ಚಳಿಗಾಲದಲ್ಲಿ ತ್ವಚೆ ಒಣಗಿ, ಮುಖ ಡಲ್ ಆಗಿ ಕಾಣ್ತಿದ್ಯಾ; ಈ ಫೇಸ್‌ಪ್ಯಾಕ್ ಬಳಸಿ ನೋಡಿ, ಚರ್ಮದ ಕಾಂತಿಯೇ ಬದಲಾಗುತ್ತೆ
Nov 19, 2024 03:15 PM IST
ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೇಗೆ?
- ಚಳಿಗಾಲದಲ್ಲಿ ಚರ್ಮ ಒಣಗಿ, ಮುಖ ಡಲ್ ಆಗಿ ಕಾಣಿಸುವುದು ಸಹಜ. ಅಲ್ಲದೇ ಕಾಂತಿಯೂ ಕುಗ್ಗುತ್ತದೆ. ಅದಕ್ಕಾಗಿ ಚಿಂತಿಸಬೇಕಿಲ್ಲ, ಈ ಫೇಸ್‌ಪ್ಯಾಕ್ ಬಳಸಿದ್ರೆ ಸಾಕು ತ್ವಚೆಯ ಅಂದ ದುಪ್ಪಟ್ಟಾಗುತ್ತದೆ. ಈ ಫೇಸ್‌ಪ್ಯಾಕ್ ತಯಾರಿಸಲು ಬೇಕಾಗಿರುವುದು ಕೇವಲ 2 ವಸ್ತಗಳು ಮಾತ್ರ. ಇದರಿಂದ ತ್ವಚೆಯ ಕಾಂತಿಯಲ್ಲಿ ಅಚ್ಚರಿ ಬದಲಾವಣೆಯಾಗುವುದನ್ನು ನೀವು ಗಮನಿಸುತ್ತೀರಿ.
ಚಳಿಗಾಲದಲ್ಲಿ ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಒಣ ತ್ವಚೆಯು ಒಂದು. ತಂಪಾದ ಗಾಳಿ ಮತ್ತು ಆರ್ದ್ರತೆಯ ಮಟ್ಟ ಕಡಿಮೆ ಇರುವುದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಚರ್ಮವು ಶುಷ್ಕ ಮತ್ತು ಮಂದವಾಗಿ ಕಾಣುತ್ತದೆ. ಚರ್ಮಕ್ಕೆ ಸರಿಯಾದ ತೇವಾಂಶ ದೊರಕದೇ ಇರುವುದು ಸಿಪ್ಪೆ ಏಳಲು ಹಾಗೂ ತುರಿಕೆಗೆ ಕಾರಣವಾಗಬಹುದು. ವಿಶೇಷವಾಗಿ ಚಳಿಗಾಲವು ಮುಖದ ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ,ಈ ಸಮಸ್ಯೆ ನಿವಾರಣೆಗೆ ಮೊಸರು ಮತ್ತು ಬಾಳೆಹಣ್ಣನ್ನು ಬಳಸಿ ಫೇಸ್ ಮಾಸ್ಕ್ ತಯಾರಿಸಿ ಬಳಸುವುದರಿಂದ ಒಣ ತ್ವಚೆಯ ಸಮಸ್ಯೆಯನ್ನು ನಿವಾರಿಸಬಹುದು.
ಫೇಸ್ ಮಾಸ್ಕ್ ಮಾಡಲು ಬೇಕಾಗುವ ಸಾಮಗ್ರಿಗಳು
ತಾಜಾ ಮೊಸರು – ಎರಡು ಟೇಬಲ್ ಚಮಚ, ಜೇನುತುಪ್ಪ – ಒಂದು ಟೀ ಚಮಚ, ಹಿಸುಕಿದ ಬಾಳೆಹಣ್ಣು – ಒಂದು ಚಮಚ, ತೆಂಗಿನ ಎಣ್ಣೆ – ಒಂದು ಟೀ ಚಮಚ
ಫೇಸ್‌ಮಾಸ್ಕ್ ಬಳಸುವ ವಿಧಾನ
ಮೊದಲು ಒಂದು ಬೌಲ್‌ನಲ್ಲಿ ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಮೊದಲು ಸಂಪೂರ್ಣವಾಗಿ ಮುಖಕ್ಕೆ ಹಚ್ಚಬೇಕು. ಅದರ ನಂತರ ತೆಂಗಿನ ಎಣ್ಣೆ ಮತ್ತು ಹಿಸುಕಿದ ಬಾಳೆಹಣ್ಣುಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಅದು ಕೆನೆಯಾಗುವವರೆಗೆ ಅದನ್ನು ನಿಮ್ಮ ಬೆರಳುಗಳಿಂದ ಬೆರೆಸುತ್ತಿರಿ. ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ.ಈ ಮಿಶ್ರಣ ಕಣ್ಣಿನ ಒಳ ಭಾಗಕ್ಕೆ ತಾಕದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಅದರ ನಂತರ ಸ್ವಲ್ಪ ಹೊತ್ತು ಒಣಗಲು ಬಿಡಿ. ಈ ಮಾಸ್ಕ್ ಸುಮಾರು 20 ನಿಮಿಷಗಳಲ್ಲಿ ಒಣಗುತ್ತದೆ. ಅದರ ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ.
