ವಿಜಯದಶಮಿಗೆ ವಿಶೇಷ ಸಿಹಿತಿಂಡಿ ಮಾಡ್ಬೇಕು ಅಂತಿದ್ರೆ ಹಾಲಿನ ಪುಡಿ ಬರ್ಫಿ ಟ್ರೈ ಮಾಡಿ, 5 ನಿಮಿಷದಲ್ಲಿ ತಯಾರಾಗೋ ಇನ್‌ಸ್ಟಂಟ್ ರೆಸಿಪಿಯಿದು
Oct 11, 2024 07:29 PM IST
ಹಾಲಿನ ಪುಡಿ ಬರ್ಫಿ ಮಾಡುವ ವಿಧಾನ
- ವಿಜಯದಶಮಿಯ ದಿನ ಏನಾದ್ರೂ ಸ್ಪೆಷಲ್ ಸ್ವೀಟ್ ಮಾಡಬೇಕು ಅಂತಿದ್ದು, ಟೈಮ್ ಸಿಗಲಿಲ್ಲ ಅಂದ್ರೆ ಈ ಇನ್‌ಸ್ಟಂಟ್ ಹಾಲಿನ ಪುಡಿಯ ಬರ್ಫಿ ಮಾಡಿ. ಕೇವಲ 5 ನಿಮಿಷಗಳಲ್ಲಿ ತಯಾರಾಗುವ ಈ ರೆಸಿಪಿ ಮನೆಮಂದಿಗೆಲ್ಲಾ ಇಷ್ಟವಾಗುತ್ತೆ. ಬಾಯಲಿಟ್ಟರೆ ಕರಗುವ ಈ ತಿಂಡಿ ಮಾಡಲು ಏನೆಲ್ಲಾ ಬೇಕು, ಹೇಗೆ ಮಾಡೋದು ನೋಡಿ.
ನವರಾತ್ರಿ ಹಬ್ಬದ ಕೊನೆಯ ಘಟ್ಟದಲ್ಲಿದ್ದೇವೆ. ನಾಳೆ (ಅಕ್ಟೋಬರ್ 12) ವಿಜಯದಶಮಿ ಆಚರಣೆ ಇದೆ. ವಿಜಯದಶಮಿಗೂ ಭಾರತದಲ್ಲಿ ವಿಶೇಷ ಮಹತ್ವವಿದ್ದು ಸಂಭ್ರಮದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ವಿಶೇಷ ತಿನಿಸುಗಳನ್ನು ಮಾಡಿ ದೇವಿಗೆ ನೈವೇದ್ಯ ಮಾಡುವ ಪದ್ಧತಿ ಇದೆ. ಈ ದಿನಕ್ಕೆ ಏನಾದ್ರೂ ವಿಶೇಷವಾದ ಸ್ಪೀಟ್ ಮಾಡಬೇಕು ಅಂದುಕೊಂಡಿದ್ದು ಸಮಯ ಸಿಕ್ಕಿಲ್ಲ ಅಂದ್ರೆ ನೀವು ಈ ಇನ್‌ಸ್ಟಂಟ್ ಹಾಲಿನ ಪುಡಿಯ ಬರ್ಫಿ ಟ್ರೈ ಮಾಡಬಹುದು.
ಕೇವಲ 5 ನಿಮಿಷಗಳಲ್ಲಿ ಕೆಲವೇ ಸಾಮಗ್ರಿ ಬಳಸಿ ಮಾಡುವ ಈ ರೆಸಿಪಿ ಮಕ್ಕಳಿಗೆ ಮಾತ್ರವಲ್ಲ ಮನೆಯವರಿಗೆಲ್ಲಾ ಇಷ್ಟವಾಗುತ್ತೆ. ದೇವಿ ನೈವೇದ್ಯಕ್ಕೂ ಇದು ಹೇಳಿ ಮಾಡಿಸಿದ್ದು. ಹಾಗಾದರೆ ಇನ್‌ಸ್ಟಂಟ್ ಹಾಲಿನ ಪುಡಿ ತಯಾರಿಸುವ ವಿಧಾನ ಹೇಗೆ, ಅದನ್ನು ಮಾಡಲು ಏನೆಲ್ಲಾ ಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.
