Karnataka Election Live Update: ಕರ್ನಾಟಕ ವಿಧಾನಸಭೆ ಚುನಾವಣೆ; ಸಂಜೆ 5 ಗಂಟೆಯ ವರೆಗೆ ಶೇ. 65.69ರಷ್ಟು ಮತದಾನ
Jul 14, 2023 08:34 AM IST
Karnataka Assembly Election 2023 Live Updates: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದೆ. ಸಂಜೆ 5 ಗಂಟೆ ವೇಳೆಗೆ ರಾಜ್ಯಾದ್ಯಂತ ಶೇ. 65.69ರಷ್ಟು ಮತದಾನವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಶೇ.67.77 ರಷ್ಟು ಮತದಾನ
ವಿಜಯಪುರ ಜಿಲ್ಲೆಯಲ್ಲಿ ಬುಧವಾರ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಮಾಹಿತಿ ಅನ್ವಯ ಸರಾಸರಿ ಶೇ.67.77 ರಷ್ಟು ಮತದಾನವಾಗಿದೆ.
ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ.77.60 ರಷ್ಟು ಮತದಾನವಾಗಿದ್ದರೆ, ದೇವರಹಿಪ್ಪರಗಿಯಲ್ಲಿ ಅತೀ ಕಡಿಮೆ ಎಂದರೆ ಶೇ.60.17 ರಷ್ಟು ಮತದಾನವಾಗಿದೆ.
ಮುದ್ದೇಬಿಹಾಳ ಕ್ಷೇತ್ರದಲ್ಲಿ ಶೇ.68.79, ದೇವರಹಿಪ್ಪರಗಿಯಲ್ಲಿ ಶೇ.66.81, ಬಸವನ ಬಾಗೇವಾಡಿಯಲ್ಲಿ ಶೇ.69.85, ಬಬಲೇಶ್ವರದಲ್ಲಿ ಶೇ.77.60, ವಿಜಯಪುರ ನಗರದಲ್ಲಿ ಶೇ.64.43, ನಾಗಠಾಣದಲ್ಲಿ ಶೇ.65.87, ಇಂಡಿಯಲ್ಲಿ ಶೇ.70.52, ಸಿಂದಗಿಯಲ್ಲಿ ಶೇ.60.17 ರಷ್ಟು ಮತದಾನವಾಗಿದೆ.
ಅತಂತ್ರ ವಿಧಾನಸಭೆಯ ಸುಳಿವು ಕೊಟ್ಟ ಎಕ್ಸಿಟ್ ಪೋಲ್
ಕರ್ನಾಟಕ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ. ಕರ್ನಾಟಕದಲ್ಲಿ ಮೇ 10ರಂದು ಮತದಾನ ಅಂತ್ಯಗೊಂಡಿತು. ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಸಿಗಬಹುದು ಎಂಬ ಬಗ್ಗೆ ವಿವಿಧ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಗಳ ಮಾಹಿತಿ ಮೇಲಿನ ಚಿತ್ರದಲ್ಲಿದೆ.
ಇವಿಎಂ, ವಿವಿ ಪ್ಯಾಟ್ ಯಂತ್ರಗಳಿಗೆ ಸೀಲ್
ಮತದಾನ ಮುಕ್ತಾಯವಾಗಿದ್ದು, ಇವಿಎಂ, ವಿವಿ ಪ್ಯಾಟ್ ಯಂತ್ರಗಳನ್ನು ಭದ್ರವಾಗಿ ಸೀಲ್ ಮಾಡಲಾಗುತ್ತಿದೆ. (ಕಲಬುರಗಿಯ ದೃಶ್ಯ)
140 ಸ್ಥಾನಗಳಲ್ಲಿ ಗೆಲುವು; ದಿನೇಶ್ ಗುಂಡೂರಾವ್ ವಿಶ್ವಾಸ
ಕಾಂಗ್ರೆಸ್ ಭಾರಿ ಮತಗಳ ಅಂತರದಿಂದ ಜಯಗಳಿಸಲಿದ್ದು, 140 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಧಾರವಾಡದಲ್ಲಿ ಸಂಜೆ 5 ಗಂಟೆಯ ವರೆಗೆ 62.98% ವೋಟಿಂಗ್
ಧಾರವಾಡ ಜಿಲ್ಲೆ: ಸಂಜೆ 5ರ ವೇಳೆಗೆ ಆದ ಮತದಾನ
ನವಲಗುಂದ 56.84%
ಕುಂದಗೋಳ 64.50%
ಧಾರವಾಡ ಗ್ರಾಮೀಣ 70.18%
ಹುಬ್ಬಳ್ಳಿ-ಧಾರವಾಡ ಪೂರ್ವ 62.50%
ಹುಬ್ಬಳ್ಳಿ-ಧಾರವಾಡ ಕೇಂದ್ರ 58.67%
ಹುಬ್ಬಳ್ಳಿ-ಧಾರವಾಡ ಪಶ್ಚಿಮ 58.25%
ಕಲಘಟಗಿ 72.62%
ಜಿಲ್ಲೆಯ ಒಟ್ಟು ಮತದಾನ 62.98%
ದುಬೈನಿಂದ ಬಂದು ವೋಟ್ ಮಾಡಿದ ಉದ್ಯಮಿ
ರೊನಾಲ್ಟ್ ಕೊಲಾಸೊ ಎಂಬ ಉದ್ಯಮಿಯೊಬ್ಬರು ದುಬೈನಿಂದ ಬೆಂಗಳೂರಿಗೆ ಬಂದಯ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ದೇವನಹಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ವೋಟ್ ಮಾಡಿದ್ದಾರೆ.
ರಾಜ್ಯಾದ್ಯಂತ ಶೇ. 65.69ರಷ್ಟು ಮತದಾನ
ಸಂಜೆ 5 ಗಂಟೆ ವೇಳೆಗೆ ರಾಜ್ಯಾದ್ಯಂತ ಶೇ. 65.69ರಷ್ಟು ಮತದಾನವಾಗಿದೆ.
ಕೊಡಗು ಮತದಾನ ಪ್ರಮಾಣ - 70.28%
ಸಂಜೆ 5 ಗಂಟೆ ವೇಳೆಗೆ ಕೊಡಗು ಮತದಾನ ಪ್ರಮಾಣ - 70.28%
ಮಡಿಕೇರಿ ಕ್ಷೇತ್ರ - 70.45%
ವಿರಾಜಪೇಟೆ ಕ್ಷೇತ್ರ - 70.09%
ರಾಜ್ಯದಲ್ಲೇ ಅತಿ ಹೆಚ್ಚು ಮತದಾನವಾದ ಕ್ಷೇತ್ರ
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಶೇ. 84.53ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮತದಾನವಾದ ಕ್ಷೇತ್ರವಾಗಿದೆ.
ಮೈಸೂರಿನಲ್ಲಿ ಶೇ 67.99 ರಷ್ಟು ವೋಟಿಂಗ್
ಸಂಜೆ 5 ಗಂಟೆಯವರೆಗೆ ಮೈಸೂರಿನಲ್ಲಿ ಶೇ 67.99 ರಷ್ಟು ಮತದಾನವಾಗಿದ್ದು, ವರುಣಾ ಕ್ಷೇತ್ರದಲ್ಲಿ 77.11% ವೋಟಿಂಗ್ ಆಗಿದೆ.
ಹಾಸನ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ.74.63% ರಷ್ಟು ಮತದಾನ
ಕ್ಷೇತ್ರವಾರು ವಿವರ.
ಶ್ರವಣಬೆಳಗೊಳ- 79.00%
ಅರಸೀಕೆರೆ- 78.28%
ಬೇಲೂರು- 75.41%
ಹಾಸನ- 67.71%
ಹೊಳೆನರಸೀಪುರ- 77.23%
ಅರಕಲಗೂಡು- 74.54%
ಸಕಲೇಶಪುರ- 70.70%
ಬೆಂಗಳೂರಿನಲ್ಲಿ ಶೇಕಡಾ 51 ರಷ್ಟು ಮತದಾನ
ಸಂಜೆ 5 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಡಾ 51 ರಷ್ಟು ಮತದಾನವಾಗಿದೆ. ಮತದಾನ ಮುಗಿಯುವ ವೇಳೆಗೆ ಶೇಕಡಾ 53-54 ನಿರೀಕ್ಷೆಯಿದೆ. ಕಳೆದ ಬಾರಿ ಶೇಕಡಾ 52ರಷ್ಟು ಮತದಾನವಾಗಿತ್ತು.
ಜೆಡಿಎಸ್ಗೆ ನಾಡಿನ ಜನಮನ್ನಣೆ ಸಿಗುವ ವಿಶ್ವಾಸ; ಹೆಚ್ಡಿಡಿ
ಹಾಸನ: ಕುಮಾರಸ್ವಾಮಿ ಅವರು ವಿಶೇಷವಾಗಿ ರೂಪಿಸಿರುವ ಪಂಚರತ್ನ ಯೋಜನೆ ಮತ್ತು ಅವರು ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿರುವ ಸಾಲಮನ್ನಾದಂತಹ ವಿಶೇಷ ಕಾರ್ಯಕ್ರಮಗಳಿಗೆ ಈ ಬಾರಿ ನಾಡಿನ ಜನಮನ್ನಣೆ ಸಿಗುವ ವಿಶ್ವಾಸವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯಲ್ಲಿ ಮತ ಚಲಾಯಿಸಿದ ನಂತರ ರಾಜ್ಯದ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿ, ಮತದಾರರು ಚಲಾಯಿ ಸಿರುವ ಹಕ್ಕು ಯಾರ ಪರ ಎಂಬುದು ಮೇ 13 ರಂದು ತಿಳಿಯಲಿದೆ. ಅಲ್ಲಿಯವರೆಗೂ ಏನೂ ಹೇಳಲಿಕ್ಕೆ ಆಗುವುದಿಲ್ಲ.
ಹೊಳೆನರಸೀಪುರ ತಾಲೂಕಿನಲ್ಲೂ ರೇವಣ್ಣ ತಮ್ಮದೇ ಆದ ಕೆಲಸ ಮಾಡಿದ್ದಾರೆ. ಎಲ್ಲಾ ಕೆಲಸಗಳ ಕೀರ್ತಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಲೆಬ್ರಿಟಿ ಪಟ್ಟ ಬದಿಗಿಟ್ಟು ಸಾಮಾನ್ಯರಂತೆ ಸರತಿಯಲ್ಲಿ ನಿಂತು ವೋಟ್ ಮಾಡಿದ ಸಿನಿಮಾ ತಾರೆಯರು
ಹಕ್ಕು ಚಲಾಯಿಸಿದ ಪ್ರಿಯಾಂಕ್ ಖರ್ಗೆ
ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ತಮ್ಮ ಪತ್ನಿ, ಮಕ್ಕಳ ಜೊತೆ ಬಂದು ಮತದಾನ ಮಾಡಿದರು.
ರಾಮಲಿಂಗಾರೆಡ್ಡಿ, ಸೌಮ್ಯಾರೆಡ್ಡಿಯಿಂದ ಮತದಾನ
ಕಾಂಗ್ರೆಸ್ ಮುಖಂಡರಾದ ರಾಮಲಿಂಗಾರೆಡ್ಡಿ ಹಾಗೂ ಸೌಮ್ಯಾರೆಡ್ಡಿ ಮತದಾನ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ 30 ಇವಿಎಂ ಯಂತ್ರಗಳಲ್ಲಿ ದೋಷ
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಸುಮಾರು 30 ಇವಿಎಂ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅವುಗಳನ್ನು ಬದಲಾವಣೆ ಮಾಡಲಾಗಿದೆ.
ಮತದಾನ ಕೇಂದ್ರದಲ್ಲಿಯೇ ಗರ್ಭಿಣಿಗೆ ಹೆರಿಗೆ
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228ರಲ್ಲಿ ವೋಟ್ ಮಾಡಲು ಬಂದಿದ್ದ ತುಂಬು ಗರ್ಭಿಣಿಗೆ ಮತದಾನ ಕೇಂದ್ರದಲ್ಲಿಯೇ ಗಂಡು ಮಗು ಜನಿಸಿದೆ. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಬಳಿಕ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮತದಾನ ಕೇಂದ್ರದಲ್ಲಿಯೇ ನಾರ್ಮಲ್ ಡೆಲಿವರಿ ಆಗಿದೆ. ಬಳಿಕ ತಾಯಿ-ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಇಬ್ಬರೂ ಆರೋಗ್ಯವಾಗಿದ್ದಾರೆ.
ಪುತ್ತೂರಲ್ಲಿ ಗಲಾಟೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮುದಾಯ ಭವನ ಮತಗಟ್ಟೆ ಬಳಿ ಬಿಜೆಪಿ ಬೆಂಬಲಿಗರು ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಪಾಪಯ್ಯ ಗಾರ್ಡನ್ 28, 29 ಬೂತ್ ಬಳಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೊಣ್ಣೆಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಘಟನೆ ಸಂಬಂಧ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದೆ.
ಹುಬ್ಬಳ್ಳಿಯಲ್ಲಿ 400ಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತ ಕೇಂದ್ರವೊಂದರಲ್ಲಿ 400ಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್ ಆಗಿದ್ದು, ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
140 ಸ್ಥಾನ ಗೆಲ್ಲುತ್ತೇವೆ: ಈಶ್ವರಪ್ಪ ವಿಶ್ವಾಸ
ಶಿವಮೊಗ್ಗದ ಸೈನ್ಸ್ ಮೈದಾನದ ಬೂತ್ ಸಂಖ್ಯೆ 163 ರಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಈ ಬಾರಿ ಬಿಜೆಪಿ 140 ಸ್ಥಾನಗಳನ್ನು ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಲುಮರದ ತಿಮಕ್ಕರಿಂದ ಮತದಾನ
ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮಕ್ಕ ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ಲು ಗ್ರಾಮದ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಮತಗಟ್ಟೆ ಸಮೀಕ್ಷೆ: ಸಂಜೆ 6 ನಂತರ... ಎಚ್‌ಟಿ ಕನ್ನಡದಲ್ಲಿ ನಿರೀಕ್ಷಿಸಿ
ಸಿಎಂ ಯಾರ್ ಆಗ್‌ಬೋದು, ಯಾವ ಸರ್ಕಾರ ಬರ್‌ಬೋದು? ದೇಶಕ್ಕೇನು ಮೆಸೇಜು... ಮತಗಟ್ಟೆ ಸಮೀಕ್ಷೆ, ಇಂದು ಸಂಜೆ 6 ನಂತರ... ಎಚ್‌ಟಿ ಕನ್ನಡದಲ್ಲಿ ನಿರೀಕ್ಷಿಸಿ...
ನಟ ಧ್ರುವ ಸರ್ಜಾ ವೋಟಿಂಗ್
ಸ್ಯಾಂಡಲ್ವುಡ್ ನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬೆಂಗಳೂರಿನಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಮಂಜಮ್ಮ ಜೋಗತಿ ಮತದಾನ
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಅವರು ಬಳ್ಳಾರಿಯಲ್ಲಿ ಮತದಾನ ಮಾಡಿದರು.
