ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Tips: ತೂಕ ಇಳಿಸುವಲ್ಲಿ ರಾಗಿ ಹೇಗೆ ಸಹಾಯ ಮಾಡುತ್ತದೆ? ರಾಗಿಯಿಂದ ತಯಾರಿಸಬಹುದಾದ ಆರೋಗ್ಯಕರ ರೆಸಿಪಿಗಳು ಇಲ್ಲಿವೆ

Weight loss Tips: ತೂಕ ಇಳಿಸುವಲ್ಲಿ ರಾಗಿ ಹೇಗೆ ಸಹಾಯ ಮಾಡುತ್ತದೆ? ರಾಗಿಯಿಂದ ತಯಾರಿಸಬಹುದಾದ ಆರೋಗ್ಯಕರ ರೆಸಿಪಿಗಳು ಇಲ್ಲಿವೆ

Ragi Recipes: ರಾಗಿ ಎಲ್ಲಾ ಕಾಲದಲ್ಲೂ ನಮ್ಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಅನ್ನೋದು ಬಹಳ ಜನರಿಗೆ ಗೊತ್ತು. ಆದರೆ ತೂಕ ಇಳಿಕೆಗೆ ರಾಗಿ ಯಾವೆಲ್ಲ ರೀತಿಯಲ್ಲಿ ಸಹಕರಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ..? ನೀವು ತೂಕ ಇಳಿಕೆಯ ಪ್ರಯಾಣದಲ್ಲಿದ್ದರೆ ರಾಗಿಯಿಂದ ಇರುವ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯಲೇಬೇಕು.

ರಾಗಿಯಿಂದ ತಯಾರಿಸಬಹುದಾದ ರೆಸಿಪಿಗಳು
ರಾಗಿಯಿಂದ ತಯಾರಿಸಬಹುದಾದ ರೆಸಿಪಿಗಳು

ರಾಗಿ ರೆಸಿಪಿಗಳು: ತೂಕ ಇಳಿಕೆ ಮಾಡಿಕೊಳ್ಳಬೇಕೆಂಬ ಆಸೆ ಇದ್ದರೂ ಸಹ ಅದು ಅಂದುಕೊಂಡಷ್ಟು ಸುಲಭವಾದ ಕೆಲಸವಂತೂ ಅಲ್ಲವೇ ಅಲ್ಲ. ಇದೊಂದು ರೀತಿಯಲ್ಲಿ ವಿಶಿಷ್ಟವಾದ ಪ್ರಯಾಣವಾಗಿದೆ. ಏಕೆಂದರೆ ಒಬ್ಬೊಬ್ಬರ ತೂಕ ಇಳಿಕೆಯ ಪ್ರಯಾಣ ಒಂದೊಂದು ರೀತಿಯಲ್ಲಿ ಇರುತ್ತದೆ. ಕೆಲವರು ತುಂಬಾ ಬೇಗನೆ ತೂಕ ಇಳಿಕೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಅಷ್ಟು ಸುಲಭವಾಗಿ ತೂಕ ನಷ್ಟವಾಗುವುದಿಲ್ಲ.

ಟ್ರೆಂಡಿಂಗ್​ ಸುದ್ದಿ

ಭಾರತೀಯರು ಸಾಮಾನ್ಯವಾಗಿ ತೂಕ ಇಳಿಕೆಯ ವಿಚಾರ ಬಂದಾಗ ರಾಗಿಹಿಟ್ಟನ್ನು ಹೆಚ್ಚಾಗಿ ತಮ್ಮ ಆಹಾರದಲ್ಲಿ ಬಳಕೆ ಮಾಡುತ್ತಾರೆ. ಹಾಗಾದರೆ ತೂಕ ನಷ್ಟದ ಪ್ರಯಾಣದಲ್ಲಿ ರಾಗಿ ಹಿಟ್ಟು ಯಾವೆಲ್ಲ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ

ರಾಗಿ ಹಿಟ್ಟು ಅತೀ ಹೆಚ್ಚಿನ ಪೋಷಕಾಂಶವನ್ನು ಹೊಂದಿರುವಂತಹ ಆಹಾರ ಪದಾರ್ಥವಾಗಿದೆ. ನೀವು ರಾಗಿಹಿಟ್ಟನ್ನು ಸರಿಯಾದ ರೀತಿಯಲ್ಲಿ ಶೇಖರಣೆ ಮಾಡಿಟ್ಟರೆ ಹತ್ತು ವರ್ಷ ಕಳೆದರೂ ಅದು ಹಾಳಾಗುವುದಿಲ್ಲ. ವರ್ಷಪೂರ್ತಿ ಬೆಳೆಯುವ ರಾಗಿಯು ಭಾರತದ ವಿವಿಧ ಭಾಗಗಳಲ್ಲಿ ಪ್ರಮುಖ ಆಹಾರ ಧಾನ್ಯ ಎನಿಸಿದೆ. ಏಕದಳದ ಜಾತಿಗೆ ಸೇರಿದ ರಾಗಿಯನ್ನು ನೀವು ಯಾವುದೇ ಸಂಸ್ಕರಣೆಯ ಅಗತ್ಯವಿಲ್ಲದೆಯೇ ಸೇವನೆ ಮಾಡಬಹುದಾಗಿದೆ.

ತೂಕ ಇಳಿಕೆಗೆ ರಾಗಿ ಹೇಗೆ ಸಹಕಾರಿ...?

ರಾಗಿಯಲ್ಲಿರುವ ಫೈಬರ್ : ರಾಗಿಯಲ್ಲಿರುವ ಫೈಬರ್ ಅಂಶವು ತೂಕ ನಷ್ಟಕ್ಕೆ ಸಹಾಯ ಮಾಡುವ ಪ್ರಮುಖ ಕಾರಣಗಳಲ್ಲಿ ಒಂದು ಎಂದೇ ಹೇಳಬಹುದು. ಜರ್ನಲ್ ಆಫ್ ಫುಡ್ ಸೈನ್ಸ್ & ಟೆಕ್ನಾಲಜಿಯಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ ರಾಗಿಯು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಕಾರ್ಬೋಹೈಡ್ರೇಟ್‌ಗಳಿಗೆ ಹೋಲಿಕೆ ಮಾಡಿದರೆ ದೇಹವು ಫೈಬರ್‌ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ನಿಮ್ಮ ಕ್ಯಾಲೋರಿ ಸೇವನೆ ಕೂಡ ಕಡಿಮೆಯಾಗುತ್ತದೆ. ಇದರಿಂದ ನೀವು ಅತಿಯಾಗಿ ಸೇವನೆ ಮಾಡಬೇಕು ಎಂದು ಕೂಡ ಇರುವುದಿಲ್ಲ. ಇತರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ರಾಗಿಯಲ್ಲಿ ಕೊಬ್ಬಿನಂಶ ಕೂಡ ಕಡಿಮೆ ಪ್ರಮಾಣದಲ್ಲಿ ಇದೆ.

ಪಾಲಿಫಿನಾಲ್‌ನಿಂದ ಸಮೃದ್ಧ

ರಾಗಿಯಲ್ಲಿ ಪಾಲಿಫಿನಾಲ್ ಅಂಶ ಅಧಿಕವಾಗಿದೆ. ಇವುಗಳು ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸೈನ್ಸ್ ಡೈರೆಕ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೈಸರ್ಗಿಕವಾದ ಪಾಲಿಫಿನಾಲ್‌ಗಳು ಬೊಜ್ಜನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ ರಾಗಿಯನ್ನು ಪ್ರತಿದಿನ ತಿನ್ನುವುದರಿಂದ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಮಧುಮೇಹ ಮತ್ತು ತೂಕ ಏರಿಕೆಗೆ ಕಾರಣವಾಗುವ ಅಂಶಗಳು ಕಡಿಮೆಯಾಗುತ್ತದೆ. ರಾಗಿಯಲ್ಲಿರುವ ಕಡಿಮೆ ಗ್ಲೈಸಮಿಕ್ ಅಂಶವು ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಗ್ಲೂಟನ್ ಮುಕ್ತ

