logo
ಕನ್ನಡ ಸುದ್ದಿ  /  ಜೀವನಶೈಲಿ  /  ರಾಗಿ ತಿಂದವರು ನಿರೋಗಿ: ಮುದ್ದೆ, ಬಿಸ್ಕೀಟ್, ರೊಟ್ಟಿ, ಇಡ್ಲಿ; ರಾಗಿಯಿಂದ ತಯಾರಿಸಬಹುದಾದ 7 ತಿನಿಸುಗಳ ಸೂಪರ್ ರೆಸಿಪಿಗಳು ಇಲ್ಲಿದೆ

ರಾಗಿ ತಿಂದವರು ನಿರೋಗಿ: ಮುದ್ದೆ, ಬಿಸ್ಕೀಟ್, ರೊಟ್ಟಿ, ಇಡ್ಲಿ; ರಾಗಿಯಿಂದ ತಯಾರಿಸಬಹುದಾದ 7 ತಿನಿಸುಗಳ ಸೂಪರ್ ರೆಸಿಪಿಗಳು ಇಲ್ಲಿದೆ

D M Ghanashyam HT Kannada

Apr 23, 2024 01:39 PM IST

google News

ರಾಗಿಯಿಂದ ತಯಾರಿಸಬಹುದಾದ 7 ತಿನಿಸುಗಳ ಸೂಪರ್ ರೆಸಿಪಿ ಇಲ್ಲಿದೆ

    • Ragi Recipes: ರಾಗಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಒಂದು ಕಾಲದಲ್ಲಿ ಬಡವರ ಬಂಧುವಾಗಿದ್ದ ರಾಗಿ ಇಂದು ಶ್ರೀಮಂತರಿಗೂ ಪ್ರಿಯವಾಗಿದೆ. ರಾಗಿಯಿಂದ ವಿಧವಿಧ ಭಕ್ಷ್ಯಗಳನ್ನು ತಯಾರಿಸಬಹುದು. ಇಲ್ಲಿದೆ 7 ಜನಪ್ರಿಯ ರಾಗಿ ರೆಸಿಪಿಗಳ ಮಾಹಿತಿ.
ರಾಗಿಯಿಂದ ತಯಾರಿಸಬಹುದಾದ 7 ತಿನಿಸುಗಳ ಸೂಪರ್ ರೆಸಿಪಿ ಇಲ್ಲಿದೆ
ರಾಗಿಯಿಂದ ತಯಾರಿಸಬಹುದಾದ 7 ತಿನಿಸುಗಳ ಸೂಪರ್ ರೆಸಿಪಿ ಇಲ್ಲಿದೆ

ರಾಗಿಯ ಪ್ರಯೋಜನಗಳು: ಬೇಸಿಗೆ ಬಂದ ತಕ್ಷಣ ಹಲವು ಮನೆಗಳಲ್ಲಿ ಆಹಾರ ಪದ್ಧತಿಯೇ ಬದಲಾಗುತ್ತದೆ. 'ರಾಗಿ ತಂಪು ಕಣ್ರೋ' ಎನ್ನುವ ಅಜ್ಜಿಯ ಮಾತು ನೆನಪಿಸಿಕೊಳ್ಳುವ ಹೊಸ ಕಾಲದ ಗೃಹಿಣಿಯರೂ ಸಹ ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ರೊಟ್ಟಿ ಸೇರಿದಂತೆ ರಾಗಿಯಿಂದ ತಯಾರಿಸುವ ಆಹಾರಗಳ ಕಡೆಗೆ ಗಮನಕೊಡುತ್ತಾರೆ. 'ಶುಗರ್‌ಗೆ ರಾಗಿ ಒಳ್ಳೆಯದು' ಎನ್ನುವ ಮಾತು ಬಹುಕಾಲದಿಂದ ಚಾಲ್ತಿಯಲ್ಲಿದೆ. 'ರಾಗಿ ತಿಂದರೆ ಬಿಪಿ, ಶುಗರ್‌ನಂಥ ದೀರ್ಘಾವಧಿ ಸಮಸ್ಯೆಗಳು ನಿಯಂತ್ರಣದಲ್ಲಿರುತ್ತವೆ' ಎಂದು ಪೌಷ್ಟಿಕಾಂಶ ತಜ್ಞರೂ ಅಭಿಪ್ರಾಯಪಡುತ್ತಾರೆ. ಈಗಂತೂ ಸಿರಿಧಾನ್ಯಗಳು (ತೃಣಧಾನ್ಯಗಳು) ಹೀಗಾಗಿ ರಾಗಿಯಿಂದ ತಯಾರಿಸುವ ಆಹಾರಕ್ಕೆ ಮತ್ತೆ ಬೇಡಿಕೆ ಕುದುರುತ್ತಿದೆ.

