logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನಾಗರಿಕ ಸೇವೆ ಪೂರೈಸಲು ವಾಟ್ಸ್‌ಆಪ್ ಸೇವೆ ಬಳಕೆ; ಮೆಟಾ ಜತೆಗೆ ಒಪ್ಪಂದ ಮಾಡಿಕೊಂಡ ಆಂಧ್ರ ಸರ್ಕಾರ

ನಾಗರಿಕ ಸೇವೆ ಪೂರೈಸಲು ವಾಟ್ಸ್‌ಆಪ್ ಸೇವೆ ಬಳಕೆ; ಮೆಟಾ ಜತೆಗೆ ಒಪ್ಪಂದ ಮಾಡಿಕೊಂಡ ಆಂಧ್ರ ಸರ್ಕಾರ

Umesh Kumar S HT Kannada

Oct 24, 2024 11:42 AM IST

google News

ನಾಗರಿಕ ಸೇವೆ ಪೂರೈಸಲು ವಾಟ್ಸ್‌ಆಪ್ ಸೇವೆ ಬಳಕೆ ಮಾಡುವುದಕ್ಕಾಗಿ ಮೆಟಾ ಜತೆಗೆ ಆಂಧ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

  • ಆಂಧ್ರ ಪ್ರದೇಶದಲ್ಲಿ ಇ ಆಡಳಿತಕ್ಕೆ ಒತ್ತು ನೀಡುತ್ತಿರುವ ಹೊಸ ಸರ್ಕಾರ, ನಾಗರಿಕ ಸೇವೆ ಪೂರೈಸಲು ವಾಟ್ಸ್‌ಆಪ್ ಸೇವೆ ಬಳಕೆ ಮಾಡಲು ತೀರ್ಮಾನಿಸಿದೆ. ಇದರಂತೆ, ಆಂಧ್ರ ಸರ್ಕಾರವು ಮೆಟಾ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇದರ ವಿವರ ಇಲ್ಲಿದೆ. 

ನಾಗರಿಕ ಸೇವೆ ಪೂರೈಸಲು ವಾಟ್ಸ್‌ಆಪ್ ಸೇವೆ ಬಳಕೆ ಮಾಡುವುದಕ್ಕಾಗಿ ಮೆಟಾ ಜತೆಗೆ ಆಂಧ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ನಾಗರಿಕ ಸೇವೆ ಪೂರೈಸಲು ವಾಟ್ಸ್‌ಆಪ್ ಸೇವೆ ಬಳಕೆ ಮಾಡುವುದಕ್ಕಾಗಿ ಮೆಟಾ ಜತೆಗೆ ಆಂಧ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

ಹೈದರಾಬಾದ್‌: ಆಂಧ್ರ ಪ್ರದೇಶದಲ್ಲಿ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ನಾಗರಿಕ ಸೇವೆಗಳನ್ನು ಜನರಿಗೆ ತಲುಪಿಸುವುದರ ಕಡೆಗೆ ಗಮನಹರಿಸಿದೆ. ಹೀಗಾಗಿ, ನಾಗರಿಕ ಸೇವೆಗಳನ್ನು ತ್ವರಿತವಾಗಿ ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ಆಂಧ್ರ ಪ್ರದೇಶ ಸರ್ಕಾರ ವಾಟ್ಸ್‌ ಆಪ್ ಸೇವೆಯನ್ನು ಬಳಸಲು ತೀರ್ಮಾನಿಸಿದೆ. ಈ ಸೇವೆ ನವೆಂಬರ್ ತಿಂಗಳ ಕೊನೆಗೆ ನಾಗರಿಕರಿಗೆ ಸಿಗಲಿದ್ದು, ಆಂಧ್ರ ಪ್ರದೇಶ ಸರ್ಕಾರ ಮೆಟಾ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಲಾಖೆ ಹಾಗೂ ಮೆಟಾ ಕಂಪನಿ ನಡುವೆ ಇದಕ್ಕೆ ಸಂಬಂಧಿಸಿದ ಒಪ್ಪಂದ ಏರ್ಪಟ್ಟಿದೆ. ಆಂಧ್ರ ಪ್ರದೇಶ ಸರ್ಕಾರದ ನಾಗರಿಕ ಸೇವೆಗಳ ಸಂದೇಶಗಳನ್ನು ವಾಟ್ಸ್‌ಆಪ್‌ ಬಿಜಿನೆಸ್ ಸಲ್ಯೂಷನ್ಸ್ ಮೂಲಕ ಜಂಟಿಯಾಗಿ ತಲುಪಿಸುವ ಉದ್ದೇಶ ಇದರದ್ದು. ಅದೇ ರೀತಿ ಇ-ಆಡಳಿತ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕೂ ಇದು ನೆರವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಆಂಧ್ರ ಸರ್ಕಾರದ 100 ಸೇವೆಗಳಿಗೆ ವಾಟ್ಸ್‌ಆಪ್‌ ಬಳಕೆ

