾಗಿ ಮುಗಿಸಿ ಬಂದಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ವಿರೋಧಿಗಳಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ‘ಈ ಬಿಜೆಪಿಯವರಿಗೆ, ಗ್ಯಾರಂಟಿ ವಿರೋಧಿಗಳಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳುತ್ತಿದ್ದೀನಿ. ರಾಜ್ಯದಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಫಲಾನುಭವಿಗಳಲ್ಲವಾ? ಬಿಜೆಪಿಯವರು ಉಚಿತವಾಗಿ ಬಸ್ಸಲ್ಲಿ ಓಡಾಡುತ್ತಿಲ್ಲವಾ? ಬಿಜೆಪಿಯವರು ಉಚಿತ ವಿದ್ಯುತ್ ಪಡೆಯುತ್ತಿಲ್ಲವಾ? ಬಿಜೆಪಿಯವರು ಗೃಹಲಕ್ಷ್ಮಿ ಹಣ ಪಡೆಯುತ್ತಿಲ್ಲವಾ? ಇಲ್ಲಾ, ನಾವು ತೆಗೆದುಕೊಳ್ಳುತ್ತಿಲ್ಲ ಇಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ.
ಗೌರವಾನ್ವಿತ ಮುಖ್ಯಮಂತ್ರಿಗಳೇ ಎದೆಮುಟ್ಟಿಕೊಂಡು ಹೇಳುತ್ತಿದ್ದೇನೆ, ಕೇಳಿಸಿಕೊಳ್ಳಿ. ಕಾನೂನು ಬದ್ಧವಾಗಿ ಸಿಗುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಾನು ಪಡೆಯುತ್ತಿದ್ದೇನೆ. ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಯ ಲಾಭವು ನನ್ನ ಮನೆಗೆ ಬರುತ್ತಿದೆ. ಹಾಗಂದ ಮಾತ್ರಕ್ಕೆ ಈ ಯೋಜನೆಯ ಸಮರ್ಥಕನೂ ನಾನಲ್ಲ, ವಿರೋಧಿಸದೆಯೂ ಇರುವುದಿಲ್ಲ. ಆದರೆ ಇದಕ್ಕೆ ನನ್ನ ಬಳಿ ಸಕಾರಣಗಳಿವೆ. ನನ್ನ ಕಾರಣಗಳನ್ನು ಮುಂದಿಡುವ ಮೊದಲು ಒಂದು ವಿಚಾರ ಸ್ಪಷ್ಟಪಡಿಸುತ್ತೇನೆ. ಈ ರಾಜ್ಯ ಅಥವಾ ದೇಶದ ಬಡ ಹಾಗೂ ಅಬಲ ಫಲಾನುಭವಿಗಳಿಗೆ ಕಲ್ಯಾಣ ಕಾರ್ಯಕ್ರಮ ನೀಡುವುದು ಜವಾಬ್ದಾರಿಯುತ ಸರ್ಕಾರದ ಕೆಲಸ. ದುಡಿಯಲಾಗದವರಿಗೆ ಅನ್ನದ ಜತೆಗೆ ಆರ್ಥಿಕ ನೆರವು ನೀಡಲೇಬೇಕು. ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಸರ್ಕಾರ ಉಚಿತವಾಗಿ ಕಲ್ಪಿಸಲೇಬೇಕು. ಈಗ ನನ್ನ ಸಕಾರಣಗಳಿಗೆ ಬರುತ್ತೇನೆ.
ನಾನು ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಲಾಭ ಪಡೆಯುವುದು ಏಕೆಂದರೆ..?
