ರತನ್ ಟಾಟಾ: ವ್ಯಾಪಾರೋದ್ಯಮ ಕ್ಷೇತ್ರದ ನೈಜ ದಂತಕಥೆಯಾಗಿ ಬಾಳಿದ ಮಹಾ ಉದ್ಯಮಿಯ ಬದುಕಿನ ಚಿತ್ರಣ ಕಟ್ಟಿಕೊಡುವ 10 ಅಂಶಗಳು
Oct 10, 2024 07:03 AM IST
ರತನ್ ಟಾಟಾ: ವ್ಯಾಪಾರೋದ್ಯಮ ಕ್ಷೇತ್ರದ ನೈಜ ದಂತಕಥೆ (1937-2024)
ರತನ್ ಟಾಟಾ - ಭಾರತದ ವ್ಯಾಪಾರೋದ್ಯಮ ಕ್ಷೇತ್ರದ ನೈಜ ದಂತಕಥೆ. ಈ ಕ್ಷೇತ್ರದ ಸಂತನಂತೆ ಬದುಕಿ ನೂರಾರು ನವೋದ್ಯಮಗಳಿಗೆ ನೆರವಾಗುತ್ತ ಜಾಗತಿಕ ಮಟ್ಟದಲ್ಲಿ ಭಾರತದ ಅಸ್ಮಿತೆ ಕಟ್ಟಲು ನೆರವಾದವರು. ಈ ಮಹಾ ಉದ್ಯಮಿಯ ಬದುಕಿನ ಚಿತ್ರಣ ಕಟ್ಟಿಕೊಡುವ 10 ಅಂಶಗಳ ಕಡೆಗೊಂದು ನೋಟ ಇಲ್ಲಿದೆ.
ಭಾರತದ ಅಸ್ಮಿತೆಯೊಂದಿಗೇ ಬೆಳೆದ ಪುರಾತನ ವ್ಯಾಪಾರೋದ್ಯಮದ ನಾಯಕ ರತನ್ ಟಾಟಾ. ಅವರು ಟಾಟಾ ವ್ಯಾಪಾರ ಸಾಮ್ರಾಜ್ಯವನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದ ಪರಿ ಅನನ್ಯ. ಮನೆ ಬಳಕೆಯ ಉಪ್ಪಿನಿಂದ ಹಿಡಿದು ವಿಮಾನ ಯಾನದ ತನಕ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿರುವ ಟಾಟಾ ಗ್ರೂಪ್ಸ್ ಅನ್ನು ಕಟ್ಟಿ ಬೆಳೆಸಿದ ರೀತಿ ಆದರ್ಶವಾದುದು. ಅಂಥದ್ದೇ ವ್ಯಾಪಾರ ಸಾಮ್ರಾಜ್ಯ ಕಟ್ಟಬೇಕು ಎಂದು ಹಲವರಿಗೆ ಪ್ರೇರಣೆ ನೀಡುವಂಥದ್ದು. ಅಂದ ಹಾಗೆ, ರತನ್ ಟಾಟಾ ಅವರು ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದರು ಎಂದು ಟಾಟಾ ಗ್ರೂಪ್ಸ್ ನಿನ್ನೆ (ಅಕ್ಟೋಬರ್ 9) ತಡರಾತ್ರಿ ಹೇಳಿಕೆ ನೀಡಿದೆ. “ಅತ್ಯಂತ ವಿಷಾದ ಭಾವದೊಂದಿಗೆ ನಾವು ಶ್ರೀ ರತನ್ ನವಲ್ ಟಾಟಾ ಅವರಿಗೆ ವಿದಾಯ ಹೇಳುತ್ತಿದ್ದೇವೆ. ಅವರ ಕೊಡುಗೆಗಳು ಅಪಾರ. ಟಾಟಾ ಗ್ರೂಪ್ ಮಾತ್ರವಲ್ಲ ನಮ್ಮ ದೇಶ ಕಟ್ಟುವಲ್ಲಿ ಆ ಕೊಡುಗೆಗಳು ಹೆಚ್ಚು ಮಹತ್ವವಹಿಸಿವೆ” ಎಂದು ಟಾಟಾ ಗ್ರೂಪ್ ಹೇಳಿದೆ.
ವಾಪಾರೋದ್ಯಮ ಕ್ಷೇತ್ರದ ದಂತಕಥೆಯಾಗಿ ಬೆಳೆದ ರತನ್ ಟಾಟಾ
1) ಟಾಟಾ ಗ್ರೂಪ್‌ನ ನಾಯಕತ್ವ: ಟಾಟಾ ಸನ್ಸ್‌ನ ಚೇರ್‌ಮನ್ ಆಗಿ ರತನ್ ಟಾಟಾ ಅವರು ಎರಡು ದಶಕ ಅಂದರೆ 1991 ರಿಂದ 2012ರ ತನಕ ಕೆಲಸ ನಿರ್ವಹಿಸಿದ್ದರು. ಅದಾಗಿ ವಿರಮಿಸಿದ್ದರು. ಆದಾಗ್ಯೂ 2016ರಲ್ಲಿ ಮತ್ತೆ ಮಧ್ಯಂತರ ಚೇರ್‌ಮನ್ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದರು.
2) ರತನ್ ಟಾಟಾ ಬಾಲ್ಯ ಮತ್ತು ಬದುಕು: ರತನ್ ಟಾಟಾ ಅವರು ಮುಂಬೈನಲ್ಲಿ 1937ರ ಡಿಸೆಂಬರ್ 28 ರಂದು ಜನಿಸಿದರು. ಪೂರ್ತಿ ಹೆಸರು ರತನ್ ನವಲ್ ಟಾಟಾ. ಅವರಿಗೆ 10 ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ ನವಲ್ ಮತ್ತು ಸೂನಿ ಟಾಟಾ ದಂಪತಿ ವಿವಾಹ ವಿಚ್ಛೇದನ ಪಡೆದ ಬಳಿಕ ರತನ್ ಟಾಟಾ ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಟಾಟಾ ಗ್ರೂಪ್‌ನ ಸಂಸ್ಥಾಪಕ ಜೆಮ್‌ಶೆಟ್ಜಿ ಟಾಟಾ ಅವರ ಸೊಸೆ ರತನ್ ಅವರ ತಂದೆ ನವಲ್ ಅವರನ್ನು ಅವರ 13ನೇ ವಯಸ್ಸಿನಲ್ಲಿ ದತ್ತು ಪಡೆದ ಕಾರಣ ಟಾಟಾ ಕುಟುಂಬ ಸೇರಿದ್ದರು. ರತನ್ ಟಾಟಾ ಅವಿವಾಹಿತರು.
3) ರತನ್ ಟಾಟಾ ಅವರ ಶೈಕ್ಷಣಿಕ ಹಿನ್ನೆಲೆ: ರತನ್ ಟಾಟಾ ಅವರು ಮುಂಬಯಿಯಲ್ಲಿ ಬಾಲ್ಯದ ಶಿಕ್ಷಣ ಪೂರೈಸಿದ್ದು ನಂತರ, 1962ರಲ್ಲಿ ಅಮೆರಿಕದ ಕಾರ್ನೆಲ್ ಯೂನಿವರ್ಸಿಟಿಯಲ್ಲಿ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಪದವಿ ಪಡೆದರು. ಇದಕ್ಕೂ ಮೊದಲು ತಂದೆಯ ಆಸೆಯಂತೆ ಮೆಕಾನಿಕಲ್ ಇಂಜಿನಿಯಿಂಗ್ ಪದವಿ ಪಡೆದಿದ್ದರು.
4) ಜಾಗತಿಕ ವಹಿವಾಟಿಗೆ ಟಾಟಾ ಗ್ರೂಪ್: ಭಾರತದಲ್ಲಷ್ಟೇ ವ್ಯಾಪಾರ ವ್ಯವಹಾರ ಮಾಡುತ್ತಿದ್ದ ಟಾಟಾ ಗ್ರೂಪ್ ರತನ್ ಟಾಟಾ ನಾಯಕತ್ವದಲ್ಲಿ ಜಾಗತಿಕವಾಗಿ ತನ್ನ ವಹಿವಾಟು ವಿಸ್ತರಿಸಿತು. 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆ ಶುರುಮಾಡಿತು. 2024 ಮಾರ್ಚ್ ಅಂತ್ಯಕ್ಕೆ ಕಂಪನಿಯ ಆದಾಯ 165 ಶತಕೋಟಿ ಡಾಲರ್ ಆಗಿತ್ತು.
5) ಟಾಟಾ ಬ್ರ್ಯಾಂಡ್ ಐತಿಹಾಸಿಕ ನಡೆ: ಭಾರತದ ಕಂಪನಿಯೊಂದು ಜಾಗತಿಕ ಮಟ್ಟಕ್ಕೆ ಬೆಳೆದು ಒಂದು ಬ್ರ್ಯಾಂಡ್ ಆಗಿ ಗುರುತಿಸಿಕೊಂಡ ರೀತಿ ಹೆಮ್ಮೆ ಮೂಡಿಸುವಂಥದ್ದು. ಇದಕ್ಕೆ ಮೆರುಗು ನೀಡಿದ್ದು ಬ್ರಿಟನ್‌ನ ಮುಂಚೂಣಿ ಬ್ರ್ಯಾಂಡ್‌ಗಳ ಖರೀದಿ. ವಿಶೇಷವಾಗಿ ಬ್ರಿಟಿಷ್ ಉಕ್ಕು ತಯಾರಕ ಕಂಪನಿ ಕೋರಸ್ (2007) ಮತ್ತು ಐಷಾರಾಮಿ ಕಾರು ತಯಾರಕ ಕಂಪನಿ ಜಾಗ್ವಾರ್ ಲಾಂಡ್ ರೋವರ್ (2008)
6) ಟಾಟಾ ತೆಕ್ಕೆಗೆ ವಿಮಾನ: ಟಾಟಾ ಗ್ರೂಪ್ ಆರಂಭಿಸಿದ್ದ ವಿಮಾನ ಯಾನ ಕಂಪನಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣಗೊಳಿಸಿತ್ತು. ಅದಾಗಿ 90 ವರ್ಷದ ಬಳಿಕ ಅದೇ ವಿಮಾನ ಕಂಪನಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ತನ್ನ ತೆಕ್ಕೆ ತೆಗೆದುಕೊಂಡದ್ದು (2021) ಈಗ ಇತಿಹಾಸ.