ರಾಗಿಯು ಗ್ಲೂಟನ್ ಮುಕ್ತ ಧಾನ್ಯಗಳ ಪೈಕಿ ಒಂದಾಗಿದೆ. ಹೀಗಾಗಿ ಯಾರಿಗೆ ಗ್ಲೂಟನ್‌ನಿಂದ ಅಲರ್ಜಿ ಸಮಸ್ಯೆ ಇದೆಯೋ ಅವರು ರಾಗಿಯನ್ನು ನಿಶ್ಚಿಂತೆಯಿಂದ ಸೇವಿಸಬಹುದಾಗಿದೆ. ಅಲ್ಲದೇ ಗ್ಲೂಟನ್ ಅಂಶವು ದೇಹದ ತೂಕವನ್ನು ಜಾಸ್ತಿ ಮಾಡುತ್ತದೆ ಎಂದೂ ಸಹ ಹೇಳುತ್ತಾರೆ. ಹೀಗಾಗಿ ಗ್ಲುಟನ್ ಮುಕ್ತ ಆಹಾರವು ತೂಕ ಇಳಿಕೆಗೆ ಸಹಕಾರಿಯಾಗಿದೆ.

ಕೊಲೆಸ್ಟ್ರಾಲ್ ನಿರ್ವಹಣೆ

ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ನಿಂದ ಮುಕ್ತಿ ಹೊಂದಲು ರಾಗಿ ಸೇವನೆ ಮಾಡಿ ಎಂದು ಸಲಹೆ ನೀಡಲಾಗಿದೆ. ನಿಯಮಿತವಾಗಿ ರಾಗಿ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಪಾರ್ಶ್ವವಾಯುವಿನಂತಹ ಮಾರಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದಾಗಿದೆ.

ತೂಕ ಇಳಿಕೆಗೆ ರಾಗಿ ಹೇಗೆ ಸಹಕಾರಿ..?

ತೂಕ ಇಳಿಕೆಯ ಪ್ರಯಾಣದಲ್ಲಿ ನೀವು ಚಪಾತಿಗೆ ಬದಲಾಗಿ ಬೇರೆ ಯಾವುದಾದರೂ ಆಹಾರವನ್ನು ಹುಡುಕುತ್ತಿದ್ದರೆ ಖಂಡಿತವಾಗಿಯೂ ನೀವು ರಾಗಿ ರೊಟ್ಟಿಯನ್ನು ಸವಿಯಬಹುದಾಗಿದೆ. ರಾಗಿ ರೊಟ್ಟಿಯು ತೂಕ ನಷ್ಟಕ್ಕೆ ಒಳ್ಳೆಯದು. ಏಕೆಂದರೆ ರಾಗಿಯು ಫೈಬರ್ ಹಾಗೂ ಪ್ರೊಟೀನ್ ಸಮೃದ್ಧವಾದ ಧಾನ್ಯವಾಗಿದೆ. ರಾಗಿಯಲ್ಲಿರುವ ನಾರಿನಂಶವು ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದಂತಹ ಅನುಭವವನ್ನು ನೀಡುತ್ತದೆ. ಪ್ರೊಟೀನ್ ಅಂಶವು ಸ್ನಾಯುಗಳ ಬಲವರ್ಧನೆ ಮಾಡುತ್ತದೆ. ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಹೆಚ್ಚಿನ ಕ್ಯಾಲೋರಿಯನ್ನು ಕರಗಿಸಲು ಸಾಧ್ಯವಾಗುತ್ತದೆ. ರಾಗಿಯಲ್ಲಿ ಕಬ್ಬಿಣಾಂಶ ಹಾಗೂ ಆಂಟಿಆಕ್ಸಿಡಂಟ್ ಗುಣಗಳೂ ಅಡಕವಾಗಿದೆ. ಗ್ಲೂಟನ್ ಅಂಶವಿರುವುದಿಲ್ಲ. ಹೀಗಾಗಿ ತೂಕ ಇಳಿಕೆಗೆ ಹೇಳಿ ಮಾಡಿಸಿದ ಆಹಾರ ಧಾನ್ಯ ರಾಗಿ ಎಂದು ಹೇಳಬಹುದಾಗಿದೆ.

