ಕನ್ನಡ ಸುದ್ದಿ  /  ಕರ್ನಾಟಕ  /  Arun Kumar Puthila Profile: ಪುತ್ತೂರಿಗೆ ಪುತ್ತಿಲ ಟ್ರೆಂಡ್‌ನ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲರ ಪರಿಚಯ ಇಲ್ಲಿದೆ

Arun Kumar Puthila Profile: ಪುತ್ತೂರಿಗೆ ಪುತ್ತಿಲ ಟ್ರೆಂಡ್‌ನ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲರ ಪರಿಚಯ ಇಲ್ಲಿದೆ

Arun Kumar Puthila : ಹಿರಿಯ ಹಿಂದು ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ, ಪುತ್ತೂರಿನ ಹಿರಿಯ ಬಿಜೆಪಿ ಮುಖಂಡ ಡಾ.ಎಂ.ಕೆ.ಪ್ರಸಾದ್‌ ಭಂಡಾರಿ ಅವರು ಏ.27ರಂದು ಬಹಿರಂಗವಾಗಿ ಅರುಣ್‌ ಕುಮಾರ್‌ ಪುತ್ತಿಲ ಅವರ ವಿರುದ್ಧ ಟೀಕಾಪ್ರಹಾರ ಮಾಡಿದರು. ಈ ವಿದ್ಯಮಾನ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಮತ್ತೆ ಲೈಮ್‌ಲೈಟಿಗೆ ತಂದು ನಿಲ್ಲಿಸಿದೆ. ಅವರ ವ್ಯಕ್ತಿಚಿತ್ರ ಮುಂದಿದೆ.

ಪ್ರಣಾಳಿಕೆಯಲ್ಲಿ ಮುಖಪುಟದಲ್ಲಿರುವ ಅರುಣ್‌ ಕುಮಾರ್‌ ಪುತ್ತಿಲರ ಫೋಟೋ
ಪ್ರಣಾಳಿಕೆಯಲ್ಲಿ ಮುಖಪುಟದಲ್ಲಿರುವ ಅರುಣ್‌ ಕುಮಾರ್‌ ಪುತ್ತಿಲರ ಫೋಟೋ

ಹೆಸರು - ಅರುಣ್‌ ಕುಮಾರ್‌ ಪುತ್ತಿಲ

ವಯಸ್ಸು - 52

ಶಿಕ್ಷಣ - ಪಿಯುಸಿ ವಾಣಿಜ್ಯಶಾಸ್ತ್ರ

ಟ್ರೆಂಡಿಂಗ್​ ಸುದ್ದಿ

ವೃತ್ತಿ - ಕೃಷಿ ಮತ್ತು ಉದ್ಯಮ

ಪುತ್ತೂರಿಗೆ ಪುತ್ತಿಲ ಕೂಗು ಎದ್ದಾಗ ಯಾರೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದು ಎಲ್ಲ ರಾಜಕೀಯ ಆಕಾಂಕ್ಷಿಗಳ ಬೆಂಬಲಿಗರ ಕೂಗು ಎಂದು ಹಗುರವಾಗಿ ತೆಗೆದುಕೊಂಡವರೇ ಹೆಚ್ಚು. ಇತ್ತೀಚೆಗೆ ಅರುಣ್‌ ಪುತ್ತಿಲ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿದರಲ್ಲ. ಅದರಲ್ಲಿದ್ದ ಅವರ ಭಾವಚಿತ್ರ ಒಂದು ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ಸಾರಿದೆ. ಅವರು ʻಕಾರ್ಯಕರ್ತʼರ ಪ್ರತಿರೂಪ. ಹೊಸ ತಲೆಮಾರಿನ ಆಡುಭಾಷೆಯಲ್ಲಿ ಹೇಳಬೇಕೆಂದರೆ ಅವರು ʻಕಾರ್ಯಕರ್ತರ ಫೇಸ್‌ʼ ಎಂಬ ಮಾತು ಕ್ಷೇತ್ರದ ಮತದಾರರ ನಡುವೆ ಹರಿದಾಡುತ್ತಿದೆ.