ವಿವಾಹವಾಗಿ ಬಂದು ಮತ ಚಲಾವಣೆ ಮಾಡಿದ ವರ
ಇಂದು ಧರ್ಮಸ್ಥಳದಲ್ಲಿ ಮದುವೆಯಾಗಿ ಬಂದು ಮತದಾನ ಮಾಡಿದ ರೋಹಿತ್
- ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಮತಗಟ್ಟೆ 85 ರಲ್ಲಿ ಹಕ್ಕು ಚಲಾವಣೆ ಮಾಡಿದ ರೋಹಿತ್
- ರೋಹಿತ್ ಸಕಲೇಶಪುರದ, ಮಹೇಶ್ವರಿ ನಗರದ ನಿವಾಸಿ
ಚಿಂಚೋಳಿಯಲ್ಲಿ ತಂಡೋಪತಂಡವಾಗಿ ಬಂದು ಮತದಾನ ಆರೋಪ
ವಿಜಯಪುರ : ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಕಾರ್ಯನಿರ್ವಹಿಸುವ ಸಂಸ್ಥೆ, ಕಾರ್ಖಾನೆಯ ಸಿಬ್ಬಂದಿಗಳು ತಂಡೋಪತಂಡವಾಗಿ ಬಂದು ಮತದಾನ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಭೂತನಾಳದಲ್ಲಿ ಚಿಂಚೋಳಿಯಿಂದ ಬಂದ ತಂಡವನ್ನು ತಡೆದು ನಿಲ್ಲಿಸಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮುಶ್ರೀಫ್ ಹಾಗೂ ಬೆಂಬಲಿಗರು ಭೂತನಾಳ ರಸ್ತೆಯಲ್ಲಿ ಚಿಂಚೋಳಿ ಭಾಗದಿಂದ ಬಂದ ತಂಡವನ್ನು ತಡೆದು ಪೊಲೀಸ್ ಹಾಗೂ ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚಿಂಚೋಳಿ ಭಾಗದಿಂದ ಸಾವಿರಾರು ಮತದಾರರನ್ನು ಬಿಜೆಪಿ ಅಭ್ಯರ್ಥಿ ಕರೆ ತಂದಿದ್ದಾರೆ. ಅವರ ಅಧ್ಯಕ್ಷತೆಯ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ನೌಕರರು ಉಳಿದುಕೊಂಡಿದ್ದಾರೆ. ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ. ಸಾವಿರಾರು ಜನ ಈಗಾಗಲೇ ನಗರ ಪ್ರವೇಶಿಸಿದ್ದಾರೆ, ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಈ ರೀತಿ ಚುನಾವಣೆ ಅಕ್ರಮ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಈವರೆಗೆ ಶೇ 52.18 ರಷ್ಟು ಮತದಾನ
ವಿಧಾನಸಭೆ ಚುನಾವಣೆಗೆ ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3.35ರ ವರೆಗೆ ಶೇ 52.18 ರಷ್ಟು ಮತದಾನವಾಗಿದೆ.
ಕಾರವಾರದಲ್ಲಿ ಯುವ ಮತದಾರರಿಗೆ ಹೂವು- ಹಣ್ಣಿನ ಗಿಡ ಗಿಫ್ಟ್
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಯುವ ಮತದಾರರಿಗೆ ಹೂವು- ಹಣ್ಣಿನ ಗಿಡವನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ನೇತೃತ್ವದಲ್ಲಿ ನೀಡಲಾಯಿತು. ಕಾರವಾರದ ಸೈಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್ ನಲ್ಲಿ ತೆರೆಲಾದ ಮತಗಟ್ಟೆಯಲ್ಲಿ ಮುಂಜಾನೆಯ ಆಗಮಿಸಿದ 5 ಕ್ಕೂ ಹೆಚ್ಚು ಯುವ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮತದಾನ ಮಾಡುವ ಯುವ ಮತದಾರರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಎಂಸಿ ಕಮಿಷನರ್ ಜುಬಿನ್ ಮಹಾಪಾತ್ರ ಹಾಗೂ ಮತಗಟ್ಟೆ ಅಧಿಕಾರಿಗಳು ಹೂವು- ಹಣ್ಣುಗಳ ಗಿಡಗಳನ್ನು ನೀಡಿ ಅಭಿನಂದಿಸಿದರು. ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಹಾಕುವ 50 ಯುವಕ- ಯುವತಿಯರಿಗೆ ಗಿಡಗಳನ್ನು ನೀಡಿ ಅಭಿನಂದಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹಾಸನ ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.58.87 ರಷ್ಟು ಮತದಾನ
ಕ್ಷೇತ್ರವಾರು ವಿವರ.
ಶ್ರವಣಬೆಳಗೊಳ- 63.05%
ಅರಸೀಕೆರೆ- 59.96%
ಬೇಲೂರು- 58.24%
ಹಾಸನ- 56.08%
ಹೊಳೆನರಸೀಪುರ- 63.15%
ಅರಕಲಗೂಡು- 56.62%
ಸಕಲೇಶಪುರ- 55.16%
ಮತಗಟ್ಟೆ ಅಧಿಕಾರಿಗಳ ಯಡವಟ್ಟು, ವೋಟಿಲ್ಲದೆ ವಾಪಸಾದ ಸಾದಿಕ್
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಎಂಬಲ್ಲಿ ಮತಗಟ್ಟೆ ಅಧಿಕಾರಿಗಳು ಯಡವಟ್ಟು ಮಾಡಿಕೊಂಡು ಸಾದಿಕ್ ಎಂಬಾತ ಓಟು ಹಾಕದೆ ವಾಪಸಾಗಬೇಕಾದ ಪರಿಸ್ಥಿತಿ ಎದುರಾಯಿತು. ಸಾದಿಕ್ ಎಂಬವರು ಓಟು ಹಾಕಲು ಬಂದಾಗ ಈಗಾಗಲೇ ನಿಮ್ಮ ಮತ ಚಲಾವಣೆಯಾಗಿದೆ ಎಂದು ಅಧಿಕಾರಿಗಳ ತಿಳಿಸಿದರು. ಅದು ಹೇಗೆ ಎಂದು ಆತಂಕದಿಂದ ಪ್ರಶ್ನಿಸಿದ ಸಾದಿಕ್ , ತನ್ನ ದಾಖಲೆಗಳನ್ನು ತೋರಿಸಿದಾಗ ಅಧಿಕಾರಿಗಳಿಗೆ ತಮ್ಮ ತಪ್ಪು ಅರಿವಾಯಿತು. ಸಾದಿಕ್ ಕೆ. ಎಂಬವರು ಇದೇ ಹೆಸರಲ್ಲಿ ಮತ ಚಲಾಯಿಸಿದ್ದಾರೆ ಎಂದು ಗೊತ್ತಾಯಿತು. ಅದಾಗಲೆ ಮತ ಚಲಾವಣೆಯಾದ ಕಾರಣ, ಸಾದಿಕ್ ಮತದಾನ ವಂಚಿತರಾದರು.
ತೃತೀಯ ಲಿಂಗಿಗಳಿಂದ ಮತ ಚಲಾವಣೆ
ದಕ್ಷಿಣ ಕನ್ನಡದಲ್ಲಿ 75 ಮಂದಿ ತೃತೀಯ ಲಿಂಗಿಗಳಿಗೆ ಮತದಾನದ ಹಕ್ಕು ಇದ್ದು, ಬಹುತೇಕ ಮಂದಿ ಮತ ಚಲಾಯಿಸಿದರು. ಮಂಗಳೂರಿನ ಮಿಲಾಗ್ರಿಸ್ ಶಾಲೆಯಲ್ಲಿ ಮತದಾನ ಮಾಡಿದ ಅವರು, ಹಕ್ಕು ಚಲಾವಣೆ ಮಾಡಲು ಅವಕಾಶ ದೊರಕಿದ್ದಕ್ಕಾಗಿ ಸಂತಸಗೊಂಡಿದ್ದಾರೆ. ಜಿಲ್ಲೆಯ 75 ಮಂದಿ ತೃತೀಯ ಲಿಂಗಿಗಳ ಪೈಕಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 46 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.
23ಕ್ಕೂ ಹೆಚ್ಚು ಜನರ ಬಂಧನ
ವಿಜಯಪುರ: ಇವಿಎಂಗಳನ್ನು ಸಾಗಾಟ ಮಾಡಲಾಗುತ್ತದೆ ಎಂಬ ತಪ್ಪು ಕಲ್ಪನೆ ಆಧರಿಸಿ ಗ್ರಾಮಸ್ಥರಿಂದ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ ತಿಳಿಸಿದರು.
ಮಸಬಿನಾಳದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ದಸ್ತಗಿರಿ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಯಾರು ಸಹ ಈ ರೀತಿಯ ಕೃತ್ಯಗಳಿಗೆ ಮುಂದಾಗದಂತೆ ಕಠಿಣ ಎಚ್ಚರಿಕೆ ನೀಡಲಾಗಿದೆ. ಯಾರೇ ಇದ್ದರೂ ಸಹ ಚುನಾವಣಾ ಅಕ್ರಮ, ಶಾಂತಿ ಕದಡಲು ಮುಂದಾದರೆ ಅವರ ಮೇಲೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಲಾಖೆ ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಇವಿಎಂ ಜಖಂ:
ಮಸಬಿನಾಳದಲ್ಲಿ ನಡೆದ ಈ ಘಟನೆಯಲ್ಲಿ ಸೆಕ್ಟರ್ ಅಧಿಕಾರಿಗೆ ಗಾಯಗಳಾಗಿದ್ದು, ಎರಡು ಕಂಟ್ರೋಲ್ ಯೂನಿಟ್, 2 ಬ್ಯಾಲೇಟ್ ಯೂನಿಟ್, 3 ವಿವಿಪ್ಯಾಟ್‌ಗಳು ಜಖಂಗೊಂಡಿವೆ.
ಬೆಂಗಳೂರಿನಲ್ಲಿ ಶೇಕಡ 41.43 ರಷ್ಟು ವೋಟಿಂಗ್
ಮಧ್ಯಾಹ್ನ 3 ಗಂಟೆ ವೇಳೆಗೆ ರಾಜಧಾನಿ ಬೆಂಗಳೂರಿನಲ್ಲಿ ಶೇಕಡ 41.43 ರಷ್ಟು ಮತದಾನವಾಗಿದೆ.
ಹಕ್ಕು ಚಲಾಯಿಸಿದ ಮೋಹನ್ ದಾಸರಿ
ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸರ್ ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೋಹನ್ ದಾಸರಿ ತಮ್ಮ ಕುಟುಂಬ ಸಮೇತ ಮತದಾನ ಮಾಡಿದರು.
ಆಪ್ ಅಭ್ಯರ್ಥಿ ಧರ್ಮಶ್ರೀ ಅವರಿಂದ ವೋಟಿಂಗ್
ಹಿರಿಯ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಧರ್ಮಶ್ರೀ ಅವರು ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಮತದಾನಕ್ಕೆ ಬಂದ ಮಹಿಳೆ ಮೇಲೆ ಪೊಲೀಸರಿಂದ ಹಲ್ಲೆ ಆರೋಪ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216ರಲ್ಲಿ ಮತದಾನಕ್ಕೆ ಬಂದ ಮಹಿಳೆ ಮೇಲೆ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಹುಲಗೆಮ್ಮ ಆರೋಪಿಸಿದ್ದಾರೆ.
ವೋಟ್ ಮಾಡಿದ ಸುದೀಪ್; ಭಾರತೀಯನಾಗಿ ಇಲ್ಲಿಗೆ ಬಂದಿದ್ದೇನೆ ಎಂದ ಕಿಚ್ಚ
ಒಬ್ಬರು ತಮ್ಮ ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ಮತ ಚಲಾಯಿಸಬೇಕು. ನಾನು ಸೆಲೆಬ್ರಿಟಿಯಾಗಿ ಇಲ್ಲಿಗೆ ಬಂದಿಲ್ಲ, ನಾನು ಭಾರತೀಯನಾಗಿ ಇಲ್ಲಿಗೆ ಬಂದಿದ್ದೇನೆ ಮತ್ತು ಇದು ನನ್ನ ಜವಾಬ್ದಾರಿ ಎಂದು ಬೆಂಗಳೂರಿನಲ್ಲಿ ಮತ ಚಲಾಯಿದ ಬಳಿಕ ನಟ ಕಿಚ್ಚ ಸುದೀಪ್ ಹೇಳಿದರು. ಸುದೀಪ್ ಈ ಬಾರಿ ಬಿಜೆಪಿ ಪರ ಪ್ರಚಾರ ಮಾಡಿದ್ದರು.
ಸಚಿವ ಬಿ.ಸಿ.ನಾಗೇಶ್ರಿಂದ ಮತದಾನ
ತಿಪಟೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಬಿ.ಸಿ.ನಾಗೇಶ್ ಹಾಗೂ ಅವರ ಕುಟುಂಬದವರು ತಿಪಟೂರಿನಲ್ಲಿ ಮತಚಲಾಯಿಸಿದರು.
ಹೆಚ್.ಡಿ.ರೇವಣ್ಣ ಅವರಿಗೆ ಕ್ರೆಡಿಟ್ ಕೊಟ್ಟ ದೇವೇಗೌಡರು
ಅದೊಂದು ಪುಟ್ಟ ಹಳ್ಳಿ. ಅಲ್ಲಿ ಸರ್ವತೋಮುಖ ಅಭಿವೃದ್ಧಿ ನಡೆದಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಹೆಚ್.ಡಿ.ರೇವಣ್ಣ ಅವರಿಗೆ ಕ್ರೆಡಿಟ್ ಸಲ್ಲಬೇಕು ಎಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮತ ಚಲಾಯಿಸಿದ ನಂತರ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ರಾಜ್ಯದಲ್ಲಿ ಮಧ್ಯಾಹ್ನ 1ಗಂಟೆ ವರೆಗೂ ಶೇ. 37.25 ಮತದಾನ. ಕ್ಷೇತ್ರವಾರು ವಿವರ ಇಲ್ಲಿದೆ..
ಮೈಸೂರಿನಲ್ಲಿ ಶೇ.36.73ಯಷ್ಟು ಮತದಾನ
ಮಧ್ಯಾಹ್ನ 1 ಗಂಟೆಯವರೆಗೆ ಮೈಸೂರಿನಲ್ಲಿ ಶೇ.36.73ಯಷ್ಟು ಮತದಾನವಾಗಿದೆ. ವರುಣಾ ಕ್ಷೇತ್ರದಲ್ಲಿ ಶೇ 43.7 ರಷ್ಟು ಜನರು ವೋಟ್ ಮಾಡಿದ್ದಾರೆ.
ಹೆಚ್ಡಿಡಿ ಮತದಾನ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಪತ್ನಿ ಚನ್ನಮ್ಮ ಅವರೊಂದಿಗೆ ಬಂದು ಮತದಾನ ಮಾಡಿದರು
ವೋಟ್ ಮಾಡಿದ ತೇಜಸ್ವಿ ಸೂರ್ಯ
ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ವಿಜಯನಗರದಲ್ಲಿ ಮತ ಚಲಾಯಿಸಿದರು
ಡಿ.ವಿ.ಸದಾನಂದ ಗೌಡ ಅವರಿಂದ ಮತದಾನ
ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ಕುಟುಂಬಸಮೇತರಾಗಿ ಬಂದು ಮತದಾನ ಮಾಡಿದರು
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವೋಟಿಂಗ್
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಸರತಿ ಸಾಲಿನಲ್ಲಿ ನಿಂತು ಬೆಂಗಳೂರಿನಲ್ಲಿ ಮತದಾನದ ಹಕ್ಕು ಚಲಾಯಿಸಿದರು.
