ತಮಿಳಿನ 'ಜಮಾ' ರೀತಿಯಲ್ಲಿ ಯಕ್ಷಗಾನದ ಮೇಲೊಂದು ಸಿನಿಮಾ ಬೇಗ ಬರಲಿ: ರಾಜೀವ್ ಹೆಗಡೆ ಬರಹ
ಕನ್ನಡ ಸುದ್ದಿ  /  ಮನರಂಜನೆ  /  ತಮಿಳಿನ 'ಜಮಾ' ರೀತಿಯಲ್ಲಿ ಯಕ್ಷಗಾನದ ಮೇಲೊಂದು ಸಿನಿಮಾ ಬೇಗ ಬರಲಿ: ರಾಜೀವ್ ಹೆಗಡೆ ಬರಹ

ತಮಿಳಿನ 'ಜಮಾ' ರೀತಿಯಲ್ಲಿ ಯಕ್ಷಗಾನದ ಮೇಲೊಂದು ಸಿನಿಮಾ ಬೇಗ ಬರಲಿ: ರಾಜೀವ್ ಹೆಗಡೆ ಬರಹ

ತಮಿಳುನಾಡಿನ ಪ್ರಾದೇಶಿಕ ಕಲೆ ʼತೆರುಕ್ಕುತುʼ ಆಧರಿಸಿದ ಸಿನಿಮಾ ‘ಜಮಾ‘. ಈ ಸಿನಿಮಾವು ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನವಾಗುವ ರೇಸ್‌ನಲ್ಲಿ ಕೂಡ ಇತ್ತು. ಸಿನಿಮಾ ನೋಡಿದವರಿಗೆ ಕರಾವಳಿ ಗಂಡುಕಲೆ ಯಕ್ಷಗಾನ ನೆನಪಿಸುವಂತಿದ್ದು, ಯಕ್ಷಗಾನದ ಮೇಲೂ ಇಂತಹ ಒಂದು ಸಿನಿಮಾ ಬೇಗ ಬರಬೇಕು ಎಂದು ಆಗ್ರಹಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ ರಾಜೀವ ಹೆಗಡೆ.

ಯಕ್ಷಗಾನದ ಮೇಲೂ ಸಿನಿಮಾ ಬರಲಿ
ಯಕ್ಷಗಾನದ ಮೇಲೂ ಸಿನಿಮಾ ಬರಲಿ

ಕರಾವಳಿಯ ಗಂಡುಕಲೆ ಯಕ್ಷಗಾನ. ಯಕ್ಷಗಾನವು ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದ ಶ್ರೀಮಂತ ಕಲೆಯಾಗಿದೆ. ಇಂತಹ ಕಲೆಯನ್ನು ತೆರೆಯ ಮೇಲೆ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ ಪತ್ರಕರ್ತ ರಾಜೀವ ಹೆಗಡೆ. ಅವರ ಆಸೆಗೆ ಕಾರಣವಾಗಿದ್ದು ತಮಿಳಿನ ಜಮಾ ಸಿನಿಮಾ. ಈ ಸಿನಿಮಾವು ತಮಿಳುನಾಡಿನ ಪ್ರಾದೇಶಿಕ ಕಲೆ ʼತೆರುಕ್ಕುತುʼ ಆಧರಿಸಿದ್ದು. ಇದು ಯಕ್ಷಗಾನಕ್ಕೆ ಹೋಲುವಂತಹ ಕಲೆಯಾಗಿದ್ದು, ಅದಕ್ಕೆ ಸಿನಿಮಾ ರೂಪ ನೀಡಿ ತೆರೆ ಮೇಲೆ ತಂದಿರುವುದನ್ನು ಮೆಚ್ಚಿಕೊಂಡಿರುವ ರಾಜೀವ ಹೆಗಡೆ ಇಂತಹ ಸಿನಿಮಾ ಯಕ್ಷಗಾನದ ಮೇಲೂ ಬರಬೇಕು ಎಂದು ಆಗ್ರಹಿಸಿದ್ದಾರೆ.

ಅಂದ ಹಾಗೆ ಯಕ್ಷಗಾನದ ಮೇಲೂ ಸಿನಿಮಾ ತಯಾರಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಾರಥ್ಯದಲ್ಲಿ ವೀರ ಚಂದ್ರಹಾಸ ಎಂಬ ಯಕ್ಷಗಾನ ಆಧಾರಿತ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಸಿನಿಮಾವು ಸಂಪೂರ್ಣ ಯಕ್ಷಗಾನ ಕಲೆಯನ್ನೇ ಆಧರಿಸಿದ್ದು ಎಂಬುದು ವಿಶೇಷ. ಅದಿರಲಿ ರಾಜೀವ ಹೆಗಡೆ ಅವರು ತಮ್ಮ ಪೋಸ್ಟ್‌ನಲ್ಲಿ ಏನು ಬರೆದುಕೊಂಡಿದ್ದಾರೆ ನೋಡಿ.

