logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಸ್ಟ್ರೇಲಿಯಾದಲ್ಲಿ ಬೆಂಗಳೂರು ಟೆಕ್ಕಿ ಹತ್ಯೆ ಪ್ರಕರಣ: ಮಾಹಿತಿ ನೀಡಿದವರಿಗೆ 8 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಪೊಲೀಸರು

ಆಸ್ಟ್ರೇಲಿಯಾದಲ್ಲಿ ಬೆಂಗಳೂರು ಟೆಕ್ಕಿ ಹತ್ಯೆ ಪ್ರಕರಣ: ಮಾಹಿತಿ ನೀಡಿದವರಿಗೆ 8 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಪೊಲೀಸರು

Prasanna Kumar P N HT Kannada

Oct 30, 2024 04:47 PM IST

google News

ಪ್ರಭಾ ಅರುಣ್ ಕುಮಾರ್ ಅವರು ಫೋನ್​ನಲ್ಲಿ ಮಾತನಾಡುತ್ತಾ ಬರುತ್ತಿದ್ದ ಸಂದರ್ಭ.

    • Prabha Arun Kumar: ಆಸ್ಟ್ರೇಲಿಯಾದಲ್ಲಿ 2015ರಲ್ಲಿ ನಡೆದಿದ್ದ ಬೆಂಗಳೂರಿನ ಟೆಕ್ಕಿ ಪ್ರಭಾ ಅರುಣ್ ಕುಮಾರ್ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದವರಿಗೆ ನ್ಯೂ ಸೌತ್ ವೇಲ್ಸ್ ಪೊಲೀಸರು 1 ಮಿಲಿಯನ್ ಡಾಲರ್ ಅಂದರೆ 5 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಪ್ರಭಾ ಅರುಣ್ ಕುಮಾರ್ ಅವರು ಫೋನ್​ನಲ್ಲಿ ಮಾತನಾಡುತ್ತಾ ಬರುತ್ತಿದ್ದ ಸಂದರ್ಭ.
ಪ್ರಭಾ ಅರುಣ್ ಕುಮಾರ್ ಅವರು ಫೋನ್​ನಲ್ಲಿ ಮಾತನಾಡುತ್ತಾ ಬರುತ್ತಿದ್ದ ಸಂದರ್ಭ.

ಬೆಂಗಳೂರು: 2015ರಲ್ಲಿ ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್ ಪ್ರಭಾ ಅರುಣ್ ಕುಮಾರ್ ಕೊಲೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದವರಿಗೆ 1 ಮಿಲಿಯನ್ (8 ಕೋಟಿ ರೂಪಾಯಿಗಿಂತ ಹೆಚ್ಚು) ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (New South Wales) ಪೊಲೀಸರು ಘೋಷಿಸಿದ್ದಾರೆ. 41 ವರ್ಷದ ಪ್ರಭಾ 2015ರ ಮಾರ್ಚ್ 7ರಂದು ರಾತ್ರಿ 9.30ರ ಸುಮಾರಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಮಾರಣಾಂತಿಕವಾಗಿ ಇರಿದು ಕೊಂದಿದ್ದರು. ಈ ಕೊಲೆಯನ್ನು ಉದ್ದೇಶಪೂರ್ವಕ ಎಂದು ಹೇಳಲಾಗಿದೆ.

ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಪ್ರಭಾ (41) ಅವರನ್ನು ಪಶ್ಚಿಮ ಸಿಡ್ನಿಯ ಪರಮಟ್ಟಾ ಪಾರ್ಕ್​​​ ಬಳಿ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಕೃತ್ಯದ ಸಮಯದಲ್ಲಿ ಪ್ರಭಾ ಬೆಂಗಳೂರಿನಲ್ಲಿದ್ದ ಪತಿಯೊಂದಿಗೆ ಫೋನ್​​ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರು ಸಹಾಯಕ್ಕಾಗಿ ಕೂಗಾಡಿದ್ದಾರೆ. ಮೊಬೈಲ್, ಹಣ, ಚಿನ್ನ ಎಲ್ಲವನ್ನೂ ತೆಗೆದುಕೊಂಡು ಹೋಗಿ, ಆದರೆ ನನ್ನನ್ನು ಏನು ಮಾಡಬೇಡಿ ಎಂದು ದುಷ್ಕರ್ಮಿಗಳ ಬಳಿ ಅಂಗಲಾಚಿದ್ದರು. ಪ್ರಭಾ ಬೆಂಗಳೂರಿನ ಐಟಿ ಉದ್ಯೋಗಿಯಾಗಿದ್ದರು.

ಆಕೆ ತನ್ನ ಕುಟುಂಬದಿಂದ ದೂರವಿದ್ದ ಕಾರಣ ಹೆಣಗಾಡುತ್ತಿದ್ದಳು. ಹೀಗಾಗಿ ಭಾರತಕ್ಕೆ ಮರಳಲು ಯೋಜನೆ ರೂಪಿಸುತ್ತಿದ್ದಳು. ಘಟನೆ ನಡೆದು 9 ವರ್ಷಗಳಾದರೂ ಕೊಲೆ ಮಾಡಿದ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಆಸ್ಟ್ರೇಲಿಯನ್ ಪೊಲೀಸರು ಕೊಲೆಯ ತನಿಖೆಗಾಗಿ ವಿಶೇಷ ಕಾರ್ಯಪಡೆ ರಚಿಸಿದ್ದರು. ಆರೋಪಿಗಳ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕವಾಗಿ ಮನವಿ ಮಾಡಿದ್ದರು. ಆದರೆ ಪ್ರಕರಣವು ಬಗೆಹರಿಯದೆ ಉಳಿದಿದೆ. ಈಗ, ಅಲ್ಲಿನ ಸರ್ಕಾರ, ರಾಜ್ಯ ಪೊಲೀಸರು ಸಾರ್ವಜನಿಕರಿಂದ ಮಾಹಿತಿಗಾಗಿ ಮರು-ಮನವಿ ಮಾಡಿದ್ದು, ಬಹುಮಾನ ಘೋಷಿಸಿದ್ದಾರೆ.