ರಾಗಿಯು ಏಕದಳ ಧಾನ್ಯವಾಗಿದ್ದು, ಇದರ ಸೇವನೆಯು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಒಳ್ಳೆಯದು. ರಾಗಿಯಲ್ಲಿ ನಾರಿನ ಅಂಶ (ಫೈಬರ್), ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಮೈನೋ ಆಸಿಡ್‌ ಇದೆ. ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಸುಗಮವಾಗಿಸುವುದರ ಜೊತೆಗೆ ಮೂಳೆಗಳನ್ನು ಬಲಗೊಳಿಸುವಲ್ಲಿಯೂ ಸಹಕಾರಿ. ಮಧುಮೇಹ ನಿರ್ವಹಣೆಗೂ ಪ್ರಯೋಜನಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಆಹಾರದಲ್ಲಿ ರಾಗಿಯನ್ನು ಸೇರಿಸುವುದು ಬಹಳ ಸರಳ. ರಾಗಿ ಹಿಟ್ಟಿನೊಂದಿಗೆ ದೋಸೆ, ಇಡ್ಲಿ, ರೊಟ್ಟಿ, ಗಂಜಿ, ಬಿಸ್ಕತ್ತುಗಳು ಮತ್ತು ಕುಕೀಗಳನ್ನು ಮಾಡಬಹುದು. ಅಲ್ಲದೆ ರಾಗಿ ಸ್ಮೂಥಿ, ಸೂಪ್ ಮಾಡಿ ಸವಿಯಬಹುದು. ನಿಮ್ಮ ಆಹಾರದಲ್ಲಿ ರಾಗಿ ಆಧಾರಿತ ಭಕ್ಷ್ಯಗಳನ್ನು ಸೇರಿಸಲು ಇಷ್ಟಪಡುವಿರಾದರೆ ಏನೆಲ್ಲಾ ತಯಾರಿಸಬಹುದು ಎನ್ನುವ ಪಟ್ಟಿ ಇಲ್ಲಿದೆ ನೋಡಿ.

1) ರಾಗಿ ಇಡ್ಲಿ: ರುಚಿಗೂ ಸೈ, ಆರೋಗ್ಯಕ್ಕೂ ಜೈ

ರಾಗಿ ಹಿಟ್ಟಿನೊಂದಿಗೆ ಅಕ್ಕಿ ಅಥವಾ ಉದ್ದಿನ ಬೇಳೆಯ ಹಿಟ್ಟು ಬೆರೆಸಿ ತಯಾರಿಸುವ ರಾಗಿ ಇಡ್ಲಿಯು ಸವಿಯಲು ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೂ ಉತ್ತಮ. ರಾಗಿ ಹಿಟ್ಟನ್ನು ಉದ್ದಿನ ಬೇಳೆ ಅಥವಾ ಅಕ್ಕಿ ಹಿಟ್ಟಿನೊಂದಿಗೆ ಸೇರಿಸಿ ಸುಮಾರು ಎಂಟು ಗಂಟೆಗಳ ಕಾಲ ಹಾಗೆಯೇ ನೆನೆಸಿಡಿ. ನಂತರ ಅದನ್ನು ಇಡ್ಲಿ ಅಚ್ಚುಗಳಲ್ಲಿ ಬೇಯಿಸಿ. ತರಕಾರಿ ಸಾಂಬಾರ್ ಅಥವಾ ಬಿಸಿ ಟೊಮೆಟೊ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಈ ಬಿಸಿ ರಾಗಿ ಇಡ್ಲಿಯನ್ನು ಸವಿಯಿರಿ.

