Bharat NCAP: ಅಕ್ಟೋಬರ್ 1ರಿಂದ ಭಾರತ್ ಎನ್‌ಕ್ಯಾಪ್ ಜಾರಿ, ಹೊಸ ಕಾರುಗಳಿಗೆ ಸ್ಟಾರ್ ರೇಟಿಂಗ್, ಈ ವಿಷಯಗಳು ನಿಮಗೆ ತಿಳಿದಿರಲಿ
Jan 09, 2024 07:50 PM IST
Bharat NCAP: ಅಕ್ಟೋಬರ್ 1ರಿಂದ ಭಾರತ್ ಎನ್‌ಕ್ಯಾಪ್ ಜಾರಿ, ಹೊಸ ಕಾರುಗಳಿಗೆ ಸ್ಟಾರ್ ರೇಟಿಂಗ್,
- What is Bharat NCAP: ಭಾರತದಲ್ಲಿ ಅಕ್ಟೋಬರ್ 1ರಿಂದ ಭಾರತ್ ಎನ್‌ಕ್ಯಾಪ್ ಜಾರಿಗೆ ಬರಲಿದೆ. ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಅಥವಾ ಭಾರತ್ ಎನ್‌ಕ್ಯಾಪ್ ಎಂದರೇನು? ಇದು ಹೇಗೆ ಕಾರ್ಯನಿರ್ವಹಿಸಲಿದೆ? ಗ್ರಾಹಕರು ಮತ್ತು ವಾಹನೋದ್ಯಮಕ್ಕೆ ಇದರಿಂದ ಪ್ರಯೋಜನಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಈ ವರ್ಷ ಅಕ್ಟೋಬರ್ 1ರಿಂದ ಭಾರತವು ತನ್ನದೇ ಆದ ಸ್ವಂತ ಕಾರ್ ಕ್ರ್ಯಾಷ್ ಸೇಫ್ಟಿ ಸ್ಟಾರ್ ಸಿಸ್ಟಮ್ ವ್ಯವಸ್ಥೆ ಹೊಂದಿರಲಿದೆ. ಇದರಿಂದ ಭಾರತದ ಕಾರುಗಳು ಈಗಿನ ಕಾರುಗಳಿಗಿಂತ ಹೆಚ್ಚು ಸುರಕ್ಷತೆ ಹೊಂದಿರಲಿದೆ. ಭಾರತದ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ ಅಥವಾ ಭಾರತ್ ಎನ್‌ಕ್ಯಾಪ್‌ನಿಂದ ಏನು ಪ್ರಯೋಜನಗಳಿವೆ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ, ಗ್ರಾಹಕರು ಮತ್ತು ವಾಹನೋದ್ಯಮಕ್ಕೆ ಇದರಿಂದ ಪ್ರಯೋಜನಗಳೇನು? ಇತ್ಯಾದಿ ಹಲವು ಪ್ರಶ್ನೆಗಳು ಬಹುತೇಕರಲ್ಲಿ ಇರಬಹುದು.
ಮೊದಲಿಗೆ ಏನಿದು ಭಾರತ್ ಎನ್‌ಕ್ಯಾಪ್ ಎಂದು ತಿಳಿದುಕೊಳ್ಳೋಣ. ಈದು ಭಾರತದ ಬಹುನಿರೀಕ್ಷಿತ ಸುರಕ್ಷತಾ ನಿಯಮ. ಭವಿಷ್ಯದ ಕಾರುಗಳು ಈಗಿನ ಕಾರುಗಳಿಗಿಂತ ಹೆಚ್ಚು ಸುರಕ್ಷತೆ ಹೊಂದಿರಲಿದೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಟೊಯೊಟಾ, ಸ್ಕೋಡಾ, ಕಿಯಾ ಮತ್ತು ಮಹೀಂದ್ರ ಕಂಪನಿಗಳು ಈಗಾಗಲೇ ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿವೆ. ಈ ಸುರಕ್ಷತಾ ನಿಯಮದ ಪ್ರಕಾರ ಭಾರತದಲ್ಲಿ ನಿರ್ಮಾಣಗೊಳ್ಳುವ ಕಾರುಗಳನ್ನು ಸುರಕ್ಷತೆಯ ಟೆಸ್ಟಿಂಗ್‌ಗೆ ಒಳಪಡಿಸಬೇಕು. ವಿದೇಶದಿಂದ ಆಮದು ಮಾಡಿಕೊಳ್ಳುವ ಕಂಪನಿಗಳು ಸ್ವಯಂ ಇಚ್ಛೆಯಿಂದ ಕಾರುಗಳನ್ನು ಟೆಸ್ಟ್ ಮಾಡಬಹುದು. ಈ ಸೇಫ್ಟಿ ರೇಟಿಂಗ್ ಎನ್ನುವುದು ಆಟೋಮೋಟಿವ್ ಇಂಡಸ್ಟ್ರಿ ಸ್ಟಾಂಡರ್ಡ್ (ಎಐಎಸ್)-197 ಪ್ರಕಾರ ಇರಬೇಕು. ಭಾರತ್ ಎನ್‌ಕ್ಯಾಪ್ ಕುರಿತು ಹಲವು ಮಾಹಿತಿಗಳನ್ನು ಮುಂದೆ ನೀಡಲಾಗಿದೆ.