ಆಂಧ್ರ ಪ್ರದೇಶ ಸರ್ಕಾರದ ಅಧಿಕೃತ ಪ್ರಕಟಣೆ ಪ್ರಕಾರ, ಮೆಟಾದೊಂದಿಗಿನ ಪಾಲುದಾರಿಕೆಯ ಕಾರಣ, ವಾಟ್ಸ್‌ಆಪ್‌ ಮೂಲಕ ಸಮರ್ಥ ನಾಗರಿಕ ಕೇಂದ್ರಿತ ಸಾರ್ವಜನಿಕ ಸೇವೆಗಳನ್ನು ತಲುಪಿಸುವ ಕಾರ್ಯ ಸುಗಮವಾಗಲಿದೆ. ಇದರಿಂದಾಗಿ ಸರ್ಕಾರ ಹಾಗೂ ನಾಗರಿಕರ ನಡುವೆ ತಡೆರಹಿತ ಸಂವಹನ ಏರ್ಪಡುತ್ತದೆ.

ಸರ್ಕಾರಿ ಸೇವೆಯ ವಿತರಣೆಯನ್ನು ಹೆಚ್ಚಿಸಲು ಮತ್ತು ವ್ಯವಹಾರದ ವೇಗವನ್ನು ಸುಧಾರಿಸಲು ಈ ಒಪ್ಪಂದಕ್ಕೆ ಬರಲಾಗಿದೆ. ಇದು ನವೆಂಬರ್ 30ರ ಒಳಗೆ ಕಾರ್ಯರೂಪಕ್ಕೆ ಬರಲಿದೆ. ಮೊದಲ ಹಂತದಲ್ಲಿ 100 ಸೇವೆಗಳನ್ನು ಇದರ ಮೂಲಕ ಪರಿಚಯಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಪರಿಣಾಮ ಕಾರಿಯಾಗಿ ಜನರಿಗೆ ನಾಗರಿಕ ಸೇವೆಗಳನ್ನು ತಲುಪಿಸುವ ಸರ್ಕಾರದ ಬದ್ಧತೆಯ ಭಾಗ ಇದು ಎಂದು ಇಲಾಖೆ ಹೇಳಿಕೊಂಡಿದೆ.

13 ಇಲಾಖಾ ಸೇವೆಗಳು ವಾಟ್ಸ್‌ಆಪ್ ಮೂಲಕ ಜನರಿಗೆ

ವಾಟ್ಸ್‌ಆಪ್ ಸೇವೆ ಬಳಸಿಕೊಂಡು 13 ಇಲಾಖೆಗಳು ತಮ್ಮ ಸೇವೆಯನ್ನು ಜನರಿಗೆ ತಲುಪಿಸಲಿವೆ. ಧಾರ್ಮಿಕ ದತ್ತಿ ಇಲಾಖೆ, ಕಂದಾಯ, ನಾಗರಿಕ ಸೇವಾ ಪೂರೈಕೆ, ಮುನ್ಸಿಪಲ್ ಆಡಳಿತ, ನಗರಾಡಳಿತ, ನೋಂದಣಿ, ಇಂಧನ, ಕೈಗಾರಿಕೆ, ಸಾರಿಗೆ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಕೌಶಲ ಅಭಿವೃದ್ಧಿ ಮತ್ತು ತರಬೇತಿ, ವಾರ್ಡ್‌ ಮತ್ತು ಗ್ರಾಮ ಸಚಿವಾಲಯ, ಐಟಿ, ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್ಸ್‌, ನೈಜ ಸಮಯದ ಆಡಳಿತ ಸಂದೇಶಗಳು ರವಾನೆಯಾಗಲಿವೆ.

ಎರಡನೇ ಹಂತದಲ್ಲಿ ಒಟ್ಟಾರೆ ಪ್ರಕ್ರಿಯೆಗಳ ಒಗ್ಗೂಡಿಸುವಿಕೆ ಮತ್ತು ಸೇವಾ ಪೂರೈಕೆಯ ಪ್ರಕ್ರಿಯೆಗಳನ್ನು ಒಂದೇ ಸೂತ್ರದಲ್ಲಿ ಜೋಡಿಸಿ ನಾಗರಿಕರಿಗೆ ಒದಗಿಸುವ ಪ್ರಯತ್ನಕ್ಕೆ ಬಲ ತುಂಬುವ ಕೆಲಸ ನಡೆಯಲಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ವಿವರಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