ಸಚಿವ ಡಾ.ಅಶ್ವತ್ಥನಾರಾಯಣ ಹಕ್ಕುಚಲಾವಣೆ
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ಕುಟುಂಬ ಸಮೇತರಾಗಿ ಬಂದು ಆರ್ ವಿಎಂ ಎಕ್ಸ್ ಟೆನ್ಶನ್ ನಲ್ಲಿ ಮತದಾನ ಮಾಡಿದರು.
ಎಕ್ಸಿಟ್ ಪೋಲ್ ಎಲ್ಲಿ ಯಾವಾಗ ನೋಡಬೇಕು?
ಕಲಬುರಗಿಯಲ್ಲಿ ಶೇ 30 ರಷ್ಟು ವೋಟಿಂಗ್
ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2393 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಅಲ್ಲಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳು ಸಹ ವರದಿಯಾಗಿದೆ. ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಕಾರ್ಯಕರ್ತರ ಮಧ್ಯ ವಾಗ್ವಾದ ನಡೆಯಿತು. , ವಾಡಿಯಲ್ಲಿ ಮತಮಂತ್ರ ಕೆಟ್ಟಿತು. ಇದನ್ನು ಬಿಟ್ಟರೆ ಶಾಂತಿಯುವ ಮತದಾನ ನಡೆದಿದ್ದು, ಚಿತ್ತಾಪುರ ತಾಲೂಕಿನಲ್ಲಿ ಚುನಾವಣಾಧಿಕಾರಿ ಮತ ಚಲಾಯಿಸಿದರು.
ಮಲ್ಲಿಕಾರ್ಜುನ ಖರ್ಗೆ ಮತದಾನ
ಕಲಬುರಗಿಯ ಮತಗಟ್ಟೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪತ್ನಿ ರಾಧಾಬಾಯಿ ಖರ್ಗೆ ಮತದಾನ ಮಾಡಿದರು. ಬಳಿಕ ಮಾತನಾಡಿದ ಕೈ ನಾಯಕ, ನಾನು ಕಳೆದ 55 ವರ್ಷಗಳಿಂದ ಇದೇ ಮತಗಟ್ಟೆಯಲ್ಲಿ ಮತದಾನ ಮಾಡುತ್ತಿದ್ದೇನೆ. ಜನರ ಉತ್ಸಾಹ ನೋಡಿ ನನ್ನ ಪಕ್ಷ ಅಧಿಕಾರಕ್ಕೆ ಬಂದು ಬಹುಮತದಿಂದ ಗೆಲ್ಲುತ್ತೇವೆ ಎಂದು ಅನಿಸುತ್ತಿದೆ ಎಂದು ಹೇಳಿದರು.
ಚಿಕ್ಕ ಎಲಚಟ್ಟಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ಮೂಲಭೂತ ಸೌಕರ್ಯ ನೀಡಿಲ್ಲ ಎಂದು ಆರೋಪಿಸಿ ಚಾಮರಾಜನಗರ ಜಿಲ್ಲೆಯ ಚಿಕ್ಕ ಎಲಚಟ್ಟಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಸಚಿವ ಮುರಗೇಶ್ ನಿರಾಣಿ ಮತದಾನ
ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಮುರಗೇಶ್ ನಿರಾಣಿ ಬೀಳಗಿ ತಾಲೂಕಿನ ಬಸವ ಹಂಚಿನಾಳ ಗ್ರಾಮದಲ್ಲಿ ಮತ ಚಲಾಯಿಸಿದರು. ತಂದೆ, ತಾಯಿ, ಪತ್ನಿ, ಮಕ್ಕಳು, ಸೊಸೆ ಸೇರಿದಂತೆ ಕುಟುಂಬ ಸಮೇತರಾಗಿ ಆಗಮಿಸಿ ಹಂಚಿನಾಳ ಗ್ರಾಮದ ಮತಗಟ್ಟೆ ಸಂಖ್ಯೆ-11 ರಲ್ಲಿಮತ ಚಲಾಯಿಸಿದರು.
ಹಾಸನದಲ್ಲಿ ಶೇ 40.88 ರಷ್ಟು ಮತದಾನ
ವಿಜಯಪುರ: ಗ್ರಾಮಸ್ಥರಿಂದ ಮತಯಂತ್ರ ಒಡೆದು ಹಾಕಿ ಸಿಬ್ಬಂದಿ ಮೇಲೆ ಹಲ್ಲೆ
ವಿಜಯಪುರ : ಕಾಯ್ದಿರಿಸಿದ ಮತಯಂತ್ರಗಳನ್ನು ವಾಪಾಸ್ಸು ಒಯ್ಯುವ ಸಂದರ್ಭದಲ್ಲಿ ಇವಿಎಂ ಮಷೀನ್ ಸಾಗಾಟ ಮಾಡಲಾಗುತ್ತದೆ ಎಂದು ಪರಿಭಾವಿಸಿ ಮಸಬಿನಾಳ ಗ್ರಾಮಸ್ಥರು ಕಾಯ್ದಿಟ್ಟ ಮತಯಂತ್ರ ಒಡೆದು ಹಾಕಿ ಕಾರು ಜಖಂ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಬಸವನಬಾಗೇವಾಡಿ ಕ್ಷೇತ್ರದ ಮಸಬಿನಾಳ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯಿಂದಾಗಿ ಕೆಲಕಾಲ ಮತದಾನ ಸ್ಥಗಿತಗೊಂಡಿದ್ದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿ, ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ.
ಮತಯಂತ್ರ ಕೆಟ್ಟಲ್ಲಿ ಬಳಕೆಗೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ, ವಿವಿಪ್ಯಾಟ್ ಮಶೀನ್‌ಗಳನ್ನು ವಾಪಸ್ ತರುವುದನ್ನು ಗಮನಿಸಿದ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ಸಿಬ್ಬಂದಿ ಸರಿಯಾಗಿ ಉತ್ತರಿಸದೇ ಇದ್ದಾಗ, ತಪ್ಪು ಕಲ್ಪನೆ ಮೂಡಿಸಿಕೊಂಡ ಗ್ರಾಮಸ್ಥರು ಸಿಪಿಐ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಾಸನ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.40.88% ರಷ್ಟು ಮತದಾನ
ಹಾಸನ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.40.88% ರಷ್ಟು ಮತದಾನವಾಗಿದೆ.
ಕ್ಷೇತ್ರವಾರು ವಿವರ.
ಶ್ರವಣಬೆಳಗೊಳ- 43.16%
ಅರಸೀಕೆರೆ- 40.57%
ಬೇಲೂರು- 41.65%
ಹಾಸನ- 41.57%
ಹೊಳೆನರಸೀಪುರ- 42.89%
ಅರಕಲಗೂಡು- 36.61%
ಸಕಲೇಶಪುರ- 39.7%
ನಟಿ ಮಾಳವಿಕಾ ಅವಿನಾಶ್ ಮತ ಚಲಾವಣೆ
ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಕೃಷ್ಣಮೂರ್ತಿ ಪುರಂನಲ್ಲಿರುವ ಗುಬ್ಬಚ್ಚಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಇದೇ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಟಿ ಎಸ್ ಶ್ರೀವತ್ಸ, ಸಿದ್ದರಾಜು, ಸುಂದರ್, ಅಜಯ್ ಶಾಸ್ತ್ರಿ, ವಿಕ್ರಮ ಅಯ್ಯಂಗಾರ್, ಕೃಷ್ಣ, ಅರುಣ್, ರಾಜೇಶ್, ಹಾಗೂ ಇನ್ನಿತರರು ಹಾಜರಿದ್ದರು
ಮತಗಟ್ಟೆಗೆ ಆಗಮಿಸಿದ ನಟ ಶಿವರಾಜ್‌ಕುಮಾರ್
ತಿಪಟೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವಬಿಸಿ ನಾಗೇಶ್ ಮತ ಚಲಾವಣೆ
ತಿಪಟೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಅವರು ತಿಪಟೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮತಗಟ್ಟೆಗೆ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದರು.
ಬಿಜೆಪಿಯ ಕಾರ್ಯಕತ್ರದಿಂದ ಕರಪತ್ರ ಹಂಚಿಕೆ, ಆಮ್ ಆದ್ಮಿ ದೂರು
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ವಾರ್ಡಿನಲ್ಲಿ ಬಿಜೆಪಿ ಕಾರ್ಯಕರ್ತರುಗಳು ಮತಗಟ್ಟೆಯಲ್ಲಿ ಕುಳಿತುಕೊಂಡು ಬಿಜೆಪಿಯ ಕರಪತ್ರಗಳನ್ನು ಹಂಚಿ ಅಕ್ರಮ ಮತದಾನಕ್ಕೆ ಅನುವು ಮಾಡಿಕೊಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಶೋಕ್ ಮೃತ್ಯುಂಜಯ ಮಾಧ್ಯಮಗಳ ಮುಂದೆ ಹರಿಹಾಯ್ದಿದ್ದಾರೆ. ಕೂಡಲೇ ಬಿಜೆಪಿ ಅಭ್ಯರ್ಥಿ ಶಾಸಕ ಎಂ ಕೃಷ್ಣಪ್ಪರವರ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಈ ಮತಗಟ್ಟೆಯಲ್ಲಿ ಮರು ಮತದಾನ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕನಕಪುರ: ರಿಕ್ಷಾ ಓಡಿಸಿದ ಡಿಕೆ ಶಿವಕುಮಾರ್
ಕನಕಪುರದ ದೊಡ್ಡಆಲಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ರಿಕ್ಷಾ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಮತಗಟ್ಟೆ ಬರುವ ಜನರನ್ನು ರಿಕ್ಷಾದಲ್ಲಿ ತುಂಬಿಸಿಕೊಂಡಿರುವ ಡಿಕೆಶಿ ರಿಕ್ಷಾ ಚಲಾಯಿಸಿದ್ದಾರೆ.
ಕುಂದಾಪುರ: ಅಂಬ್ಯುಲೆನ್ಸ್‌ನಲ್ಲಿ ಬಂದು ಮತದಾನ
ಕುಂದಾಪುರದಲ್ಲಿ ರಾಮಣ್ಣ ಶೆಟ್ಟಿ ಎಂಬುವವರು ಅಂಬ್ಯುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿದ್ದಾರೆ. ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕುಂದಾಪುರದಿಂದ ಬ್ರಹ್ಮಾವರಕ್ಕೆ ಹೋಗಿ ಮತದಾನ ಮಾಡಿದ್ದಾರೆ
ವೀಲ್‌ಚೇರ್ ಮೇಲೆ ಕುಳಿತು ಮತಗಟ್ಟೆ ತಲುಪಿ ಮತದಾನ
ಬೆಂಗಳೂರಿನ ಆರ್ ಆರ್ ನಗರದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ವೀಲ್‌ಚೇರ್ ಮೇಲೆ ಕುಳಿತು ಮತಗಟ್ಟೆ ತಲುಪಿ ಮತ ಹಾಕಿದ್ದಾರೆ.
ಬೆಳಗಾವಿ: ಮತಗಟ್ಟೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧೆ
ಮತದಾನಕ್ಕೂ ಮುನ್ನ ಮತಗಟ್ಟೆಯಲ್ಲೇ ಕುಸಿದ ಬಿದ್ದು ವೃದ್ಧೆಯೊಬ್ಬರು ನಿಧನ ಹೊಂದಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಲೋ ಬಿಪಿ ಕಾರಣದಿಂದ ಆಕೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಸನ: ಮತದಾನ ಮಾಡಿದ ಬಳಿಕ ಮೃತಪಟ್ಟ ವ್ಯಕ್ತಿ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಮತದಾನ ಮಾಡಿ ಹೊರಬಂದ ಬಳಿಕ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕೋಲೆ ಗ್ರಾಮದ ಜಯಣ್ಣ (49) ಮೃತಪಟ್ಟ ದುರ್ದೈವಿ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಧರ್ಮಸ್ಥಳ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ ಚಲಾವಣೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಕುಟುಂಬಸ್ಥರೊಂದಿಗೆ ಬಂದು ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಜೊತೆಗೆ ಪತ್ನಿ ಹೇಮಾವತಿ ಹೆಗ್ಗಡೆ, ಸಹೋದರ ಹರ್ಷೇಂದ್ರ ಕುಮಾರ್ ಪತ್ನಿ ಸುಪ್ರಿಯಾ ಅವರು ಮತ ಚಲಾಯಿಸಿದರು.
ಸಿದ್ದರಾಮನ ಹುಂಡಿಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಸಿದ್ದರಾಮಯ್ಯ
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಸಿದ್ದರಾಮನ ಹುಂಡಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇದಕ್ಕೂ ಮುನ್ನ ಅವರು ಗ್ರಾಮದ ಸಿದ್ದರಾಮೇಶ್ವರ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಿದರು.
ಬೆಂಗಳೂರು: ಮತದಾನ ಮಾಡಿದ ಶತಾಯುಷಿ ಅಂಧ ಅಜ್ಜಿ
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಮತಗಟ್ಟೆಯಲ್ಲಿ ಶತಾಯುಷಿಯೊಬ್ಬರು ಮತ ಚಲಾವಣೆ ಮಾಡಿದ್ದಾರೆ. ಸುಮಾರು 101 ವರ್ಷ ವಯಸ್ಸಿನ ಇವರು ಮತ ಚಲಾಯಿಸಿದ್ದು. ಎಲ್ಲರೂ ಮತದಾನ ಮಾಡಬೇಕು, ಮತದಾನ ಮಾಡದವರು ಇದ್ದೂ ಇಲ್ಲದಂತೆ ಎಂದು ಹೇಳಿದ್ದಾರೆ.
ಅರಸೀಕೆರೆ: ಮತ ಚಲಾಯಿಸಿದ ನಟ ಡಾಲಿ ಧನಂಜಯ್
ಸ್ಯಾಂಡಲ್ ವುಡ್ ನ ಖ್ಯಾತ ನಟ ಡಾಲಿ ಧನಂಜಯ್ ತಮ್ಮ ಹುಟ್ಟುವರಾದ ಕಾಳೇನ ಹಳ್ಳಿ ಹಟ್ಟಿ ಮತಗಟ್ಟೆ ಸಂಖ್ಯೆ 217 ಕೆ ತನ್ನ ಅಜ್ಜಿ ಮಲ್ಲಮ್ಮ ಸಹೋದರ ಗಿರೀಶ ಹಾಗೂ ಸಹೋದರಿ ರಾಣಿಯೊಂದಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು.
ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮತದಾನ
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ತಮ್ಮ ಪತ್ನಿ ಆಶಾ ಎಂ. ಪಾಟೀಲ ಅವರ ಜೊತೆ ವಿಜಯಪುರ ನಗರದಲ್ಲಿ ಮತದಾನ ಮಾಡಿದರು.
ನಗರದ ಎಸ್. ಎಸ್. ಎಸ್. ಹೈಸ್ಕೂಲ್ ಬಳಿ ಮದ್ದುನ ಖಣಿ ಹತ್ತಿರದ ಸಿದ್ಧೇಶ್ವರ ಕಲಾ ಶಾಲೆಯ ಮತಗಟ್ಟೆ ಸಂಖ್ಯೆ 38ರಲ್ಲಿ ಮತದಾನ ಮಾಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಬಬಲೇಶ್ವರದಲ್ಲಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಲುಪದ 12ಡಿ ಪತ್ರ: ಮತಗಟ್ಟೆಗೆ ಬಂದ ವಿಕಲಚೇತನರು
ಮಂಗಳೂರು: ದಕ್ಷಿಣ ಕನ್ನಡದ ಬಂಟ್ವಾಳ ಕ್ಷೇತ್ರದ ಬೆಂಜನಪದವು ಮೂಡಾಯಿಕೋಡಿ ಧಾರೆಕಟ್ಟೆ ಭಾಗದಲ್ಲಿ ಮನೆ ಮನೆ ಮತ ಹಾಕುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮನೆ ಮನೆಗೆ ೧೨ಡಿ ಪತ್ರವನ್ನೇ ತಲುಪಿಸಿಲ್ಲ ಎಂಬ ಆರೋಪ ಕೇಳಿ ಬಂತು. ಹೀಗಾಗಿ ಈ ಭಾಗದ ಮತದಾರರಾದ ವಿಕ್ಟರ್ ಬರೆಟ್ಟೋ ಅವರನ್ನು ವೀಲ್ ಚೇರ್ ಹಾಗೂ ನಡೆಯಲು ಸಾಧ್ಯವಾಗದ ಐತಪ್ಪ ಬೆಳ್ಚಡ ಅವರನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಮತ ಚಲಾಯಿಸಲಾಯಿತು.
ಮಂಗಳೂರು: ಪತ್ನಿ ಮಕ್ಕಳೊಂದಿಗೆ ಆಗಮಿಸಿ ರಮನಾಥ್ ರೈ ಮತದಾನ
ಒಂಭತ್ತನೇ ಬಾರಿ ಬಂಟ್ವಾಳ ದಿಂದ ಸ್ಪರ್ದೆಗಿಳಿದಿರುವ ಮೂರು ಬಾರಿಯ ಸಚಿವ, ಆರು ಬಾರಿ ಶಾಸಕ ರಮಾನಾಥ ರೈ ಅವರು ಕಳ್ಳಿಗೆ ಗ್ರಾಮದ ತೊಡಂಬಿಲ ಸರ್ಕಾರಿ ಶಾಲೆಯಲ್ಲಿ ಪತ್ನಿ, ಮಕ್ಕಳೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಕಾಂಗ್ರೆಸ್ ಪಕ್ಷದ ದ.ಕ.ಜಿಲ್ಲೆಯ ಪ್ರಭಾವಿ ರಾಜಕಾರಣಿ ಆಗಿರುವ ರೈ, ಕಳೆದ ಬಾರಿ ಸೋತಿದ್ದು, ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ
ಇದೇ ಮೊದಲ ಬಾರಿಗೆ ಸುತ್ತೂರಿನಲ್ಲಿ ಸುತ್ತೂರು ಶ್ರೀಗಳಿಂದ ಮತದಾನ
ಸುತ್ತೂರು ಶ್ರೀಗಳು ಇಂದು ಮತದಾನವನ್ನು ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ಸುತ್ತೂರಿನಲ್ಲಿ ಮಾಡಿದರು. ಮುಂಚೆ ಅವರು ಮೈಸೂರಿನಲ್ಲಿ ಮತದಾನವನ್ನು ಮಾಡುತ್ತಿದ್ದರು.
ಬೆಂಗಳೂರಿನಾದ್ಯಂತ ಬಿರುಸಿನ ಮತದಾನ
ಬೆಂಗಳೂರಿನಾದ್ಯಂತ ಮತದಾನ ಬಿರುಸಿನಿಂದ ನಡೆಯುತ್ತಿದ್ದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಮಾಂಡ್ ಕಂಟ್ರೋಲ್ ರೂಂ ನಲ್ಲಿ ಕುಳಿತಿರುವ ಪ್ರಾದೇಶಿಕ ಆಯುಕ್ತರಾದ ಶ್ರೀ ಆಮ್ಲಾನ್ ಆದಿತ್ಯ ಬಿಸ್ವಾಸ್ ಮತ್ತು ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಅವರು 28 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದ ಕುರಿತು ಪರಿವೀಕ್ಷಣೆ ಮಾಡಿದರು.
ಬಿಡದಿ: ಹೆಚ್‌ಡಿ ಕುಮಾರಸ್ವಾಮಿ ಮತ ಚಲಾವಣೆ
ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ HD ಕುಮಾರಸ್ವಾಮಿ ಅವರು ಮತ ಚಲಾಯಿಸಿದರು.
ಮಾಜಿ ಮುಖ್ಯಮಂತ್ರಿಗಳ ಧರ್ಮಪತ್ನಿ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು, ಪುತ್ರರು, ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು, ಹಾಗೂ ಶ್ರೀ ನಿಖಿಲ್ ಕುಮಾರಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ರೇವತಿ ಇದೇ ಸಂದರ್ಭದಲ್ಲಿ ಮತದಾನ ಮಾಡಿದರು.
ಮೈಸೂರಿನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ
ಕುವೆಂಪುನಗರದ ಜ್ಞಾನಂಗಂಗಾ (ಮತಗಟ್ಟೆ ಸಂಖ್ಯೆ 26)ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು 2023ರ ಚುನಾವಣಾ ರಾಯಬಾರಿ ಜಾವಗಲ್ ಶ್ರೀನಾಥ್ ಅವರು ಮತದಾನ ಮಾಡಿದರು.
ಕುಂದಾಪುರದಲ್ಲಿ ಶೇ. 32 ಮತದಾನ, ಸುಳ್ಯದಲ್ಲಿ ಶೇಕಡ 30.52 ಮತದಾನ
ಕುಂದಾಪುರದಲ್ಲಿ ಅತ್ಯಧಿಕ ಅಂದರೆ ಶೇ. 32 ಮತದಾನವಾಗಿದೆ. ಇದೇ ರೀತಿ ಸುಳ್ಯದಲ್ಲಿ ಶೇಕಡ 30.52 ಮತದಾನವಾಗಿದೆ.
11 ಗಂಟೆಗೆ ಶೇ 20.99 ಪ್ರಮಾಣದ ಮತದಾನ
ಬೆಳಿಗ್ಗೆ 11 ಗಂಟೆಯವರೆಗೆ ರಾಜ್ಯದಲ್ಲಿ ಒಟ್ಟಾರೆ ಶೇ 20.99ರಷ್ಟು ಮತದಾನವಾಗಿದೆ. ಹೊತ್ತು ಏರಿದಂತೆ ಮತದಾನವೂ ಚುರುಕಾಗುತ್ತಿದೆ.
ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ ಚಲಾವಣೆ
ಪತ್ನಿ ಸಮೇತ ಮತಗಟ್ಟೆಗೆ ಆಗಮಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮತ ಚಲಾವಣೆ ಮಾಡಿದ್ದಾರೆ. ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಜತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. "ಮತದಾನ ಎಲ್ಲರ ಹಕ್ಕು. ಎಲ್ಲರೂ ತಪ್ಪದೇ ಒಂದು ಮತ ಚಲಾಯಿಸಿ. ಯುವಕರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಿ. ಚುನಾವಣಾ ಆಯೋಗ ಎಲ್ಲಾ ರೀತಿಯ ಸೌಕರ್ಯ ಮಾಡಿದೆ.
ಸಂಜೆವರೆಗೂ ಸಾಕಷ್ಟು ಸಮಯ ಇದೆ ಎಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ಯದುವೀರ್ ಒಡೆಯರ್ ಮನವಿ ಮಾಡಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಮತ ಚಲಾವಣೆ
ಬಿಜೆಪಿಯ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಮತ ಚಲಾಯಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ʼಕರ್ನಾಟಕದಲ್ಲಿ ರಾಷ್ಟ್ರೀಯವಾದಿ ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಹಿಂದೂ ಧರ್ಮದವರೆಲ್ಲರೂ ಬಿಜೆಪಿಗೆ ಮತ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ 140 ಸ್ಥಾನ ಗಳಿಸಲಿದೆʼ ಎಂದಿದ್ದಾರೆ.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಹೂ ಮಾಲೆ ಹಾಕಿ, ಊದಿನಕಡ್ಡಿ ಹಚ್ಚಿ ಪೂಜೆ ಸಲ್ಲಿಸಿದ್ದಾರೆ.
ಮೈಸೂರು: ನೂತನ ವಧುವರರಿಂದ ಮತದಾನ
ಪಿರಿಯಾಪಟ್ಟಣದಲ್ಲಿ ನವ ವಧುವರ ಜತೆಯಾಗಿ ಬಂದು ಮತ ಚಲಾಯಿಸಿದ್ದಾರೆ. ಮದುಮಗ ಬಿಪಿನ್ ಕೆ ಎನ್, ಪತ್ನಿ ಅಕ್ಷತಾ ಪಿ ಮತ ಚಲಾಯಿಸಿದ್ದಾರೆ. ಮದುಮಗನ ತಂದೆ ಮತ್ತು ತಾಯಿಯೂ ಜತೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಮತದಾನಕ್ಕೆ ಮುನ್ನ ಹೊಳೆನರಸೀಪುರದ ಜೆಡಿಎಸ್ ಅಭ್ಯರ್ಥಿ ಎಚ್‌ಡಿ ರೇವಣ್ಣ ಪೂಜೆ ಸಲ್ಲಿಕೆ
ಹೊಳೆನರಸೀಪುರದ ಜೆಡಿಎಸ್ ಅಭ್ಯರ್ಥಿ ಎಚ್‌ಡಿ ರೇವಣ್ಣ ಮತದಾನಕ್ಕೂ ಮುನ್ನ ಕುಟುಂಬ ಸಮೇತರಾಗಿ ಇಲ್ಲಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಯಾದಗಿರಿ: 105 ವರ್ಷದ ಶತಾಯುಷಿ ಅಜ್ಜಿಯಿಂದ ಮತ ಚಲಾವಣೆ
ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರ ನಗನೂರ ಗ್ರಾಮದಲ್ಲಿ ಶತಾಯುಷಿ ಅಜ್ಜಿಯೊಬ್ಬರು ಮತ ಚಲಾಯಿಸಿದ್ದಾರೆ. ಅಂಚೆಮತದಾನ ಆಯ್ಕೆ ಮಾಡಿಕೊಳ್ಳದ ಇವರು ಖುದ್ದಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. 105 ವರ್ಷ ವಯಸ್ಸಿನ ಇವರು ತನ್ನ ಮೊಮ್ಮಗನ ಕಾರಿನಲ್ಲಿ ಆಗಮಿಸಿದ್ದರು.
ಮತದಾನ ಮಾಡಿದ ಶತಾಯುಷಿ ಅಜ್ಜಿ
ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಮೆಳಗೋಡು ಗ್ರಾಮದಲ್ಲಿ ಶತಾಯುಷಿ ಅಜ್ಜಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ. ಶತಾಯುಷಿ ಬೋರಮ್ಮ ಅವರು ಪ್ರತಿ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡುವ ಮೂಲಕ ಮಾದರಿಯಾಗುತ್ತಿದ್ದಾರೆ. ವಯೋವೃದ್ಧೆ ಬೋರಮ್ಮ ಅವರ ಉತ್ಸಾಹಕ್ಕೆ ಚುನಾವಣಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದು ನನ್ನ ಕೊನೆಯ ಚುನಾವಣೆ ಎಂದ ಸಿದ್ದರಾಮಯ್ಯ
ಮತದಾರರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾನು ಶೇ.60ಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತೇನೆ. ಕಾಂಗ್ರೆಸ್ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ. ನಾನು ನಿವೃತ್ತಿ ಪಡೆಯುವುದಿಲ್ಲ. ಇದು ನನ್ನ ಕೊನೆಯ ಚುನಾವಣೆ. ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ ಚಲಾಯಿಸಿದ ಬಳಿಕ ಹೇಳಿದ್ದಾರೆ
ಹಕ್ಕು ಚಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿದ್ದರಾಮಯ್ಯ ಮತ ಚಲಾಯಿಸಿದರು.
ತುಮಕೂರಿನ ತುರುವೇಕೆರೆಯ ರಾಯಸಂದ್ರದಲ್ಲಿ ಮತದಾನ ಬಹಿಷ್ಕಾರ
ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದ ರಾಯಸಂದ್ರದ ಕೊಪ್ಪದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಸಿದ್ದಾರೆ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಮತಗಟ್ಟೆ 56ರಲ್ಲಿ ಗ್ರಾಮಸ್ಥರು ಮತದಾನ ನಿರಾಕರಿಸಿದ್ದಾರೆ. ಕೊಪ್ಪ ಗ್ರಾಮದಲ್ಲಿ ಸುಮಾರು 500 ಕ್ಕೂ ಹೆಚ್ಚು ಮತಗಳಿವೆ. ಅದರಲ್ಲಿ 300 ಕ್ಕೂ ಹೆಚ್ಚು ಮತದಾರರು ಮತದಾನ ಮಾಡಲು ನಿರಾಕರಿಸಿದ್ದಾರೆ. ಗ್ರಾಮದಲ್ಲಿ ರಸ್ತೆ, ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಆರೋಪಿಸಿ ಘೋಷಣೆ ಕೂಗಿ ಮತದಾನ ಬಹಿಷ್ಕರಿಸಿದ್ದಾರೆ.
ಕಾರ್ಕಳದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಮತದಾನ
ಕಾರ್ಕಳದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗಮನ ಸೆಳೆದಿರುವ ಪ್ರಮೋದ್ ಮುತಾಲಿಕ್, ಕುಕ್ಕುಂದೂರಿನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಉಡುಪಿ ಜಿಲ್ಲೆ ಕಾರ್ಕಳ ಕ್ಷೇತ್ರದಲ್ಲಿ ಸಚಿವ ಸುನಿಲ್ ವಿರುದ್ಧ ಸ್ಪರ್ಧೆಗಿಳಿದಿರುವ ಮುತಾಲಿಕ್, ಈಗಾಗಲೇ ಸುನಿಲ್ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಇದು ಉಡುಪಿ ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ
ಕನಕಪುರದಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷ, ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಕನಕಪುರದ ಆಲಹಳ್ಳಿ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದ್ದಾರೆ. ಈ ವೇಳೆ ಪತ್ನಿ, ಮಕ್ಕಳು ಹಾಗೂ ಸಹೋದರ ಡಿಕೆ ಸುರೇಶ್ ಇದ್ದರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತಚಲಾವಣೆ | ವಿಡಿಯೋ
ಹುಬ್ಬಳ್ಳಿ: ಹಕ್ಕು ಚಲಾಯಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
ಹುಬ್ಬಳ್ಳಿಯ ಕೇಶ್ವಾಪೂರದ ಎಸ್‌ಬಿಐ ಶಾಲೆಯ ಮತಗಟ್ಟೆ ಸಂಖ್ಯೆ 125 ರಲ್ಲಿ ಮತದಾನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ ಚಲಾಯಿಸಿದ್ದಾರೆ.