2) ರಾಗಿ ರೊಟ್ಟಿ: ತಿಂದವರಿಗೇ ಗೊತ್ತು ಆ ರುಚಿ

ರಾಗಿ ಹಿಟ್ಟಿನಿಂದ ಮಾಡಿದ ರಾಗಿ ರೊಟ್ಟಿಯು ಆರೋಗ್ಯಕರ. ರೊಟ್ಟಿಯ ಹಿಟ್ಟನ್ನು ತಯಾರಿಸಲು, ರಾಗಿ ಹಿಟ್ಟು, ನೀರು, ಉಪ್ಪು ಮತ್ತು ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಶ್ರಣ ಮಾಡಿ. ಹಿಟ್ಟನ್ನು ಉಂಡೆಗಳಂತೆ ಮಾಡಿ ಕೈಯಲ್ಲಿ ಸರಿಯಾಗಿ ತಟ್ಟಬೇಕು. ನಂತರ ತವಾಗೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ, ಆಹಾ.. ಅದೇನು ರುಚಿ!

3) ರಾಗಿ ಲಡ್ಡು: ಇದು ಸ್ವೀಟ್ ಅಂದ್ರೆ

ಹುರಿದ ರಾಗಿ ಹಿಟ್ಟು, ಬಾದಾಮಿ, ತುಪ್ಪ, ಮತ್ತು ಬೆಲ್ಲ ಅಥವಾ ಸಕ್ಕರೆಯೊಂದಿಗೆ ರಾಗಿ ಲಡ್ಡು ತಯಾರಿಸಲಾಗುತ್ತದೆ. ಇದು ಸಖತ್ ಟೇಸ್ಟಿಯಾಗಿರುವುದಲ್ಲದೆ, ಆರೋಗ್ಯಕರ ಭಾರತೀಯ ಸಿಹಿಭಕ್ಷ್ಯವೂ ಹೌದು. ರಾಗಿ ಹಿಟ್ಟನ್ನು ತುಸು ಚಿನ್ನದ ಬಣ್ಣಕ್ಕೆ (ಗೋಲ್ಡನ್ ಬ್ರೌನ್) ಬರುವವರೆಗೆ ಹದವಾಗಿ ತುಪ್ಪದಲ್ಲಿ ಹುರಿಯಿರಿ. ನಂತರ ಏಲಕ್ಕಿಪುಡಿ, ಸಣ್ಣಗೆ ಕತ್ತರಿಸಿದ ಬಾದಾಮಿ ಮತ್ತು ಪುಡಿ ಮಾಡಿದ ಬೆಲ್ಲ ಅಥವಾ ಸಕ್ಕರೆಯನ್ನು ಬೆರೆಸಿ ಚೆನ್ನಾಗಿ ಬೆರೆಸಿ. ಮಿಶ್ರಣವು ಇನ್ನೂ ಬೆಚ್ಚಗಿರುವಾಗಲೇ ಅದನ್ನು ಉಂಡೆ ಮಾಡಿಕೊಳ್ಳಿ. ಇದನ್ನು ಮಕ್ಕಳೂ ಇಷ್ಟಪಟ್ಟು ತಿನ್ನುತ್ತಾರೆ. ಈ ಪೌಷ್ಠಿಕಾಂಶಯುಕ್ತ ಸಿಹಿ-ತಿಂಡಿಯು ರುಚಿಕರವೂ ಹೌದು.

