logo
ಕನ್ನಡ ಸುದ್ದಿ  /  ಜೀವನಶೈಲಿ  /  Summer Holidays 2023: ಬೇಸಿಗೆ ಶಿಬಿರ; ಮಕ್ಕಳ ಬದುಕಿನ ಕಲಿಕೆಗೂ ರಜೆಯ ಮಜಕ್ಕೂ ಬೇಸಿಗೆ ಶಿಬಿರ ಉತ್ತಮ

Summer holidays 2023: ಬೇಸಿಗೆ ಶಿಬಿರ; ಮಕ್ಕಳ ಬದುಕಿನ ಕಲಿಕೆಗೂ ರಜೆಯ ಮಜಕ್ಕೂ ಬೇಸಿಗೆ ಶಿಬಿರ ಉತ್ತಮ

Reshma HT Kannada

Apr 05, 2023 11:55 AM IST

ಬೇಸಿಗೆ ಶಿಬಿರದಲ್ಲಿ ಮಕ್ಕಳ ಆನಂದ

    • ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಏಕೆ ಕಳುಹಿಸಬೇಕು, ಇದರಿಂದ ಅವರಿಗಾಗುವ ಉಪಯೋಗವೇನು, ಕಲಿಕಾ ದೃಷ್ಟಿಯಿಂದ ಬೇಸಿಗೆ ಶಿಬಿರ ಏಕೆ ಮುಖ್ಯ, ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಬೇಸಿಗೆ ಶಿಬಿರದಲ್ಲಿ ಮಕ್ಕಳ ಆನಂದ
ಬೇಸಿಗೆ ಶಿಬಿರದಲ್ಲಿ ಮಕ್ಕಳ ಆನಂದ

ಇಂದು, ನಾಳೆ ಎನ್ನುತ್ತಾ ಬೇಸಿಗೆ ರಜೆ ಬಂದೇ ಬಿಟ್ಟಿತು. ಇನ್ನೈದೇ ದಿನ. ಪರೀಕ್ಷೆ ಫಲಿತಾಂಶ ಘೋಷಣೆಯಾದ ಕ್ಷಣದಿಂದ ಮಕ್ಕಳಿಗೆ ರಜೆ ಆರಂಭವಾಗುತ್ತದೆ. ಕೆಲವರಿಗೆ ಈಗಾಗಲೇ ರಜೆ ಆರಂಭವಾಗಿದೆ. ಬೇಸಿಗೆ ರಜೆ ಎಂದಾಕ್ಷಣ ತಲೆಯಲ್ಲಿ ಮೂಡುವುದು ಸಮ್ಮರ್‌ ಕ್ಯಾಂಪ್‌ ಅಥವಾ ಬೇಸಿಗೆ ಶಿಬಿರ.

ಟ್ರೆಂಡಿಂಗ್​ ಸುದ್ದಿ

ಡೈಪರ್ ಹಾಕುವುದರಿಂದ ಹಿಡಿದು ಲಾಲಿ ಹಾಡುವವರೆಗೆ; ಪುರುಷರಿಗಾಗಿ ಆರಂಭವಾಗಿದೆ ಅಪ್ಪಂದಿರ ಶಾಲೆ, ಮಗು ಬೇಕೆಂಬ ಆಸೆಯಿದ್ದವರು ಓದಲೇಬೇಕಾದ ಸುದ್ದಿ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಮಕ್ಕಳಲ್ಲಿನ ಸೃಜನಶೀಲತೆ, ಕೌಶಲ ಹಾಗೂ ಕಲಿಕಾ ಮನೋಭಾವ ಹೆಚ್ಚಿಸಲು ಬೇಸಿಗೆಯ ಶಿಬಿರ ಅವಶ್ಯ ಎಂಬುದು ಹಲವರ ಅಭಿಪ್ರಾಯ. ಬೇಸಿಗೆ ಶಿಬಿರ ಹಣ ಗಳಿಸುವವರಿಗೆ ಒಂದು ವೇದಿಕೆ ಹೊರತು ಇದರಿಂದ ಮಕ್ಕಳಿಗೆ ಉಪಯೋಗವಿಲ್ಲ, ಬೇಸಿಗೆ ಶಿಬಿರದಲ್ಲಿ ಕಲಿಸುವುದನ್ನು ಪೋಷಕರು ಮನೆಯಲ್ಲೇ ಕಲಿಸಬಹುದು ಎಂಬುದು ಕೆಲವರ ವಾದ. ಬೇಸಿಗೆ ಶಿಬಿರ ಬೇಕೋ, ಬೇಡವೋ ಎಂಬ ಜಿಜ್ಞಾಸೆಯ ನಡುವೆಯೂ ಬೇಸಿಗೆ ಶಿಬಿರವನ್ನು ಬೆಂಬಲಿಸುವ ಪೋಷಕರೇ ನಮ್ಮ ನಡುವೆ ಹೆಚ್ಚಿದ್ದಾರೆ.

