ರೈಲ್ವೆ ಪ್ರಯಾಣಿಕರ ಗಮನಕ್ಕೆ, ರೈಲು ಏರುವ ಮುನ್ನ ಲಗೇಜ್ ಮಿತಿ ಚೆಕ್ ಮಾಡಿಕೊಳ್ಳಿ, ಮಿತಿ ಮೀರಿದರೆ ದಂಡ ಪಾವತಿಸಬೇಕಾದೀತು
ರೈಲ್ವೆ ಪ್ರಯಾಣಿಕರ ಗಮನಕ್ಕೆ: ರೈಲು ಪ್ರಯಾಣದ ವೇಳೆ ಇನ್ನು ಪ್ರಯಾಣಿಕರು ತಾವು ರೈಲು ಏರುವ ಮುನ್ನ ಲಗೇಜ್ ಮಿತಿ ಚೆಕ್ ಮಾಡಿಕೊಳ್ಳಬೇಕು. ಒಂದೊಮ್ಮೆ ಪ್ರಯಾಣಿಕರ ಲಗೇಜು ನಿಗದಿತ ಮಿತಿ ಮೀರಿದರೆ ದಂಡ ಪಾವತಿಸಬೇಕಾದೀತು ಎಂದು ಪಶ್ಚಿಮ ರೈಲ್ವೆ ಎಚ್ಚರಿಸಿದೆ. ಇದರ ವಿವರ ಇಲ್ಲಿದೆ.
ಮುಂಬಯಿ: ರೈಲುಗಳಲ್ಲಿ ಪ್ರಯಾಣಿಸುವಾಗ ಇನ್ನು ಲಗೇಜ್ ಮಿತಿಯನ್ನು ಪ್ರಯಾಣಿಕರು ಮರೆಯದೇ ಗಮನಿಸಬೇಕಾಗುತ್ತದೆ. ಭಾರತೀಯ ರೈಲ್ವೆ ವಿಶೇಷವಾಗಿ ಪಶ್ಚಿಮ ರೈಲ್ವೆಯು ರೈಲು ಪ್ರಯಾಣಿಕರ ಲಗೇಜು ಮಿತಿಯ ನಿಯಮ ಬಿಗಿಗೊಳಿಸಿದೆ. ಇದು ರೈಲ್ವೆ ಪ್ರಯಾಣಿಕರ ಗಮನಕ್ಕೆ ಬರಬೇಕಾದ ಮಹತ್ವದ ಅಂಶವಾಗಿದೆ. ಬಾಂದ್ರಾ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಘಟನೆ ನಡೆದ ದಿನಗಳ ನಂತರ ಪ್ರಯಾಣಿಕರ ಲಗೇಜ್ ಮಿತಿಯ ನಿಯಮ ಮೀರಿದರೆ ದಂಡ ವಿಧಿಸಲಾಗುವುದು ಎಂದು ಪಶ್ಚಿಮ ರೈಲ್ವೆ ಎಚ್ಚರಿಸಿದೆ. ಮಿತಿ ಮೀರಿದ ಲಗೇಜುಗಳ ಕಾರಣ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕ ದಟ್ಟಣೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಂಡಿರುವುದಾಗಿ ಪಶ್ಚಿಮ ರೈಲ್ವೆ ಹೇಳಿಕೊಂಡಿದೆ.
100 ಸೆಮೀ x 100 ಸೆಮೀ x 70 ಸೆಮೀ ಗಾತ್ರದ ಲಗೇಜ್ ಉಚಿತ ಸಾಗಣೆ ಇಲ್ಲ
ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿರ್ದಿಷ್ಟ ಪ್ರಮಾಣದ ಲಗೇಜ್ ಅನ್ನು ಶುಲ್ಕರಹಿತವಾಗಿ ಸಾಗಿಸಬಹುದು. ಆದರೆ, ಸ್ಕೂಟರ್, ಬೈಸಿಕಲ್ ಮುಂತಾದವುಗಳನ್ನು ಶುಲ್ಕ ಪಾವತಿಸಿಯೇ ಕೊಂಡೊಯ್ಯಬೇಕು. 100 ಸೆಮೀ x 100 ಸೆಮೀ x 70 ಸೆಮೀ ಗಾತ್ರವನ್ನು ಮೀರಿದ ಸರಕುಗಳನ್ನು ಉಚಿತವಾಗಿ ಕೊಂಡೊಯ್ಯುವಂತೆ ಇಲ್ಲ ಎಂದು ಪಶ್ಚಿಮ ರೈಲ್ವೆ ಮಂಗಳವಾರ ಸ್ಪಷ್ಟಪಡಿಸಿದೆ. ಗಮನಿಸಬೇಕಾದ ಕೆಲವು ಅಂಶಗಳಿವು
1) ಪಶ್ಚಿಮ ರೈಲ್ವೆ ಎಲ್ಲ ಪ್ರಯಾಣಿಕರು ನಿಲ್ದಾಣಗಳಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಮತ್ತು ಸ್ಥಾಪಿತ ಲಗೇಜ್ ಮಿತಿಗಳಿಗೆ ಅನುಸಾರವಾಗಿ ಲಗೇಜ್‌ಗಳನ್ನು ಸಾಗಿಸಬಹುದು.
