ತಿರುಪತಿ ಲಡ್ಡು ಪ್ರಸಾದದ ಜೊತೆಗೆ ಬಂತು ತಂಬಾಕು ಕವರ್; ವೈರಲ್ ಸುದ್ದಿ ನಿರಾಕರಿಸಿದ ಟಿಟಿಡಿ ಅಧಿಕಾರಿಗಳು
Sep 24, 2024 06:30 PM IST
ತಂಬಾಕು ಕವರ್ ಜೊತೆಗೆ ಇತ್ತು ಎನ್ನಲಾದ ತಿರುಪತಿ ಲಡ್ಡು ಪ್ರಸಾದ (ವೈರಲ್ ವಿಡಿಯೋದಿಂದ ತೆಗೆದ ಚಿತ್ರ)
ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಕೆಯಾಗುತ್ತಿತ್ತು ಎಂಬ ವಿವಾದ ಮುಗಿಲು ಮುಟ್ಟಿರುವಾಗಲೇ, ಲಡ್ಡು ಪ್ರಸಾದದ ಜೊತೆಗೆ ತಂಬಾಕು ಕವರ್ ಬಂತು ಎಂಬ ಸುದ್ದಿ ವೈರಲ್ ಆಗಿದೆ. ಆದರೆ ಈ ಸುದ್ದಿಯನ್ನು ಟಿಟಿಡಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ವಿದ್ಯಮಾನದ ವಿವರ ಇಲ್ಲಿದೆ.
ತಿರುಮಲ: ತಿರುಪತಿ ಶ್ರೀವಾರಿ ಲಡ್ಡು ಪ್ರಸಾದದಲ್ಲಿ ತಂಬಾಕು ಪ್ಯಾಕೆಟ್ ಸಿಕ್ಕಿದೆ. ಲಡ್ಡು ಪ್ರಸಾದ ತಯಾರಿಸುವಾಗ ಸ್ವಚ್ಛತೆ ಕಾಪಾಡುತ್ತಿಲ್ಲ ಎಂಬ ವದಂತಿ ಹಬ್ಬಿದೆ. ಇದು ಅಪಪ್ರಚಾರ ಎಂದು ತಿರುಮಲ ತಿರುಪತಿ ದೇವಸ್ಥಾನಂ ಪ್ರತಿಕ್ರಿಯೆ ನೀಡಿದೆ. ಲಡ್ಡು ಪ್ರಸಾದದಲ್ಲಿ ತಂಬಾಕು ಪ್ಯಾಕೆಟ್ ಇದೆ ಎಂಬ ಪ್ರಚಾರ ಸತ್ಯಕ್ಕೆ ದೂರವಾದುದು. ಪವಿತ್ರ ಶ್ರೀವಾರಿ ಲಡ್ಡು ಪ್ರಸಾದದಲ್ಲಿ ತಂಬಾಕು ಪ್ಯಾಕೆಟ್ ಇದೆ ಎಂದು ಕೆಲವು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಸುದ್ದಿಯಲ್ಲಿ ಹುರುಳಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದ್ದು, ಲಡ್ಡು ಪ್ರಸಾದವನ್ನು ಅತ್ಯಂತ ಸ್ವಚ್ಛತೆಯಿಂದ ದೇವಸ್ಥಾನದ ನಿಯಮಗಳಿಗೆ ಅನುಗುಣವಾಗಿ ಭಕ್ತಿ ಶ್ರದ್ಧೆಯಿಂದ ಮಾಡಲಾಗುತ್ತಿದೆ. ತಿರುಮಲದ ಲಡ್ಡು ಪೋಟುಗಳಲ್ಲಿ ಶ್ರೀ ವೈಷ್ಣವ ಬ್ರಾಹ್ಮಣರು ಪ್ರತಿದಿನ ಲಕ್ಷಗಟ್ಟಲೆ ಶ್ರೀವಾರಿ ಲಡ್ಡುಗಳನ್ನು ತಯಾರಿಸುತ್ತಿದ್ದಾರೆ. ಅವರು ಅದರ ಪಾವಿತ್ರ್ಯವನ್ನು ಕಾಪಾಡುತ್ತಿದ್ದಾರೆ ಎಂದು ಹೇಳಿದೆ.