ರಾಜೀವ ಹೆಗಡೆ ಬರಹ

ತಮಿಳಿನ ʼಜಮಾʼ ರೀತಿಯಲ್ಲೇ ಯಕ್ಷಗಾನ ನೋಡುವ ಆಸೆ!

ಇತ್ತೀಚೆಗೆ ಪ್ರೈಮ್‌ನಲ್ಲಿ ʼಜಮಾʼ(Jama) ಎನ್ನುವ ಸಿನೆಮಾವೊಂದನ್ನು ನೋಡಿದೆ. ನಮ್ಮ ರಾಜ್ಯದ ಯಕ್ಷಗಾನ, ಬಯಲಾಟವನ್ನು ನೆನಪಿಸುವ ರೀತಿಯಲ್ಲಿ ತಮಿಳುನಾಡಿನ ಪ್ರಾದೇಶಿಕ ಕಲೆ ʼತೆರುಕ್ಕುತುʼ ಕುರಿತು ಒಂದು ಒಳ್ಳೆಯ ಚಿತ್ರವನ್ನು ಮಾಡಿದ್ದಾರೆ. ʼಜಮಾʼ ಎಂದರೆ ನಾವು ನಮ್ಮ ಯಕ್ಷಗಾನದ ʼಮೇಳʼ ಎಂದು ತಕ್ಕಮಟ್ಟಿಗೆ ಕರೆದುಕೊಳ್ಳಬಹುದು. ಆ ಮೇಳದೊಳಗೆ ನಡೆಯುವ ರಾಜಕೀಯ, ಊರಿನ ಗಲಾಟೆ, ಆಚರಣೆ, ಆರ್ಥಿಕ ಸಂಕಷ್ಟ ಎಲ್ಲವನ್ನೂ ಈ ಚಿತ್ರದೊಳಗೆ ತೋರಿಸಲಾಗಿದೆ. ಅಂದ್ಹಾಗೆ ಈ ವರ್ಷ ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನವಾಗುವ ರೇಸ್‌ನಲ್ಲಿ ʼಜಮಾʼ ಸಿನೆಮಾ ಕೂಡ ಇತ್ತು. ಇದೇ ಕಾರಣದಿಂದ ಆ ಚಿತ್ರವನ್ನು ನೋಡಲು ಮುಂದಾದಾಗ, ನನಗಲ್ಲಿ ನಮ್ಮ ಯಕ್ಷಗಾನಕ್ಕೆ ಹೋಲುವ ಕಲೆಯಿರುವುದನ್ನು ನೋಡಿ ಚಿತ್ರದ ಮೇಲೆ ಇನ್ನಷ್ಟು ಆಸಕ್ತಿ ಮೂಡಿತು.

ನಮ್ಮ ಯಕ್ಷಗಾನ ಹಾಗೂ ಬಯಲಾಟದಲ್ಲಿ ಬರುವಂತೆ ವೇಷ, ಬಣ್ಣ ಎಲ್ಲವನ್ನೂ ಈ ʼತೆರುಕ್ಕುತುʼನಲ್ಲಿ ನೋಡಬಹುದು. ಇಂತಹ ಒಂದು ಸಣ್ಣ ವಿಷಯ ಇರಿಸಿಕೊಂಡು ರೂಪಿಸಿದ ಚಿತ್ರದ ಬಗ್ಗೆ ಖುಷಿ ದೊರಕುವುದರ ಜತೆಗೆ ಒಂದು ಬೇಸರವೂ ಆಯಿತು. ನಮ್ಮ ಕನ್ನಡದ ಹೆಮ್ಮೆಗಳಾದ ಯಕ್ಷಗಾನ, ಬಯಲಾಟದ ಕುರಿತು ಇಂತಹ ಯಾವುದೇ ಪ್ರಮುಖ ಚಿತ್ರ ಬಂದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹಾಗೆ ನೋಡಿದರೆ ಈ ʼತೆರುಕ್ಕುತುʼಗಿಂತ ನಮ್ಮ ಯಕ್ಷಗಾನ ಕಲಾ ಪ್ರಕಾರವು ಸಾಕಷ್ಟು ಶ್ರೀಮಂತವಾಗಿದೆ. ಹಾಗೆಯೇ ತಕ್ಕ ಮಟ್ಟಿಗೆ ಪ್ರಸಿದ್ಧಿಯನ್ನೂ ಪಡೆದಿದೆ.