ಕುಟುಂಬ ಸಮೇತರಾಗಿ ಮತ ಚಲಾವಣೆ ಮಾಡಿದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕೈ ಅಭ್ಯರ್ಥಿ
ಬಂಟ್ವಾಳ: ಕೆಟ್ಟ ಮತಯಂತ್ರ: ಸ್ಥಗಿತಗೊಂಡ ಮತದಾನ
ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬೂತ್ ಸಂಖ್ಯೆ 90ರ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಂಡಿದ್ದು, ಕೆಲ ಹೊತ್ತು ಸ್ಥಗಿತಗೊಂಡಿತು. ಬೂತ್ ಸಂಖ್ಯೆ 80 ರ ಪುದು ಗ್ರಾಮಪಂಚಾಯತ್ ನಲ್ಲಿ ನಡೆಯುವ ಮತದಾನ ಪ್ರಕ್ರಿಯೆ ಸುಮಾರು 40 ನಿಮಿಷಗಳ ಕಾಲ ಸ್ಥಗಿತಗೊಂಡಿತು.
ಸರದಿಯಲ್ಲಿ ನಿಂತು ಮತಚಲಾಯಿಸಿದ ನಳಿನ್ ಕುಮಾರ್ ಕಟೀಲ್
ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಚುನಾವಣೆ ನಡೆಯುತ್ತಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ ಚಲಾಯಿಸಿದರು.
ನಗರದ ಲೇಡಿಹಿಲ್ ನ ಅಲೋಶಿಯಸ್ ಶಾಲೆಯಲ್ಲಿ ಅವರು ಸರತಿ ಸಾಲಿನಲ್ಲಿ ನಿಂತು ಒಂಬತ್ತು ಗಂಟೆಗೆ ಮತ ಚಲಾವಣೆ ಮಾಡಿದರು.
ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು ಇದು ಪ್ರಜಾಪ್ರಭುತ್ವ ದ ಹಕ್ಕು. ಪ್ರತಿಯೊಬ್ಬ ನಾಗರಿಕನು ಮಾಡುವುದು ಜವಾಬ್ದಾರಿ ಮತ್ತು ಹಕ್ಕು. ಭಾರತದಲ್ಲಿ ಇದು ಯುದ್ದವಲ್ಲ, ಉತ್ಸವ. ಈ ಉತ್ಸವದಲ್ಲಿ ನಾನು ಭಾಗಿಯಾಗಿದ್ದೇನೆ. ರಾಜ್ಯದಲ್ಲಿ ಅಪೂರ್ವ ಬದಲಾವಣೆ ಕಾಣುತ್ತಿದ್ದೇವೆ. ಕರ್ನಾಟಕ ಸರಕಾರ ದ ಸಾಧನೆ, ಮೋದಿಯವರ 9 ವರ್ಷದ ಆಡಳಿತ, ಅಭಿವೃದ್ದಿಗಳು ಆಗಿದೆ. ಜನ ಸಂತೋಷ ಪೂರ್ವಕವಾಗಿ ಮತದಾನವನ್ನು ಬಿಜೆಪಿ ಪರವಾಗಿ ಮಾಡುತ್ತಿದ್ದಾರೆ ಎಂದರು.
ಮತ ಚಲಾಯಸಿ ಮದುವೆ: ಕರ್ತವ್ಯ ಪ್ರಜ್ಞೆ ಮೆರೆದ ಮದುಮಗಳು
ಮಂಗಳೂರು: ಮದುವೆಗೂ ಮುನ್ನ ಮತದಾನ ಕೇಂದ್ರಕ್ಕೆ ಬಂದು ನವ ವಧುವೊಬ್ಬರು ಮತ ಚಲಾಯಿಸಿದ್ದಾರೆ. ಇದು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ನ ಅವರಾಲು ಮಟ್ಟು ಮತಗಟ್ಟೆಯಲ್ಲಿ ನಡೆದ ವಿದ್ಯಮಾನ. ನವ ವಧು ಮೆಲಿಟಾ ಸುವಾರಿಸ್ ಮತ ಚಲಾಯಿಸಿ ಮಾದರಿಯಾಗಿದ್ದಾರೆ. ಮತ ಚಲಾಯಿಸಿ ಚರ್ಚ್ ಗೆ ತೆರಳಿದ್ದು, ಈಗ ವಿವಾಹ ಪ್ರಕ್ರಿಯೆ ಆರಂಭವಾಗಿದೆ.
ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಮೋದಿ ಮ್ಯಾಜಿಕ್‌ನಿಂದ ನಮಗೆ ಮೆಜಾರಿಟಿ ಗ್ಯಾರಂಟಿ: ಬಿವೈ ವಿಜಯೇಂದ್ರ
ಕರ್ನಾಟಕ ಚುನಾವಣೆಯಲ್ಲಿ ಮೋದಿಯವರ ಮ್ಯಾಜಿಕ್‌ನಿಂದ ನಮಗೆ ಖಚಿತ ಬಹುಮತ ದೊರಕಲಿದೆ ಎಂದು ಬಿವೈ ವಿಜಯೇಂದ್ರ ಹೇಳಿದರು.
ದಾವಣಗೆರೆ: ಮೊದಲ ಬಾರಿ ಮತದಾನ ಮಾಡಿದ ಸಂಭ್ರಮ
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರ ಮತಗಟ್ಟೆ ಸಂಖ್ಯೆ -144 ಮತ್ತು 143 ಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರು.
ಎಡಮಂಗಲ: ಕೆಟ್ಟು ಹೋದ ಮತಯಂತ್ರ, ಎರಡು ಗಂಟೆ ತಡವಾಗಿ ಮತದಾನ ಆರಂಭ
ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯ ಸಮೀಪ ಎಡಮಂಗಲದ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೆಟ್ಟು ಹೋದ ಹಿನ್ನಲೆಯಲ್ಲಿ ಎರಡು ಗಂಟೆ ತಡವಾಗಿ ಮತದಾನ ಆರಂಭಗೊಂಡಿತು.
ಮೈಸೂರು: ಏಳಿಗೆಹುಂಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ
ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆ ಹುಂಡಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದು, ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಮತಗಟ್ಟೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮತದಾರರಿಗಾಗಿ ಕಾಯುತ್ತಿದ್ದಾರೆ. ಜೆಡಿಎಸ್‌ನ ಹಿರಿಯ ನಾಯಕ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಮಾವಿನಹಳ್ಳಿ ಸಿದ್ದೇಗೌಡ ಸ್ಪರ್ಧಿಸಿದ್ದಾರೆ.
ಚಿಕ್ಕಬಳ್ಳಾಪುರದ ಒಂದೇ ಕುಟುಂಬದ 65 ಮಂದಿ ಮತದಾನ | ವಿಡಿಯೊ ನೋಡಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ಕುಟುಂಬದ 65 ಜನ ಏಕಕಾಲಕ್ಕೆ ಮತದಾನ ಮಾಡುವ ಮೂಲಕ ಪ್ರಜಾತಂತ್ರ ಹಬ್ಬವನ್ನು ಸಂಭ್ರಮಿಸಿದ್ದಾರೆ. ಇಲ್ಲಿನ ʼಬಾದಂʼ ಕುಟುಂಬವು ಜ್ಯೂನಿಯರ್ ಕಾಲೇಜು ಆವರಣದಲ್ಲಿರುವ 161ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ಪ್ರತಿ ಬಾರಿಯೂ ಎಲ್ಲರೂ ಒಂದಾಗಿ ಮತ ಚಲಾಯಿಸುವುದು ಈ ಕುಟುಂಬದ ವಿಶೇಷ.
ಮಡಿಕೇರಿ: 30 ನೇ ಬಾರಿ ಮೊದಲ ಮತದಾರ ಆಗಿ ವೋಟ್ ಮಾಡಿದ ಹರ್ಷದಲ್ಲಿ ಬೊಟ್ಟೋಳಂಡ ಮಿಟ್ಟು ಚಂಗಪ್ಪ
ಮಡಿಕೇರಿ ಸಂತ ಮೈಕೆಲ್ ಶಾಲಾ ಮತಗಟ್ಟೆಯಲ್ಲಿ ಮೊದಲ ಮತದಾರ ಆಗಿ ಮಿಟ್ಟು ಚಂಗಪ್ಪ ಮತ ಚಲಾಯಿಸಿದರು. 1962 ರಲ್ಲಿ ಮೊದಲ ಮತ ಚಲಾಯಿಸಿದ್ದ ಮಿಟ್ಟು ಚಂಗಪ್ಪ ನಂತರ ಸತತ 30 ಚುನಾವಣೆಯಲ್ಲೂ ಮತಗಟ್ಟೆಯಲ್ಲಿ ಮೊದಲ ಮತದಾರರಾಗಿ ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷ.
ಇಂದು ಕೂಡ ಬೆಳಗ್ಗೆ 6:30 ಕ್ಕೆ ಮತಗಟ್ಟೆ ಬಳಿ ಬಂದು 7 ಗಂಟೆಗೆ ಮತ ಕೇಂದ್ರ ತೆರೆಯುತ್ತಿದ್ದಂತೆ ತಮ್ಮ ಮತವನ್ನು ಪತ್ನಿಯೊಂದಿಗೆ ಚಲಾಯಿಸಿ ಸಂಭ್ರಮ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಕೂಡ ಮತ ಚಲಾಯಿಸಬೇಕು . ಅದು ಪ್ರತಿ ಭಾರತೀಯನ ಅಮೂಲ್ಯ ಹಕ್ಕು ಎಂದು ಮಿಟ್ಟು ಚಂಗಪ್ಪ ಅವರು ಹೇಳಿದರು.
ಮುಂಜಾನೆ ಟ್ರೆಂಡ್: ಹಾಸನದಲ್ಲಿ ಗರಿಷ್ಠ, ಕೊಳ್ಳೆಗಾಲದಲ್ಲಿ ಕನಿಷ್ಠ ಮತದಾನ
ಹಾಸನ ಕ್ಷೇತ್ರದಲ್ಲಿ ಅತಿಹೆಚ್ಚು, ಅಂದರೆ ಶೇ 15ರಷ್ಟು ಮತದಾನವಾಗಿದೆ. ವಿರಾಜಪೇಟೆ, ಬೆಳ್ತಂಗಡಿ, ಮೂಡಬಿದ್ರಿ ಕ್ಷೇತ್ರಗಳಲ್ಲಿ ಮತದಾರರು (ಶೇ 12) ಬೆಳಿಗ್ಗೆಯೇ ಉತ್ಸಾಹ ತೋರಸಿದ್ದಾರೆ. ಹನೂರು, ಕೊಳ್ಳೇಗಾಲ (ಶೇ 3.91) ಮತ್ತು ಮಳವಳ್ಳಿಯಲ್ಲಿ ಮತದಾನ ಪ್ರಕ್ರಿಯೆ (ಶೇ 5) ನೀರಸವಾಗಿದೆ. ಉಳಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಶೇ 10ರ ಆಸುಪಾಸಿನ ಮತದಾನ ಪ್ರಮಾಣ ದಾಖಲಾಗಿದೆ.
ಚಿಕ್ಕಬಳ್ಳಾಪುರವನ್ನು ರಾಜ್ಯ ಅಲ್ಲ ದೇಶದಲ್ಲಿಯೇ ಬ್ರಾಂಡ್ ಮಾಡಬೇಕಿದೆ: ಸುಧಾಕರ್
ಚಿಕ್ಕಬಳ್ಳಾಪುರ ತಾಲ್ಲೂಕು ಪೇರೆಸಂದ್ರದಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಸಚಿವ ಡಾ. ಕೆ ಸುಧಾಕರ್ ʼಚಿಕ್ಕಬಳ್ಳಾಪುರವನ್ನು ರಾಜ್ಯ ಅಲ್ಲ ದೇಶದಲ್ಲಿಯೇ ಬ್ರಾಂಡ್ ಮಾಡಬೇಕಿದೆ. ಇದಕ್ಕೆ ಮತ್ತೊಮ್ಮೆ ಅವಕಾಶ ಜನ ನೀಡುತ್ತಾರೆʼ ಎಂದು ಭಾವಿಸಿದ್ದೇನೆ ಎಂದು ಭರವಸೆ ಮಾತುಗಳನ್ನಾಡಿದ್ದಾರೆ.
ಕರ್ನಾಟಕದ ಎಲ್ಲೆಡೆ ಮತದಾನ ಚುರುಕು, ಶೇ 8.26 ಮತದಾನ
ಕರ್ನಾಟಕದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 9:46ಕ್ಕೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಒಟ್ಟು ಶೇ 8.26ರಷ್ಟು ಮತದಾನವಾಗಿದೆ.
ಎಸ್.ಟಿ.ಸೋಮಶೇಖರ್ ರವರಿಂದ ಮತದಾನ
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರು ನಾಗದೇವನಹಳ್ಳಿಯಲ್ಲಿ ಮತದಾನ ಮಾಡಿದರು.
ಪತ್ನಿ ರಾಧಾ ಸೋಮಶೇಖರ್, ಪುತ್ರ ನಿಶಾಂತ್ ಸೋಮಶೇಖರ್ ಅವರೊಂದಿಗೆ ರೋಟರಿ ಸೇವಾ ಭಾರತಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ ಚಲಾವಣೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಅವರು ಬೆಂಗಳೂರಿನ ಶೇಷಾದ್ರಿಪುರಂ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು. ನಂತರ ಗೆಳೆಯರೊಂದಿಗೆ ಫೋಟೊ ತೆಗೆಸಿಕೊಂಡರು.
ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ತಮ್ಮ ಕುಟುಂಬದ ಸಮೇತರಾಗಿ ಬಂದು ಮತ ಚಲಾವಣೆ ಮಾಡಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜನರು ಈ ಪ್ರಜಾತಂತ್ರ ಹಬ್ಬವನ್ನು ಬಹಳ ದೊಡ್ಡ ಮಟ್ಟಿಗೆ ಸಂಭ್ರಮಿಸುತ್ತಿದ್ದಾರೆ. ಇದು ಖುಷಿ ನೀಡಿದೆ. ಜನರು ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರಿಕ್ಕ ತರುವ ಭರವಸೆ ಇದೆʼ ಎಂದಿದ್ದಾರೆ
ಮಧುಮಗಳ ಅಲಂಕಾರದಲ್ಲೇ ಬಂದು ಮತ ಚಲಾಯಿಸಿದ ಚಿಕ್ಕಮಗಳೂರಿನ ಯುವತಿ
ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯಲ್ಲಿ ಮಧುಮಗಳೊಬ್ಬರು ಅಲಂಕಾರ ಮಾಡಿಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಇಂದು ಅವರ ಮದುವೆ ಇದ್ದು, ಮದುವೆ ಅಲಂಕಾರದಲ್ಲೇ ಮತಗಟ್ಟೆಗೆ ಬಂದಿದ್ದರು.
ಮತದಾನ ಬಹಿಷ್ಕರಿಸಿದ ಮೈಸೂರಿನ ಏಳಿಗೆಹುಂಡಿ ಗ್ರಾಮಸ್ಥರು
ಮೈಸೂರಿನ ಏಳಿಗೆಹುಂಡಿ ಗ್ರಾಮದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ, ಮತದಾನ ಮಾಡುವುದಿಲ್ಲ ಎಂದ ಪಟ್ಟು ಹಿಡಿದ ಘಟನೆ ನಡೆದಿದೆ. ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಿದ್ದಾರೆ.
