logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಗನ್ ಆಳ್ವಿಕೆಯಲ್ಲಿ ತಿರುಪತಿ ಲಡ್ಡು ತಯಾರಿಗೆ ಪ್ರಾಣಿ ಕೊಬ್ಬು ಬಳಸ್ತಾ ಇದ್ರು; ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ

ಜಗನ್ ಆಳ್ವಿಕೆಯಲ್ಲಿ ತಿರುಪತಿ ಲಡ್ಡು ತಯಾರಿಗೆ ಪ್ರಾಣಿ ಕೊಬ್ಬು ಬಳಸ್ತಾ ಇದ್ರು; ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ

Umesh Kumar S HT Kannada

Sep 19, 2024 12:17 PM IST

google News

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (ಕಡತ ಚಿತ್ರ)

  • ಬಹುಬೇಡಿಕೆಯ ತಿರುಪತಿ ಲಡ್ಡು ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೇಳಿಕೆ ಅದಕ್ಕೆ ಕಾರಣ. ಜಗನ್ ಆಳ್ವಿಕೆಯಲ್ಲಿ ತಿರುಪತಿ ಲಡ್ಡು ತಯಾರಿಗೆ ಪ್ರಾಣಿ ಕೊಬ್ಬು ಬಳಸ್ತಾ ಇದ್ರು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಇದು ರಾಜಕೀಯ ಸಂಚಲನ ಮೂಡಿಸಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (ಕಡತ ಚಿತ್ರ)
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (ಕಡತ ಚಿತ್ರ) (LM)

ವಿಜಯವಾಡ: ಬಹುಬೇಡಿಕೆಯ ತಿರುಪತಿ ಲಡ್ಡು ತಯಾರಿಗೆ ಸಂಬಂಧಿಸಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರು ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಈ ಹಿಂದೆ ಅಂದರೆ ಜಗನ್‌ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ವೈಎಸ್‌ಆರ್‌ಸಿ ಆಳ್ವಿಕೆ ಇದ್ದಾಗ, ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ತಿರುಪತಿ ಲಡ್ಡು ತಯಾರಿಗೆ ಪರಿಶುದ್ಧ ತುಪ್ಪ ಬಳಸುವ ಬದಲು ಪ್ರಾಣಿ ಕೊಬ್ಬು ಬಳಸ್ತಾ ಇದ್ರು ಎಂದು ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ಹಿಂದಿನ ಆಡಳಿತದ ಅವಧಿಯಲ್ಲಿ ತಿರುಮಲ ಲಡ್ಡು ಗುಣಮಟ್ಟ ಕಳಪೆಯಾಗಿತ್ತು ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ ನಾಯ್ಡು ಅದನ್ನು ಅಪವಿತ್ರ ಎಂದು ಬಣ್ಣಿಸಿದರು. ಮುಖ್ಯಮಂತ್ರಿ ನಾಯ್ಡು ಅವರ ಆರೋಪ ರಾಜಕೀಯ ಸಂಚಲನ ಸೃಷ್ಟಿಸಿದ್ದು, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಮುಖ್ಯಮಂತ್ರಿ ಚಂಧ್ರಬಾಬು ನಾಯ್ಡು ಹೇಳಿರುವುದು ಇಷ್ಟು-

"ಅವರು (ವೈಎಸ್‌ಆರ್‌ಸಿ ಸರ್ಕಾರ) ತಿರುಮಲದಲ್ಲಿ ಅನ್ನ ಪ್ರಸಾದವಾಗಿ ಭಕ್ತರಿಗೆ ಕಳಪೆ ಆಹಾರವನ್ನು ನೀಡಿದ್ದಲ್ಲದೆ, ವೆಂಕಟೇಶ್ವರನಿಗೆ ಅರ್ಪಿಸುವ ಪ್ರಸಾದವನ್ನು ತಯಾರಿಸಲು ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿದರು. ಶುದ್ಧ ತುಪ್ಪ ಬಳಸುವ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆ' ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದರು.

“ಇಂದು ನಾವು ಪರಿಶುದ್ಧ ತುಪ್ಪವನ್ನು ಬಳಸುತ್ತಿದ್ದೇವೆ. ದೇವಾಲಯದ ವ್ಯವಸ್ಥೆಯನ್ನು ಶುದ್ಧೀಕರಿಸಿದ್ದೇವೆ. ಪ್ರಸಾದ ಮತ್ತು ಆಹಾರದ ಗುಣಮಟ್ಟ ಸುಧಾರಿಸಿದೆ. ಅದೇ ರೀತಿ ಮತ್ತಷ್ಟು ಸುಧಾರಣೆಗಳನ್ನು ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ನಾಯ್ಡು ವಿವರಿಸಿದರು.

