logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bharat Jodo Yatra: ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಯಾರು ಬರುತ್ತಾರೆ? ಬರದಿರುವವರ ಸಂಖ್ಯೆ ಎಷ್ಟು?

Bharat Jodo Yatra: ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಯಾರು ಬರುತ್ತಾರೆ? ಬರದಿರುವವರ ಸಂಖ್ಯೆ ಎಷ್ಟು?

HT Kannada Desk HT Kannada

Jan 29, 2023 10:16 AM IST

google News

ಭಾರತ್‌ ಜೋಡೋ ಯಾತ್ರೆ (ಸಂಗ್ರಹ ಚಿತ್ರ)

    • ನಾಳೆ(ಜ.30-ಸೋಮವಾರ) ಶ್ರೀನಗರದಲ್ಲಿ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಭಾಗವಹಿಸುವಂತೆ 21 ಸಮಾನ ಮನಸ್ಕ ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್‌ ಪತ್ರ ಮುಖೇನ ಮನವಿ ಮಾಡಿದೆ. ಆದರೆ ಕೇವಲ 12 ವಿಪಕ್ಷಗಳು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಉಳಿದ 9 ಪಕ್ಷಗಳು ಭದ್ರತೆಯ ಕಾರಣಕ್ಕೆ ಸಮಾರಂಭದಲ್ಲಿ ಭಾಗಿಯಾಗುವುದು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿವೆ.
ಭಾರತ್‌ ಜೋಡೋ ಯಾತ್ರೆ (ಸಂಗ್ರಹ ಚಿತ್ರ)
ಭಾರತ್‌ ಜೋಡೋ ಯಾತ್ರೆ (ಸಂಗ್ರಹ ಚಿತ್ರ) (ANI)

ಶ್ರೀನಗರ: ನಾಳೆ(ಜ.30-ಸೋಮವಾರ) ಶ್ರೀನಗರದಲ್ಲಿ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಭಾಗವಹಿಸುವಂತೆ 21 ಸಮಾನ ಮನಸ್ಕ ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್‌ ಪತ್ರ ಮುಖೇನ ಮನವಿ ಮಾಡಿದೆ. ಆದರೆ ಕೇವಲ 12 ವಿಪಕ್ಷಗಳು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಉಳಿದ 9 ಪಕ್ಷಗಳು ಭದ್ರತೆಯ ಕಾರಣಕ್ಕೆ ಸಮಾರಂಭದಲ್ಲಿ ಭಾಗಿಯಾಗುವುದು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿವೆ.

ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಉದ್ಧವ್ ಠಾಕ್ರೆ ಅವರ ಶಿವಸೇನೆ, ಸಿಪಿಐ(ಎಂ), ಸಿ.ಪಿ.ಐ. , ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕೇರಳ ಕಾಂಗ್ರೆಸ್, ಫಾರೂಕ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಮುಫ್ತಿ ಅವರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಮತ್ತು ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷಗಳು, ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಶ್ರೀನಗರದಲ್ಲಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ತೆಲಗು ದೇಶಂ ಪಕ್ಷ ಸೇರಿದಂತೆ ಒಟ್ಟು 9 ವಿಪಕ್ಷಗಳು ಭಾರತ್‌ ಜೋಡೋ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗದಿರುವ ನಿರ್ಣಯ ಕೈಗೊಂಡಿವೆ. ಈ ಪೈಕಿ ಕೆಲವು ಪಕ್ಷಗಳು ತಮ್ಮ ಗೈರು ಹಾಜರಿಗೆ ಭದ್ರತೆಯ ಕಾರಣ ನೀಡಿರುವುದು ಗಮನ ಸೆಳೆದಿದೆ.

ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸೂಕ್ತ ಭದ್ರತೆ ಕಲ್ಪಿಸುವಂತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಯಾತ್ರೆಯಲ್ಲಿ ಭದ್ರತಾ ಲೋಪ ಆರೋಪ ಕೇಳಿಬಂದ ಬೆನ್ನಲ್ಲೇ, ಮಲ್ಲಿಕಾರ್ಜುನ ಖರ್ಗೆ ಅವರು ಅಮಿತ್‌ ಶಾ ಅವರಿಗೆ ಪತ್ರ ಬರೆದಿರುವುದು ಗಮನ ಸೆಳೆದಿದೆ.

"ಮುಂದಿನ ಎರಡು ದಿನಗಳಲ್ಲಿ ಯಾತ್ರೆ ಸಾಗುವ ಮಾರ್ಗ ಮತ್ತು ಜನವರಿ 30ರಂದು ಶ್ರೀನಗರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಸೂಕ್ತ ಭದ್ರತೆ ಒದಗಿಸುವ ನಿರೀಕ್ಷೆ ನಮಗಿದೆ. ಈ ಸಮಾರಂಭದಲ್ಲಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಇತರ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸುತ್ತಿದ್ದಾರೆ.." ಎಂದು ಅಮಿತ್‌ ಶಾ ಅವರಿಗೆ ಬರೆದಿರುವ ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಉಲ್ಲೇಖಿಸಿದ್ದಾರೆ.

ಯಾತ್ರೆಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಪಡೆ, ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ ಎಂದು ಹೇಳಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ನಿನ್ನೆ(ಜ.28-ಶನಿವಾರ)ಯೇ ಸಹೋದರ ರಾಹುಲ್ ಗಾಂಧಿಯ ಅವರೊಂದಿಗೆ ಭಾರತ್‌ ಜೋಡೋ ಯಾತ್ರೆಯನ್ನು ಸೇರಿಕೊಂಡಿದ್ದಾರೆ. ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಅವಂತಿಪೋರಾದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಕನ್ಯಾಕುಮಾರಿಯಿಂದ ಕಳೆದ ವರ್ಷದ ಸೆಪ್ಟೆಂಬರ್ 7 ರಂದು ಪ್ರಾರಂಭವಾದ ಭಾರತ್‌ ಜೋಡೋ ಯಾತ್ರೆಯು, ಸುಮಾರು 145 ದಿನಗಳಲ್ಲಿ 3,970 ಕಿ.ಮೀ. ಕ್ರಮಿಸಿದೆ. ಯಾತ್ರೆಯು ಒಟ್ಟು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿದ್ದು, ಶ್ರೀನಗರದಲ್ಲಿ ಜನವರಿ 30 ರಂದು ಭವ್ಯ ಸಮಾರಂಭದೊಂದಿಗೆ ಕೊನೆಗೊಳ್ಳಲಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