ಕನ್ನಡ ಸುದ್ದಿ  /  ಕರ್ನಾಟಕ  /  Nandini Raagi Ambali: ನಂದಿನಿಯಿಂದ ರಾಗಿ ಅಂಬಲಿ, ಪ್ರೋಬಯಾಟಿಕ್‌ ಮಜ್ಜಿಗೆ, ಮೈಸೂರಿನಲ್ಲಿ ಪ್ರಥಮ ಪ್ರಯೋಗ, ಏನಿದರ ವಿಶೇಷ

Nandini Raagi Ambali: ನಂದಿನಿಯಿಂದ ರಾಗಿ ಅಂಬಲಿ, ಪ್ರೋಬಯಾಟಿಕ್‌ ಮಜ್ಜಿಗೆ, ಮೈಸೂರಿನಲ್ಲಿ ಪ್ರಥಮ ಪ್ರಯೋಗ, ಏನಿದರ ವಿಶೇಷ

KMF News ಮೈಸೂರಿನ ಹಾಲು ಒಕ್ಕೂಟ( Mymul) ಬೇಸಿಗೆಗೆ ನಂದಿನಿ ರಾಗಿ ಅಂಬಲಿ, ಪ್ರೋ ಬಯಾಟಿಕ್‌ ಮಜ್ಜಿಗೆಯನ್ನು ಪರಿಚಯಿಸಿದೆ.

ಮಾರುಕಟ್ಟೆಗೆ ಬಂದ ನಂದಿನಿ ರಾಗಿ ಅಂಬಲಿ, ಪ್ರೋ ಬಯಾಟಿಕ್‌ ಮಜ್ಜಿಗೆ.
ಮಾರುಕಟ್ಟೆಗೆ ಬಂದ ನಂದಿನಿ ರಾಗಿ ಅಂಬಲಿ, ಪ್ರೋ ಬಯಾಟಿಕ್‌ ಮಜ್ಜಿಗೆ.

ಮೈಸೂರು: ಕರ್ನಾಟಕದ ರೈತರು ಉತ್ಪಾದಿಸುವ ಹಾಲಿನಿಂದ ಬಗೆಬಗೆಯ ನಂದಿನಿ ಉತ್ಪನ್ನಗಳನ್ನು ಉತ್ಪಾದಿಸಿ ಸಹಕಾರ ಕ್ಷೇತ್ರವನ್ನು ಗಟ್ಟಿಗೊಳಿಸಿರುವ ಕರ್ನಾಟಕ ಹಾಲು ಮಹಾ ಒಕ್ಕೂಟ( KMF) ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ. ಒಕ್ಕೂಟದ ಭಾಗವಾಗಿ ಮೈಸೂರು ಹಾಲು ಉತ್ಪಾದಕರ ಒಕ್ಕೂಟ( Mymul) ಈ ಬಾರಿಯ ಬೇಸಿಗೆಗೆ ವಿಭಿನ್ನ ಹಾಗೂ ಆರೋಗ್ಯಪೂರ್ಣ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದು ರಾಗಿ ಅಂಬಲಿ ಹಾಗೂ ಪ್ರೊ ಬಯಾಟಿಕ್‌ ಮಜ್ಜಿಗೆ. ಬಿಡುಗಡೆಯಾದ ವಾರದೊಳಗೆ ಎರಡಕ್ಕೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಇವುಗಳನ್ನು ಮುಂದುವರೆಸುವ ಜತೆಗೆ ಉತ್ಪಾದನೆ ಪ್ರಮಾಣ ಅಧಿಕಗೊಳಿಸಲು ಮೈಮುಲ್‌ ಯೋಜನೆ ರೂಪಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ನಂದಿನಿ ಹಾಲು, ಮೈಸೂರು, ಮಜ್ಜಿಗೆ, ಬೆಣ್ಣೆ, ತುಪ್ಪ, ಐಸ್‌ಕ್ರೀಂಗಳ ಜತೆಗೆ ಹತ್ತಾರು ಬಗೆಬಗೆಯ ಉತ್ಪನ್ನಗಳನ್ನು ಹಾಲಿನಿಂದಲೇ ಉತ್ಪಾದಿಸುತ್ತಿದೆ. ಹಾಲಿನ ಉಪ ಉತ್ಪನ್ನಗಳನ್ನು ಬಳಸಿ ನಂದಿನಿ ಉತ್ಪನ್ನಗಳನ್ನು ತಯಾರಿಸುವುದರೊಂದಿಗೆ ಹತ್ತಿರವಾಗಿದೆ. ಬಹುತೇಕ ನಂದಿನಿಯ ಉತ್ಪನ್ನಗಳು ಕರ್ನಾಟಕದ ಎಲ್ಲಾ ಡೇರಿಗಳಲ್ಲೂ ಸಿಗುತ್ತದೆ. ಕೆಲವು ಡೇರಿಗಳು ಅಲ್ಲಿನ ವಾತಾರವಣಕ್ಕೆ ಪೂರಕವಾಗಿ ಉತ್ಪನ್ನಗಳನ್ನು ರೂಪಿಸುತ್ತಾ ಬಂದಿದೆ. ಅದರಲ್ಲಿ ಮೈಸೂರು ಒಕ್ಕೂಟದ ಮೈಸೂರು ಪಾಕ್‌, ಧಾರವಾಡ ಒಕ್ಕೂಟದ ಧಾರವಾಡ ಪೇಡೆ, ಬೆಂಗಳೂರಿನ ಐಸ್‌ ಕ್ರೀಂಗಳು ಪ್ರಮುಖವಾದವು.