1. ರಾಗಿ ದೋಸೆ

ಬೇಕಾಗುವ ಸಾಮಗ್ರಿಗಳು

ಕ್ಯಾರೆಟ್ - 1/2 ಕಪ್

ಬೀನ್ಸ್ - 1/2 ಕಪ್

ಎಲೆಕೋಸು - 1/2 ಕಪ್

ರಾಗಿ ಹಿಟ್ಟು - 1/2 ಕಪ್

ಉಪ್ಪು - 1 ಚಮಚ

ಆಲಿವ್ ಎಣ್ಣೆ - 1 ಚಮಚ

ಕೊತ್ತಂಬರಿ ಸೊಪ್ಪು- 1 ಚಮಚ

ತಯಾರಿಸುವ ವಿಧಾನ

ಎಲ್ಲಾ ತರಕಾರಿಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ

ಇದಕ್ಕೆ ರಾಗಿ ಹಿಟ್ಟು, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ

ನೀರನ್ನು ಸೇರಿಸಿ ಇಡ್ಲಿಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ, ಸ್ಟೋವ್‌ ಮೇಲೆ ತವಾ ಇಡಿ

ಇದಾದ ಬಳಿಕ ಆಲಿವ್ ಎಣ್ಣೆಯನ್ನು ಸವರಿ ದೋಸೆ ತಯಾರಿಸಿ

ಇದು ರುಚಿಕರವಾಗಿರುವುದರ ಜೊತೆಯಲ್ಲಿ ಆರೋಗ್ಯಕ್ಕೂ ಒಳ್ಳೆಯದು.

2. ರಾಗಿ ಸೂಪ್

ಬೇಕಾಗುವ ಸಾಮಗ್ರಿಗಳು

ಟೊಮೆಟೊ - 1/2 ಕಪ್

ಬಸಳೆ - 1/2 ಕಪ್

ನೀರು - 1 ಕಪ್

ರಾಗಿ ಹಿಟ್ಟು - 1 ಕಪ್

ಹಾಲು - 1/2 ಕಪ್

ತುಳಸಿ - 1/2 ಕಪ್

ಉಪ್ಪು - 1 ಚಮಚ

ಕಾಳು ಮೆಣಸಿನ ಪುಡಿ - 1 ಚಮಚ

ತಯಾರಿಸುವ ವಿಧಾನ

ಎಲ್ಲಾ ತರಕಾರಿಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ

ಇದಾದ ಬಳಿಕ ಈ ಮಿಶ್ರಣಕ್ಕೆ ರಾಗಿ ಹಿಟ್ಟು, ಹಾಲನ್ನು ಸೇರಿಸಿ ಸೂಪ್‌ ಹದಕ್ಕೆ ತನ್ನಿ

ಕೊನೆಯಲ್ಲಿ ಕಾಳು ಮೆಣಸು ಹಾಗೂ ಉಪ್ಪನ್ನು ಸೇರಿಸಿ. ಚೆನ್ನಾಗಿ ಬೆಂದ ಬಳಿಕ ರಾಗಿ ಸೂಪ್‌ ಸವಿಯಿರಿ.

ವಿಭಾಗ