ಉದ್ದೇಶಪೂರ್ವಕ ಕೊಲೆ ಎಂದ ಡ್ಯಾನಿ ಡೊಹೆರ್ಟಿ

ಹೊಮಿಸೈಡ್ (ನರಹತ್ಯೆ) ದಳದ ಕಮಾಂಡರ್ ಡಿಟೆಕ್ಟಿವ್ ಸೂಪರಿಂಟೆಂಡೆಂಟ್ ಡ್ಯಾನಿ ಡೊಹೆರ್ಟಿ ಅವರು ಪರಮಟ್ಟಾ ಪಾರ್ಕ್‌ನಲ್ಲಿರುವ ಪ್ರಭಾ ಸ್ಮಾರಕ ವಾಕ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೊಸ ಮುನ್ನಡೆಗಳ ಅಗತ್ಯ ಒತ್ತಿ ಹೇಳಿದ್ದಾರೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ಹೇಳಿದೆ. ಅಪರಿಚಿತರು ಕೊಲೆ ಮಾಡಿರುವ ಸಾಧ್ಯತೆಯನ್ನು ದಾಳಿ ತಳ್ಳಿ ಹಾಕಿರುವ ಅವರು ಇದು ಉದ್ದೇಶಿತ ಕೊಲೆ ಎಂದು ನಂಬಲಾಗಿದೆ ಎಂದು ಹೇಳಿದ್ದಾರೆ. ದರೋಡೆ ಅಥವಾ ಲೈಂಗಿಕ ದೌರ್ಜನ್ಯ ಉದ್ದೇಶಿತ ಕೊಲೆಗೆ ಒಳಪಡುವುದಿಲ್ಲ ಎಂದು ಅವರು ದೃಢಪಡಿಸಿದ್ದಾರೆ.

ದರೋಡೆ ಮಾಡುವುದಾಗಿ ಆಕೆಯೊಂದಿಗಿದ್ದ ನಗ-ನಾಣ್ಯವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಆದರೆ ಇಲ್ಲಿ ಅದ್ಯಾವುದನ್ನೂ ಪಡೆಯದೆ ಹಿಂಬಾಲಿಸಿ ಕೊಲೆ ಮಾಡಲಾಗಿದೆ. ಹೀಗಾಗಿ ಹತ್ಯೆ ಮಾಡಲು ಯೋಜನೆ ರೂಪಿಸಿರುವುದು ಗೊತ್ತಾಗುತ್ತಿದೆ. ಪ್ರಭಾ ಅವರ ಕೊಲೆಯ ಸಮಯದಲ್ಲಿ, ಅವರ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಈ ಬಗ್ಗೆಯೂ ವಿಚಾರಣೆ ನಡೆದಿದ್ದು ತಾನು ನಿರಪರಾಧಿ ಎಂದಿದ್ದು, ಪತ್ನಿಯ ಸಾವಿನಲ್ಲಿ ತನ್ನ ಕೈವಾಡವಿದೆ ಎಂಬ ಆರೋಪವನ್ನು ನಿರಾಕರಿಸಿದ್ದರು.

10ಕ್ಕೂ ಹೆಚ್ಚು ಮಂದಿ ವಿಚಾರಣೆ

ಈ ಹಿಂದೆ ಆಸ್ಟ್ರೇಲಿಯಾದ ಅಧಿಕಾರಿಗಳಿಂದ ವಿಚಾರಣೆಗೊಳಗಾಗಿದ್ದ ಪ್ರಭಾ ಪತಿ ಅರುಣ್ ಕುಮಾರ್ ತಾನು ನಿರಪರಾಧಿ ಎಂದು ನಿರಂತರವಾಗಿ ಹೇಳಿಕೊಂಡಿದ್ದಾರೆ. ಪ್ರಭಾ ನಡೆದುಕೊಂಡು ಬರುತ್ತಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಅವರನ್ನು ಯಾರು ಹಿಂಬಾಲಿಸುತ್ತಿದ್ದರು? ಎಂಬ ಮಾಹಿತಿ ಸಿಕ್ಕಿಲ್ಲ. ಪತಿ ಸೇರಿ 10ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದರೂ ಯಾವ ಪ್ರಯೋಜನವೂ ಆಗಿಲ್ಲ. ಆದರೆ ಈವರೆಗೂ ಉತ್ತರಗಳಿಗಾಗಿ ಹುಡುಕಾಟ ಮುಂದುವರೆದಿರುವ ಪೊಲೀಸರು, ಇದೀಗ 8 ಕೋಟಿ ಬಹುಮಾನ ಘೋಷಿಸಿ ಸಾಕ್ಷಿಗಳನ್ನು ಪ್ರಮುಖ ಮಾಹಿತಿಯೊಂದಿಗೆ ಮುಂದೆ ಬರಲು ಪ್ರೋತ್ಸಾಹಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