ಮೈಸೂರು ಒಕ್ಕೂಟವು ಮೊದಲಿನಿಂದಲೂ ಕ್ರಿಯಾತ್ಮಕವಾಗಿಯೇ ಕೆಲಸ ಮಾಡುತ್ತಾ ಹಾಲಿನ ಉತ್ಪನ್ನಗಳನ್ನು ಜನರಿಗೆ ತಲುಪಿಸುವಲ್ಲಿ ನಿರತವಾಗಿದೆ. ಇದರ ಮುಂದುವರೆದ ಭಾಗವಾಗಿಯೇ ಈ ಬೇಸಿಗೆಗೆ ಎರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಯೋಜನೆ ರೂಪಿಸಿಕೊಂಡಿತ್ತು. ಅದರಂತೆ ಏಪ್ರಿಲ್‌ ಮೊದಲ ವಾರದಿಂದಲೇ ರಾಗಿ ಅಂಬಲಿ ಹಾಗೂ ಪ್ರೋ ಬಯಾಟಿಕ್‌ ಮಜ್ಜಿಗೆಯನ್ನು ಹೊರ ತಂದಿದೆ.

ರಾಗಿ ಅಂಬಲಿ ಮನೆಯಲ್ಲಿ ಸಾಮಾನ್ಯವಾಗಿ ತಯಾರಿಸುವ ಪೇಯ.ಬಹುತೇಕರು ರಾಗಿಯನ್ನು ಅಂಬಲಿ ರೂಪದಲ್ಲಿ ಮಾಡಿ ಕುಡಿಯುವುದುಂಟು. ಇದನ್ನೇ ಆರೋಗ್ಯಕರವಾಗಿ ರೂಪಿಸುವ ಉದ್ದೇಶದಿಂದ ಹುರಿದ ರಾಗಿ ಹಿಟ್ಟಿಗೆ ಮಜ್ಜಿಗೆ ಹಾಗೂ ಜೀರಿಗೆಯನ್ನು ಸೇರಿಸಿ ರುಚಿಕರವಾಗಿ ಅಂಬಲಿ ರೂಪಿಸಲಾಗಿದೆ. 200 ಎಂಎಲ್‌ ನ ಪ್ಯಾಕ್‌ ನ ದರ 10 ರೂ. ನಿಗದಿಪಡಿಸಲಾಗಿದೆ.