Bharat NCAP: ಟೆಸ್ಟ್ ಮಾಡುವ ನಿಯತಾಂಕ
ಭಾರತ ಸರಕಾರವು ಈಗಾಗಲೇ ಭಾರತ್ ಎನ್‌ಕ್ಯಾಪ್ ನಿಯತಾಂಕಗಳನ್ನು ಅಂತಿಮಗೊಳಿಸಿದೆ. ಕಾರು ಪಾದಚಾರಿ ಸ್ನೇಹಿಯಾಗಿರಬೇಕು. ಇದಕ್ಕೆ ಸಂಬಂಧಪಟ್ಟ ಮೌಲ್ಯಮಾಪನ ಮಾಡಲಾಗುತ್ತದೆ. ಇದರೊಂದಿಗೆ ವಾಹನಗಳ ರಚನಾತ್ಮಕ ಸುರಕ್ಷತೆ, ಆಕ್ಟಿವ್ ಮತ್ತು ಪ್ಯಾಸಿವ್ ಸೇಫ್ಟಿ ಅಸಿಸ್ಟ್ ಟೆಕ್ನಾಲಜಿ, ಮಕ್ಕಳು ಮತ್ತು ದೊಡ್ಡವರ ಸುರಕ್ಷತಾ ಫೀಚರ್‌ಗಳು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ವಾಹನಗಳಿಗೆ ರೇಟಿಂಗ್ ನೀಡಲಾಗುತ್ತದೆ. ಅಂದರೆ, ಗ್ಲೋಬಲ್ ಎನ್‌ಕ್ಯಾಪ್ ಅಥವಾ ಯುರೋ ಎನ್‌ಕ್ಯಾಪ್‌ನಂತೆ ಭಾರತವೂ ತನ್ನ ಸ್ವಂತ ಸುರಕ್ಷತಾ ಮಾನದಂಡ ಹೊಂದಿರಲಿದೆ.
ಜಾಗತಿಕ ಕ್ರ್ಯಾಷ್ ಟೆಸ್ಟ್ ಪ್ರೊಟೊಕಾಲ್‌ಗಳನ್ನು ಗಮನದಲ್ಲಿಟ್ಟುಕೊಂಡು ಭಾರತ್ ಎನ್‌ಕ್ಯಾಪ್ ನಿಯತಾಂಕ ರೂಪಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ. ವಾಹನಗಳಿಂದ 1ರಿಂದ 5ರವರೆಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಯಾವ ಸ್ಟಾರ್ ರೇಟ್ ಇದ್ದರೆ ಉತ್ತಮ ಇತ್ಯಾದಿಗಳನ್ನು ಗ್ರಾಹಕರು ತಿಳಿದುಕೊಂಡು ಅದಕ್ಕೆ ತಕ್ಕಂತೆ ವಾಹನ ಖರೀದಿಸಬಹುದು. ಈ ರೀತಿ ಕಾರು ಟೆಸ್ಟ್ ಮಾಡಲು ಕಂಪನಿಗಳು ಮಾದರಿ ವಾಹನಗಳನ್ನು ನೀಡಬಹುದು. ಅಥವಾ ಶೋರೂಂನಿಂದಲೇ ಕಾರನ್ನು ಪಡೆದು ಟೆಸ್ಟ್ ಮಾಡುವ ಸ್ವಾತಂತ್ರ್ಯವನ್ನು ಟೆಸ್ಟಿಂಗ್ ಏಜೆನ್ಸಿಗಳಿಗೆ ಸರಕಾರ ನೀಡುವುದೇ ಎಂದು ಕಾದುನೋಡಬೇಕಿದೆ.
ಯಾವ ವಾಹನಗಳನ್ನು ಕ್ರ್ಯಾಷ್ ಟೆಸ್ಟ್ ಮಾಡಲಾಗುತ್ತದೆ?
ಎಂಟು ಸೀಟುಗಳವರೆಗಿನ ವಾಹನಗಳನ್ನು ಟೆಸ್ಟ್ ಮಾಡಲಾಗುತ್ತದೆ. ವಾಹನಗಳ ತೂಕ 3.5 ಟನ್‌ಗಿಂತ ಕಡಿಮೆ ಇರಬೇಕು. ಭಾರತದಲ್ಲಿ ತಯಾರಾದ ಅಥವಾ ಆಮದುಮಾಡಿಕೊಂಡ ಕಾರುಗಳನ್ನು ಟೆಸ್ಟ್ ಮಾಡಬಹುದು. ಪೆಟ್ರೋಲ್, ಡೀಸೆಲ್ ಕಾರುಗಳನ್ನು ಮಾತ್ರವಲ್ಲದೆ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳನ್ನೂ ಭಾರತ್ ಎನ್‌ಕ್ಯಾಪ್‌ನಡಿ ಟೆಸ್ಟ್ ಮಾಡಲಾಗುತ್ತದೆ.
ಇದರಿಂದ ಕಾರು ಕಂಪನಿಗಳಿಗೂ ಲಾಭವಾಗಲಿದೆ. ಗ್ರಾಹಕರು ಒಳ್ಳೆಯ ರೇಟಿಂಗ್ ಇರುವ ಕಾರು ಖರೀದಿಗೆ ಆದ್ಯತೆ ನೀಡಬಹುದು. ಜತೆಗೆ, ಇಲ್ಲಿಯವರೆಗೆ ಕಾರು ಕಂಪನಿಗಳು ಕ್ರ್ಯಾಷ್ ಟೆಸ್ಟಿಂಗ್‌ಗೆ ಜಾಗತಿಕ ಎನ್‌ಕ್ಯಾಪ್‌ಗಳ ಮೊರೆ ಹೋಗುತ್ತಿದ್ದವು. ಇದು ಕಂಪನಿಗಳಿಗೆ ದುಬಾರಿಯಾಗಿ ಪರಿಣಮಿಸಿತ್ತು. ಭಾರತದಲ್ಲಿಯೇ ಈ ರೀತಿ ಟೆಸ್ಟ್ ಮಾಡುವ ಅವಕಾಶ ಅಕ್ಟೋಬರ್ 1ರಿಂದ ದೊರಕಲಿದೆ.