ಹಾಗಾದರೆ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವುದು ಏಕೆ, ಇದರಿಂದ ಅವರಿಗೆ ಏನು ಉಪಯೋಗ, ಕಲಿಕಾ ದೃಷ್ಟಿಯಿಂದ ಬೇಸಿಗೆ ಶಿಬಿರದಿಂದಾಗುವ ಉಪಯೋಗಗಳೇನು, ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಜೀವನ ಕೌಶಲ ಅಭಿವೃದ್ಧಿ

ಬೇಸಿಗೆ ಶಿಬಿರದಲ್ಲಿ ಮಕ್ಕಳು ಹಲವು ರೀತಿಯ ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಕ್ರೀಡೆ ಹಾಗೂ ಕೌಶಲ ತರಬೇತಿಯಲ್ಲಿ ಮಕ್ಕಳು ಗುಂಪಿನಲ್ಲಿ ಭಾಗವಹಿಸುವುದರಿಂದ ಗುಂಪಿನಲ್ಲಿ ಕೆಲಸ ಮಾಡುವುದು ಹೇಗೆ, ಗುಂಪಿನ ನಿರ್ವಹಣೆ, ಬೇರೆ ಮಕ್ಕಳೊಂದಿಗೆ ಸಂವಹನ ನಡೆಸುವ ರೀತಿ, ಸಮಸ್ಯೆ ಬಗೆಹರಿಸಿಕೊಳ್ಳುವ ಬಗೆಯನ್ನು ಕಲಿಯುತ್ತಾರೆ. ಇದರೊಂದಿಗೆ ನಾಯಕತ್ವ ಗುಣ, ತಂಡಕ್ಕೆ ಮಾರ್ಗದರ್ಶನ ನೀಡುವ ಕೌಶಲವೂ ಅವರಲ್ಲಿ ಬೆಳೆಯುತ್ತದೆ. ಬೇಸಿಗೆ ಶಿಬಿರದಲ್ಲಿ ಮಕ್ಕಳು ಉತ್ತಮ ಸಂವಹನ ಕೌಶಲವನ್ನು ರೂಢಿಸಿಕೊಳ್ಳುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ಗುಣವು ಅವರಲ್ಲಿ ವೃದ್ಧಿಸುತ್ತದೆ. ಈ ಎಲ್ಲಾ ಗುಣ, ಕೌಶಲಗಳು ಅವರ ಜೀವನದ ಪ್ರತಿಹಂತದಲ್ಲೂ ನೆರವಾಗುವುದರಲ್ಲಿ ಅನುಮಾನವಿಲ್ಲ.