ಹಿರಿಯ ಹಿಂದು ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ, ಪುತ್ತೂರಿನ ಹಿರಿಯ ಬಿಜೆಪಿ ಮುಖಂಡ ಡಾ.ಎಂ.ಕೆ.ಪ್ರಸಾದ್‌ ಭಂಡಾರಿ ಅವರು ಏ.27ರಂದು ಬಹಿರಂಗವಾಗಿ ಅರುಣ್‌ ಕುಮಾರ್‌ ಪುತ್ತಿಲ ಅವರ ವಿರುದ್ಧ ಟೀಕಾಪ್ರಹಾರ ಮಾಡಿದರು. ಈ ವಿದ್ಯಮಾನ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಮತ್ತೆ ಲೈಮ್‌ಲೈಟಿಗೆ ತಂದು ನಿಲ್ಲಿಸಿದೆ. ಯಾರು ಈ ಅರುಣ್‌ ಕುಮಾರ್‌ ಪುತ್ತಿಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಇಲ್ಲಿದೆ ಅವರ ವ್ಯಕ್ತಿಚಿತ್ರಣ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ. "ಇದು ಬಂಡಾಯವಲ್ಲ. ಪ್ರತಿರೋಧ. ಇದು ನನ್ನ ಸ್ಪರ್ಧೆಯಲ್ಲ. ಕಾರ್ಯಕರ್ತರ ಆಯ್ಕೆ" - ಈ ಬರೆಹ ಅರುಣ್‌ ಕುಮಾರ್‌ ಪುತ್ತಿಲರ ಪ್ರಚಾರ ವಾಹನದಲ್ಲಿ ಎದ್ದುಕಾಣುವ ವಿಷಯ. ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದು ಮುಖಂಡರಾಗಿ ಕೆಲಸ ಮಾಡುತ್ತಿರುವವರು. ಹಿಂದು ಸಮುದಾಯದವರ ಯಾವುದೇ ನೋವಿಗೂ ಸ್ಪಂದಿಸುವ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡವರು.

ಅರುಣ್‌ ಕುಮಾರ್‌ ಪುತ್ತಿಲರ ಮಾಧ್ಯಮ ವಿಭಾಗ ಶೇರ್‌ ಮಾಡಿರುವ ಪ್ರೊಫೈಲ್‌ ಪ್ರಕಾರ, ಅವರು ಬಾಲ್ಯದ ದಿನಗಳಲ್ಲಿ ಸಂಘದ ಶಾಖೆ ನಡೆಸುತ್ತಿದ್ದರು. ಕಾಲೇಜು ಕಲಿಕೆಯ ಸಮಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌ನ ಸಕ್ರಿಯ ಸದಸ್ಯರಾಗಿದ್ದರು. ಐ ಜೆಸಿಐ ನರಿಮೊಗರು ಘಟಕದ ಅಧ್ಯಕ್ಷರಾಗಿದ್ದರು. ಮೂರು ದಶಕದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ನ ಸ್ವಯಂಸೇವಕ. ಭಜರಂಗದಳದ ಜಿಲ್ಲಾ ಸಂಚಾಲಕನಾಗಿ ಜವಾಬ್ದಾರಿ ಇತ್ತು. ವಿಶ್ವ ಹಿಂದು ಪರಿಷತ್‌ನ ಸುವರ್ಣ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತ ಗ್ರಾಮ ಮಟ್ಟದ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. 2014ರಲ್ಲಿ ನಮೋ ಭಾರತ್‌ ಮೂಲಕ 10ಕ್ಕೂ ಹೆಚ್ಚು ನಮೋ ರಾಲಿ ಕಾರ್ಯಕ್ರಮ ಆಯೋಜಿಸಿದ್ದರು. 2018-19ರಲ್ಲಿ ಮೂಲ್ಕಿ-ಮೂಡಬಿದಿರೆ ವಿಧಾನಸಭಾಕ್ಷೇತ್ರದಲ್ಲಿ ಚುನಾವಣಾ ಅವಧಿಯಲ್ಲಿ 15 ದಿನ ಕ್ಷೇತ್ರ ವಿಸ್ತಾರಕನಾಗಿ ಕೆಲಸ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಕ್ಷೇತ್ರಗಳಲ್ಲಿ ಬಿಜೆಪಿ ಪರ ಮತಯಾಚನೆಗೂ ಹೋಗಿದ್ದರು. ಹಿಂದಿನ ಲೋಕಸಭೆ ಚುನಾವಣೆ ವೇಳೆ ಕೇರಳದ ಕಾಸರಗೋಡು, ಮಂಜೇಶ್ವರ ಕ್ಷೇತ್ರಗಳಲ್ಲಿ ತಲಾ ಐದು ದಿನ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಕೆಲಸ ಮಾಡಿದ್ದರು.

ಇನ್ನು ಸ್ವಗ್ರಾಮ ಮುಂಡೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ 8 ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತಿಗ್ರಾಮಕ್ಕೆ ತೆರಳಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪ್ರೊಫೈಲ್‌ನಲ್ಲಿ ಉಲ್ಲೇಖವಾಗಿರುವ ಧಾರ್ಮಿಕ ಚಟುವಟಿಕೆಗಳ ಪೈಕಿ, ಅರುಣ್‌ ಪುತ್ತಿಲ ಅವರು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶ ಸಮಿತಿಯ ಹೊಣೆಗಾರಿಕೆ ನಿರ್ವಹಿಸಿದ್ದರು. ಮುಂಡೂರಿನ ಶ್ರೀ ಮೃತ್ಯುಂಜಯೇಶ್ವರ ದೇವಾಲಯದ ಬ್ರಹ್ಮಕಲಶ ಕಾರ್ಯಕ್ರಮದ ಹೊಣೆಗಾರಿಕೆ ನಿರ್ವಹಿಸಿದ್ದರು. ಪುತ್ತೂರು ಮತ್ತು ಸುತ್ತಮುತ್ತಲಿನ 52ಕ್ಕೂ ಹೆಚ್ಚು ದೇವಸ್ಥಾನ, ದೈವಸ್ಥಾನಗಳ ಬ್ರಹ್ಮಕಲಶ, ಜೀರ್ಣೋದ್ಧಾರ ಮುಂತಾದ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ.

ಸಾಮಾಜಿಕವಾಗಿ ಗಣೇಶೋತ್ಸವ, ನವರಾತ್ರಿ ಹಾಗೂ ಹಿಂದು ಸಂಸ್ಕೃತಿಯ ವಿವಿಧ ಚಟುವಟಿಕೆಗಳಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲೂ ತೊಡಗಿಸಿಕೊಂಡು ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ನೆರವಾಗಲು ಗ್ರಾಮ ಮಟ್ಟದಲ್ಲಿ ಶಿಬಿರಗಳನ್ನು ಏರ್ಪಡಿಸಿರುವುದನ್ನು ವಿವರಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮನೆಗಳ ಸಂಪರ್ಕಕ್ಕೆ ರಸ್ತೆ ನಿರ್ಮಾಣ, ಅಶಕ್ತರಿಗೆ ಆರ್ಥಿಕ ನೆರವಿನ ಜತೆಗೆ ಮನೆ ನಿರ್ಮಾಣ, ಕೊರೊನಾ ಸಂದರ್ಭದಲ್ಲಿ ಸಾಮಾಜಿಕವಾಗಿ ನೆರವು ನೀಡುವುದು ಮುಂತಾದ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ವಿಶೇಷವಾಗಿ ಪುತ್ತೂರಿನಲ್ಲಿ 1997ರಲ್ಲಿ ಸೌಮ್ಯ ಭಟ್‌ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ, ಹೋರಾಟಗಳಲ್ಲಿ, ಅಕ್ಷತಾ ಕೊಲೆ ಪ್ರಕರಣ ವಿರೋಧಿಸಿ ಪ್ರತಿಭಟನೆಗಳಲ್ಲೂ ಭಾಗಿಯಾಗಿದ್ದಾಗಿ ವಿವರಿಸಿದ್ದಾರೆ. ಇದೇ ರೀತಿ ಅವರು ತಮ್ಮ ಪ್ರೊಫೈಲ್‌ನಲ್ಲಿ ಭವ್ಯ ಪುತ್ತೂರು ನಿರ್ಮಾಣದ ಗುರಿಯನ್ನು ಹತ್ತು ಹದಿನಾಲ್ಕು ಅಂಶಗಳಲ್ಲಿ ವಿವರಿಸಿದ್ದಾರೆ.