4) ರಾಗಿ ಮಣ್ಣಿ: ಮೃದು ಸವಿ ತಿನಿಸು

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಇದು ಪ್ರಸಿದ್ಧ ಸಿಹಿ ತಿಂಡಿ. ಏಲಕ್ಕಿ, ಬೆಲ್ಲ, ತೆಂಗಿನ ಹಾಲು ಮತ್ತು ರಾಗಿ ಹಿಟ್ಟು ಬಳಸಿ ರಾಗಿ ಮಣ್ಣಿ ತಯಾರಿಸಲಾಗುತ್ತದೆ. ರಾಗಿ ಹಿಟ್ಟಿನೊಂದಿಗೆ ಏಲಕ್ಕಿ ಪುಡಿ, ಬೆಲ್ಲದ ಪಾಕ ಮತ್ತು ತೆಂಗಿನ ಹಾಲನ್ನು ಗಂಟುಗಳಲ್ಲಿದ್ದ ಕಲಸಿ, ಮಂದ ಉರಿಯಲ್ಲಿ ದಪ್ಪವಾಗುವವರೆಗೆ ಕುದಿಸಬೇಕು. ನಂತರ ತಟ್ಟೆಗೆ ತುಪ್ಪ ಹಚ್ಚಿ ಇದನ್ನು ಹರಡಿ, ಚಾಕುವಿನಿಂದ ಮೈಸೂರು ಪಾಕ್ ಅಥವಾ ಹಾಲುಬಾಯಿಯಂತೆ ಕತ್ತರಿಸಬಹುದು. ಕೆಲವರು ಇದನ್ನು ಮಕ್ಕಳಿಗೆ ಹಾಗೆಯೇ ತಿನ್ನಿಸುತ್ತಾರೆ. ಕೆಲವರು ಅಚ್ಚುಗಳಿಗೆ ಹಾಕಿ ಸ್ವಲ್ಪಹೊತ್ತು ಹಾಗೆಯೇ ಬಿಟ್ಟು ನಂತರ ಸವಿಯುತ್ತಾರೆ.

5) ರಾಗಿ ದೋಸೆ: ಚಂದಕಿಂತ ಚಂದ

ಉದ್ದಿನ ದೋಸೆಯಂತೆಯೇ ರಾಗಿ ದೋಸೆಯನ್ನು ಕೂಡ ತಯಾರಿಸಲಾಗುತ್ತದೆ. ಇದನ್ನು ಮಾಡಲು, ಅಕ್ಕಿ, ಉದ್ದಿನಬೇಳೆ ಮತ್ತು ರಾಗಿಯನ್ನು 5ರಿಂದ ಆರು ಗಂಟೆಗಳ ಕಾಲ ನೆನೆಸಬೇಕು. ನಂತರ ಇದನ್ನು ರುಬ್ಬಿ ರಾತ್ರಿ ಪೂರ್ತಿ ಇಡಬೇಕು. ಬೆಳಗ್ಗೆಗೆ ಹಿಟ್ಟು ಬಂದಿರುವುದರಿಂದ ಗರಿಗರಿಯಾದ ದೋಸೆ ತಯಾರಿಸಬಹುದು. ಅಲ್ಲದೆ, ಅಕ್ಕಿಹಿಟ್ಟಿನಿಂದ ಮಾಡುವ ನೀರು ದೋಸೆಯಂತೆ ರಾಗಿಯ ನೀರು ದೋಸೆಯನ್ನು ಸಹ ಮಾಡಬಹುದು. ಅಕ್ಕಿಯ ಬದಲಿಗೆ ರಾಗಿ ಹಿಟ್ಟನ್ನು ಚೆನ್ನಾಗಿ ನೀರಿನಲ್ಲಿ ಮಿಶ್ರಣ ಮಾಡಿ ಹುಯ್ದರೆ ಸಾಕು ಬಿಸಿಬಿಸಿ ಇನ್‌ಸ್ಟಂಟ್ ರಾಗಿ ನೀರು ದೋಸೆ ಸವಿಯಲು ಸಿದ್ಧ. ಈ ಗರಿಗರಿಯಾದ ದೋಸೆಗಳ ಜೊತೆ ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಬಿಸಿ ಟೊಮೆಟೊ ಚಟ್ನಿ ಇದ್ದರೆ ಚಂದ.

