Telangana Elections: ಇಲ್ಲಿ ಗೃಹಲಕ್ಷ್ಮಿ, ಅಲ್ಲಿ ಸೌಭಾಗ್ಯ ಲಕ್ಷ್ಮಿ; ಫ್ರೀ ಇನ್ಶುರೆನ್ಸ್ ಜೊತೆ ಬಿಆರ್‌ಎಸ್​​ನ ಇತರ ಭರವಸೆಗಳು ಹೀಗಿವೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Elections: ಇಲ್ಲಿ ಗೃಹಲಕ್ಷ್ಮಿ, ಅಲ್ಲಿ ಸೌಭಾಗ್ಯ ಲಕ್ಷ್ಮಿ; ಫ್ರೀ ಇನ್ಶುರೆನ್ಸ್ ಜೊತೆ ಬಿಆರ್‌ಎಸ್​​ನ ಇತರ ಭರವಸೆಗಳು ಹೀಗಿವೆ

Telangana Elections: ಇಲ್ಲಿ ಗೃಹಲಕ್ಷ್ಮಿ, ಅಲ್ಲಿ ಸೌಭಾಗ್ಯ ಲಕ್ಷ್ಮಿ; ಫ್ರೀ ಇನ್ಶುರೆನ್ಸ್ ಜೊತೆ ಬಿಆರ್‌ಎಸ್​​ನ ಇತರ ಭರವಸೆಗಳು ಹೀಗಿವೆ

BRS manifesto: ಸೌಭಾಗ್ಯ ಲಕ್ಷ್ಮಿ ಯೋಜನೆಯಡಿ ಪ್ರತಿ ಬಡ ಕುಟುಂಬದ ಅರ್ಹ ಮಹಿಳೆಗೆ ತಿಂಗಳಿಗೆ 3,000 ರೂ. ಆರ್ಥಿಕ ನೆರವು ನೀಡುವುದಾಗಿ ಬಿಆರ್​ಎಸ್​ ತನ್ನ ಚುನಾವಣಾ ಪ್ರಣಾಳಿಕೆ ಘೋಷಿಸಿದೆ.

 ಬಿಆರ್‌ಎಸ್ ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್
ಬಿಆರ್‌ಎಸ್ ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್

ಹೈದರಾಬಾದ್​​: ತೆಲಂಗಾಣ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಉಚಿತ ಜೀವ ವಿಮೆ, ರೈತರಿಗೆ ಸಹಾಯಧನ ಹೆಚ್ಚಳ, 400 ರೂ.ಗೆ ಗ್ಯಾಸ್​ ಸಿಲಿಂಡರ್ ಸೇರಿದಂತೆ ಜನರಿಗೆ ಭರ್ಜರಿ ಭರವಸೆ ನೀಡಿದೆ.

ಇಂದು (ಅ.15) ತೆಲಂಗಾಣ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಿಆರ್‌ಎಸ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ತಮ್ಮ ಸರ್ಕಾರ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಏನು ಭರವಸೆ ನೀಡಿದ್ದರೂ ಅದನ್ನು ಜಾರಿಗೊಳಿಸಿ, ದೇಶದಲ್ಲೇ ಅತ್ಯುತ್ತಮ ನೀತಿಗಳನ್ನು ಅಳವಡಿಸಿ ನಂಬರ್ 1 ಸ್ಥಾನಕ್ಕೇರಿದೆ ಎಂದರು.

“ನಮ್ಮಲ್ಲಿ ದೇಶದ ಅತ್ಯುತ್ತಮ ಆರ್ಥಿಕ ನೀತಿ, ಕೃಷಿ ನೀತಿ, ಕುಡಿಯುವ ನೀರಿನ ನೀತಿ, ನೀರಾವರಿ ನೀತಿ, ವಿದ್ಯುತ್ ನೀತಿ, ದಲಿತ ನೀತಿ, ಕಲ್ಯಾಣ ನೀತಿ, ಕೈಗಾರಿಕಾ ನೀತಿ ಮತ್ತು ವಸತಿ ನೀತಿಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಪ್ರಸ್ತುತ ಪ್ರಣಾಳಿಕೆಯು ಈ ಎಲ್ಲಾ ನೀತಿಗಳನ್ನು ಮುಂದುವರಿಸುವುದು ಮಾತ್ರವಲ್ಲದೆ ಎಲ್ಲಾ ವರ್ಗದ ಜನರ ಜೀವನೋಪಾಯವನ್ನು ಸುಧಾರಿಸುವ ಹೊಸ ಯೋಜನೆಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ, ”ಎಂದು ಅವರು ಹೇಳಿದರು.

ಬಿಆರ್​​ಎಸ್​​ ಪ್ರಣಾಳಿಕೆಯಲ್ಲಿನ ಭರವಸೆಗಳು ಹೀಗಿವೆ

ಉಚಿತ ಜೀವ ವಿಮೆ: ಬಡತನ ರೇಖೆಗಿಂತ ಕೆಳಗಿರುವ ಸುಮಾರು 93 ಲಕ್ಷ ಕುಟುಂಬಗಳಿಗೆ ರೈತ ಬಿಮಾ ಮಾದರಿಯಲ್ಲಿ ಕೆಸಿಆರ್ ಬಿಮಾ ಅಡಿಯಲ್ಲಿ 5 ಲಕ್ಷ ರೂಪಾಯಿವರೆಗೆ ಜೀವ ವಿಮೆ. ಎಲ್ಲಾ ಫಲಾನುಭವಿಗಳ ಶೇ.100ರಷ್ಟು ಪ್ರೀಮಿಯಂ ಅನ್ನು ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಸರ್ಕಾರವೇ ಪಾವತಿಸುತ್ತದೆ ಎಂದು ಸಿಎಂ ಕೆಸಿಆರ್​ ಹೇಳಿದ್ದಾರೆ.

ರೈತರ ಸಹಾಯಧನ ಹೆಚ್ಚಳ: ರೈತ ಬಂಧು ಯೋಜನೆಯಡಿ ರೈತರ ಸಹಾಯಧನವನ್ನು ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೆ 10 ಸಾವಿರದಿಂದ 16 ಸಾವಿರ ರೂ.ಗೆ ಹೆಚ್ಚಿಸುವುದು. ಮೊದಲ ವರ್ಷದಲ್ಲಿ 12,000 ರೂ.ಗೆ ಹೆಚ್ಚಿಸಲಾಗುವುದು.

ಕಡಿಮೆ ಬೆಲೆಗೆ ಸಿಲಿಂಡರ್​: ಪ್ರತಿ ಅರ್ಹ ಬಿಪಿಎಲ್ ಕುಟುಂಬಕ್ಕೆ ಎಲ್​​ಪಿಜಿ ಗ್ಯಾಸ್​ ಸಿಲಿಂಡರ್ ಅನ್ನು 400 ರೂಪಾಯಿಗೆ ಪೂರೈಸುವುದು. ಮಾನ್ಯತೆ ಪಡೆದ ಪತ್ರಕರ್ತರ ಕುಟುಂಬಗಳಿಗೂ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಯೋಜನೆ ಅನ್ವಯವಾಗಲಿದೆ.

ಪಿಂಚಣಿ ಹೆಚ್ಚಳ: ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ “ಆಸರಾ” ಯೋಜನೆಯಡಿ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮುಂದಿನ ಐದು ವರ್ಷಗಳಲ್ಲಿ 2,016 ರೂ. ಇಂದ 6,000 ರೂ.ಗೆ ಹೆಚ್ಚಿಸುವುದು. ಮುಂದಿನ ವರ್ಷ 3,016ರೂ. ಮಾಡಿ ಮುಂದಿನ ಐದು ವರ್ಷಗಳಲ್ಲಿ ಕ್ರಮೇಣ 6,000 ರೂ.ಗೆ ಹೆಚ್ಚಿಸಲಾಗುವುದು.

ಸೌಭಾಗ್ಯ ಲಕ್ಷ್ಮಿ: ಮತ್ತೊಂದು ಪ್ರಮುಖ ಭರವಸೆಯೆಂದರೆ ಸೌಭಾಗ್ಯ ಲಕ್ಷ್ಮಿ ಯೋಜನೆಯಡಿ ಪ್ರತಿ ಬಡ ಕುಟುಂಬದ ಅರ್ಹ ಮಹಿಳೆಗೆ ತಿಂಗಳಿಗೆ 3,000 ರೂ. ಆರ್ಥಿಕ ನೆರವು ನೀಡುವುದಾಗಿದೆ.