ಕರ್ನಾಟಕದಲ್ಲಿ ‘ಗೃಹಜ್ಯೋತಿ’ ಯೋಜನೆ ಜಾರಿಯಾದ ಬಳಿಕ ವಿದ್ಯುತ್ ದರವನ್ನು ಏರಿಸಲಾಯಿತು. ‘ಗೃಹಜ್ಯೋತಿ’ ತಿರಸ್ಕರಿಸಿದವರಿಗೆ ಹೊಸ ದರ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಘೋಷಿಸಿ ಬಿಡಲಿ. ಇಲ್ಲವಾದಲ್ಲಿ ಉಚಿತ ಯೋಜನೆ ತಿರಸ್ಕರಿಸಿದ್ದೇವೆ ಎನ್ನುವ ಕಾರಣಕ್ಕೆ ವಿಶೇಷ ರಿಯಾಯಿತಿ ನೀಡಲಿ. ಮಾನ್ಯ ಮುಖ್ಯಮಂತ್ರಿಗಳು ಇಂತಹ ಕೆಲಸ ಮಾಡಿದರೆ ಗ್ಯಾರಂಟಿ ಯೋಜನೆಯೂ ಬೇಡ, ಟೀಕೆಯನ್ನೂ ಮಾಡುವುದಿಲ್ಲ.
ನಾನು ಹಾಗೂ ನನ್ನ ಪತ್ನಿ ಪ್ರತಿನಿತ್ಯ ಸರ್ಕಾರಿ ಬಸ್‌ನಲ್ಲಿಯೇ ಸಂಚರಿಸುತ್ತೇವೆ. ನನ್ನ ಪತ್ನ ಉಚಿತವಾಗಿ ಪ್ರಯಾಣಿಸಿದರೆ, ನಾನು ದುಪ್ಪಟ್ಟು ಹಣ ನೀಡಿ ವೊಲ್ವೋ ಬಸ್‌ನಲ್ಲಿ ಹೋಗುತ್ತೇನೆ. ಅದೆಷ್ಟೋ ವೊಲ್ವೋ ಬಸ್‌ನಲ್ಲಿ ಎಸಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಮಳೆ ಬಂದರೆ ಸೋರುವ ವಜ್ರ ಬಸ್‌ಗಳಿವೆ. ಇನ್ನು ಕೆಲವು ಬಸ್‌ಗಳಲ್ಲಿ ಎಸಿಯ ನೀರು ಮೈಮೇಲೆ ಸುರಿಯುತ್ತಿರುತ್ತದೆ. ಇನ್ನು ಆ ಬಸ್‌ನ ಸ್ವಚ್ಛತೆಯನ್ನು ವರ್ಣಿಸಲು ಸಾಧ್ಯವಿಲ್ಲ. ಈ ಅವ್ಯವಸ್ಥೆ ಹೊರತುಪಡಿಸಿ, ದಿನದಿಂದ ದಿನಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಾಲದ ಕೂಪಕ್ಕೆ ತಳ್ಳಲ್ಪಡುತ್ತಿದೆ. ಸರ್ಕಾರವು ನಿಯಮಿತವಾಗಿ ನಿಗಮಗಳಿಗೆ ಹಣವನ್ನೇ ನೀಡುತ್ತಿಲ್ಲ. ಸಿಬ್ಬಂದಿಗೂ ಸಂಬಳವನ್ನು ಕಾಲ ಕಾಲಕ್ಕೆ ನೀಡಲಾಗುತ್ತಿಲ್ಲ. ಇವೆಲ್ಲ ಅವ್ಯವಸ್ಥೆಯನ್ನು ಸರಿ ಮಡುವುದರ ಜತೆಗೆ, ದರ ಏರಿಕೆಯ ಬಿಸಿಯನ್ನು ಕೊಡಬೇಡಿ. ಹಾಗೆಯೇ ಈ ಹೊರೆ ತಗ್ಗಿಸಿಕೊಳ್ಳಲು ನಾವು ಬಳಸುವ ಪೆಟ್ರೋಲ್ ಮೇಲೆ ಅತ್ಯಧಿಕ ಪ್ರಮಾಣದ ತೆರಿಗೆ ಹಾಕಿ, ನಮ್ಮ ಕಿಸೆಯಿಂದ ಬಡ್ಡಿ ಸಮೇತ ಕಿತ್ತುಕೊಳ್ಳತ್ತಿರುವುದನ್ನು ನಿಲ್ಲಿಸಿಬಿಡಿ. ಆಗ ಈ ಗ್ಯಾರಂಟಿ ಯೋಜನೆಯನ್ನು ಟೀಕಿಸುವುದೇ ಇಲ್ಲ.