South Indian Food Recipes ಎನ್ನುವ ಫೇಸ್‌ಬುಕ್ ಪುಟದಲ್ಲಿ ಈ ಬರ್ಫಿ ರೆಸಿಪಿಯನ್ನು ಪೋಸ್ಟ್ ಮಾಡಿದ್ದು ಹಲವರು ಈ ರೆಸಿಪಿಯನ್ನು ಮೆಚ್ಚಿಕೊಂಡಿದ್ದಾರೆ.
ಹಾಲಿನ ಪುಡಿಯ ಬರ್ಫಿ
ಬೇಕಾಗುವ ಸಾಮಗ್ರಿಗಳು: ಸಕ್ಕರೆ – 1 ಕಪ್, ನೀರು – ಅರ್ಧ ಲೋಟ, ಹಾಲಿನ ಪುಡಿ – ಮುಕ್ಕಾಲು ಕಪ್, ತುಪ್ಪ – 2 ಚಮಚ, ಪಿಸ್ತಾ–ಬಾದಾಮಿ – 5 ರಿಂದ 6,
ಹಾಲಿನ ಪುಡಿಯ ಬರ್ಫಿ ಮಾಡುವ ವಿಧಾನ
ಮೊದಲು ದಪ್ಪ ತಳದ ಪಾತ್ರೆಯನ್ನು ಸ್ಟೌ ಮೇಲಿಟ್ಟು ಅದಕ್ಕೆ ಸಕ್ಕರೆ ಹಾಕಿ, ನಂತರ ನೀರು ಸೇರಿಸಿ. ಇದನ್ನು ಚೆನ್ನಾಗಿ ಕುದಿಸಿ. ಪಾಕದ ಹದ ಬರುವವರೆಗೂ ಕುದಿಸುತ್ತಾ, ಮಗುಚುತ್ತಾ ಇರಿ. ದಪ್ಪ ಪಾಕ ಬಂದ ಮೇಲೆ ಹಾಲಿನ ಪುಡಿ ಸೇರಿಸಿ, ಗಂಟಾಗದಂತೆ ಮಗುಚುತ್ತಾ ಇರಿ. ಜೊತೆಗೆ ಒಂದು ಚಮಚ ತುಪ್ಪ ಸೇರಿಸಿ. ಇದನ್ನು ದಪ್ಪವಾಗುವವರೆಗೂ ಚೆನ್ನಾಗಿ ಮಗುಚಿ. ನಂತರ ಮತ್ತೊಂದು ಚಮಚ ತುಪ್ಪ ಸೇರಿಸಿ ಮತ್ತೆ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ. ಚಿಕ್ಕದಾಗಿ ಹೆಚ್ಚಿಕೊಂಡ ಬಾದಾಮಿ ಹಾಗೂ ಪಿಸ್ತಾ ತುಂಡುಗಳನ್ನ ಸ್ವಲ್ಪ ಸೇರಿಸಿ ಮಿಶ್ರಣ ಮಾಡಿ. ಇದನ್ನು ಪಾತ್ರೆಯ ಮೇಲೆ ತುಪ್ಪ ಸವರಿ ಇಟ್ಟಿದ್ದ ಕವರ್ ಮೇಲೆ ಹಾಕಿ. ನೀಟಾಗಿ ಜೋಡಿಸಿ, ಮೇಲಿಂದ ಮತ್ತೆ ಬಾದಾಮಿ, ಪಿಸ್ತಾ ಹರಡಿ. ಸ್ವಲ್ಪ ಹೊತ್ತು ಬಿಟ್ಟು ನಿಮಗೆ ಬೇಕಾದ ಆಕಾರಕ್ಕೆ ಬರ್ಫಿಯನ್ನು ಕತ್ತರಿಸಿ.
ಇದು ತುಂಬಾ ಸುಲಭವಾಗಿ, ರುಚಿಯಾಗಿ ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದಾದ ರೆಸಿಪಿ. ಹಬ್ಬದ ದಿನಗಳಲ್ಲಿ ಡಿಢೀರ್ ಅಂತ ಮನೆಗೆ ಯಾರಾದರೂ ಬಂದಾಗ ಈ ಸಿಹಿ ತಿನಿಸನ್ನು ಮಾಡಿ, ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ.