Car Buying Guide: ಕಾರು ಖರೀದಿಸುವಿರಾ? ಆಟೋಮ್ಯಾಟಿಕ್ ಅಥವಾ ಮ್ಯಾನುಯಲ್ ಗಿಯರ್‌ಗಳಲ್ಲಿ ಯಾವುದು ಸೂಕ್ತ, ಈ ಮಾರ್ಗದರ್ಶಿ ಓದಿ
Car Buying Tips: ಹೊಸ ಕಾರು ಖರೀದಿ ಸಮಯದಲ್ಲಿ ಆಟೋಮ್ಯಾಟಿಕ್ ಅಥವಾ ಮ್ಯಾನುಯಲ್ ಗಿಯರ್ ಕಾರುಗಳಲ್ಲಿ ಯಾವುದನ್ನು ಖರೀದಿಸಿದರೆ ಒಳ್ಳೆಯದು ಎಂಬ ಗೊಂದಲದಲ್ಲಿ ಇರುವವರಿಗೆ ಇವೆರಡು ಕಾರುಗಳ ಗುಣ ಮತ್ತು ಅವಗುಣಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ಹೊಸ ಕಾರು ಖರೀದಿಸುವುದು (Car Buy) ತುಂಬಾ ಖುಷಿಯ ಸಂಗತಿ. ಆದರೆ, ಯಾವ ಕಾರು ಖರೀದಿಸುವುದು ಎಂದು ನಿರ್ಧರಿಸುವುದು ಕಷ್ಟ. ಕಾರು ಖರೀದಿಸಲು ನಿರ್ಧರಿಸಿದ ಬಳಿಕ ರಸ್ತೆಯಲ್ಲಿರುವ ಕಾರುಗಳೆಲ್ಲವೂ ಸುಂದರವಾಗಿ ಕಾಣಿಸುತ್ತವೆ. ಕೊನೆಗೆ ಯಾವುದೋ ಒಂದು ಕಾರು ಖರೀದಿ (Which Car Best) ಅಂತ ನಿರ್ಧರಿಸಿದ ಬಳಿಕ ಪೆಟ್ರೋಲಾ, ಡೀಸೆಲ್ಲಾ (Petol or Diesel) ಇತ್ಯಾದಿ ಗೊಂದಲಗಳೂ ಕೆಲವರಿಗೆ ಕಾಡಬಹುದು. ಇಷ್ಟು ಮಾತ್ರವಲ್ಲದೆ, ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ಗಿಯರ್‌ಗಳಲ್ಲಿ ( Manual or automatic gearboxes ) ಯಾವುದು ಸೂಕ್ತ ಎಂಬ ಸಂದೇಹವೂ ಬಹುತೇಕರಲ್ಲಿ ಕಾಡುತ್ತದೆ. ಡ್ರೈವಿಂಗ್ ಇಷ್ಟಪಡುವವರಿಗೆ ಮ್ಯಾನುಯಲ್ ಗಿಯರ್ ಇಷ್ಟವಾಗಬಹುದು. ಆದರೆ, ಮನೆಯಲ್ಲಿ ಆಟೋಮ್ಯಾಟಿಕ್ ಗಿಯರೇ ಬೇಕು ಎನ್ನುವವರು ಇರಬಹುದು. ಈ ರೀತಿ ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗಿಯರ್ ಕಾರುಗಳಲ್ಲಿ ಯಾವ ಕಾರು ಖರೀದಿಸಬೇಕು ಎಂಬ ಗೊಂದಲ ಇರುವವರಿಗೆ ಈ ಲೇಖನ ನೆರವಾಗಬಹುದು.
ಟ್ರಾನ್ಸ್‌ಮಿಷನ್ ಸಿಸ್ಟಮ್ ಅಥವಾ ಪ್ರಸರಣ ವ್ಯವಸ್ಥೆಯು ವಾಹನದ ಗಿಯರ್ ಬದಲಾಯಿಸಲು ಅನುಮತಿಸುತ್ತದೆ. ಇದು ಎಂಜಿನ್‌ನಿಂದ ಡ್ರೈವ್ ಆಕ್ಸಲ್‌ಗೆ ಪವರ್ ಅನ್ನು ವರ್ಗಾಯಿಸುತ್ತದೆ. ಅಂತಿಮವಾಗಿ ವಾಹನವನ್ನು ಮುಂದೂಡುತ್ತದೆ. ವಾಹನಗಳಲ್ಲಿ ಈ ಟ್ರಾನ್ಸ್‌ಮಿಷನ್ ವ್ಯವಸ್ಥೆಯು ಅತ್ಯಂತ ಪ್ರಮುಖ ಬಿಡಿಭಾಗ. ಲೋವರ್ ಗಿಯರ್‌ನಲ್ಲಿ ಟ್ರಾನ್ಸ್‌ಮಿಷನ್ ಹೆಚ್ಚು ಪವರ್ ಪಡೆಯುತ್ತದೆ, ಆದರೆ, ಸ್ಪೀಡ್ ಕಡಿಮೆ ಇರುತ್ತದೆ. ಮೇಲ್ಮಟ್ಟದ ಗಿಯರ್‌ನಲ್ಲಿ ಟ್ರಾನ್ಸ್‌ಮಿಷನ್ ಪವರ್ ಕಡಿಮೆ ಮಾಡುತ್ತದೆ ಆದರೆ ಸ್ಪೀಡ್ ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಪವರ್ ಮತ್ತು ಸ್ಪೀಡ್ ವಿತರಣೆ ಸಮರ್ಪಕವಾಗಿರುವಂತೆ ಗಿಯರ್ ಬಾಕ್ಸ್ ನೋಡಿಕೊಳ್ಳುತ್ತದೆ.
ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗಿಯರ್ ವ್ಯವಸ್ಥೆಯು ತಮ್ಮದೇ ಆದ ಗುಣ ಮತ್ತು ಅವಗುಣಗಳನ್ನು ಹೊಂದಿವೆ. ಈ ಎರಡು ತಂತ್ರಜ್ಞಾನಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವಿರುವವರು ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಮ್ಯಾನುಯಲ್ ಗಿಯರ್‌ಬಾಕ್ಸ್
ಹಳೆಯ ಕಾರುಗಳಲ್ಲಿ ಸಾಮಾನ್ಯವಾಗಿ ಮ್ಯಾನುಯಲ್ ಗಿಯರ್ ಇರುತ್ತದೆ. ಹೊಸ ಕಾರುಗಳು ಕೂಡ ಮ್ಯಾನುಯಲ್ ಗಿಯರ್ ಇರುತ್ತದೆ. ಈ ಗಿಯರ್ ಬದಲಾಯಿಸುವ ಕಷ್ಟವನ್ನು ತಪ್ಪಿಸುವ ಸಲುವಾಗಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಟೆಕ್ನಾಲಜಿ ಆಗಮಿಸಿತ್ತು.
ಖರೀದಿ ಮತ್ತು ನಿರ್ವಹಣೆ ಅಗ್ಗ: ಮ್ಯಾನುಯಲ್ ಗಿಯರ್‌ಬಾಕ್ಸ್ ಇರುವ ಕಾರುಗಳ ದರ ಸಾಮಾನ್ಯವಾಗಿ ಆಟೋಮ್ಯಾಟಿಕ್ ಕಾರುಗಳಿಗಿಂತ ಕಡಿಮೆ ಇರುತ್ತದೆ. ಈ ಗಿಯರ್ ಬಾಕ್ಸ್‌ನ ಮೆಕಾನಿಸಂನಿಂದಾಗಿ ನಿರ್ವಹಣೆಯೂ ಅಗ್ಗ. ಇದರಿಂದ ಕಾರಿನ ಒಟ್ಟಾರೆ ಮಾಲೀಕತ್ವ ವೆಚ್ಚವು ಆಟೋಮ್ಯಾಟಿಕ್ ಕಾರಿಗಿಂತ ಕಡಿಮೆ ಇರುತ್ತದೆ. ಷ
ಅತ್ಯುತ್ತಮ ಇಂಧನ ದಕ್ಷತೆ: ಆಧುನಿಕ ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗಿಯರ್‌ನ ಕಾರುಗಳ ಇಂಧನ ದಕ್ಷತೆ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ, ಹಳೆಯ ಆಟೋಮ್ಯಾಟಿಕ್ ಗಿಯರ್‌ನ ಕಾರುಗಳಿಗೆ ಹೋಲಿಸಿದರೆ ಮ್ಯಾನುಯಲ್ ಕಾರುಗಳು ಹೆಚ್ಚಿನ ಇಂಧನ ದಕ್ಷತೆ ನೀಡುತ್ತವೆ. ಹಳೆಯ ಮ್ಯಾನುಯಲ್ ಕಾರುಗಳಲ್ಲಿ ಇಂಧನ ದಕ್ಷತೆಯು ಶೇಕಡ 15ರಷ್ಟು ಹೆಚ್ಚಿರುತ್ತದೆ.
ಟ್ರಾಫಿಕ್ ರಸ್ತೆಯಲ್ಲಿ ಸುಸ್ತಾಗಬಹುದು: ಬೆಂಗಳೂರಿನಂತಹ ನಗರಗಳಲ್ಲಿ ಅತ್ಯಧಿಕ ಟ್ರಾಫಿಕ್ ಇರುವಲ್ಲಿ ಮ್ಯಾನುಯಲ್ ಕಾರುಗಳಲ್ಲಿ ಗಿಯರ್ ಬದಲಾಯಿಸುವುದೇ ದೊಡ್ಡ ಕಿರಿಕಿರಿ ಅನಿಸಬಹುದು. ಇದು ಚಾಲಕರಿಗೆ ಹೆಚ್ಚು ಸುಸ್ತು ಉಂಟು ಮಾಡಬಹುದು.
ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗುಣ ಮತ್ತು ಅವಗುಣಗಳು
ಹೊಸ ತಲೆಮಾರಿನ ಚಾಲಕರಿಗೆ, ಗಿಯರ್ ಬದಲಾಯಿಸುವುದು ಕಷ್ಟ ಎನ್ನುವವರಿಗೆ, ಚಾಲನೆ ಸುಲಭವಾಗಿರಬೇಕೆಂದು ಬಯಸುವವರಿಗೆ ಆಟೋಮ್ಯಾಟಿಕ್ ಗಿಯರ್ ಕಾರುಗಳು ಇಷ್ಟವಾಗಬಹುದು. ಇದು ಹೆದ್ದಾರಿ ಅಥವಾ ಸಿಟಿ ಟ್ರಾಫಿಕ್‌ನಲ್ಲಿ ಸುಲಭವಾಗಿ ಚಾಲನೆ ಮಾಡಲು ನೆರವಾಗುತ್ತದೆ. ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಬಹುತೇಕ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಟೋ ಗಿಯರ್ ಕಾರುಗಳನ್ನು ಪರಿಚಯಿಸುತ್ತಿವೆ.
ಬಳಕೆ ಸುಲಭ: ಕಾರು ಚಾಲನೆ ಪ್ರಿಯರಿಗೆ ಕ್ಲಚ್ ಅದುಮಿ ಗಿಯರ್ ಬದಲಾಯಿಸುವುದು ಕಷ್ಟದ ಕೆಲಸವಲ್ಲ. ಆದರೆ, ಹೊಸದಾಗಿ ಕಾರು ಕಲಿಯುವವರಿಗೆ, ಕಾರು ಚಾಲನೆ ಕಷ್ಟ ಎನ್ನುವವರಿಗೆ ಸ್ವಯಂಚಾಲಿತ ಗಿಯರ್ ಇರುವ ಕಾರುಗಳು ಸುಲಭ ಚಾಲನೆಗೆ ಅನುವು ಮಾಡುತ್ತದೆ. ಆರಾಮವಾಗಿ ಕಾರು ಚಾಲನೆ ಮಾಡಬೇಕೆಂದು ಬಯಸುವವರಿಗೆ ಆಟೋಮ್ಯಾಟಿಕ್ ಗಿಯರ್ ಸೂಕ್ತವಾಗಿದೆ.
ಗುಡ್ಡಗಾಡು ರಸ್ತೆಗಳಲ್ಲಿ ಸುಲಭ: ಹಿಲ್ ರಸ್ತೆಗಳಲ್ಲಿ ಅಥವಾ ಏರು ತಗ್ಗು ಹೆಚ್ಚು ಇರುವಲ್ಲಿ ಕೆಲವೊಮ್ಮೆ ಗಿಯರ್ ಬದಲಾಯಿಸುವುದು, ಡಿಕ್ಲಚ್ ಮಾಡುವುದು ಇತ್ಯಾದಿಗಳು ಹೆಚ್ಚಿನ ಚಾಲಕರಿಗೆ ಕಷ್ಟವಾಗುತ್ತದೆ. ವಿಶೇಷವಾಗಿ ಕಡಿಮೆ ಅನುಭವ ಇರುವ ಚಾಲಕರು ಇಂತಹ ರಸ್ತೆಗಳಲ್ಲಿ ಕಷ್ಟಪಡುತ್ತಾರೆ. ಇಂತಹ ಹಿಲ್ ಕ್ಲಿಂಬಿಂಗ್ ರಸ್ತೆಗಳಲ್ಲಿ ಆಟೋಮ್ಯಾಟಿಕ್ ಕಾರುಗಳಲ್ಲಿ ಸುಲಭವಾಗಿ ಪ್ರಯಾಣಿಸಬಹುದು.
ಖರೀದಿಗೆ ಮತ್ತು ನಿರ್ವಹಣೆಗೆ ದುಬಾರಿ: ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಟೆಕ್ನಾಲಜಿಯು ಹೆಚ್ಚು ಸಂಕೀರ್ಣವಾಗಿದ್ದು, ಹೆಚ್ಚು ಬಿಡಿಭಾಗಗಳನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಮ್ಯಾನುಯಲ್ ಗಿಯರ್‌ಗಿಂತ ಆಟೋಮ್ಯಾಟಿಕ್ ಕಾರುಗಳು ಹೆಚ್ಚು ದುಬಾರಿಯಾಗಿವೆ. ಇದೇ ಸಂದರ್ಭದಲ್ಲಿ ರಿಪೇರಿಯೂ ಒಮ್ಮೊಮ್ಮೆ ಕಷ್ಟವಾಗುತ್ತದೆ. ಒಂದೊಂದು ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಬೇರೆಬೇರೆ ರೀತಿಯ ಬಿಡಿಭಾಗಗಳನ್ನು ಹೊಂದಿರುತ್ತವೆ. ನೀವು ರಿಪೇರಿಗೆ ಹೋದ ಸಂದರ್ಭದಲ್ಲಿ ಮೆಕ್ಯಾನಿಕ್ ಬಳಿ ಆ ಬಿಡಿಭಾಗಗಳು ದೊರಕದೆ ಇರಬಹುದು.
ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗಿಯರ್ ಕಾರುಗಳ ಗುಣ ಮತ್ತು ಅವಗುಣಗಳ ಕುರಿತು ನಿಮಗೆ ಒಂದಿಷ್ಟು ಐಡಿಯಾ ಬಂದಿರಬಹುದು. ನೀವು ಕಾರು ಚಾಲನೆ ಮಾಡುವ ಕ್ರೇಜ್ ಹೊಂದಿದ್ದರೆ, ಗಿಯರ್ ಬದಲಾಯಿಸುವ ಸಾಗುವುದು ನಿಮಗೆ ಮಜಾ ನೀಡುವ ಸಂಗತಿಯಾಗಿದ್ದರೆ ನೀವು ಮ್ಯಾನುಯಲ್ ಗಿಯರ್ ಕಾರನ್ನೇ ಆಯ್ಕೆ ಮಾಡಿಕೊಳ್ಳಿ. ಗಿಯರ್ ಬದಲಾಯಿಸುವುದು ಕಿರಿಕಿರಿ ಎನ್ನುವುದಾದರೆ ಆಟೋಮ್ಯಾಟಿಕ್ ಕಾರನ್ನೇ ಆಯ್ಕೆ ಮಾಡಿಕೊಳ್ಳಿ.