ದಿವ್ಯಾಂಗರಿಗೆ ಸಹಾಯಧನ: ಈ ವರ್ಷದಿಂದ ದಿವ್ಯಾಂಗರಿಗೆ 4,016 ನೀಡುವುದಾಗಿ ಈಗಾಗಲೇ ಭರವಸೆ ನೀಡಲಾಗಿದ್ದು, ಹಂತಹಂತವಾಗಿ ಇದನ್ನು 6 ಸಾವಿರ ರೂ.ಗೆ ಹೆಚ್ಚಿಸಲಾಗುವುದು.

ಕೆಸಿಆರ್ ಆರೋಗ್ಯ ರಕ್ಷಾ: ಬಿಆರ್​ಎಸ್​ ಪಕ್ಷವು ಕೆಸಿಆರ್ ಆರೋಗ್ಯ ರಕ್ಷಾ ಎಂಬ ಹೊಸ ಆರೋಗ್ಯ ಯೋಜನೆಯನ್ನು ಘೋಷಿಸಿದ್ದು, ಇದರ ಅಡಿಯಲ್ಲಿ ಎಲ್ಲಾ ಅರ್ಹ ವ್ಯಕ್ತಿಗಳು ಖಾಸಗಿ ಆಸ್ಪತ್ರೆಗಳಲ್ಲಿ 15 ಲಕ್ಷದ ವರೆಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು. ಈಗಿರುವ ಆರೋಗ್ಯ ಶ್ರೀ ಯೋಜನೆಯಡಿ 10 ಲಕ್ಷ ರೂ. ಮಿತಿ ಇತ್ತು. ಅರ್ಹ ಪತ್ರಕರ್ತರಿಗೂ ಈ ಆರೋಗ್ಯ ಯೋಜನೆಯನ್ನು ವಿಸ್ತರಿಸುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

ಡಬಲ್ ಬೆಡ್‌ರೂಮ್ ಮನೆ: ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬಂದರೆ, ಇನ್ನೂ ಒಂದು ಲಕ್ಷ ಬಡ ಕುಟುಂಬಗಳಿಗೆ ಡಬಲ್ ಬೆಡ್‌ರೂಮ್ ಮನೆಗಳನ್ನು ನಿರ್ಮಿಸುವ ಪ್ರಸ್ತುತ ಯೋಜನೆಯನ್ನು ಮುಂದುವರಿಸುತ್ತದೆ, ಜೊತೆಗೆ ನಿವೇಶನ ಹೊಂದಿರುವ ಬಡ ಕುಟುಂಬಕ್ಕೆ 5 ಲಕ್ಷ ಪಾವತಿಸಲಾಗುವುದು ಎಂದು ಹೇಳಿದರು.

ಅನಾಥ ಮಕ್ಕಳ ದತ್ತು: ರಾಜ್ಯ ಸರ್ಕಾರವು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವರನ್ನು 'ರಾಜ್ಯ ಮಕ್ಕಳು' ಎಂದು ಕರೆಯುತ್ತದೆ ಮತ್ತು ಅವರಿಗೆ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಿದೆ.

ಉತ್ತಮ ಅಕ್ಕಿ: ಬಿಆರ್‌ಎಸ್ ಪ್ರಣಾಳಿಕೆಯು ತೆಲಂಗಾಣ ಅನ್ನಪೂರ್ಣ ಯೋಜನೆಯಡಿ ಎಲ್ಲಾ ಪಡಿತರ ಚೀಟಿದಾರರಿಗೆ 2024ರ ಏಪ್ರಿಲ್-ಮೇ ತಿಂಗಳಿನಿಂದ ಉತ್ತಮ ಅಕ್ಕಿಯನ್ನು ಒದಗಿಸುವುದು

ನವೆಂಬರ್‌ 30ರಂದು ಮತದಾನ

ತೆಲಂಗಾಣದಲ್ಲಿ 119 ವಿಧಾನಸಭಾ ಸ್ಥಾನಗಳಿಗೆ ನವೆಂಬರ್‌ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.