Congress Meeting: ರಾಹುಲ್ ಗಾಂಧಿ ರಕ್ಷಣೆಗೆ ಕಾರ್ಯತಂತ್ರ: ಕಾಂಗ್ರೆಸ್ ತುರ್ತು ಸಭೆಯಲ್ಲಿ ಮೊಳಗಲಿದೆ ಒಗ್ಗಟ್ಟಿನ ಮಂತ್ರ
Mar 24, 2023 02:10 PM IST
ಸಂಸತ್ತಿಗೆ ಆಗಮಿಸಿದ ರಾಹುಲ್ ಗಾಂಧಿ
ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಸೂರತ್ ನ್ಯಾಯಾಲಯ, ಕಾಂಗ್ರೆಸ್ ಸಂಸದರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಂದು(ಮಾ.24-ಶುಕ್ರವಾರ) ಸಂಜೆ ತುರ್ತು ಸಭೆ ನಡೆಸಲಿದೆ.
ನವದೆಹಲಿ: ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಸೂರತ್ ನ್ಯಾಯಾಲಯ, ಕಾಂಗ್ರೆಸ್ ಸಂಸದರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರಾಹುಲ್ ಗಾಂಧಿ ಇದೀಗ ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಂದು(ಮಾ.24-ಶುಕ್ರವಾರ) ಸಂಜೆ ತುರ್ತು ಸಭೆ ನಡೆಸಲಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಯಲ್ಲಿ ತುರ್ತು ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಸ್ಟೀರಿಂಗ್ ಕಮಿಟಿ ಸದಸ್ಯರು, ಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು ಮತ್ತು ಪಕ್ಷದ ಇತರ ಘಟಕಗಳ ನಾಯಕರು ಭಾಗವಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖುದ್ದು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ, ಇಂದು ಲೋಕಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಸಂಸತ್ತಿಗೆ ಆಗಮಿಸಿದ್ದಾರೆ. ರಾಹುಲ್ ಅವರನ್ನು ಬೆಂಬಲಿಸಿ ವಿಜಯ್ ಚೌಕ್‌ನಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಉದ್ದೇಶಿಸಿದೆ. ಅಲ್ಲದೇ ಈ ವಿಚಾರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು, ಅನ್ಯ ಪಕ್ಷಗಳ ಸದಸ್ಯರನ್ನೊಳಗೊಂಡ ನಿಯೋಗವನ್ನು ಕೊಂಡೊಯ್ಯಲು ಕಾಂಗ್ರೆಸ್ ತೀರ್ಮಾನಿಸಿದೆ.
ಎರಡನೇ ಹಂತದ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ. ಮೋದಿ ಸರ್ಕಾರದ ವಿರುದ್ಧ ಸರ್ವಾಧಿಕಾರಿ ವರ್ತನೆಯ ಆರೋಪ ಹೊರಿಸುತ್ತಿರುವ ಕಾಂಗ್ರೆಸ್, ರಾಹುಲ್ ಅವರ ಧ್ವನಿ ಅಡಗಿಸಲು ಅವರನ್ನು ಜೈಲಿಗೆ ಹಾಕುವ ಹುನ್ನಾರ ನಡೆಸಿದೆ ಎಂದು ಸಂಸತ್ತಿನಲ್ಲಿ ಘರ್ಜಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಿನ್ನೆ(ಮಾ.23-ಗುರುವಾರ) ನಡೆದ ಸಭೆಯಲ್ಲಿ, ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ನಿಲ್ಲುವ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ವಿಜಯ್ ಚೌಕ್‌ನಲ್ಲಿ ನಡೆಸುವ ಪ್ರತಿಭಟನೆಯ ಸ್ವರೂಪದ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
"ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು, ಬಿಜೆಪಿಯು ವಿಪಕ್ಷ ನಾಯಕರನ್ನು ಗುರಿಯಾಗಿಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಕಾಂಗ್ರೆಸ್ ಯಾವಾಗಲೂ ಒಬಿಸಿ, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಪರವಾಗಿ ನಿಂತಿದೆ. ರಾಹುಲ್ ಗಾಂಧಿ ಯಾವುದೇ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಲು ಸಾಧ್ಯವಿಲ್ಲ.." ಎಂದು ಖರ್ಗೆ ಹೇಳಿದ್ದಾರೆ.
ಗುರುವಾರ ಸೂರತ್ ಜಿಲ್ಲಾ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ, ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವರ ಶಿಕ್ಷೆಯನ್ನು 30 ದಿನಗಳವರೆಗೆ ಕಾಯ್ದಿರಿಸಿರುವ ನ್ಯಾಯಾಲು, ರಾಹುಲ್ ಗಾಂಧಿ ಅವರಿಗೆ ಜಾಮೀನು ಮಂಜೂರು ಮಾಡಿದೆ.
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಪನಾಮದ ಬಗ್ಗೆ ಲಘುವಾಗಿ ಮಾತನಾಡಿದ್ದರು. ಎಲ್ಲಾ ಕಳ್ಳರ ಹೆಸರು ಮೋದಿ ಎಂದಿರುವುದು ಆಶ್ಚರ್ಯ ತರಿಸಿದೆ ಎಂದು ರಾಹುಲ್ ಹೇಳಿದ್ದರು.
ಏತನ್ಮಧ್ಯೆ ಕಾನೂನು ತಜ್ಞರ ಪ್ರಕಾರ, ಸೂರತ್ ಜಿಲ್ಲಾ ನ್ಯಾಯಾಲಯದ ತೀರ್ಪಿನ ಪರಿಣಾಮವಾಗಿ, ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು. 2013ರ ಸುಪ್ರೀಂಕೋರ್ಟ್ ತೀರ್ಪಿನನ್ವಯ ಯಾವುದೇ ಸಂಸದರು ಅಥವಾ ಶಾಸಕರು ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರೆ, ಅವರನ್ನು ಅನರ್ಹಗೊಳಿಸಬಹುದಾಗಿದೆ.
ಜಿಲ್ಲಾ ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಜ್ಯಸಭಾ ಸಂಸದ ಜೈರಾಮ್ ರಮೇಶ್, ಸತ್ಯವನ್ನು ಮಾತನಾಡಿದ್ದಕ್ಕಾಗಿ ಮತ್ತು ಸರ್ವಾಧಿಕಾರಿ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಹುಲ್ ಗಾಂಧಿಗೆ ಶಿಕ್ಷೆಯಾಗುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದ ಕಾನೂನು ರಾಹುಲ್ ಗಾಂಧಿ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವನ್ನು ನೀಡುತ್ತದೆ. ರಾಹುಲ್ ಗಾಂಧಿ ತಮ್ಮ ಈ ಹಕ್ಕನ್ನು ಚಲಾಯಿಸಲಿದ್ದು, ಪ್ರಜಾಪ್ರಭುತ್ವದ ಅವನತಿ ಬಯಸಿರುವ ಸರ್ವಾಧಿಕಾರಿಯನ್ನು ಯಾವುದೇ ಅಂಜಿಕೆ ಇಲ್ಲದೇ ಎದುರಿಸಲಿದ್ದಾರೆ ಎಂದು ಜೈರಾಮ್ ರಮೇಶ್ ತಮ್ಮ ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.
ವಿಭಾಗ