ಚುನಾವಣಾ ಕಣದ ವಿದ್ಯಮಾನಗಳನ್ನು ಗಮನಿಸಿ ಹೇಳುವುದಾದರೆ, ಪುತ್ತಿಲ ನಾಮಪತ್ರ ಸಲ್ಲಿಸುವಾಗ ಸೇರಿದ ಜನ, ಅವರಾಡಿದ ಮಾತುಗಳು ಮತ್ತು ವರ್ತನೆ ಎಲ್ಲವೂ ಜನಮೆಚ್ಚುವಂತೆ ಇತ್ತು. ಆದರೆ ಪಕ್ಷೇತರ ಅಭ್ಯರ್ಥಿ ಆಗಿರುವ ಕಾರಣ, ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಅವರನ್ನು ಎದುರಾಳಿ ಎಂದು ಪರಿಗಣಿಸದವರಂತೆ ಅವರ ಹೆಸರನ್ನು ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿಯೇ ಇಲ್ಲ. ಅರುಣ್‌ ಕುಮಾರ್‌ ಪುತ್ತಿಲ ಅವರು ಕಾಂಗ್ರೆಸ್‌ ಅಭ್ಯರ್ಥಿಯೇ ತನ್ನ ಎದುರಾಳಿ ಎಂದು ಹೇಳಿದ್ದಾರೆಯೇ ಹೊರತು, ಬಿಜೆಪಿ ಅಭ್ಯರ್ಥಿ ತನ್ನ ಎದುರಾಳಿ ಎಂದು ಹೇಳಿಲ್ಲ. ಪುತ್ತೂರಿನ ಚುನಾವಣಾ ಕಣದಲ್ಲಿ ವಿಲಕ್ಷಣ ರಾಜಕೀಯ ಸನ್ನಿವೇಶ ಸೃಷ್ಟಿಗೆ ಅರುಣ್‌ ಕುಮಾರ್‌ ಪುತ್ತಿಲ ನಿಮಿತ್ತರಾಗಿದ್ದಾರೆ. ಇದೇ ಕಾರಣಕ್ಕೆ ಅವರ ಈ ವ್ಯಕ್ತಿಚಿತ್ರಣ.

ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ ಪ್ರಕಾರ, ಐದು ಪೊಲೀಸ್‌ ಕೇಸ್‌ಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ 5 ಪ್ರಕರಣಗಳ ಪೈಕಿ ಎರಡು ವಿಚಾರಣೆ ಹಂತದಲ್ಲಿವೆ. ಯಾವುದೇ ಪ್ರಕರಣದಲ್ಲಿ ಸಿದ್ಧದೋಷಿ ಅಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ಇನ್ನುಳಿದಂತೆ, ಅರುಣ್‌ ಕುಮಾರ್‌ ಪುತ್ತಿಲರ ಆಸ್ತಿ ಸಂಪತ್ತಿನ ಒಟ್ಟು ಮೌಲ್ಯ 54,57,235 ರೂಪಾಯಿ. ಅವರ ಪತ್ನಿ ಭಾನುಮತಿ ಹೆಸರಿನಲ್ಲಿ 13.,585 ರೂಪಾಯಿ, ಪುತ್ರಿಯರಾದ ಚಿನ್ಮಯಿ ಬಳಿ 1,65,000 ರೂಪಾಯಿ, ಪ್ರಾಪ್ತಿ ಬಳಿ 1,37,500 ರೂಪಾಯಿ ಸಂಪತ್ತಿದೆ. ಪುತ್ತಿಲರ ಸಾಲಬಾಧ್ಯತೆ 34,84,679 ರೂಪಾಯಿ ಎಂದು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.

ಸೋಷಿಯಲ್‌ ಮೀಡಿಯಾಗಳಲ್ಲಿ ಅನೇಕರು ತಮಗೆ ಗೊತ್ತಿರುವ ಅರುಣ್‌ ಕುಮಾರ್‌ ಪುತ್ತಿಲರ ವಿಚಾರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ನಿತಿನ್‌ ಕೆ ಪುತ್ತೂರು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ ಪೋಸ್ಟ್‌ ಹೀಗಿದೆ..

ಇನ್ನು, ಪುತ್ತೂರಿನ ಚುನಾವಣಾ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಮೂವರೂ ಬಿಜೆಪಿ, ಸಂಘ ಪರಿವಾರದ ಹಿನ್ನೆಲೆಯವರೇ. ಆದರೆ ಮತದಾರ ಯಾರ ಪರ ಎಂಬುದು ಸದ್ಯದ ಕುತೂಹಲ.