logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಿರುಪತಿ ಲಡ್ಡು ವಿವಾದ: ಕಲಬೆರಕೆ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ ಸಿಬಿಐ

ತಿರುಪತಿ ಲಡ್ಡು ವಿವಾದ: ಕಲಬೆರಕೆ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ ಸಿಬಿಐ

Jayaraj HT Kannada

Nov 05, 2024 07:36 PM IST

google News

ತಿರುಪತಿ ಲಡ್ಡು ಕಲಬೆರಕೆ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

    • Tirupati Laddu row: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಹೆಚ್ಚಿನ ತನಿಖೆಗಾಗಿ ಸಿಬಿಐ ವಿಶೇಷ ತನಿಖಾ ತಂಡ ರಚಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಈ ತಂಡ ರಚನೆಯಾಗಿದೆ. ಈ ಸ್ವತಂತ್ರ ತಂಡದಲ್ಲಿ ಐವರು ಅಧಿಕಾರಿಗಳು ಇರಲಿದ್ದಾರೆ.
ತಿರುಪತಿ ಲಡ್ಡು ಕಲಬೆರಕೆ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.
ತಿರುಪತಿ ಲಡ್ಡು ಕಲಬೆರಕೆ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. (PTI)

ತಿರುಪತಿ ಲಡ್ಡು ವಿವಾದ ಸಂಬಂಧ ಸಿಬಿಐ ಮಹತ್ವದ ಕ್ರಮ ಕೈಗೊಂಡಿದೆ. ದೇವಸ್ಥಾನದ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT -Special Investigation Team)ವನ್ನು ಸಿಬಿಐ ರಚಿಸಿದೆ. ಈ ಸ್ವತಂತ್ರ ತಂಡವು ಐದು ಅಧಿಕಾರಿಗಳನ್ನು ಒಳಗೊಂಡಿದೆ. ಇವರಲ್ಲಿ ಇಬ್ಬರು ಕೇಂದ್ರ ಏಜೆನ್ಸಿಯವರಾದರೆ, ಇಬ್ಬರು ಆಂಧ್ರಪ್ರದೇಶ ಪೊಲೀಸರು. ಇನ್ನೊಬ್ಬರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಯಾಗಿದ್ದಾರೆ.

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಹೆಚ್ಚಿನ ತನಿಖೆಗಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ತಂಡ ರಚಿಸಿದೆ. ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕರಾದ ದ್ವಾರಕಾ ತಿರುಮಲ ರಾವ್ ಅವರ ಪ್ರಕಾರ, ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿಗಳಾದ ಸರ್ವಶ್ರೇಷ್ಠ ತ್ರಿಪಾಠಿ ಮತ್ತು ಗೋಪಿನಾಥ್ ಜೆಟ್ಟಿ ಅವರನ್ನು ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡಕ್ಕೆ ನಾಮನಿರ್ದೇಶನ ಮಾಡಿದೆ.

“ನಾವು ಹೆಸರುಗಳನ್ನು ಕಳುಹಿಸಿದ ಬಳಿಕ, ಸಿಬಿಐ ನಿರ್ದೇಶಕರು ಐದು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ನಾವು ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರವೇ ಆ ಎರಡು ಹೆಸರುಗಳನ್ನು (ತ್ರಿಪಾಠಿ ಮತ್ತು ಗೋಪಿನಾಥ್ ಜೆಟ್ಟಿ) ಸಿಬಿಐಗೆ ಕಳುಹಿಸಿದ್ದೇವೆ” ಎಂದು ಅಧಿಕಾರಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ತ್ರಿಪಾಠಿ ಮತ್ತು ಗೋಪಿನಾಥ್ ಜೆಟ್ಟಿ ಈ ಹಿಂದೆ ಆರೋಪಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ರಚಿಸಿದ ಎಸ್ಐಟಿಯ ಭಾಗವಾಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಆದೇಶದ ನಂತರ ಆ ಸಮಿತಿ ನಿಷ್ಕ್ರಿಯಗೊಂಡಿತ್ತು.

ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ರಾಜ್ಯ ಪೊಲೀಸರು ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಎಸ್ಐಟಿ ತನ್ನ ತನಿಖೆಯನ್ನು ಪ್ರಾರಂಭಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ಎಸ್ಐಟಿ ತನಿಖೆ

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮತ್ತು ವೈಎಸ್ಆರ್‌ಸಿಪಿ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಅವರ ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಅಕ್ಟೋಬರ್ 4ರಂದು ಆದೇಶ ನೀಡಿತ್ತು. ಅದರಂತೆ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂಬ ಆರೋಪದ ಬಗ್ಗೆ ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ಎಸ್ಐಟಿ ತನಿಖೆ ನಡೆಸುತ್ತದೆ ಎಂದು ಹೇಳಿತ್ತು.

ವೈಎಸ್ ಜಗನ್ ಮೋಹನ್ ರೆಡ್ಡಿ ಆರೋಪ

ಆಂಧ್ರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಆರೋಪಿಸಿದ್ದರು. ಆ ಬಳಿಕ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