2) ರೈಲು ವೇಳಾಪಟ್ಟಿ ಗಮನಿಸಿಕೊಂಡು ರೈಲು ನಿಲ್ದಾಣ ಪ್ರವೇಶಿಸಬೇಕು. ಅಗತ್ಯಕ್ಕಿಂತ ಹೆಚ್ಚು ಹೊತ್ತು ರೈಲು ನಿಲ್ದಾಣಗಳಲ್ಲಿ ಇರಬಾರದು.
3) ಪ್ಲಾಟ್‌ಫಾರ್ಮ್‌ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ನಿಲ್ದಾಣದ ಆವರಣದೊಳಗೆ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಉಳಿದ ಪ್ರಯಾಣಿಕರು ಅನುಕೂಲ ಮಾಡಿಕೊಡಬೇಕು.
4) ಉಚಿತ ಲಗೇಜ್‌ನ ಗರಿಷ್ಠ ಮಿತಿಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಶ್ಚಿಮ ರೈಲ್ವೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.
5) ವಿವಿಧ ವರ್ಗದ ಅಂದರೆ ಬೋಗಿಯ ಪ್ರಯಾಣಕ್ಕೆ ಉಚಿತ ಲಗೇಜ್ ಮಿತಿ ಬೇರೆ ಬೇರೆ ಇದೆ. ಗರಿಷ್ಠ ಲಗೇಜ್ ಮಿತಿಯನ್ನು ಮೀರಿದರೆ ಆಯಾ ವರ್ಗದ ಪ್ರಯಾಣಕ್ಕೆ ಅನುಗುಣವಾಗಿ ಪ್ರಯಾಣಿಕರು ದಂಡ ಪಾವತಿಸಬೇಕು.
ಲಗೇಜ್ ಮಿತಿಯ ನಿಯಮವು ನವೆಂಬರ್ 8ರ ತನಕ ಜಾರಿಯಲ್ಲಿರುತ್ತದೆ. ಸುಗಮ ಸಂಚಾರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಕಟ್ಟುನಿಟ್ಟಾಗಿ ಈ ನಿಯಮ ಪಾಲನೆಗೆ ಮುಂದಾಗಿರುವುದಾಗಿ ಪಶ್ಚಿಮ ರೈಲ್ವೆ ವಿವರಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಪಾರ್ಸೆಲ್ ಬುಕಿಂಗ್‌ನಲ್ಲಿ ಗಮನಾರ್ಹ ಏರಿಕೆ
ಹಬ್ಬದ ಋತುವಿನಲ್ಲಿ, ವಿಶೇಷವಾಗಿ ಬಾಂದ್ರಾ ಟರ್ಮಿನಸ್, ವಾಪಿ, ವಲ್ಸಾದ್, ಉಧ್ನಾ ಮತ್ತು ಸೂರತ್‌ನ ಪಾರ್ಸೆಲ್ ಕಚೇರಿಗಳಲ್ಲಿ ಪಾರ್ಸೆಲ್ ಬುಕಿಂಗ್‌ನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಈ ಪಾರ್ಸೆಲ್‌ಗಳು ರೈಲ್ವೆ ಪ್ಲಾಟ್‌ಫಾರಂನಲ್ಲಿರುವ ಕಾರಣ ಪ್ರಯಾಣಿಕರಿಗೆ ಸಂಚರಿಸಲು ತೊಂದರೆ ಉಂಟಾಗಿದೆ. ಪ್ರಯಾಣಿಕರ ಸುರಕ್ಷೆಯನ್ನು ಗಮನದಲ್ಲಿಟ್ಟುಕೊಂಡು, ಸರಕು ಸಾಗಣೆ ರೈಲಿನ ಸಮಯಕ್ಕೆ ಸರಿಯಾಗಿ ಪಾರ್ಸೆಲ್‌ಗಳನ್ನು ಪ್ಲಾಟ್‌ಫಾರಂಗೆ ತರಬೇಕು. ಅದಕ್ಕೂ ಮೊದಲೇ ತರಬಾರದು. ಗಂಟೆಗಟ್ಟಲೆ ಅಲ್ಲಿ ಇರಿಸುವುದಕ್ಕೆ ಅವಕಾಶ ಇಲ್ಲ ಎಂದು ಪಶ್ಚಿಮ ರೈಲ್ವೆ ಎಚ್ಚರಿಸಿದೆ.
ಮುಂಬೈನ ಬಾಂದ್ರಾ ಟರ್ಮಿನಸ್‌ನಲ್ಲಿ ಭಾನುವಾರ, ಗೋರಖ್‌ಪುರಕ್ಕೆ ಹೋಗುವ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲಿಗೆ ಹತ್ತಲು ಭಾರಿ ನೂಕು ನುಗ್ಗಲು ಉಂಟಾಗಿತ್ತು. ಆ ಘಟನೆಯಲ್ಲಿ 10 ಜನರು ಗಾಯಗೊಂಡರು. ಪಶ್ಚಿಮ ರೈಲ್ವೆ ಈಗಾಗಲೇ ಆಯ್ದ ಪ್ರಮುಖ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟದ ಮೇಲೆ ತಾತ್ಕಾಲಿಕ ನಿರ್ಬಂಧಗಳನ್ನು ಜಾರಿಗೆ ತಂದಿದೆ, ಇದು ನವೆಂಬರ್ 8 ರವರೆಗೆ ಜಾರಿಯಲ್ಲಿರಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.