7) ನವೋನ್ವೇಷಣೆಗೆ ಆದ್ಯತೆ: ರತನ್ ಟಾಟಾ ನಾಯಕತ್ವದಲ್ಲಿ ಟಾಟಾದ ಟೆಕ್ ಗ್ರೂಪ್ ಭಾರತದ ಮೊದಲ ಸೂಪರ್ ಆಪ್ ಟಾಟಾ ನ್ಯೂ (Tata Neu) ವನ್ನು ಪರಿಚಯಿಸಿತು. ಇದು ಅಂತಾರಾಷ್ಟ್ರೀಯ ಕಂಪನಿಯಾಗಿ ಬೆಳೆದಿದ್ದು ಸಾಫ್ಟ್‌ವೇರ್‌ನಿಂದ ಹಿಡಿದು ಸ್ಪೋರ್ಟ್ಸ್ ಕಾರುಗಳ ತನಕ ವಿವಿಧ ವಹಿವಾಟುಗಳಿಗೆ ವಿಸ್ತರಿಸಿದೆ.
8) ಹಿನ್ನಡೆಯಾಗಿತ್ತು ಕೂಡ: ಟಾಟಾ ಗ್ರೂಪ್‌ಗೆ ಹಿನ್ನಡೆಯಾಗಿದ್ದು 2008ರಲ್ಲಿ. ಮುಂಬಯಿಯ ಹೋಟೆಲ್ ತಾಜ್ ಮೇಲೆ ಉಗ್ರರು ದಾಳಿ ನಡೆಸಿದಾಗ ಭಾರಿ ನಷ್ಟ ಉಂಟಾಗಿತ್ತು. ಈ ಹೋಟೆಲ್ ಟಾಟಾ ಗ್ರೂಪ್‌ನ ಫ್ಲ್ಯಾಗ್‌ಶಿಪ್ ಹೋಟೆಲ್ ಆಗಿ ಗಮನಸೆಳೆದಿದ್ದ ಸಮಯ ಅದಾಗಿತ್ತು.
9) ಲೋಕೋಪಕಾರದ ಕೆಲಸಗಳು: ರತನ್ ಟಾಟಾ ಅವರ ಲೋಕೋಪಕಾರಿ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದವರು. ಹಲವು ಹೊಸ ಸಂಸ್ಥೆಗಳ ಹುಟ್ಟಿಗೆ ನೆರವು ನೀಡಿದ್ದಾರೆ. ನವೋದ್ಯಮಗಳಿಗೆ ಆರ್ಥಿಕವಾಗಿ, ಮಾರ್ಗದರ್ಶಕರಾಗಿ ನೆರವಾಗಿದ್ದಾರೆ. ಹೀಗಾಗಿ, ಸಂತನಂತೆ ಬದುಕಿದ ಅವರ ಅಗಲಿಕೆ ಹಲವರಲ್ಲಿ ವಿಷಾಧಭಾವ ಉಂಟುಮಾಡಿದೆ.
10) ಟಾಟಾ ಟ್ರಸ್ಟ್‌ನ ಭವಿಷ್ಯ: ರತನ್ ಟಾಟಾ ಅವಿವಾಹಿತರು. ನೇರ ಉತ್ತರಾಧಿಕಾರಿ ಇಲ್ಲ. ಟಾಟಾ ಗ್ರೂಪ್‌ನಲ್ಲಿ ಶೇಕಡ 66 ಪಾಲು ಟಾಟಾ ಸನ್ಸ್‌ನದ್ದು. ಈಗ ರತನ್ ಟಾಟಾ ಅವರ ನಿಧನದ ಬಳಿಕ ನಾಯಕತ್ವವನ್ನು ಟಾಟಾ ಅವರ ಸ್ಥಾಪಿಸಿದ ಟ್ರಸ್ಟ್‌ಗಳು ನಿರ್ವಹಿಸಬೇಕಾಗಿದೆ.