6) ರಾಗಿ ಮುದ್ದೆ: ಹಿಟ್ಟಂ ಬಿಟ್ಟಂ ಕೆಟ್ಟಂ

ರಾಗಿ ಮುದ್ದೆಯು ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಇದನ್ನು ರಾಗಿ ಹಿಟ್ಟು ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ರಾಗಿ ಮುದ್ದೆ ತಯಾರಿಸಲು 2:1 ಪ್ರಮಾಣದಲ್ಲಿ ನೀರು ಮತ್ತು ಹಿಟ್ಟು ಬಳಸಿ. ಅಂದರೆ ಎರಡು ಲೋಟ ನೀರನ್ನು ಕುದಿಸಿ, ನಂತರ ಒಂದು ಲೋಟ ರಾಗಿ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ. ನಂತರ ಚೆನ್ನಾಗಿ ಮಿಶ್ರಣವನ್ನು ರಾಗಿ ಕೋಲಿನಿಂದ (ಮರದ ಕೋಲು) ಬೆರೆಸಬೇಕು. ಮಿಶ್ರಣವು ದಪ್ಪಗಾಗುವವರೆಗೂ, ಕೈಯಲ್ಲಿ ಅಂಟು ಬಾರದಿರುವವರೆಗೂ ಬೇಯಿಸಬೇಕು. ನಂತರ ಹಿಟ್ಟನ್ನು ತೆಗೆದು ದೊಡ್ಡ ಗೋಳಾಕಾರದ ಚೆಂಡುಗಳಂತೆ ಮುದ್ದೆಯನ್ನು ತಯಾರಿಸಬೇಕು. ಬಸ್ಸಾರು ಅಥವಾ ಮಟನ್ ಸಾಂಬಾರಿನಲ್ಲಿ ತಿನ್ನಲು ಬಹಳ ರುಚಿಕರವಾಗಿರುತ್ತದೆ.

7) ರಾಗಿ ಬಿಸ್ಕತ್ತು: ಮಕ್ಕಳಿಗೆ ಮತ್ತು ಮಕ್ಕಳ ಮನಸ್ಸಿನ ದೊಡ್ಡವರಿಗೆ ಫೇವರೀಟ್

ರಾಗಿ ಹಿಟ್ಟು, ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು ಮತ್ತು ಸಕ್ಕರೆ ಅಥವಾ ಬೆಲ್ಲದಿಂದ ಈ ಬಿಸ್ಕತ್ತನ್ನು ತಯಾರಿಸಲಾಗುತ್ತದೆ. ಹಿಟ್ಟನ್ನು ತಯಾರಿಸಲು ಮೊದಲಿಗೆ ಹಾಲು, ವೆನಿಲ್ಲಾ ಎಸೆನ್ಸ್ ಮತ್ತು ಕರಗಿರುವ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟನ್ನು ಚೆನ್ನಾಗಿ ನಾದಿ, ಬಿಸ್ಕತ್ತು ಆಕಾರ ನೀಡಿ. ನಂತರ ಇದನ್ನು ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಬೇಯಿಸಿ (ಕರಿಯಿರಿ). ಸಂಜೆ ವೇಳೆಗೆ ಒಂದು ಕಪ್ ಬಿಸಿ-ಬಿಸಿ ಚಹಾ ಅಥವಾ ಕಾಫಿ ಜೊತೆ ಸವಿಯಬಹುದು.

ಒಂದು ಕಾಲದಲ್ಲಿ ಬಡವರ ಬಂಧುವೆಂದು ಕರೆಯಲ್ಪಡುತ್ತಿದ್ದ ರಾಗಿಯನ್ನು ಇಂದು ಸಿರಿವಂತರು ಕೂಡ ಸೇವಿಸುತ್ತಿದ್ದಾರೆ. ಯಾಕೆಂದರೆ ರಾಗಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮೇಲೆ ತಿಳಿಸಿದಂತಹ ರಾಗಿ ರೆಸಿಪಿಗಳನ್ನು ನೀವು ಮನೆಯಲ್ಲಿ ಪ್ರಯತ್ನಿಸಬಹುದು.

(ಬರಹ: ಪ್ರಿಯಾಂಕಾ)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