Forest News: ಮಾಜಿ ಸ್ಪೀಕರ್ ರಮೇಶ್ ಕುಮಾರ್ 62 ಎಕರೆ ಅರಣ್ಯ ಒತ್ತುವರಿ ತೆರವಿಗೆ ಕೇಂದ್ರ ಸರ್ಕಾರದ ನವೆಂಬರ್ 7ರ ಗಡುವು
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿರುವ ಸೂಚನೆಯಂತೆ ಆದೇಶ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಬೆಂಗಳೂರು: ಕರ್ನಾಟಕದ ವಿಧಾನಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಆರ್.ರಮೇಶ್‌ಕುಮಾರ್ ಅವರು ಕೋಲಾರ ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವೂ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರ ಸರ್ಕಾರ ಪರಿಸರ ಇಲಾಖೆ ಸಚಿವಾಲಯದ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಈ ಬಾರಿ ಒಂದು ತಿಂಗಳ ಒಳಗೆ ಒತ್ತುವರಿ ತೆರವು ಮುಗಿಸಬೇಕು ಎಂದು 2024ರ ಅಕ್ಟೊಬರ್ 8ರಂದು ಪತ್ರ ಬರೆಯಲಾಗಿದೆ. ಈ ದಿನಾಂಕದಿಂದ ಒಂದು ತಿಂಗಳು ಎಂದರೆ ನವೆಂಬರ್ 7ರ ಒಳಗೆ ಒತ್ತುವರಿ ತೆರವು ಮಾಡುವ ಒತ್ತಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎದುರಾಗಿದೆ. ಅರಣ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಯಾವ ತೀರ್ಮಾನ ಕೈಗೊಳ್ಳುವ ಕುತೂಹಲವಂತೂ ಇದೆ.
ಕರ್ನಾಟಕದಲ್ಲಿ ಅರಣ್ಯ ಇಲಾಖೆಗೆ ಒತ್ತುವರಿ ತೆರವಿಗೆ ಒತ್ತು ನೀಡಿದೆ. ಅದರಲ್ಲೂ ಸಣ್ಣ ಸಣ್ಣ ಒತ್ತುವರಿದಾರರನ್ನೂ ಅರಣ್ಯ ಇಲಾಖೆ ಬಿಡುತ್ತಿಲ್ಲ. ಮೂರು ಎಕರೆ ಒಳಗಿನ ಬಳಕೆಯಲ್ಲಿರುವ ರೈತರ ಜಮೀನು ತೆರವುಗೊಳಿಸುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ದೊಡ್ಡ ಒತ್ತುವರಿದಾರರನ್ನು ಬಿಡುವುದಿಲ್ಲ ಎನ್ನುವುದನ್ನೂ ಹೇಳಿದ್ದಾರೆ. ಬೆಂಗಳೂರಿನ ಎಚ್‌ಎಂಟಿ ಭೂಮಿಗೆ ಸಂಬಂಧಿಸಿಯೂ ಸಚಿವರು ಆಸಕ್ತಿ ವಹಿಸಿದ್ದಾರೆ. ಇದರ ನಡುವೆಯೇ ಕೇಂದ್ರ ಸರ್ಕಾರದಿಂದ ಈ ಸೂಚನೆ ಬಂದಿದೆ. ಈ ಕಾರಣದಿಂದ ಇದು ಕುತೂಹಲ ಹುಟ್ಟಿಸಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಿಂದ ಜನತಾಪಕ್ಷ, ಜನತಾದಳ, ಕಾಂಗ್ರೆಸ್ ಪಕ್ಷದಿಂದ ಶಾಸಕಾಗಿರುವ ಕೆ.ಆರ್.ರಮೇಶ್ ಕುಮಾರ್ ಅವರು ವಿಧಾನಸಭೆಯ ಅಧ್ಯಕ್ಷರೂ ಆಗಿದ್ದರು. ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ವೆಂಕಟಶಿವಾರೆಡ್ಡಿ ಅವರ ವಿರುದ್ದ ಸೋಲು ಅನುಭವಿಸಿದ್ಧಾರೆ. ಅವರು ಕೋಲಾರ ತಾಲ್ಲೂಕು ಶ್ರೀನಿವಾಸಪುರ ವಲಯ ಅರಣ್ಯ ವ್ಯಾಪ್ತಿಯ ಜಿಂಗಲಕುಂಟೆ ಪ್ರದೇಶದಲ್ಲಿ ಜಮೀನು ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು.
62 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು. ಆನಂತರ ಇದು ನ್ಯಾಯಾಲಯದ ಮೆಟ್ಟಿಲೂ ಏರಿತ್ತು. ಹೈಕೋರ್ಟ್ ಕೂಡ ಒತ್ತುವರಿ ತೆರವುಗೊಳಿಸಬೇಕು ಎನ್ನುವ ಸೂಚನೆ ನೀಡಿತ್ತು. ರಮೇಶ್‌ಕುಮಾರ್ ಅವರು ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿದ್ದಾರೆ.
ಇದರ ನಡುವೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯವು ಒತ್ತುವರಿ ತೆರವು ಮಾಡಲು ವಿಳಂಬ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಶ್ರೀನಿವಾಸಪುರ ವಲಯ ವ್ಯಾಪ್ತಿಯಲ್ಲಿ ಕೆ.ಆರ್.ರಮೇಶ್ ಕುಮಾರ್ ಅವರು ಮಾಡಿಕೊಂಡಿರುವ ಒತ್ತುವರಿಯನ್ನು ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ತೆರವುಗೊಳಿಸಿ ಒಂದು ತಿಂಗಳೊಳಗೆ ಪ್ರಕ್ರಿಯೆ ಮುಗಿಸಬೇಕು ಎಂದು ಸೂಚಿಸಿದೆ. ಈ ಹಿಂದೆ ಪರಿಸರ ಇಲಾಖೆಯು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಅಪರ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿತ್ತು. ಅಲ್ಲಿಂದ ಯಾವುದೇ ಪ್ರಕ್ರಿಯೆಗಳು ಆಗದಿರುವ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗೆ ಅಂತಿಮ ಪತ್ರ ಬರೆದಿದೆ.
ಈ ಪತ್ರ ಬರೆದ ಒಂದು ತಿಂಗಳ ಒಳಗೆ ಒತ್ತುವರಿ ತೆರವು ಮಾಡಬೇಕು. ಆನಂತರ ಕ್ರಮ ಕೈಗೊಂಡ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಬೇಕು. ಎರಡು ತಿಂಗಳ ಒಳಗೆ ವರದಿ ನಮ್ಮ ಕೈ ಸೇರಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಯ ಸಹಾಯಕ ಮಹಾನಿರ್ದೇಶಕ ಸಂಜಯಕುಮಾರ್ ಚೌಹಾಣ್ ಅವರು ಪತ್ರವನ್ನು ರವಾನಿಸಿದ್ದಾರೆ.
ರಮೇಶ್ ಕುಮಾರ್ ಅವರ ಅರ್ಜಿ ಹೈಕೋರ್ಟ್‌ನಲ್ಲ ವಜಾ ಆಗಿ ಜಮೀನು ವಶಪಡಿಸಿಕೊಳ್ಳಲು ಸೂಚನೆ ಬಂದಿದೆ. ಈ ಕುರಿತು ಕೇಂದ್ರ ಪರಿಸರ ಸಚಿವಾಲಯದಿಂದಲೂ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ತಲುಪಿದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.