ಮನರಂಜನೆಗೆ ಒಂದು ತಾಣ

ವಿವಿಧ ಬಗೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು, ಆಟವಾಡಲು, ಮೋಜು-ಮಸ್ತಿ ಮಾಡುವ ಸಲುವಾಗಿ ಮಕ್ಕಳು ರಜೆಗಾಗಿ ಕಾಯುತ್ತಿರುತ್ತಾರೆ. ಆದರೆ ಮನೆಯಲ್ಲಿ ಮಕ್ಕಳಿಗೆ ಇದಕ್ಕೆ ಅವಕಾಶವಾಗದೇ ಇರಬಹುದು. ಅಂತಹ ಮಕ್ಕಳಿಗೆ ಬೇಸಿಗೆ ಶಿಬಿರ ಉತ್ತಮ ಮನೋರಂಜನೆ ನೀಡುವುದರಲ್ಲಿ ಅನುಮಾನವಿಲ್ಲ. ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಇಷ್ಟವಾಗುವ ಚಟುವಟಿಕೆಗಳು ಹೆಚ್ಚಿರುವುದರಿಂದ ಅವರಲ್ಲಿ ಖುಷಿ ಹೆಚ್ಚುತ್ತದೆ.

ಸ್ವತಂತ್ರ ಮನೋಭಾವ ಬೆಳೆಯಲು

ಬೇಸಿಗೆ ಶಿಬಿರದಲ್ಲಿ ಮಕ್ಕಳು ಪೋಷಕರಿಂದ ದೂರವಿರುತ್ತಾರೆ. ಈ ಸ್ವತಂತ್ರ ಸಮಯವು ಮಕ್ಕಳಲ್ಲಿ ಗುರುತಿನ ಪ್ರಜ್ಞೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಮಕ್ಕಳು ತಮ್ಮ ಆಸಕ್ತಿಗಳನ್ನು ಅನ್ವೇಷಿಸುವಾಗ ಮತ್ತು ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಕಂಡುಕೊಳ್ಳುವುದರಿಂದ ಹೆಚ್ಚು ಸ್ವಾವಲಂಬಿಯಾಗುವುದನ್ನು ಕಲಿಯುತ್ತಾರೆ. ತಾವು ಮಾಡುವ ಕೆಲಸಗಳಲ್ಲಿ ಪೋಷಕರು ಅಥವಾ ಶಿಕ್ಷಕರ ಮೇಲೆ ಅವಲಂಬಿತವಾಗುವುದಕ್ಕಿಂತ ತಮ್ಮ ಆಂತರಿಕ ಧ್ವನಿ ಏನು ಹೇಳುತ್ತದೆ ಅದನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಬೇಸಿಗೆ ಶಿಬಿರ ಮಕ್ಕಳಲ್ಲಿ ಸ್ವಾಭಿಮಾನವನ್ನು ಹೆಚ್ಚಿಸಲು ಸಹಾಯ ಮಾಡಬಹುದು. ಸ್ವತಂತ್ರವಾಗಿ ಇರುವುದನ್ನು ಕಲಿಯುವ ಮಗು ಜವಾಬ್ದಾರಿಯನ್ನು ಕಲಿಯುತ್ತದೆ, ಅನ್ವೇಷಣೆಗೆ ತೆರೆದುಕೊಳ್ಳುತ್ತದೆ, ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುರಕ್ಷಿತ ವಾತಾವರಣವನ್ನು ನಿರ್ಮಿಸುತ್ತದೆ.