ನಮ್ಮ ಯಕ್ಷಗಾನ ಮೇಳಗಳಿಗೆ ಸಂಬಂಧಿಸಿಯೂ ಇಂತಹದೊಂದು ಚಿತ್ರ ಬಂದಿದ್ದರೆ ಎನ್ನುವ ಹಂಬಲದೊಂದಿಗೆ ʼಜಮಾʼ ಸಿನೆಮಾ ನೋಡಿ ಮುಗಿಸಿದೆ. ಇದೇ ಚಿತ್ರವು ಯಕ್ಷಗಾನ ಕಲಾ ಪ್ರಕಾರದ ಮೂಲಕ ರೂಪಗೊಂಡಿದ್ದರೆ ಸಿನೆಮಾ ಅದೆಷ್ಟು ಅದ್ಭುತವಾಗಿರುತ್ತಿತ್ತು ಎನ್ನುವ ಕಲ್ಪನೆ ಕೂಡ ಬಂತು. ಯಕ್ಷಗಾನದಲ್ಲಿನ ರೋಮಾಂಚನಕಾರಿ ಕುಣಿತ, ಚಂಡೆ ಹಾಗೂ ಭಾಗವತಿಕೆಗೆ ಒಂದಿಷ್ಟು ರೋಚಕ ಕಥೆ ಸೇರಿಸಿದರೆ ʼಜಮಾʼಕ್ಕಿಂತ ಅದ್ಭುತ ಸಿನೆಮಾ ಮಾಡಬಹುದೇನೋ ಎನಿಸಿತು. ಅದರಲ್ಲೂ ʼಜಮಾʼ ಸಿನೆಮಾದ ಕ್ಲೈಮಾಕ್ಸ್‌ನಲ್ಲಿ ʼಕಾಂತಾರʼ ರೀತಿಯದ್ದೇ ದೃಶ್ಯವಿದೆ. ಅಲ್ಲಿ ನಮ್ಮ ಯಕ್ಷಗಾನದ ಅರ್ಜುನ, ಭೀಮ, ಭೀಷ್ಮನ ವೇಷಧಾರಿಯನ್ನು ಒಮ್ಮೆ ನೆನೆಸಿಕೊಂಡಾಗ ರೋಮಾಂಚನವಾಯಿತು.

ಅಂದ್ಹಾಗೆ ಕೆಲ ವರ್ಷಗಳ ಹಿಂದೆ ಶ್ರೀನಿಧಿ ಡಿಎಸ್‌ ಅವರೆಲ್ಲ ಸೇರಿ ನಮ್ಮ ಇನ್ನೊಂದು ಕಲಾ ಪ್ರಕಾರದವಾದ ಡೊಳ್ಳಿನ ಬಗ್ಗೆ ಸಿನೆಮಾ ಮಾಡಿದ್ದರು. ಕಮರ್ಷಿಯಲ್‌ ಆಗಿ ಚಿತ್ರ ಯಶಸ್ವಿಯಾಗಲು ಕೆಲ ಅಂಶಗಳು ಇರದಿದ್ದರೂ ಉತ್ತಮ ಪ್ರಯತ್ನ ಎನಿಸಿಕೊಂಡಿತ್ತು. ಈಗ ಇಂತಹ ಕಲಾ ಪ್ರೇಮಿಗಳಿಂದಲೇ ನಮ್ಮ ಯಕ್ಷಗಾನದ ಬಗ್ಗೆ ಒಂದೊಳ್ಳೆಯ ಚಿತ್ರ ಆಗಲಿ ಹಾಗೂ ಯಶಸ್ಸನ್ನೂ ಕಾಣಲಿ ಎಂಬ ಆಸೆ ಹುಟ್ಟಿಕೊಂಡಿದೆ.

ಅಕ್ಟೋಬರ್ 19 ರಂದು ರಾಜೀವ ಹೆಗಡೆ ಈ ಪೋಸ್ಟ್ ಪ್ರಕಟ ಮಾಡಿದ್ದಾರೆ. ಇವರ ಪೋಸ್ಟ್‌ಗೆ ಕೃಷ್ಣವೇಣಿ ಎನ್ನುವವರು ಕಾಮೆಂಟ್ ಮಾಡಿದ್ದು ‘ವೀರ ಚಂದ್ರಹಾಸ ಎಂಬ ಯಕ್ಷಗಾನ ಕಥಾ ಪ್ರಸಂಗವೇ ಸಿನಿಮಾ ಆಗಿ ಬರ್ತಿದೆ. ರವಿ ಬಸ್ರೂರು ನಿರ್ದೆಶನದಲ್ಲಿ. ಅಂದು ಬಿಟ್ರೆ ಯಕ್ಷಗಾನ ಕಲೆಗೆ ಬಣ್ಣ ಹಾಕುವವರ ಬಗ್ಗೆ ಒಂದು ಒಳ್ಳೆ ಸಿನಿಮಾ ಬರಬೇಕೆಂದರೆ ನಮ್ಮ ಶೆಟ್ರೇ ಮಾಡ್ಬೇಕಷ್ಟೆ‘ ಎಂದಿದ್ದಾರೆ.

Whats_app_banner