ಶ್ರೀವಾರಿ ಲಡ್ಡುಗಳ ತಯಾರಿಕೆಯನ್ನು ನಿರಂತರವಾಗಿ ಸಿಸಿಟಿವಿ ಮೂಲಕ ಗಮನಿಸಲಾಗುತ್ತದೆ. ಶ್ರೀವಾರಿ ಲಡ್ಡುಗಳ ತಯಾರಿಸುವ ಇಂತಹ ಸುಸಜ್ಜಿತ ವ್ಯವಸ್ಥೆಯಲ್ಲಿ ತಂಬಾಕು ಲಡ್ಡು ಪ್ರಸಾದದಲ್ಲಿ ಸೇರಿಕೊಂಡಿದೆ ಎಂದು ಆರೋಪಿಸುವುದು ಸರಿಯಲ್ಲ. ಸತ್ಯಕ್ಕೆ ದೂರದ ವಿಚಾರಗಳನ್ನು, ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಟಿಟಿಡಿ ಮನವಿ ಮಾಡಿದೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ಪ್ಯಾಕೆಟ್ - ಸುದ್ದಿ ವೈರಲ್
ತಿರುಮಲದಲ್ಲಿ ಖರೀದಿಸಿದ ಶ್ರೀವಾರಿ ಲಡ್ಡು ಪ್ರಸಾದದಲ್ಲಿ ತಂಬಾಕು ಪ್ಯಾಕೆಟ್ ಇತ್ತು ಎಂದು ಭಕ್ತರು ಆರೋಪಿಸುತ್ತಿದ್ದಾರೆ. ಖಮ್ಮಂ ಗ್ರಾಮಾಂತರ ಮಂಡಲದ ಗೊಲ್ಲಗುಡೆಂನ ದೊಂತು ಪದ್ಮಾ ಎಂಬ ಭಕ್ತೆ ಈ ತಿಂಗಳ 19ರಂದು ತನ್ನ ಸಂಬಂಧಿಕರೊಂದಿಗೆ ತಿರುಪತಿ ದರ್ಶನಕ್ಕೆ ತೆರಳಿದ್ದರು. ಸಂಬಂಧಿಕರಿಗೆ ಪ್ರಸಾದ ವಿತರಿಸಲು ಲಡ್ಡು ತೆಗೆದುಕೊಂಡು ಹೋದಾಗ ಪ್ರಸಾದದಲ್ಲಿ ತಂಬಾಕು ಪ್ಯಾಕೆಟ್ ಪತ್ತೆಯಾಗಿದೆ. ಶ್ರೀವಾರಿ ಲಡ್ಡು ಪ್ರಸಾದದಲ್ಲಿ ತಂಬಾಕು ಕಂಡು ಅಚ್ಚರಿ ಮತ್ತು ಆಕ್ರೋಶಗೊಂಡಿದ್ದಾರೆ. ಈ ಘಟನೆಗೆ ಕಾರಣರಾದವರ ವಿರುದ್ಧ ಆಂಧ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಭಕ್ತರು ಆಗ್ರಹಿಸಿದ್ದಾರೆ. ಆದರೆ ಇದು ಸುಳ್ಳು ಎಂದು ಟಿಟಿಡಿ ಹೇಳಿದೆ.
ನಾಲ್ಕು ದಿನಗಳಲ್ಲಿ 14 ಲಕ್ಷ ಲಡ್ಡು ಪ್ರಸಾದ ಮಾರಾಟ
ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಸೇರಿದ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ವಿವಾದದ ನಡುವೆಯೂ, ದಿನಕ್ಕೆ 60,000ಕ್ಕೂ ಹೆಚ್ಚು ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಿದ್ದಾರೆ. ವೆಂಕಟೇಶ್ವರ ದೇವರ ದರ್ಶನ ಪಡೆಯುತ್ತಾರೆ. ಕಲಬೆರಕೆ ವಿವಾದ ಲಡ್ಡು ಪ್ರಸಾದ ಮಾರಾಟದ ಮೇಲೆ ಪರಿಣಾಮ ಬೀರಿಲ್ಲ ಎಂದು ಎನ್‌ಡಿಟಿವಿ ವರದಿ ಹೇಳಿದೆ. ಸೆಪ್ಟೆಂಬರ್ 19 ರಂದು 3.59 ಲಕ್ಷ, ಸೆಪ್ಟೆಂಬರ್ 20 ರಂದು 3.17 ಲಕ್ಷ, ಸೆಪ್ಟೆಂಬರ್ 21 ರಂದು 3.67 ಲಕ್ಷ, ಸೆಪ್ಟೆಂಬರ್ 22 ರಂದು 3.60 ಲಕ್ಷ ಮಾರಾಟವಾಗಿದೆ. ಕೇವಲ ನಾಲ್ಕು ದಿನಗಳ ಅವಧಿಯಲ್ಲಿ 14 ಲಕ್ಷಕ್ಕೂ ಹೆಚ್ಚು ತಿರುಪತಿ ಲಡ್ಡುಗಳು ಮಾರಾಟವಾಗಿವೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.
ಈ ಅಂಕಿಅಂಶಗಳು ದೇವಸ್ಥಾನದ ಸಾಮಾನ್ಯ ಅಂದಾಜಿನ ಪ್ರಕಾರ ದಿನಕ್ಕೆ ಸರಾಸರಿ 3.50 ಲಕ್ಷ ಲಡ್ಡುಗಳು ಮಾರಾಟವಾಗುತ್ತವೆ ಎಂಬುದನ್ನು ದೃಢೀಕರಿಸಿರುವುದಾಗಿ ವರದಿ ಹೇಳಿದೆ. ದೇವಸ್ಥಾನದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಸಲಾಗುತ್ತದೆ. ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಲಡ್ಡು ಪ್ರಸಾದ ಖರೀದಿಸುತ್ತಾರೆ. ಸಾಮಾನ್ಯವಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಉಡುಗೊರೆಯಾಗಿ ನೀಡುತ್ತಾರೆ.. ಶ್ರೀವಾರಿ ಲಡ್ಡುಗಳನ್ನು ಕಡಲೆ ಹಿಟ್ಟು, ಹಸುವಿನ ತುಪ್ಪ, ಸಕ್ಕರೆ, ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಗಳಿಂದ ತಯಾರಿಸಲಾಗುತ್ತದೆ. ಇವುಗಳ ತಯಾರಿಕೆಯಲ್ಲಿ 15,000 ಕೆಜಿ ಹಸುವಿನ ತುಪ್ಪವನ್ನು ಬಳಸಲಾಗುತ್ತದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.