logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Elections: ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯ 35 ಅಭ್ಯರ್ಥಿಗಳ ಪಟ್ಟಿ; ಪವನ್​ ಕಲ್ಯಾಣ್​ ಜೊತೆ ಮೈತ್ರಿ ಸಾಧ್ಯತೆ

Telangana Elections: ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯ 35 ಅಭ್ಯರ್ಥಿಗಳ ಪಟ್ಟಿ; ಪವನ್​ ಕಲ್ಯಾಣ್​ ಜೊತೆ ಮೈತ್ರಿ ಸಾಧ್ಯತೆ

Meghana B HT Kannada

Nov 02, 2023 04:28 PM IST

google News

ಪವನ್​ ಕಲ್ಯಾಣ್​ರ ಜನಸೇನಾ ಜೊತೆ​ ಬಿಜೆಪಿ ಮೈತ್ರಿ ಸಾಧ್ಯತೆ

    • Telangana Assembly Elections: ನಟ, ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಜೊತೆ ಬಿಜೆಪಿ ಮೈತ್ರಿಯ ವದಂತಿ ಕೇಳಿಬಂದಿದೆ. ಪಕ್ಷವು ಕುಕಟ್‌ಪಲ್ಲಿ, ಸೆರಿಲಿಂಗಂಪಲ್ಲಿ ಮತ್ತು ಖಮ್ಮಂ ಕ್ಷೇತ್ರಗಳಲ್ಲಿ ಸ್ಥಾನಗಳನ್ನು ಬಯಸಿದೆ. ಆದರೆ ಪವನ್ ಪ್ರಸ್ತುತ ದೇಶದಲ್ಲಿಲ್ಲ. ಅವರು ಹಿಂದಿರುಗಿದ ನಂತರ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಪವನ್​ ಕಲ್ಯಾಣ್​ರ ಜನಸೇನಾ ಜೊತೆ​ ಬಿಜೆಪಿ ಮೈತ್ರಿ ಸಾಧ್ಯತೆ
ಪವನ್​ ಕಲ್ಯಾಣ್​ರ ಜನಸೇನಾ ಜೊತೆ​ ಬಿಜೆಪಿ ಮೈತ್ರಿ ಸಾಧ್ಯತೆ

ಹೈದರಾಬಾದ್​: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ 35 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಬಿಜೆಪಿಯು 53 ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ 119 ಸ್ಥಾನಗಳ ತೆಲಂಗಾಣ ವಿಧಾನಸಭೆ ಚುನಾವಣೆಗೆ ಇದೀಗ ಪಕ್ಷವು 88 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ಇಂದು ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಓರ್ವ ಮಹಿಳೆಗೆ ಟಿಕೆಟ್​ ನೀಡಲಾಗಿದೆ. ಹುಜೂರ್‌ನಗರ ಕ್ಷೇತ್ರದಿಂದ ಬಿಆರ್‌ಎಸ್‌ನ ಶಾನಂಪುಡಿ ಸೈದಿರೆಡ್ಡಿ ವಿರುದ್ಧ ಚಲ್ಲಾ ಶ್ರೀಲತಾ ರೆಡ್ಡಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ (ಕಾಂಗ್ರೆಸ್) ವಿರುದ್ಧ ಬಿಜೆಪಿ ಲಂಕಾಳ ದೀಪಕ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.

ನಟ, ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಜೊತೆ ಬಿಜೆಪಿ ಮೈತ್ರಿಯ ವದಂತಿ ಕೇಳಿಬಂದಿದೆ. ಪಕ್ಷವು ಕುಕಟ್‌ಪಲ್ಲಿ, ಸೆರಿಲಿಂಗಂಪಲ್ಲಿ ಮತ್ತು ಖಮ್ಮಂ ಕ್ಷೇತ್ರಗಳಲ್ಲಿ ಸ್ಥಾನಗಳನ್ನು ಬಯಸಿದೆ. ಆದರೆ ಪವನ್ ಕಲ್ಯಾಣ್ ಪ್ರಸ್ತುತ ದೇಶದಲ್ಲಿಲ್ಲ. ಅವರು ಹಿಂದಿರುಗಿದ ನಂತರ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ ತೆಲಂಗಾಣ ವಿಧಾನಸಭೆಗೆ ಸ್ಪರ್ಧಿಸಿ ವಿಫಲರಾಗಿದ್ದ ಇಬ್ಬರು ಬಿಜೆಪಿ ಸಂಸದರಾದ ಜಿ ಕಿಶನ್ ರೆಡ್ಡಿ ಮತ್ತು ಕೆ ಲಕ್ಷ್ಮಣ್ ಅವರ ಹೆಸರು ಬಿಜೆಪಿಯ ಮೂರೂ ಪಟ್ಟಿಯಲ್ಲಿಲ್ಲ. ಇನ್ನು ನಿನ್ನೆಯಷ್ಟೆ (ನ.1) ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಆರ್‌ಎಸ್ ಶಾಸಕ ರಾಥೋಡ್ ಬಾಪು ರಾವ್ ಮತ್ತು ಕಾಂಗ್ರೆಸ್ ನಾಯಕ ಚಲಮಲ ಕೃಷ್ಣಾ ರೆಡ್ಡಿ ಬಿಜೆಪಿಗೆ ಸೇರ್ಪಡೆಯಾದರು. ಈ ಬಾರಿ ಚುನಾವಣೆಗೆ ಇಬ್ಬರೂ ನಾಯಕರಿಗೆ ಅವರ ಮೂಲ ಪಕ್ಷಗಳು ಟಿಕೆಟ್ ನಿರಾಕರಿಸಿದ್ದವು. ಇವರೊಂದಿಗೆ ಯಲ್ಲರೆಡ್ಡಿ ಕ್ಷೇತ್ರದ ಹಲವು ಮುಖಂಡರು ಬಿಜೆಪಿಗೆ ಸೇರಿಕೊಂಡರು.

ತೆಲಂಗಾಣದಲ್ಲಿ 119 ವಿಧಾನಸಭಾ ಸ್ಥಾನಗಳಿಗೆ ನವೆಂಬರ್‌ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಕೆಸಿಆರ್ ಅವರ ಬಿಆರ್​ಎಸ್​ (ಅಂದಿನ ಟಿಆರ್​ಎಸ್​) ಪಕ್ಷವು 88 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ಬಿಆರ್​ಎಸ್​ ಅಧಿಕಾರ ಉಳಿಸಿಕೊಳ್ಳಲು ಆಕರ್ಷಕ ಭರವಸೆಗಳನ್ನು ನೀಡಿ ಭರ್ಜರಿ ಪ್ರಚಾರ ನಡೆಸುತ್ತಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