ತಂತ್ರಜ್ಞಾನದಿಂದ ದೂರ ಉಳಿಯಲು

ಇತ್ತೀಚಿನ ಮಕ್ಕಳ ದಿನಚರಿ ಮೊಬೈಲ್‌, ಕಂಪ್ಯೂಟರ್‌ನಲ್ಲೇ ಕಳೆದು ಹೋಗುತ್ತದೆ. ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಅತಿಯಾದ ಮೊಬೈಲ್‌ ಬಳಕೆಯಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಎದುರಾಗಬಹುದು. ಆ ಕಾರಣಕ್ಕೆ ಬೇಸಿಗೆ ಶಿಬಿರ ಉತ್ತಮ, ಇಲ್ಲಿ ಮಕ್ಕಳಿಗೆ ಮೊಬೈಲ್‌ ಬಳಕೆಯನ್ನು ನಿಷೇದಿಸಿರುತ್ತಾರೆ. ಅಲ್ಲದೆ ಇಲ್ಲಿ ತಂತ್ರಜ್ಞಾನಕ್ಕಿಂತ ಸಾಂಪ್ರದಾಯಿಕ ಕಲಿಕೆಯ ಪ್ರಮಾಣ ಹೆಚ್ಚಿರುತ್ತದೆ.

ಹೊಸ ಆಸಕ್ತಿಗೆ ತೆರೆದುಕೊಳ್ಳಲು

ಬೇಸಿಗೆ ಶಿಬಿರದಲ್ಲಿ ಮಕ್ಕಳು ಹೊಸ ಆಸಕ್ತಿಗೆ ತೆರೆದುಕೊಳ್ಳಲು ಸಾಧ್ಯ. ಕುಂಬಾರಿಕೆ, ತೋಟಗಾರಿಕೆ, ಅಡುಗೆ ಮಾಡುವುದು, ಕಲೆ ಇಂತಹ ಕಾರ್ಯಗಾರಗಳು ಬೇಸಿಗೆ ಶಿಬಿರದ ಭಾಗವಾಗಿರುವ ಕಾರಣ ಮಕ್ಕಳು ಅದರಲ್ಲಿ ತೊಡಗಿಕೊಳ್ಳಬಹುದು. ಜೊತೆಗೆ ತಮ್ಮ ಆಸಕ್ತಿಯ ಕ್ಷೇತ್ರವನ್ನು ಕಂಡುಕೊಳ್ಳಲು ಸಾಧ್ಯ.

ಆತ್ಮವಿಶ್ವಾಸ ಬೆಳೆಯಲು

ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಹೊಸ ಜನರನ್ನು ಭೇಟಿಯಾದಾಗ ಅವರು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಲು ಬೇಸಿಗೆ ಶಿಬಿರ ಸಹಾಯ ಮಾಡುತ್ತದೆ.

ಹೊಸ ಸ್ನೇಹಿತರ ಸಂಪಾದನೆ

ಬೇಸಿಗೆ ಶಿಬಿರದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ಹಿನ್ನೆಲೆಯಿಂದ ಬಂದ ಮಕ್ಕಳಿರುತ್ತಾರೆ. ಇದರಿಂದ ಅವರು ವಿವಿಧ ರೀತಿಯ ಜನರ ಬಗ್ಗೆ, ಅವರ ಆಚಾರ-ವಿಚಾರ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅವರು ಎಂದೂ ಭೇಟಿಯಾಗದ ಮಕ್ಕಳ ಜೊತೆ ಸ್ನೇಹ ಬೆಳೆಸಲು ಕೂಡ ಬೇಸಿಗೆ ಶಿಬಿರ ಸಹಕಾರಿ.

ಪ್ರಕೃತಿಯೊಂದಿಗೆ ಬೆರೆಯುವ ಗುಣ

ಬೇಸಿಗೆ ಶಿಬಿರದಲ್ಲಿನ ಮತ್ತೊಂದು ಬಹುಮುಖ್ಯ ಅನುಕೂಲ ಎಂದರೆ ಪ್ರಕೃತಿಯೊಂದಿಗೆ ಬೆರೆಯುವುದು. ಸದಾ ತಂತ್ರಜ್ಞಾನದ ನಡುವೆ ಬೆಳೆಯುವ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಪ್ರಕೃತಿಯ ಮಧ್ಯೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ಪ್ರಕೃತಿಯು ಎಲ್ಲಾ ಇಂದ್ರಿಯಗಳನ್ನು ಪ್ರಚೋದಿಸುತ್ತದೆ. ಇದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಅಗತ್ಯವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು