ಐಪಿಒ ದಾಖಲೆ: ಹ್ಯುಂಡೈ ಇಂಡಿಯಾ ಐಪಿಒ ಗಾತ್ರದಲ್ಲಿ ನಂಬರ್ 1, ಆದರೆ ರಿಟೇಲ್ ಸಬ್‌ಸ್ಕ್ರಿಪ್ಶನ್ ಜನರಲ್ ಇನ್ಶೂರೆನ್ಸ್‌ಗಿಂತಲೂ ಕಡಿಮೆ
Oct 18, 2024 09:49 AM IST
ಹ್ಯುಂಡೈ ಇಂಡಿಯಾ ಐಪಿಒ ಗಾತ್ರದಲ್ಲಿ ನಂಬರ್ 1, ಆದರೆ ರಿಟೇಲ್ ಸಬ್‌ಸ್ಕ್ರಿಪ್ಶನ್ ಜನರಲ್ ಇನ್ಶೂರೆನ್ಸ್‌ಗಿಂತಲೂ ಕಡಿಮೆ ದಾಖಲಾಗಿದೆ.
ಐಪಿಒ ದಾಖಲೆ: ಹ್ಯುಂಡೈ ಇಂಡಿಯಾ ಐಪಿಒ ಗಾತ್ರದಲ್ಲಿ ನಂಬರ್ 1 ಆಗಿದೆ. ಆದರೆ ರಿಟೇಲ್ ಸಬ್‌ಸ್ಕ್ರಿಪ್ಶನ್ ಜನರಲ್ ಇನ್ಶೂರೆನ್ಸ್‌ಗಿಂತಲೂ ಕಡಿಮೆ ಇರುವುದು ಗಮನಸೆಳೆದಿದೆ. ಈ ಹಿನ್ನೆಲೆಯಲ್ಲಿ ಐಪಿಒ ದಾಖಲೆಗಳ ಕಡೆಗೊಂದು ನೋಟ ಇಲ್ಲಿದೆ.
ಮುಂಬಯಿ: ಭಾರತದ ಐಪಿಒ ಮಾರುಕಟ್ಟೆಯ ಅತಿದೊಡ್ಡ ಗಾತ್ರದ ಐಪಿಒ ಎಂಬ ಕೀರ್ತಿಗೆ ಭಾಜನವಾಗಿರುವ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ರಿಟೇಲ್ ಹೂಡಿಕೆದಾರರ ಮನಗೆಲ್ಲುವಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಐಪಿಒ ಮಾರುಕಟ್ಟೆ ಇತಿಹಾಸ ಗಮನಿಸಿದರೆ, ರಿಟೇಲ್ ಹೂಡಿಕೆದಾರರು ಇದಕ್ಕಿಂತ ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಬಗ್ಗೆ ಒಲವು ತೋರಿರುವುದು ಕಂಡುಬಂದಿದೆ. ಹ್ಯುಂಡೈ ಇಂಡಿಯಾ ಐಪಿಒ ಮಾರಾಟ ಅಕ್ಟೋಬರ್ 15 ರಿಂದ ಅಕ್ಟೋಬರ್ 17ರ ತನಕ ನಡೆದಿತ್ತು. ಇಂದು (ಅಕ್ಟೋಬರ್ 18) ಐಪಿಒ ಹಂಚಿಕೆಯಾಗಲಿದೆ. ಹ್ಯುಂಡೈ ಮೋಟಾರ್ಸ್ ಇಂಡಿಯಾ ಐಪಿಒ ಪಡೆಯಲು ಹೂಡಿಕೆದಾರರು ನಿರೀಕ್ಷೆ ಮೀರಿದ ಉತ್ಸಾಹ ತೋರಿದ್ದು ಕಂಡುಬರಲಿಲ್ಲವಾದರೂ, ಬಿಡ್ಡಿಂಗ್ ಕೊನೆಗೊಂಡಾಗ 2.37 ಪಟ್ಟು ಹೆಚ್ಚು ಬಿಡ್ಡಿಂಗ್ ದಾಖಲಾಗಿದೆ. ಹ್ಯುಂಡೈ ಮೋಟಾರ್ಸ್ ಇಂಡಿಯಾ ಕಂಪನಿ ತನ್ನ 14.22 ಕೋಟಿ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಹೊರಬಿಟ್ಟಿದ್ದು ಅದರ ಮೂಲಕ 27,870.16 ಕೋಟಿ ರೂಪಾಯಿ ಸಂಗ್ರಹದ ಗುರಿ ಹಾಕಿಕೊಂಡಿದೆ.
ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಬಿಡ್ಡಿಂಗ್
ಭಾರತದ ಐಪಿಒ ಮಾರುಕಟ್ಟೆಯಲ್ಲಿ ಗಾತ್ರದಲ್ಲಿ ನಂಬರ್ 1 ಐಪಿಒ ಎನಿಸಿಕೊಂಡಿರುವ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಅಕ್ಟೋಬರ್ 15 ರಂದು ಓಪನ್ ಆಗಿದ್ದು, ಮೊದಲ ದಿನ ಶೇಕಡ 18, ಎರಡನೇ ದಿನ ಶೇಕಡ 42ರಷ್ಟು ಸಬ್‌ಸ್ಕ್ರಿಪ್ಶನ್ ದಾಖಲಿಸಿಕೊಂಡಿತ್ತು. ಮೂರನೇ ದಿನದ್ದು ಸೇರಿಸಿ ಒಟ್ಟು 2.37 ಪಟ್ಟು ಹೆಚ್ಚು ಬಿಡ್ಡಿಂಗ್ ದಾಖಲಿಸಿಕೊಂಡಿದೆ. ಆದರೆ, ಇತ್ತೀಚಿನ ದೊಡ್ಡ ಗಾತ್ರದ ಐಪಿಒಗಳ ಪೈಕಿ ರಿಟೇಲ್ ಹೂಡಿಕೆದಾರರ ಭಾಗವಹಿಸುವಿಕೆ ಇದರಲ್ಲಿ ಕಡಿಮೆ ಅಂದರೆ 0.5 ಪಟ್ಟು ಇತ್ತು.
ದೊಡ್ಡ ಗಾತ್ರದ ಐಪಿಒ ಮತ್ತು ಅವುಗಳ ರಿಟೇಲ್ ಸಬ್‌ಸ್ಕ್ರಿಪ್ಶನ್
ಉದಾಹರಣೆಗೆ ಗಮನಿಸುವುದಾದರೆ ಈ ಹಿಂದಿನ ಅತಿದೊಡ್ಡ ಗಾತ್ರದ ಐಪಿಒ ಎಲ್‌ಐಸಿಯದ್ದಾಗಿತ್ತು. ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಐಪಿಒ 1.99 ಪಟ್ಟು ರಿಟೇಲ್ ಸಬ್‌ಸ್ಕ್ರಿಪ್ಶನ್ ದಾಖಲಿಸಿತ್ತು. ಕೋಲ್ ಇಂಡಿಯಾ ಲಿಮಿಟೆಡ್ ಕೂಡ 2.31 ಪಟ್ಟು ಹೆಚ್ಚು ಸಬ್‌ಸ್ಕ್ರಿಪ್ಶನ್ ದಾಖಲಿಸಿತ್ತು. ಗಮನಸೆಳೆಯುವ ಅಂಶ ಎಂದರೆ ರಿಲಯನ್ಸ್ ಪವರ್ ಐಪಿಒ 14.87 ಪಟ್ಟು ಹೆಚ್ಚು ರಿಟೇಲ್ ಸಬ್‌ಸ್ಕ್ರಿಪ್ಶನ್ ದಾಖಲಿಸಿದ್ದು. ಇನ್ನು ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಗಾತ್ರದಲ್ಲಿ 11,175.84 ಕೋಟಿ ರೂಪಾಯಿಯದ್ದಾಗಿತ್ತು. ಇದು ಕೂಡ 0.63 ಪಟ್ಟು ರಿಟೇಲ್ ಸಬ್‌ಸ್ಕ್ರಿಪ್ಶನ್ ಪಡೆದುಕೊಂಡಿತ್ತು.
ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒದಲ್ಲಿ ಷೇರು ದರ 1,865 ರೂಪಾಯಿ- 1960 ರೂಪಾಯಿ ನಡುವೆ ನಿಗದಿಯಾಗಿತ್ತು. ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ನಿರ್ವಹಿಸುವುದಕ್ಕಾಗಿ ಕೊಟಾಕ್ ಮಹಿಂದ್ರಾ ಕ್ಯಾಪಿಟಲ್ ಕಂಪನಿ, ಹೆಚ್‌ಎಸ್‌ಬಿಸಿ ಸೆಕ್ಯುರಿಟೀಸ್ ಆಂಡ್ ಕ್ಯಾಪಿಟಲ್ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್, ಜೆಪಿ ಮೋರ್ಗಾನ್ ಇಂಡಿಯಾ, ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ, ಮೋರ್ಗಾನ್ ಸ್ಟ್ಯಾನ್ಲಿ ಇಂಡಿಯಾ ಕಂಪನಿಗಳನ್ನು ನೇಮಕ ಮಾಡಲಾಗಿತ್ತು. ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್ ಇದರ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಿದೆ. ಹ್ಯುಂಡೈ ಐಪಿಒ ಇಂದು ಹಂಚಿಕೆಯಾಗಲಿದ್ದು, ಅಕ್ಟೋಬರ್ 22ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಲಿಸ್ಟಿಂಗ್ ಆಗಲಿದೆ.