ಶಿರಸಿಯಲ್ಲಿ ಮತ ಚಲಾಯಿಸಿದ ಸೋದೆಯ ಜೈನ ಮಠದ ಶ್ರೀಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ
ಶ್ರೀ ಕ್ಷೇತ್ರ ಸೋದೆಯ ಜೈನ ಮಠದ ಶ್ರೀಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರು , ಶಿರಸಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 12 ಸ,ಹಿ, ಪ್ರಾ, ಶಾಲೆ ಖಾಸಾಪಾಲದಲ್ಲಿ ಪ್ರಥಮವಾಗಿ ಮತ ಚಲಾಯಿಸಿದರು,
ಮತದಾನಕ್ಕೂ ಮುನ್ನ ದೇವರ ಮೊರೆ ಹೋದ ಡಿಕೆಶಿ
ಮತ ಚಲಾವಣೆಗೂ ಮುನ್ನ ಪತ್ನಿ ಹಾಗೂ ತಮ್ಮ ಡಿಕೆ ಸುರೇಶ್ ಜೊತೆಗೆ ದೇವಸ್ಥಾನಕ್ಕೆ ತೆರಳಿದ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ, 86 ವರ್ಷದ ಬಿ.ಜನಾರ್ದನ ಪೂಜಾರಿ ಬಂಟ್ವಾಳದಲ್ಲಿ ಮತ ಚಲಾವಣೆ
ಬಂಟ್ವಾಳದಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಕೆಪಿಸಿಸಿ ಮಾಜಿ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ 86ರ ಹರೆಯದ ಬಿ.ಜನಾರ್ದನ ಪೂಜಾರಿ ತಮ್ಮ ಕುಟುಂಬದ ಜತೆ ಆಗಮಿಸಿ, ಮತ ಚಲಾಯಿಸಿದರು
ದೊಡ್ಡಬಳ್ಳಾಪುರ ಶಾಸಕ ಟಿ ವೆಂಕಟರಮಣಯ್ಯ ಮತದಾನ
ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ತಾಲ್ಲೂಕಿನ ಅಪ್ಪಕಾರನರಹಳ್ಳಿ ಗ್ರಾಮದ ಸರ್ಕಾರಿ ಪಾಠಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮತದಾನದ ನಂತರ ಪತ್ನಿಯೊಂದಿಗೆ ಫೋಟೊ ತೆಗೆಸಿಕೊಂಡರು.
ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ತಮ್ಮ ಕುಟುಂಬದವರೊಂದಿಗೆ ಬಂದು ಮತ ಚಲಾಯಿಸಿದ್ದಾರೆ. ಅವರು ಸರತಿ ಸಾಲಿನಲ್ಲೇ ನಿಂತು ಮತ ಚಲಾಯಿಸಿದ್ದು, ವಿಶೇಷವಾಗಿತ್ತು.
ಐದು ತಿಂಗಳ ಅವಳಿ ಮಕ್ಕಳ ಜೊತೆ ಬಂದು ಮತ ಚಲಾಯಿಸಿದ ದಂಪತಿ
ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿ 5 ತಿಂಗಳ ಅವಳಿ ಮಕ್ಕಳೊಂದಿಗೆ ಮತಗಟ್ಟೆಗೆ ಬಂದ ದಂಪತಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.
ಮತ ಚಲಾವಣೆಗೂ ಮುನ್ನ ಹಾವೇರಿಯ ಗಾಯತ್ರಿ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ
ಮತ ಚಲಾವಣೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯ ಗಾಯಿತ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಮೊರೆ ಹೋಗಿದ್ದಾರೆ
ವೋಟ್ ಹಾಕಿದವರಿಗೆ ಉಚಿತ ಉಪಹಾರ; ಹೈಕೋರ್ಟ್ ಸಮ್ಮತಿ
ಬೆಂಗಳೂರು: ಮತದಾನ ಮಾಡಿ ಅದರ ಕುರುಹಾಗಿ ತೋರು ಬೆರಳಿನ ಇಂಕ್ ತೋರಿಸಿದವರಿಗೆ ನಗರದ ಕೆಲ ಹೊಟೆಲ್‌ಗಳಲ್ಲಿ ಮಾಡಿದ್ದ ಉಪಹಾರ ನೀಡುವ ವ್ಯವಸ್ಥೆಗೆ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ಈ ವಿಚಾರದಲ್ಲಿ ಬಿಬಿಎಂಪಿ ನೀಡಿದ್ದ ತಡೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 2013, 2018ರ ವಿಧಾನಸಭೆ ಹಾಗೂ 2019ರ ಲೋಕಸಭಾ ಚುನಾವಣೆ ವೇಳೆಯಲ್ಲಿಯೂ ಇದೇ ರೀತಿ ತಿಂಡಿ ವಿತರಿಸಲಾಗಿತ್ತು ಎಂದು ಹೈಕೋರ್ಟ್‌ಗೆ ಬೃಹತ್ ಬೆಂಗಳೂರು ಹೊಟೆಲ್ ಅಸೋಸಿಯೇಷನ್ ಪರ ವಕೀಲರು ಮನವರಿಕೆ ಮಾಡಿಕೊಟ್ಟರು. ಇದನ್ನು ನ್ಯಾಯಮೂರ್ತಿಗಳೂ ಒಪ್ಪಿಕೊಂಡರು. ಇಂದು ಬೆಂಗಳೂರಿನ ನೃಪತುಂಬ ರಸ್ತೆಯಲ್ಲಿರುವ ನಿಸರ್ಗ ಗಾರ್ಡನ್ ಹಾಗೂ ಇತರ ಹೊಟೆಲ್‌ಗಳಲ್ಲಿ ಮತದಾನದ ಗುರುತು ತೋರಿಸಿದವರಿಗೆ ಉಚಿತ ತಿಂಡಿ ಸಿಗಲಿದೆ.
ತುಮಕೂರಿನಲ್ಲಿ ಜಿ ಪರಮೇಶ್ವರ ಮತ ಚಲಾವಣೆ
ಕಾಂಗ್ರೆಸ್ ಮುಖಂಡ, ಕೊರಟಗೆರೆ ಕ್ಷೇತ್ರದ ಅಭ್ಯರ್ಥಿ ಜಿ ಪರಮೇಶ್ವರ್ ತುಮಕೂರಿನ ಸಿದ್ಧಾರ್ಥ ನಗರದಲ್ಲಿ ಮತ ಚಲಾಯಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ ಚಲಾವಣೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟತಟ್ಟು ಗ್ರಾಮ ಪಂಚಾಯತ್ ನ ಬೂತ್ ನಂಬರ್ 165 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ದೊಡ್ಡಬಳ್ಳಾಪುರ: ಮೊದಲ ಅಭ್ಯರ್ಥಿ ಮತ ಹಾಕಿದ ಧೀರಜ್ ಮುನಿರಾಜು
ದೊಡ್ಡಬಳ್ಳಾಪುರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ವಡ್ಡರಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇದು ದೊಡ್ಡಬಳ್ಳಾಪುರ ಕ್ಷೇತ್ರದ ಮೊದಲ ಅಭ್ಯರ್ಥಿ ಮತವಾಗಿದೆ. ತಂದೆ, ತಾಯಿ, ಪತ್ನಿಯೊಂದಿಗೆ ಬಂದಿದ್ದ ಧೀರಜ್ ಮತ ಚಲಾವಣೆಯ ನಂತರ ಖುಷಿಯಾಗಿ ಫೋಟೊ ತೆಗೆಸಿಕೊಂಡರು. ಎಲ್ಲರೂ ಮತ ಹಾಕಿ, ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ರಾಜರಾಜೇಶ್ವರಿ ನಗರದಲ್ಲಿ ನಟ ಗಣೇಶ್ ಮತದಾನ
ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಜೊತೆ ರಾಜರಾಜೇಶ್ವರಿ ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಲು ತೆರಳಿದ್ದಾರೆ.
ಕುಟುಂಬ ಸಮೇತ ಬಂದು ಮತ ಚಲಾಯಿಸಿದ ನಟ ಜಗ್ಗೇಶ್
ಮಲ್ಲೇಶ್ವರಂನಲ್ಲಿ ನಟ ಜಗ್ಗೇಶ್ ಕುಟುಂಬ ಸಮೇತರಾಗಿ ಬಂದು ಮತ ಚಲಾವಣೆ ಮಾಡಿದ್ದಾರೆ. ಈ ವೇಳೆ ಯುವಮತದಾರರ ಬಗ್ಗೆ ಮಾತನಾಡಿದ ಅವರು ಯುವ ಮತದಾರರು ಹೆಚ್ಚು ಹೆಚ್ಚು ಮತದಾನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮತ ಚಲಾಯಿಸಿದ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ಮತ ಚಲಾಯಿಸಿದ
ಇನ್ಫೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿ ಮಾತನಾಡಿದ ಸುಧಾಮೂರ್ತಿ ಎಲ್ಲರೂ ಮತದಾನ ಮಾಡಬೇಕು, ನಾವು ಯಾರಿಗೆ ಮತದಾನ ಮಾಡುತ್ತೇವೆ ಎಂಬುದಕ್ಕಿಂತ ಮತದಾನ ಮಾಡುವುದು ಮುಖ್ಯ ಎಂದಿದ್ದಾರೆ.
ಮೈಸೂರು: ಗುರುತಿನ ಚೀಟಿ ಮರೆತು ಬಂದ ಬಂದ ರಾಜಮಾತೆ ಪ್ರಮೋದಾದೇವಿ
ಮೈಸೂರಿನಲ್ಲಿ ಮತ ಚಲಾಯಿಸಲು ಬಂದ ರಾಜಮಾತೆ ಪ್ರಮೋದಾದೇವಿ ಗುರುತಿನ ಚೀಟಿ (ವೋಟರ್ ಐಡಿ) ಮರೆತು ಬಂದಿದ್ದರು. ಹಾಗಾಗಿ ಕೆಲ ಹೊತ್ತು ಮತಗಟ್ಟೆಯ ಬಳಿ ಕಾರಿನಲ್ಲಿ ಕುಳಿತು ಕಾದಿರುವ ಘಟನೆ ನಡೆದಿದೆ.
ಕುಟುಂಬ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದ ಡಾ. ಸಿ ಎನ್ ಅಶ್ವತ್ಥನಾರಾಯಣ
ಬೆಂಗಳೂರು: ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಬುಧವಾರ ಬೆಳಿಗ್ಗೆ ಆರ್ ಎಂವಿ 2ನೇ ಸ್ಟೇಜ್ ಡಾಲರ್ಸ್ ಕಾಲೋನಿಯಲ್ಲಿರುವ ಶಿಕ್ಷಾ ಪ್ರೀ-ಸ್ಕೂಲ್ ಕೊಠಡಿ ಸಂಖ್ಯೆ 2ರ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಇದೇ ವೇಳೆ, ಸಚಿವರ ಪತ್ನಿ ಶ್ರುತಿ, ಮಗ ಅಮೋಘ ಮತ್ತು ಮಗಳು ಆಕಾಂಕ್ಷಾ ಅವರು ಕೂಡ ವೋಟು ಹಾಕಿದರು. ಅಮೋಘ ಮತ್ತು ಆಕಾಂಕ್ಷಾ ಇದೇ ಮೊದಲ ಸಲ ಮತ ಚಲಾಯಿಸಿದ ಸಂಭ್ರಮ ಅನುಭವಿಸಿದರು.
ಮತ ಹಾಕಿ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವಥನಾರಾಯಣ ಅವರು,"ನಮ್ಮದು ಸಕ್ರಿಯ ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಮತ ಹಾಕುವುದೆಂದರೆ ನಾಡು ಕಟ್ಟುವ ಕೆಲಸದಲ್ಲಿ ಭಾಗಿಯಾದಂತೆ. ಪ್ರತಿಯೊಬ್ಬರೂ ತಪ್ಪದೇ ತಮ್ಮ ಹಕ್ಕು ಚಲಾಯಿಸಿ ಶೇಕಡ 100ರಷ್ಟು ಮತದಾನ ಆಗುವಂತೆ ಮಾಡಬೇಕು" ಎಂದು ಅಭಿಪ್ರಾಯಪಟ್ಟರು
ಮತದಾನದ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿ ವಚನಾನಂದ ಶ್ರೀಗಳ ಕರೆ
ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಭೂಪಸಂದ್ರ ಮುಖ್ಯ ರಸ್ತೆಯಲ್ಲಿರುವ ವಿದ್ಯಾಸಾಗರ ಪ್ರಿ ಸ್ಕೂಲ್ ನಲ್ಲಿ ನ ಬೂತ್ ನಲ್ಲಿ ಮೊದಲಿಗರಾಗಿ ಮತ ಚಲಾಯಿಸಿದ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಮತ ಚಲಾವಣೆ
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಈ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಈ ಹಬ್ಬವನ್ನ ಆಚರಿಸಬೇಕು ಎಂದು ಕರೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಬಹಳಷ್ಟು ಯುವ ಮತದಾರರು ಮತ ಚಲಾವಣೆ ಮಾಡಲಿದ್ದೀರಿ ಅಧಿಕಾರಿಗಳು ಮತ ಚಲಾವಣೆಯ ಅನುಭವವನ್ನು ಬಹಳಷ್ಟು ಸುಲಲಿತಗೊಳಿಸಿದ್ದಾರೆ ಎಲ್ಲರೂ ಮತದಾನ ಮಾಡಬೇಕು ಎಂದು ಅದರಲ್ಲೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಕರೆ ನೀಡಿದರು
ತಮ್ಮ ಪತ್ನಿ ಜತೆ ರಮೇಶ್ ಅರವಿಂದ್ ಮತದಾನ
ಬೆಂಗಳೂರಿನ ಜೆಪಿ ನಗರದಲ್ಲಿ ನಟ ರಮೇಶ್ ಅರವಿಂದ್ ತಮ್ಮ ಪತ್ನಿಯೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.
ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮತದಾನ
ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭಾ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜ್ಯೊತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ ಹಾಗೂ ಬಸವಪ್ರಸಾದ ಜೊಲ್ಲೆ ಯವರು ಯಕ್ಸಂಬಾ ಪಟ್ಟಣದಲ್ಲಿ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಯಕ್ಸಂಬಾ ಬೂತ್ ನಂಬರ 27 ರಲ್ಲಿ ಗಂಟೆಗೆ ಮತ ಚಲಾಯಿಸಿದರು.
ಮತ ಚಲಾಯಿಸಿದ ಡಾ. ಕೆ. ಸುಧಾಕರ್
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು ಬುಧವಾರ ಬೆಳಗ್ಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪೆರೇಸಂದ್ರದಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಹಾಗೂ ತಂದೆಯವರು ಇದ್ದರು.
ಆರಗ ಜ್ಞಾನೇಂದ್ರ ಮತದಾನ
ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ದಾಖಲೆಯ ಹತ್ತನೇ ಬಾರಿಗೆ ಸ್ಪರ್ಧಿಸುತ್ತಿರುವ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು ತಮ್ಮ ಕುಟುಂಬದ ಸದಸ್ಯರೊಂದಿಗೆ, ಮತ ಗಟ್ಟೆಗೆ ಆಗಮಿಸಿ, ಮತದಾನ ಮಾಡಿದರು.
ಬಿಜೆಪಿ 130 ರಿಂದ 135 ಸ್ಥಾನ ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಬಿಎಸ್‌ವೈ
ಮತದಾನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ 130 ರಿಂದ 135 ಸ್ಥಾನ ಗೆಲ್ಲುವ ಭರವಸೆ ವ್ಯಕ್ತ ಪಡಿಸಿದ್ದಾರೆ
ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಮತದಾನ
ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರಿನ ಮತಗಟ್ಟೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಮತದಾನಕ್ಕೆ ಮುನ್ನ ಆಂಜನೇಯನ ಮೊರೆ ಹೋದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮತದಾನ ಮಾಡಲು ತೆರಳುವ ಮುನ್ನ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಆಂಜನೇಯನ ದೇವಸ್ಥಾನಕ್ಜೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಅವರೊಂದಿಗೆ ಅವರ ಪುತ್ರ ಭರತ ಬೊಮ್ಮಾಯಿ ಹಾಗೂ ಪುತ್ರಿ ಅದಿತಿ ಬೊಮ್ಮಾಯಿ ಪಾಲ್ಗೊಂಡಿದ್ದರು.
ಜಯನಗರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ ಚಲಾವಣೆ
ಬೆಂಗಳೂರಿನ ಜಯನಗರದ ಬಿಇಎಸ್ ಮತಗಟ್ಟೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ ಚಲಾಯಿಸಿದ್ದಾರೆ.
ಯಲಹಂಕ: ಬಿಜೆಪಿ ಅಭ್ಯರ್ಥಿ ಎಸ್. ಆರ್. ವಿಶ್ವನಾಥ್ ಮತದಾನ
ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಆರ್. ವಿಶ್ವನಾಥ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಯಲಹಂಕದ ಸಿಂಗನಾಯಕನಹಳ್ಳಿ ಮತದಾನ ಮಾಡಿದರು.
ತಪ್ಪದೇ ಮತದಾನ ಮಾಡಿ ಎಂದು ಸಿಎಂ ಬೊಮ್ಮಾಯಿ ಮನವಿ
ನಮ್ಮ ಪಕ್ಷ ನಡೆಸಿದ ಚುನಾವಣಾ ಅಭಿಯಾನ ಮತ್ತು ಅದಕ್ಕೆ ಜನರ ಪ್ರತಿಕ್ರಿಯೆ ಕುರಿತು ಸಂತೋಷವಾಗಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಜನರು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಮತ ಚಲಾಯಿಸಲು ಆಗಮಿಸಿದ ಬಿಎಸ್ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ರಾಜಕಾರಣಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಕುಟುಂಬದ ಸದಸ್ಯರ ಜತೆಗೆ ಶಿಕಾರಿಪುರ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು.
ಹಲವೆಡೆ ಇವಿಎಂನಲ್ಲಿ ದೋಷ, ಕೆಲಕಾಲ ಗೊಂದಲ
ರಾಜ್ಯದ ಹಲವು ಕಡೆ ಇವಿಎಂ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೆಲ ಕಾಲ ಮತದಾನ ಸ್ಥಗಿತವಾಗಿರುವ ಘಟನೆಗಳು ನಡೆದಿವೆ. ಬಳ್ಳಾರಿಯ ಸಂಗನಕಲ್ ಗ್ರಾಮದಲ್ಲಿ ಇವಿಎಂನಲ್ಲಿ ದೋಷ ಕಾಣಿಸಿದ್ದು, ಕೆಲ ಕಾಲ ಗೊಂದಲಕ್ಕೆ ಕಾರಣವಾಗಿತ್ತು. ಕೊಪ್ಪಳದ ಕನಕಗಿರಿ ಕ್ಷೇತ್ರದ ಮುಸ್ಟೂರು ಕ್ಯಾಂಪ್ ಮತಗಟ್ಟೆಯಲ್ಲೂ ಇವಿಎಂನಲ್ಲಿ ದೋಷ ಕಾಣಿಸಿದೆ.
ಅಭಿವೃದ್ಧಿಗಾಗಿ ಮತದಾನ ಮಾಡಿ ಎಂದ ಅಮಿತ್ ಶಾ
First Vote: ವ್ಯಕ್ತಿಯ ಸಾಮರ್ಥ್ಯವೇ ನಮಗೆ ಮುಖ್ಯ, ಪಕ್ಷಕ್ಕಲ್ಲ ನಮ್ಮ ಮತ; ಮೊದಲ ಮತದಾರರ ಮನದ ಮಾತು
ಪಲಿಮಾರು ಮಠಾಧೀಶರಿಂದ ಮತದಾನ
ಮಂಗಳೂರು: ಉಡುಪಿಯಲ್ಲಿ ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಬೆಳಗ್ಗೆ ತಮ್ಮ ಹಕ್ಕು ಚಲಾಯಿಸಿದರು. ಎಲ್ಲರೂ ಮತದಾನ ಮಾಡುವಂತೆ ಈ ಸಂದರ್ಭ ಮನವಿ ಮಾಡಿದರು.
ಮನಃಸಾಕ್ಷಿಯಿಂದ ಮತ ಚಲಾಯಿಸಿ ಎಂದ ನಟ ಪ್ರಕಾಶ್‌ರಾಜ್
ನನ್ನ ಪ್ರೀತಿಯ ಕನ್ನಡಿಗರೆ.. ನಾನು ಮತೀಯ ರಾಜಕಾರಣದ ವಿರುದ್ಧ.. 40% ಭ್ರಷ್ಟಾಚಾರಿಗಳ ವಿರುದ್ಧ ನನ್ನ ಮತ ಚಲಾಯಿಸಿದ್ದೇನೆ.. ನೀವು ನಿಮ್ಮ ಮನಃಸಾಕ್ಷಿಯಿಂದ.. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಲು ನಿಮ್ಮ ಮತವನ್ನು ಚಲಾಯಿಸಿ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆ. ಬೆಂಗಳೂರಿನ ಶಾಂತಿ ನಗರ ಸೇಂಟ್ ಜೋಸೆಫ್ ಸ್ಕೂಲ್‌ನಲ್ಲಿ ಮತಚಲಾಯಿಸಿದ ಬಳಿಕ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
ತುಂಬು ಗರ್ಭಿಣಿಯಿಂದ ಮತದಾನ, ಬೆಳಗ್ಗೆ 9 ಗಂಟೆಗೆ ಹೆರಿಗೆ ನಿಗದಿ
ಬೆಂಗಳೂರಿನ ಯಶವಂತಪುರದ ಹೇರೋಹಳ್ಳಿ ಮತಗಟ್ಟೆಯಲ್ಲಿ ತುಂಬು ಗರ್ಭಿಣಿಯೊಬ್ಬರು ಮತ ಚಲಾಯಿಸಿದ್ದಾರೆ. ಇಂದು 9ಬೆಳಿಗ್ಗೆ ಗಂಟೆಗೆ ಅವರಿಗೆ ಹೆರಿಗೆ ಸಮಯ ನಿಗದಿಯಾಗಿದ್ದು, ಆ ಕಾರಣಕ್ಕೆ ಬೇಗನೆ ಬಂದು ಮತ ಚಲಾಯಿಸಿ ಹೋಗುತ್ತೇನೆ ಎಂದು ಬಂದಿದ್ದೇನೆ ಎಂದು ಆಕೆ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
ಮೈಸೂರು: ಮತ ಚಲಾಯಿಸಿದ 96 ವರ್ಷದ ಬಂಗಾರಮ್ಮ
ಹಿರಿಯರಿಗೆ ಅಂಚೆ ಮತದಾನಕ್ಕೆ ಅವಕಾಶವಿದ್ದರೂ ಮೈಸೂರಿನ ಹಿರಿಯಜ್ಜಿಯೊಬ್ಬರೂ ಜನಸಾಮಾನ್ಯರಂತೆ ಇಂದು ಮೈಸೂರಿನ ಚಾಮುಂಡಿಪುರುಂ ಮತಗಟ್ಟೆಗೆ ಬಂದು ಮತ ಚಲಾಯಿಸಿ ಗಮನ ಸೆಳೆದಿದ್ದಾರೆ. ಇವರು ಮತಗಟ್ಟೆ ಸಂಖ್ಯೆ 233ರಲ್ಲಿ ಮತ ಚಲಾಯಿಸಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.
ಚಪ್ಪಲಿ ಬಿಟ್ಟು ಮತ ಚಲಾಯಿಸುವ ಮೂಲಕ ಎಲ್ಲರಿಗೂ ಒಳ್ಳೆದಾಗಲಿ ಎಂದು ಹಾರೈಸಿದ್ದಾರೆ. ಮತ ಚಲಾಯಿಸುವುದು ನಮ್ಮೆಲ್ಲರ ಹಕ್ಕು ಎಂದಿರುವ ಅಜ್ಜಿ ಎಲ್ಲರೂ ಮತ ಚಲಾಯಿಸಬೇಕು ಎಂದು ತಿಳಿಸಿದ್ದಾರೆ.
Assembly Elections 2023: ಕರ್ನಾಟಕದ ಬಳಿಕ ಯಾವ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ? ಇಲ್ಲಿದೆ 2023ರ ಲಿಸ್ಟ್
ಪುತ್ತೂರಲ್ಲಿ ಮತದಾನ ಮಾಡಿದ ಪುತ್ತಿಲ
ಮಂಗಳೂರು: ಬಿಜೆಪಿ ಕಾರ್ಯಕರ್ತರ ಬಂಡಾಯದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಅಲ್ಲ ರಾಜ್ಯದ ಗಮನವನ್ನೂ ಸೆಳೆದಿರುವ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಗೆ ಸೆಡ್ಡು ಹೊಡೆದು ಸ್ಪರ್ಧೆಗಿಳಿದಿದ್ದು, ಮುಂಡೂರು ಎಂಬಲ್ಲಿ ಮತದಾನ ಮಾಡಿದ್ದಾರೆ. ಇಲ್ಲಿ ಬಿಜೆಪಿ v/s ಪಕ್ಷೇತರ ಜೊತೆಗೆ ಕಾಂಗ್ರೆಸ್, ಜೆಡಿಎಸ್, ಎಸ್.ಡಿ.ಪಿ.ಐ. ಕಣದಲ್ಲಿದ್ದು, ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಅರುಣ್ ಕುಮಾರ್ ಪುತ್ತಿಲ ಅವರ ಪ್ರೊಫೈಲ್ ಇಲ್ಲಿದೆ.
ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದ ಪ್ರಧಾನಿ ಮೋದಿ
ಕರ್ನಾಟಕದ ಜನತೆ, ವಿಶೇಷವಾಗಿ ಯುವಜನರು ಮತ್ತು ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸುವಂತೆ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಮತದಾನ
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬೆಂಗಳೂರಿನ ಶಾಂತಿ ನಗರ ಸೇಂಟ್ ಜೋಸೆಫ್ ಸ್ಕೂಲ್‌ಗೆ ಮತ ಚಲಾಯಿಸಲು ಆಗಮಿಸಿದ್ದಾರೆ.
ಕರ್ನಾಟಕದ ಜನಪ್ರಿಯ ನೃತ್ಯಗಾರ್ತಿಯಾದ ಚೈತ್ರಾಲಿಯಿಂದ ಮತ ಜಾಗೃತಿ
ಕರ್ನಾಟಕದ ಜನಪ್ರಿಯ ನೃತ್ಯಗಾರ್ತಿಯಾದ ಚೈತ್ರಾಲಿ ಅವರು ಹಲವಾರು ಜನರಿಗೆ ಸ್ಪೂರ್ತಿಯಾಗಿದ್ದು, ಮತದಾನ ಮಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ಟ್ವೀಟ್ ಮಾಡಿದೆ.
ಕರ್ನಾಟಕದಲ್ಲಿ ಇಂದು ಮತದಾನ; ವಿಧಾನಸಭಾ ಚುನಾವಣೆಯಲ್ಲಿ ಗಮನಿಸೆಳೆಯುತ್ತಿರುವ 10 ಕ್ಷೇತ್ರಗಳಿವು
ರಾಜ್ಯದ ಮತಗಟ್ಟೆಗಳಲ್ಲಿ ಮತದಾನ ಆರಂಭ
ಸರಿಯಾಗಿ ಏಳುಗಂಟೆಗಳಲ್ಲಿ ರಾಜ್ಯದ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಕೆಲವೊಂದು ಮತಗಟ್ಟೆಗಳಲ್ಲಿ ಹಲವು ಜನರು ಸರದಿಯಲ್ಲಿ ಮತ ಚಲಾಯಿಸಲು ನಿಂತಿದ್ದಾರೆ. ಕೆಲವು ಮತಗಟ್ಟೆಗಳಿಗೆ ಬೆರಳೆಣಿಕೆಯ ಜನರು ಮಾತ್ರ ಆಗಮಿಸಿದ್ದಾರೆ ಎಂದು ನಮ್ಮ ಪ್ರತಿನಿಧಿಗಳು ತಿಳಿಸಿದ್ದಾರೆ. ಮತದಾನಕ್ಕಾಗಿ ರಾಜ್ಯಾದ್ಯಂತ 58,282 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಈ 1,320 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಮೇ 10 ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೆ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಮಹಿಳೆಯರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ 5 ಪಿಂಕ್ ಬೂತ್ ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯಾದ್ಯಂತ ಸುಸೂತ್ರ ಮತದಾನಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. 304 ಡಿವೈಎಸ್‍ಪಿಗಳು, 991 ಪಿಐಗಳು, 2,610 ಪಿಎಸ್‍ಐಗಳು, 5,803 ಎಎಸ್‍ಐಗಳು, 46,421 ಹೆಚ್‍ಸಿ/ಪಿಸಿಗಳು, 27,990 ಹೋಮ್‍ಗಾರ್ಡ್‍ಗಳು ಸೇರಿದಂತೆ ಒಟ್ಟು 84,119 ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು 5,30,85,566 ಮಂದಿ ಮತದಾರರು ಇದ್ದಾರೆ. ಈ ಬಾರಿ 11 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.
ಚಿತ್ರದುರ್ಗ ಜೋಗಿಮಠದಲ್ಲಿರುವ ಮತಗಟ್ಟೆಗೆ ಹೂವಿನ ಹಾರ ಹಾಕಲು ಯತ್ನ
ಚಿತ್ರದುರ್ಗ ಜೋಗಿಮಠದಲ್ಲಿರುವ ಮತಗಟ್ಟೆಗೆ ಕಾಂಗ್ರೆಸ್ ಬೆಂಬಲಿಗರು ಹೂವಿನ ಹಾರ ಹಾಕಲು ಯತ್ನಿಸಿದ್ದಾರೆ. ತಕ್ಷಣ ಅಲ್ಲಿನ ಸಿಬ್ಬಂದಿಗಳು ಅದನ್ನು ತಡೆದಿದ್ದಾರೆ.