ಇವೆರಡು ಗ್ಯಾರಂಟಿ ಬಿಟ್ಟು ಇನ್ಯಾವುದರ ಲಾಭವೂ ನನಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬರುವುದಿಲ್ಲ. ಆದರೆ ಉಳಿದ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರದ ಬೊಕ್ಕಸದಿಂದ 40 ಸಾವಿರ ಕೋಟಿಗೂ ಅಧಿಕ ಹಣ ವ್ಯಯವಾಗುತ್ತಿದೆ. ಯಾವುದೇ ಲಂಗು, ಲಗಾಮುಗಳಿಲ್ಲದೇ ಜಾತ್ರೆಯಲ್ಲಿ ಊಟ ಹಾಕಿದಂತೆ ಎಲ್ಲರಿಗೂ ಗ್ಯಾರಂಟಿ ಯೋಜನೆಯನ್ನು ನೀಡುತ್ತಿರುವುದರಿಂದ ಸರ್ಕಾರ ಮಾಡಬೇಕಾದ ಅಗತ್ಯ ಕೆಲಸಗಳಿಗೆ ಬೀಗ ಮುದ್ರೆ ಹಾಕಲಾಗಿದೆ. ನಾನು ವಾಸಿಸುವ ಬೆಂಗಳೂರು ನಗರದಲ್ಲಿನ ಹೊಂಡಗಳೊಳಗೆ ರಸ್ತೆಯನ್ನು ಹುಡುಕುವ ಸ್ಥಿತಿ ಬಂದಿದೆ. ಒಂದು ತಿಂಗಳ ಹಿಂದೆ ಹಚ್ಚಿದ ತೇಪೆಯು ಕೇವಲ ಎರಡು ದಿನ ಮಳೆಗೆ ತೊಳೆದುಕೊಂಡು ಹೋಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿಯಿದೆ. ನಿಮ್ಮ ಈ ಅವ್ಯವಸ್ಥೆಯಿಂದ ನನ್ನ ಪ್ರತಿದಿನದ ಅಮೂಲ್ಯ ಸಮಯ ಹಾಳಾಗುತ್ತಿದೆ. ನನ್ನ ವಾಹನಗಳ ಬಿಡಿಭಾಗ ಹಾಗೂ ಕಾರ್ಯಕ್ಷಮತೆ ಹಾಳಾಗುತ್ತಿದೆ. ವಾಹನದ ಮೈಲೇಜ್ ಕಡಿಮೆ ಆಗುತ್ತಿದೆ. ಈ ನಷ್ಟವನ್ನು ತುಂಬಿಕೊಡುವ ಯೋಜನೆಗಳನ್ನು ಸರ್ಕಾರ ಘೋಷಿಸಿದರೆ, ಖಂಡಿತವಾಗಿಯೂ ಗ್ಯಾರಂಟಿ ಯೋಜನೆಯನ್ನು ಟೀಕಿಸುವುದಿಲ್ಲ.