ನಾವೇ ರೈತರಿಂದ ರಾಗಿ ಖರೀದಿಸಿ ಅದನ್ನು ಪುಡಿ ಮಾಡಲು ಬೇಕಾದ ಯಂತ್ರಗಳನ್ನು ಹಾಕಿದ್ದೇವೆ. ಅಂಬಲಿ, ಮಜ್ಜಿಗೆ , ಜೀರಿಗೆ ಸೇರಿಸಿ ಪ್ಯಾಕೇಟ್‌ ಅನ್ನು ಸಿದ್ದಪಡಿಸುತ್ತೇವೆ. ಇದು ದೇಹದ ಉಷ್ಣಾಂಶ ನಿಯಂತ್ರಿಸಲು ಉತ್ತಮ ರಾಮಬಾಣ. ಸದ್ಯ ಒಂದು ಸಾವಿರ ಲೀಟರ್‌ ರಾಗಿ ಅಂಬಲಿ ತಯಾರಿಸುತ್ತಿದ್ದು, ಬೇಡಿಕೆಯಿದೆ. ಇದನ್ನು ನೋಡಿಕೊಂಡು ಮುಂದೆಯೂ ರಾಗಿ ಅಂಬಲಿ ಪ್ಯಾಕೇಟ್‌ ಅನ್ನು ದೊಡ್ಡದು ಮಾಡುವ ಯೋಚನೆಯಿದೆ. ಇತರೆ ರುಚಿಗಳಲ್ಲೂ ರಾಗಿ ಅಂಬಲಿ ಹೊರ ತರಲಾಗುತ್ತದೆ ಎನ್ನುವುದು ಮೈಸೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್‌ ಹೇಳುತ್ತಾರೆ.

ಇನ್ನು ಪ್ರೋಬಯಾಟಿಕ್‌ ಮಜ್ಜಿಗೆಯೂ ಮೈಸೂರು ಡೇರಿಯ ಹೊಸ ಉತ್ಪನ್ನವೇ. ಇದರಲ್ಲಿ ಔಷಧೀಯ ಗುಣ ಇರುವ ಕೆಲವು ಉತ್ಪನ್ನಗಳನ್ನು ಮಜ್ಜಿಗೆಯೊಂದಿಗೆ ಸೇರಿಸಲಾಗಿದೆ. ಇದು ರುಚಿಕರವೂ ಆಗಿದೆ. ಜತೆಗೆ ಕರುಳಿಗೆ ಸಂಬಂಧಿಸಿ ಏನದರೂ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುತ್ತದೆ. ಹೊಟ್ಟೆಯೊಳಗಿನ ಪಚನ ಕ್ರಿಯೆಯನ್ನು ಪ್ರೋ ಬಯಾಟಿಕ್‌ ಮಜ್ಜಿಗೆ ಮಾಡಲಿದೆ. ಇದರ ಬೆಲೆಯೂ 200 ಎಂಎಲ್‌ ನ ಪ್ಯಾಕ್‌ಗೆ 10 ರೂ.

ನಾವು ನಂದಿನಿಯ ಹಲವು ಉತ್ಪನ್ನಗಳನ್ನು ಮೊದಲಿನಿಂದಲೂ ಬಳಸುತ್ತಾ ಬರುತ್ತಿದ್ದೇವೆ. ಇದು ರೈತರಿಂದ ರೈತರಿಗಾಗಿ ಇರುವ ಸಹಕಾರ ಸಂಸ್ಥೆಯ ಉತ್ಪನ್ನಗಳು. ಚೆನ್ನಾಗಿಯೂ ಇವೆ. ಈಗ ರಾಗಿ ಅಂಬಲಿ, ಪ್ರೋ ಬಯಾಟಿಕ್‌ ಮಜ್ಜಿಗೆಯೂ ಚೆನ್ನಾಗಿವೆ. ಕುಟುಂಬದವರೆಲ್ಲರೂ ಇದನ್ನು ಬಳಸುತ್ತಿದ್ಧೇವೆ. ಬಹಳ ಚೆನ್ನಾಗಿದೆ. ಇದನ್ನು ರಾಜ್ಯದ ಎಲ್ಲಾ ಡೇರಿಗಳ ಮೂಲಕ ಉತ್ಪಾದಿಸಿ ಜನರಿಗೆ ತಲುಪಿಸಬಹುದು. ಕೊನೆಗೆ ನಮ್ಮ ಆರೋಗ್ಯವೇ ಮುಖ್ಯವಾಗಿರುವ ಇಂತಹ ಉತ್ನನ್ನ ನಮ್ಮನ್ನು ಕಾಪಾಡುತ್ತವೆ ಎಂದು ಮೈಸೂರಿನ ರಮೇಶ್‌ ಚಂದ್ರ ಸಂತಸದಿಂದಲೇ ವಿವರಿಸುತ್ತಾರೆ.

IPL_Entry_Point

ವಿಭಾಗ