ತಿರುಮಲದಲ್ಲಿರುವ ವೆಂಕಟೇಶ್ವರನ ಪವಿತ್ರ ದೇಗುಲಕ್ಕೆ ಪ್ರಪಂಚದಾದ್ಯಂತದ ಲಕ್ಷಾಂತರ ಯಾತ್ರಾರ್ಥಿಗಳು ಪ್ರತಿದಿನ ಭೇಟಿ ನೀಡುತ್ತಾರೆ. ತಿರುಮಲ ಲಡ್ಡು ಪ್ರಸಾದವನ್ನು ಅನೇಕರು ದೇವರು ನೀಡಿದ ಅಮೃತ ಎಂದು ಪರಿಗಣಿಸುತ್ತಾರೆ. ವೆಂಕಟೇಶ್ವರ ದೇವರು ಆಂಧ್ರಪ್ರದೇಶದ ಹೆಮ್ಮೆ ಮತ್ತು ಅವನ ಕಾರಣದಿಂದಾಗಿ ಪ್ರಪಂಚದಾದ್ಯಂತದ ಜನರು ರಾಜ್ಯಕ್ಕೆ ಬರುತ್ತಾರೆ. ತಿರುಮಲ ಮತ್ತು ವೆಂಕಟೇಶ್ವರನ ಪಾವಿತ್ರ್ಯವನ್ನು, ಅಂತೆಯೇ ನಮ್ಮ ಕಟ್ಟುಪಾಡುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ನಾಯ್ಡು ಹೇಳಿದರು.

ಚಂದ್ರ ಬಾಬು ನಾಯ್ಡು ಅವರು ಬುಧವಾರ (ಸೆ.18) ಮಂಗಳಗಿರಿಯಲ್ಲಿ ಎನ್‌ಡಿಎ ಸಭೆಯಲ್ಲಿ ಮಾತನಾಡುತ್ತ ಈ ವಿಚಾರ ಬಹಿರಂಗಪಡಿಸಿದ್ದರು. ಅಲ್ಲಿ ಜನಸೇನಾ ಪಾರ್ಟಿ ನಾಯಕ ಪವನ್ ಕಲ್ಯಾಣ್‌, ಬಿಜೆಪಿ ರಾಜ್ಯ ಅಧ್ಯಕ್ಷೆಯೂ ಆಗಿರುವ ಸಂಸದೆ ದಗ್ಗುಬಾಟಿ ಪುರಂದರೇಶ್ವರಿ ಕೂಡ ಇದ್ದರು.

ನಾನು ಪ್ರಮಾಣ ಮಾಡೋಕೆ ಸಿದ್ಧ, ನೀವು ಬರ್ತೀರಾ- ಸಿಎಂ ನಾಯ್ಡುಗೆ ಟಿಟಿಡಿ ಮಾಜಿ ಮುಖ್ಯಸ್ಥರ ಸವಾಲ್‌

ತಿರುಮಲ ತಿರುಪತಿ ಲಡ್ಡು ಪ್ರಸಾದದ ಕುರಿತು ನಾಯ್ಡು ಅವರ ಕಾಮೆಂಟ್‌ಗಳನ್ನು ಖಂಡಿಸಿದ ವೈಎಸ್‌ಆರ್‌ಸಿ ರಾಜ್ಯಸಭಾ ಸದಸ್ಯರೂ ಆಗಿರುವ ಟಿಟಿಡಿಯ ಮಾಜಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ “ಚಂದ್ರಬಾಬು ನಾಯ್ಡು ಅವರು ತಿರುಮಲದ ಪಾವಿತ್ರ್ಯವನ್ನು ತೀವ್ರವಾಗಿ ಹಾಳು ಮಾಡಿದ್ದಾರೆ. ಕೋಟ್ಯಂತರ ಹಿಂದೂಗಳ ನಂಬಿಕೆ. ತಿರುಮಲ ಪ್ರಸಾದದ ಬಗ್ಗೆ ಅವರ ಹೇಳಿಕೆಗಳು ಅತ್ಯಂತ ದುರುದ್ದೇಶಪೂರಿತವಾಗಿವೆ. ಯಾವುದೇ ವ್ಯಕ್ತಿ ಅಂತಹ ಮಾತುಗಳನ್ನು ಆಡುವುದಿಲ್ಲ ಅಥವಾ ಅಂತಹ ಆರೋಪಗಳನ್ನು ಮಾಡುವುದಿಲ್ಲ" ಎಂದು ಸವಾಲು ಎಸೆದಿದ್ದಾರೆ.

ರಾಜಕೀಯ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಯಾವುದೇ ಹಂತಕ್ಕೆ ಇಳಿಯುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಕ್ತರ ನಂಬಿಕೆಯನ್ನು ಬಲಪಡಿಸಲು, ನಾನು ನನ್ನ ಕುಟುಂಬದೊಂದಿಗೆ ತಿರುಮಲ ಪ್ರಸಾದದ ಬಗ್ಗೆ ಸರ್ವೇಶ್ವರನ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಚಂದ್ರಬಾಬು ತಮ್ಮ ಕುಟುಂಬದೊಂದಿಗೆ ಅದೇ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ?" ಎಂದು ಸವಾಲೆಸೆದಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