ಇವೆಲ್ಲದರ ಹೊರತಾಗಿಯೂ ನಿಮ್ಮೆಲ್ಲ ದರ ಏರಿಕೆ ಒಪ್ಪಿಕೊಳ್ಳುವಷ್ಟು ಷರತ್ತುಬದ್ಧ ಹೃದಯ ವೈಶಾಲ್ಯವೂ ನನಗಿದೆ. ಕೆಲಸದಿಂದ ಜನರನ್ನು ಎದುರಿಸಲಾಗದೇ, ಗ್ಯಾರಂಟಿ ಭಜನೆ ಮಾಡುವುದರ ಬದಲಿಗೆ ಸರ್ಕಾರಿ ಶಾಲೆ, ಆಸ್ಪತ್ರೆ, ರಸ್ತೆ ಹಾಗೂ ಕೃಷಿ ವಲಯದ ಅಭಿವೃದ್ಧಿಗೆ ಹಣ ವಿನಿಯೋಗಿಸುತ್ತೇವೆಯೆಂದರೆ ಯಾವುದೇ ದುಬಾರಿ ಜಗತ್ತನ್ನು ಒಪ್ಪಿಕೊಳ್ಳಲು ನಾನು ಸಿದ್ಧವಿದ್ದೇನೆ. ಕಳೆದ ಒಂದೂವರೆ ವರ್ಷದಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆ, ರಸ್ತೆ, ಕೃಷಿ ವಲಯಕ್ಕೆ ಸಂಬಂಧಿಸಿ ನೀಡಿದ್ದ ಯಾವ ಆಶ್ವಾಸನೆ ಈಡೇರಿಸಿದ್ದೀರಿ ಎನ್ನುವುದರ ಪಟ್ಟಿಯನ್ನು ಯಾವುದಾದರೂ ಸಚಿವರು ನೀಡಿದರೆ, ನಾನು ಗ್ಯಾರಂಟಿ ಯೋಜನೆಯನ್ನು ಆ ಕ್ಷಣದಿಂದ ಸಮರ್ಥಿಸಲು ಆರಂಭಿಸುತ್ತೇನೆ. ನಮ್ಮಿಂದ ಎಲ್ಲವನ್ನೂ ಕಿತ್ತುಕೊಂಡು, ಸಾಮಾಜಿಕವಾಗಿ ಅಗತ್ಯವಾದ ಯಾವುದೇ ಸವಲತ್ತನ್ನೂ ನೀಡದಿದ್ದಾಗ ಯಾವ ನೈತಿಕತೆ ಇರಿಸಿಕೊಂಡು ನಮ್ಮನ್ನು ಟೀಕಿಸುತ್ತೀರಿ?
ನನಗೆ ಬಿಜೆಪಿ ನಾಯಕರ ಕಥೆ ಗೊತ್ತಿಲ್ಲ. ಕರ್ನಾಟಕದಲ್ಲಿ ಗ್ಯಾರಂಟಿ ವಿರೋಧಿಸಿಕೊಂಡು, ಬೇರೆ ರಾಜ್ಯದಲ್ಲಿ ಅದನ್ನೇ ಬೇರೆ ಹೆಸರಲ್ಲಿ ಮಾಡಲು ಹೊರಟವರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಆದರೆ ನಾನು ಈ ರಾಜ್ಯದ ಅಬಲರು ಹಾಗೂ ಬಡವರನ್ನು ಅವಮಾನಿಸಲು ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಿಲ್ಲ. ಆದರೆ ಅವೈಜ್ಞಾನಿಕವಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಿ ಮುಖ್ಯಮಂತ್ರಿ ಹೆಂಡತಿಗೂ ಉಚಿತ, ಮಹದೇವಪ್ಪ, ಕಾಕಾ ಪಾಟೀಲ್ ನಿನಗೂ ಉಚಿತʼ ಎನ್ನುವ ಧಿಮಾಕಿನ ಮಾತನಾಡುವ ಈ ಸರ್ಕಾರದಲ್ಲ ಮುಖ್ಯಮಂತ್ರಿ ಆದಿಯಾಗಿ ಪ್ರತಿಯೊಬ್ಬರೂ ಬಡವರಿಗೆ ಅವಮಾನ ಮಾಡುತ್ತಿದ್ದಾರೆ.