ಮಧ್ಯಾಹ್ನದ ಬಳಿಕ ಮಳೆ ಸಾಧ್ಯತೆ, ಬೇಗ ಮತ ಚಲಾಯಿಸಿ
ಮಧ್ಯಾಹ್ನದ ಮೇಲೆ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದ್ದು, ಮತದಾನಕ್ಕೆ ಅಡ್ಡಿಯಾಗುವ ಆತಂಕ ಇದೆ. ಈ ನಡುವೆ ಮತಯಂತ್ರಗಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತದಾರರ ಗುರುತಿನ ಪತ್ರ ಇಲ್ಲದಿದ್ದರೆ ಈ ದಾಖಲೆ ತೋರಿಸಿ
ಇಂದು ಮತದಾನ ಮಾಡಲು ಮತದಾರರ ಗುರುತಿನ ಪತ್ರ ಇರುವುದು ಕಡ್ಡಾಯ ಎನ್ನುವುದು ತಪ್ಪು ಕಲ್ಪನೆಯಾಗಿದೆ. ಡ್ರೈವಿಂಗ್ ಲೈಸನ್ಸ್, ಪಾಸ್ಪೋರ್ಟ್, ಪಾನ್ ಕಾರ್ಡ್, ಎಂ ನರೇಗಾ ಜಾಬ್ ಕಾರ್ಡ್, ಫೋಟೊ ಇರುವ ಪಿಂಚಣಿ ದಾಖಲೆ ಇತ್ಯಾದಿ ಫೋಟೋ ಇರುವ ಪ್ರಮುಖ ಐಡಿಗಳನ್ನು ತೋರಿಸಿ ಮತ ಚಲಾಯಿಸಲು ಅವಕಾಶವಿದೆ.
ಇವಿಎಂ ಪರಿಶೀಲನೆಗಾಗಿ ಚುನಾವಣಾ ಸಿಬ್ಬಂದಿಯಿಂದ ಅಣಕು ಮತದಾನ ಆರಂಭ
ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಕರ್ನಾಟಕ ವಿಧಾನಸಭಾ ಕ್ಷೇತ್ರದ ಎಲ್ಲಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ಅಣಕು ಮತದಾನ ಆರಂಭಿಸಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಮತದಾನ ಆರಂಭವಾಗಿದ್ದು, ವಿವಿಧ ಮತದಾನ ಕೇಂದ್ರಗಳಲ್ಲಿ ಸರದಿ ಸಾಲು ಆರಂಭವಾಗಿದೆ.
ರಾಜ್ಯ ವಿಧಾನಸಭೆಗೆ ಮತದಾನ ನಡೆಯುತ್ತಿದ್ದು, ಮತಗಟ್ಟೆಗಳ ಸಂಖ್ಯೆ, ಒಟ್ಟು ಮತದಾರರು ಎಷ್ಟಿದ್ದಾರೆ ? ಇತ್ಯಾದಿ ಮಾಹಿತಿ ಇಲ್ಲಿದೆ
ಬೆಳಗ್ಗೆ 7 ಗಂಟೆಗೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮತದಾನ
ಸಾರ್ವತ್ರಿಕ ವಿದಾನ ಸಭಾ ಚುನಾವಣೆ - ಮತದಾನ ದಿನವಾದ ಇಂದು 152 - ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಾದ ಮನೋಜ್ ಕುಮಾರ್ ಮೀನಾ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ, CEO, KARNATAKA ರವರು ಮತಗಟ್ಟೆ ಸಂಖ್ಯೆ 127 ರಲ್ಲಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಅವರು ಮತಗಟ್ಟೆ ಸಂಖ್ಯೆ130 ರಲ್ಲಿ ಮತ ಚಲಾಯಿಸಲಿದ್ದಾರೆ. ಬೆಂಗಳೂರಿನ ಜಕ್ಕೂರು ಸರಕಾರಿ ಶಾಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಮಾಡಲಿದ್ದಾರೆ.
ಮತದಾನ ಮಾಡಿದವರಿಗೆ ಉಚಿತ ಉಪಹಾರ
ಚುನಾವಣೆಯಲ್ಲಿ ಮತದಾನ ಮಾಡಿಬಂದವರಿಗೆ ಉಚಿತ ಉಪಹಾರ ನೀಡುವ ಬೆಂಗಳೂರಿನ ಕೆಲವು ಹೋಟೆಲ್‌ಗಳ ನಿರ್ಧಾರಕ್ಕೆ ಬಿಬಿಎಂಪಿ ನಿರ್ಬಂಧ ವಿಧಿಸಿತ್ತು. ಬಿಬಿಎಂಪಿ ಕ್ರಮದ ವಿರುದ್ಧ ಹೋಟೆಲ್ ಮಾಲೀಕರ ಸಂಘಟನೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಮತದಾನ ಹೆಚ್ಚಿಸಲು ಈ ಕ್ರಮ ಕೈಗೊಂಡಿರುವುದಾಗಿ ಹೋಟೆಲ್ ಮಾಲೀಕರ ಸಂಘಟನೆ ಕೋರ್ಟ್‌ಗೆ ಮನವರಿಕೆ ಮಾಡಿತು. ಇವರ ವಾದವನ್ನು ಹೈಕೋರ್ಟ್ ಪುರಷ್ಕರಿಸಿದ್ದು, ಉಚಿತ ಉಪಹಾರ ನೀಡಲು ಅವಕಾಶ ನೀಡಿದೆ.
ಧಾರ್ಮಿಕ ತಾಣಗಳು ಇಂದು ಬಂದ್ ಇಲ್ಲ
ಚುನಾವಣೆ ದಿನದಂದು ಜನರು ಮತ ಚಲಾಯಿಸದೆ ಪ್ರವಾಸ ಹೊರಡುವುದನ್ನು ತಪ್ಪಿಸಲು ವಿವಿಧ ಪ್ರವಾಸಿ ತಾಣಗಳಲ್ಲಿ ಇಂದು ಮತ ಚಲಾಯಿಸದೆ ಆಗಮಿಸುವವರಿಗೆ ನಿರ್ಬಂದ ಹಾಕಲಾಗಿದೆ. ಆದರೆ, ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ತಾಣಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಸೇರಿ ರಾಜ್ಯ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಸಿ ತಾಣಗಳಿಗೆ ಬರುವ ಜನರ ಮೇಲೆ ನಿಗಾ ಇಡಲಾಗಿದ್ದು, ಮತ ಚಲಾಯಿಸದೆ ಬರಬೇಡಿ ಎಂದು ಸಂಬಂಧಪಟ್ಟವರು ಮನವಿ ಮಾಡುತ್ತಿದ್ದಾರೆ.
ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಬನ್ನಿ, ತಪ್ಪದೇ ಮತ ಚಲಾಯಿ
ಇನ್ನೊಂದು ಗಂಟೆಯಲ್ಲಿ ಮತದಾನ, ಮತಗಟ್ಟೆಗಳಲ್ಲಿ ಸಿದ್ಧತೆ ನಡೆಸುತ್ತಿರುವ ಸಿಬ್ಬಂದಿ
ರಾಜ್ಯದ ವಿವಿಧ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗಳು ಕೊನೆಯ ಕ್ಷಣದ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೊಂದು ಗಂಟೆಯಲ್ಲಿ ಮತದಾನ ನಡೆಯಲಿದ್ದು, ವಿವಿಧ ಮತದಾನ ಕೇಂದ್ರಗಳಿಗೆ ಬೆಳ್ಳಂಬೆಳಗೆಯೇ ಮತದಾರರು ಆಗಮಿಸಿದ್ದಾರೆ. ಮೊದಲ ಮತದಾನ ತಮ್ಮದೇ ಆಗಬೇಕೆಂಬ ಉತ್ಸಾಹವೂ ಜನರಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಇಂದು ಬೆಳಗ್ಗೆ ಬೇಗನೇ ಎದ್ದು, ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Karnataka Election: ಪ್ರಜಾಪ್ರಭುತ್ವದ ಹಬ್ಬಕ್ಕೆ ತಯಾರಾಗಿದೆ ಬ್ರ್ಯಾಂಡ್ ಮೈಸೂರು ಮತಗಟ್ಟೆ
ಹೊರರಾಜ್ಯಗಳಿಂದ ಸಾವಿರಾರು ಜನರ ಆಗಮನ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅಮೂಲ್ಯ ಮತ ಚಲಾಯಿಸಲು ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಕರ್ನಾಟಕಕ್ಕೆ ಆಗಮಿಸಿದ್ದಾರೆ, ಆಗಮಿಸುತ್ತಿದ್ದಾರೆ. ಗೋವಾ ಸರಕಾರವು ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಯುಕ್ತ ವೇತನ ಸಹಿತ ರಜೆ ನೀಡಿದೆ. ಹೀಗಾಗಿ, ಗೋವಾದಿಂದ ಸಾವಿರಾರು ಜನರು ಮತ ಚಲಾಯಿಸಲು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಇದೇ ರೀತಿ ವಿವಿಧ ರಾಜ್ಯಗಳಲ್ಲಿರುವ ಕನ್ನಡಿಗರೂ ರಾಜ್ಯಕ್ಕೆ ಆಗಮಿಸಿದ್ದಾರೆ.
ಅಂಚೆ ಮತದಾನ ಪೂರ್ಣ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮತ್ತು ಶೇ. 40ಕ್ಕಿಂತ ಹೆಚ್ಚು ವೈಕಲ್ಯ ಹೊಂದಿದ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿತ್ತು.
ಮನೆಯಿಂದಲೇ ಓಟ್ ಮಾಡಲು ನೋಂದಾಯಿಸಿಕೊಂಡ 99,529 ಮತದಾರರ ಪೈಕಿ 94,931 ಮತದಾರರು ಮತದಾನ ಮಾಡಿದ್ದಾರೆ.
80 ವರ್ಷಕ್ಕಿಂತ ಮೇಲ್ಪಟ್ಟವರು 80,250 ನೋಂದಾಯಿಸಿಕೊಂಡಿದ್ದು, ಈ ಪೈಕಿ 76,120 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಶೇ.94.85 ರಷ್ಟು ಮತದಾನವಾಗಿದೆ.
19,279 ವಿಕಲಚೇತನ ಮತದಾರರು ನೋಂದಾಯಿಸಿಕೊಂಡಿದ್ದು, 18,811 ಮತದಾರರು ಮತ ಚಲಾಯಿಸಿದ್ದಾರೆ. ಶೇ.97.57 ರಷ್ಟು ಮತದಾನವಾಗಿದೆ.
15,328 ಸೇವಾ ಮತದಾರರು ನೋಂದಾಯಿಸಿಕೊಂಡಿದ್ದು, 10,066 ಮತದಾರರು ಮತದಾನ ಮಾಡಿದ್ದಾರೆ. ಒಟ್ಟು ಶೇ.65.67 ರಷ್ಟು ಮತದಾನವಾಗಿದೆ.
Voter Horoscope: ಇಂದು ಕ್ಷೇತ್ರ, ರಾಜ್ಯದ್ದಷ್ಟೇ ಅಲ್ಲ, ನಿಮ್ಮ 5 ವರ್ಷಗಳ ಭವಿಷ್ಯವನ್ನೂ ನೀವೇ ನಿರ್ಧರಿಸಿ
ಪಿಂಕ್ ಬೂತ್‌ಗಳಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಣೆ
ಮಹಿಳೆಯರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ 5 ಪಿಂಕ್ ಬೂತ್ ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪಿಂಕ್ ಬೂತ್ ಗಳಲ್ಲಿ ಮಹಿಳಾ ಸಿಬ್ಬಂದಿಯೇ ಕಾರ್ಯ ನಿರ್ವಹಿಸಲಿದ್ದಾರೆ.
100 ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಕ್ಷೇತ್ರಗಳಲ್ಲಿ ಲಿಂಗಾಯತರು ಹಿಡಿತ ಸಾಧಿಸಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ 54 ಲಿಂಗಾಯತ ಶಾಸಕರು ಇದ್ದಾರೆ. ಇದರಲ್ಲಿ 37 ಮಂದಿ ಬಿಜೆಪಿ ಶಾಸಕರಾಗಿದ್ದಾರೆ. 1952 ರಿಂದ ಕರ್ನಾಟಕದಲ್ಲಿ 23 ಮಂದಿ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ಇವರಲ್ಲಿ 10 ಮಂದಿ ಲಿಂಗಾಯತರು.
ಜಾತಿವಾರು ಮತದಾರರ ಮಾಹಿತಿ
ರಾಜ್ಯದಲ್ಲಿರುವ ಮತದಾರರ ಪೈಕಿ ಜಾತಿವಾರು ನೋಡುವುದಾದರೆ ಶೇಕಡಾ 18 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಶೇ.17 ರಷ್ಟು ಲಿಂಗಾಯರು, ಶೇ.15 ರಷ್ಟು ಒಕ್ಕಲಿಗರು, ಶೇ.53 ಒಬಿಸಿ, 12.92 ಮುಸ್ಲಿಮರು, ಶೇ 3 ರಷ್ಟು ಬ್ರಾಹ್ಮಣರು ಇದ್ದಾರೆ.
ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ 40 ಮತಗಟ್ಟೆಗಳು
ಚುನಾವಣಾ ಆಯೋಗದ ನಿರ್ದೇಶನದಂತೆ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ 40 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 9 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದವರಾದ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗ, ಮಲೈಕುಡಿ, ಸಿದ್ದಿ ಜನಾಂಗದ ಮತದಾರರಿಗಾಗಿ ಸಾಂಪ್ರದಾಯಿಕ ಮತಗಟ್ಟೆ ಸಿದ್ಧಪಡಿಸಲಾಗಿದೆ.
11 ಲಕ್ಷ ಹೊಸ ಮತದಾರರು ಸೇರ್ಪಡೆ
ರಾಜ್ಯ ವಿಧಾನಸಭೆಯಲ್ಲಿ 224 ಕ್ಷೇತ್ರಗಳು ಇದ್ದು, ಸರ್ಕಾರ ರಚನೆಗೆ 113 ಮ್ಯಾಜಿಕ್ ಸಂಖ್ಯೆಯಾಗಿದೆ. ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್ 28 ಶಾಸಕ ಬಲ ಹೊಂದಿವೆ. ರಾಜ್ಯದಲ್ಲಿ ಒಟ್ಟು 5,30,85,566 ಮಂದಿ ಮತದಾರರು ಇದ್ದು, 11 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಈ ಪೈಕಿ 2,66,82,156 ಮಂದಿ ಪುರುಷಕರು, 2,63,98,483 ಮಹಿಳಾ ಮತದಾರರು ಇದ್ದಾರೆ. 4,927 ತೃತೀಯ ಲಿಂಗಿ ಮತದಾರರು ಇದ್ದಾರೆ. 5.60 ಲಕ್ಷ ವಿಶೇಷ ಚೇತನ ಮತದಾರರು ಇದ್ದಾರೆ.
ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭ
ಕರ್ನಾಟಕದಲ್ಲಿನ ಬಹು ನಿರೀಕ್ಷಿತ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮತದಾನಕ್ಕಾಗಿ ರಾಜ್ಯಾದ್ಯಂತ 58,282 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಈ 1,320 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸುತ್ತಿರುವುದು ವಿಶೇಷವಾಗಿದೆ.
ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಒಂದು ವೇಳೆ ಸಂಜೆ 5ರೊಳಗೆ ಇನ್ನೂ ಹೆಚ್ಚಿನ ಜನರು ಮತಗಟ್ಟೆಗೆ ಬಂದು ಮತದಾನ ಬಾಕಿ ಉಳಿದರೆ ಅಂತಹವರಿಗೆ ಸಂಜೆ 6ರವರೆಗೆ ಅವಕಾಶ ಕಲ್ಪಿಸಬಹುದಾಗಿದೆ.