ಇದನ್ನು ಬಳಸುವುದರಿಂದ ಚರ್ಮಕ್ಕೆ ಪೋಷಕಾಂಶ ಒದಗುತ್ತದೆ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಮುಖವು ಉತ್ತಮ ಹೊಳಪನ್ನು ಪಡೆಯುತ್ತದೆ. ಈ ಫೇಸ್‌ಮಾಸ್ಕ್ ಚರ್ಮದ ನಿರ್ಜೀವ ಕೋಶಗಳನ್ನು ತೆಗೆದುಹಾಕುತ್ತದೆ. ಚರ್ಮ ಮೃದುವಾಗುತ್ತದೆ.
ಮೊಸರು ಮತ್ತು ಬಾಳೆಹಣ್ಣು ಆಂಟಿಮೈಕ್ರೊಬಿಯಲ್, ಆಂಟಿಆಕ್ಸಿಡೆಂಟ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಜೇನುತುಪ್ಪ ಮತ್ತು ತೆಂಗಿನೆಣ್ಣೆ ಕೂಡ ಚರ್ಮವನ್ನು ತೇವಗೊಳಿಸುತ್ತದೆ. ಇವುಗಳಿಂದ ಮಾಡಿದ ಈ ಫೇಸ್‌ಮಾಸ್ಕ್ ಮುಖವನ್ನು ಕಾಂತಿಯುತಗೊಳಿಸಬಹುದು.
ಫೇಸ್‌ಮಾಸ್ಕ್ ವಿಧಾನ 2
ಕೇವಲ ಬಾಳೆಹಣ್ಣು ಮತ್ತು ಜೇನುತುಪ್ಪದಿಂದ ಫೇಸ್‌ಮಾಸ್ಕ್ ತಯಾರಿಸಬಹುದು. ಇದಕ್ಕಾಗಿ ನಿಮಗೆ ಒಂದು ಬಾಳೆಹಣ್ಣು ಮತ್ತು ಎರಡು ಟೇಬಲ್ ಚಮಚ ಜೇನುತುಪ್ಪ ಬೇಕಾಗುತ್ತದೆ. ಮೊದಲು, ಬಾಳೆಹಣ್ಣನ್ನು ಮ್ಯಾಶ್ ಮಾಡಿ. ಅದರಲ್ಲಿ ಜೇನುತುಪ್ಪ ಹಾಕಿ. ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. ಆರುವ ತನಕ ಹಾಗೆಯೇ ಇರಬೇಕು. ಅದರ ನಂತರ ಅದನ್ನು ನೀರಿನಿಂದ ತೊಳೆಯಿರಿ.
ಈ ಫೇಸ್‌ಪ್ಯಾಕ್ ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲವಾದರೂ ಇದನ್ನು ಬಳಸುವ ಮುನ್ನ ಪ್ಯಾಚ್‌ಟೆಸ್ಟ್ ಮಾಡಲು ಮರೆಯದಿರಿ. ಇದನ್ನು ಹಚ್ಚಿಕೊಂಡಾಗ ಯಾವುದೇ ರೀತಿಯ ಅಲರ್ಜಿ ಉಂಟಾದರೆ ಕೂಡಲೇ ಬಳಕೆಯನ್ನು ನಿಲ್ಲಿಸಿ. ಒಂದು ವಿಚಾರ ನೆನಪಿಡಿ ಯಾವುದೇ ಫೇಸ್‌ಮಾಸ್ಕ್ ಆದರೂ ಒಂದೇ ದಿನ ಬಳಸಿದ ನಂತರ ಫಲಿತಾಂಶ ಸಿಗುವುದಿಲ್ಲ. ನಿರಂತರ ಬಳಕೆಯಿಂದ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.
(ಗಮನಿಸಿ: ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಬರಹ. ಚರ್ಮದ ಮೇಲೆ ಯಾವುದೇ ಪ್ರಯೋಗ ಮಾಡುವ ಮುನ್ನ ತಜ್ಞರಿಂದ ಮಾಹಿತಿ ಪಡೆಯುವುದು ಉತ್ತಮ. ಮನೆಮದ್ದುಗಳೂ ಕೆಲವೊಮ್ಮೆ ಅಡ್ಡಪರಿಣಾಮ ಬೀರಬಹುದು ಎಚ್ಚರ)