ಗುಣಮಟ್ಟ ಶಿಕ್ಷಣ ಹಾಗೂ ಆಸ್ಪತ್ರೆ ನೀಡಿ…
ಬಡವರಿಗೆ ಕೆಲ ಉಚಿತ ಯೋಜನೆ ಜಾರಿ ಮಾಡಿ ಅವರನ್ನು ಬಡತನದಿಂದ ಮೇಲೆತ್ತುವ ಸರ್ಕಾರಿ ಶಾಲೆ, ಆಸ್ಪತ್ರೆ, ಉತ್ತಮವಾದ ರಸ್ತೆ, ನೀರಾವರಿ, ಕೃಷಿಯ ಲಾಭದಿಂದ ದೂರ ತಳ್ಳುತ್ತಿರುವುದು ನೈಜ ಅವಮಾನಕರ ವಿಚಾರ. ಅಷ್ಟಕ್ಕೂ ನನಗೆ ಎಲ್ಲ ಸರ್ಕಾರಿ ಸವಲತ್ತು ನೀಡಿ ಎಂದು ಹೇಳುತ್ತಿಲ್ಲ. ಬಡ ಹಾಗೂ ಮಧ್ಯಮ ವರ್ಗಕ್ಕೆ ಕಾಡುತ್ತಿರುವ ಗುಣಮಟ್ಟದ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಯನ್ನು ನೀಡಿ ಎಂದಷ್ಟೇ ಕೇಳುತ್ತಿದ್ದೇನೆ. ಇವೆರಡನ್ನು ನೀಡಿದರೆ ಈ ರಾಜ್ಯದ ಯಾರೊಬ್ಬರೂ ನಿಮ್ಮ ಬಳಿ ಕೈ ಚಾಚುವುದಿಲ್ಲ ಹಾಗೂ ಯಾವ ಗ್ಯಾರಂಟಿ ಕೂಡ ಬೇಕಾಗಿಲ್ಲ. ಇವೆರಡು ಗ್ಯಾರಂಟಿ ಕೊಡಲಾಗದೇ ಪ್ರತಿಯೊಬ್ಬರಿಗೂ ಅವಮಾನ ಮಾಡುತ್ತಿರುವುವರು ಯಾರು ಹೇಳಿ?
ನನ್ನಿಂದ ನೀವು ಲೂಟಿ ಮಾಡುತ್ತಿದ್ದೀರಿ…
ನಿಮ್ಮ ಗೃಹಲಕ್ಷ್ಮೀ ಯೋಜನೆಯಿಂದ ಊರಿಗೆ ಊಟ ಹಾಕಿಸುವುದು, ಮಗನಿಗೆ ಬೈಕ್ ಕೊಡಿಸುವುದು ಸಾಧನೆಯಲ್ಲ. ಬದಲಿಗೆ ಅದೇ ಮಕ್ಕಳಿಗೆ ಬಿಸಿಯೂಟಕ್ಕೆ ಸರಿಯಾದ ಸಾಮಗ್ರಿ ಪೂರೈಸಿ, ಬಿಸಿಯೂಟ ತಯಾರಕರಿಗೆ ಸಂಬಳ ನೀಡಿ. ಮಗನೇ ಸ್ವಂತ ಶಕ್ತಿಯಿಂದ ಬೈಕ್ ಕೊಳ್ಳುವಂತಾಗಲು ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸಿ. ಇದನ್ನು ಮಾಡದಿದ್ದರೆ ಬಡವರು ಜೀವನ ಪರ್ಯಂತ ಅವಮಾನ ಎದುರಿಸುತ್ತಲೇ ಇರಬೇಕಾಗುತ್ತದೆ. ಉಳಿದವರು ಬಡವರ ಹೆಸರಲ್ಲಿ ಸೈಟ್ ಹಂಚಿಕೊಳ್ಳುತ್ತಾರೆ. ಇನ್ನು ಕೆಲವರು ಬಂಡೆ ಉರುಳಿಸಿ ರೀಯಲ್ ಎಸ್ಟೇಟ್ ಉದ್ಯಮ ಮಾಡುತ್ತಿರುತ್ತಾರೆ. ನಾನು ಈ ದೇಶಕ್ಕೆ ನ್ಯಾಯಬದ್ಧವಾಗಿ ತೆರಿಗೆಯನ್ನು ಕಟ್ಟುತ್ತೇನೆ. ನನ್ನ ಮೇಲೆ ಯಾವುದೇ ತೆರಿಗೆ ಕಳ್ಳತನದ ಆರೋಪವಿಲ್ಲ. ಹಾಗೆಯೇ ಸೈಟ್ ಕದ್ದ ಆರೋಪವೂ ಇಲ್ಲ. ಆದರೆ ಅವೈಜ್ಞಾನಿಕ ಗ್ಯಾರಂಟಿ ಹೆಸರಲ್ಲಿ ನನ್ನಿಂದ ನೀವು ಲೂಟಿ ಮಾಡುತ್ತಿದ್ದರೆ, ನನ್ನ ಜೇಬನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನು ಮಾನ್ಯ ಮುಖ್ಯಮಂತ್ರಿಗಳೇ ದಯವಿಟ್ಟು ಹೇಳಿ.
ಕೊನೆಯದಾಗಿ: ಅವೈಜ್ಞಾನಿಕವಾಗಿ ಗ್ಯಾರಂಟಿ ಜಾರಿ ಮಾಡಿದವರಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ರಾಜ್ಯದಲ್ಲಿ ಭಿನ್ನ-ವಿಭಿನ್ನ ರೂಪದಲ್ಲಿ ನಮ್ಮಿಂದ ತೆರಿಗೆ ಹಣ ಪಡೆಯುತ್ತಿಲ್ಲವೇ? ಬಿಜೆಪಿ ಸರ್ಕಾರದ 40% ಲೂಟಿಯನ್ನು ತಡೆದರೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಬಹುದು ಎಂದು ಹೇಳಿದ್ದೀರಲ್ಲವೇ? ಈಗ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲಾಗುತ್ತಿಲ್ಲ ಎಂದಾದರೆ ನೀವು ಲೂಟಿಯಲ್ಲಿ 40% ಮಿತಿಯನ್ನು ಮೀರಿದ್ದೀರಿ ಎಂದಾಗಲಿಲ್ಲವೇ? ಗ್ಯಾರಂಟಿ ಯೋಜನೆಯಿಂದ ಉಳಿದ ಅಭಿವೃದ್ಧಿ ಕಾಮಗಾರಿ ನಿಲ್ಲುವುದಿಲ್ಲ ಎಂದು ರಾಜ್ಯದ ಜನತೆಗೆ ಮಾತು ಕೊಟ್ಟಿದ್ದೀರಿ ಅಲ್ಲವೇ? ಹಾಗಿದ್ದರೆ ಈಗ ಎದೆ ಮುಟ್ಟಿಕೊಂಡು ಹೇಳಿಬಿಡಿ ನೋಡೋಣ, ಬಡವರ ಅಭಿವೃದ್ಧಿಗೆ ರಹದಾರಿಯಾಗಿರುವ ಸರ್ಕಾರಿ ಶಾಲೆ, ಆಸ್ಪತ್ರೆ, ಕೃಷಿ ವಲಯದ ಅಭಿವೃದ್ಧಿಗೆ ಏನಾದರೂ ಶ್ರಮಿಸಿದ್ದೀರಾ? ಗ್ಯಾರಂಟಿ ಹೊರೆ ಹೊತ್ತುಕೊಳ್ಳಲಾಗದೇ ರಾಜ್ಯದ ಜನರಿಗೆ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಬರೆ ಹಾಕಿದ್ದು ಕನ್ನಡಿಗರಿಗೆ ಮಾಡಿದ ಅವಮಾನವಲ್ಲವೇ? ಈ ರೀತಿ ಅವೈಜ್ಞಾನಿಕ ಗ್ಯಾರಂಟಿ ನಿಲ್ಲಿಸದಿದ್ದರೆ ಕೋಟಿ ಕೋಟಿ ಕನ್ನಡಿಗರು ನಿಮಗೆ ಸರಿಯಾದ ಪಾಠ ಕಲಿಸದೇ ಇರುತ್ತಾರೆಯೇ?