ಅನಾರೋಗ್ಯಕ್ಕೆ ತುತ್ತಾದ ನಾಯಿಮರಿಗೆ ರಕ್ತ ಬೇಕು ಎಂದು ಮುಂಬೈ ಜನರಲ್ಲಿ ಮನವಿ ಮಾಡಿದ ರತನ್ ಟಾಟಾ, ವೈರಲ್ ಆಯ್ತು ಪೋಸ್ಟ್
ಸಾಮಾನ್ಯವಾಗಿ ಉದ್ಯಮಿಗಳು ಯಾರಿಂದಲೂ ಸಹಾಯ ಕೇಳುವುದಿಲ್ಲ ಎಂಬ ಅನಿಸಿಕೆ ಇರುವುದು ಸಹಜ. ಆದರೆ ದೇಶದ ಶ್ರೀಮಂತ ಉದ್ಯಮಿ ರತನ್ ಟಾಟಾ ಇದೀಗ ಸಹಾಯಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ. ರತನ್ ಟಾಟಾಗೂ ಸಹಾಯ ಬೇಕಾಗುತ್ತಾ, ಹಾಗಾದ್ರೆ ಅವರ ಸಹಾಯ ಕೇಳಿರುವುದಾದರೂ ಯಾವ ವಿಚಾರಕ್ಕೆ ಎಂಬುದನ್ನು ತಿಳಿಯಲು ಮುಂದೆ ನೋಡಿ.
ಭಾರತದ ಖ್ಯಾತ ಹಾಗೂ ಶ್ರೀಮಂತ ಉದ್ಯಮಿ ರತನ್ ಟಾಟಾ ತನ್ನ ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರುವಾಸಿಯಾಗಿದ್ದಾರೆ. ಅವರು ಮುಂಬೈನಲ್ಲಿ ಪ್ರಾಣಿ ಆಸ್ಪತ್ರೆ ಅಥವಾ ಗೋ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದಾರೆ. ಈ ಆಸ್ಪತ್ರೆಗೆ ದಾಖಲಾದ ನಾಯಿಯೊಂದಕ್ಕೆ ತುರ್ತಾಗಿ ರಕ್ತ ಬೇಕಾಗಿದ್ದು, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ ರತನ್ ಟಾಟಾ. ಅದರಲ್ಲಿ ನಾಯಿಯ ಸದ್ಯದ ಪರಿಸ್ಥಿತಿ ವಿವರಿಸಿ, ಮುಂಬೈ ಜನರಿಂದ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ʼನಿಮ್ಮ ಸಹಾಯವನ್ನು ನಾನು ಶ್ಲಾಘಿಸುತ್ತೇನೆʼ ಎಂದು ರತನ್ ಟಾಟಾ ಬರೆದುಕೊಂಡಿದ್ದಾರೆ.
ಟಾಟಾ ಗ್ರೂಪ್ ಆಫ್ ಕಂಪನಿಯ ಚೇರ್‌ಮನ್ ರತನ್ ಟಾಟಾ, ತಮ್ಮ ಆಸ್ಪತ್ರೆಗೆ ದಾಖಲಾಗಿರುವ 7 ತಿಂಗಳ ನಾಯಿಮರಿ ತೀವ್ರ ರಕ್ತದ ಕೊರತೆಯಿಂದ ಬಳಲುತ್ತಿದ್ದು, ತುರ್ತಾಗಿ ರಕ್ತದ ಅಗತ್ಯ ಇರುವ ಬಗ್ಗೆ ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾಗಿ ರತನ್ ಟಾಟಾ ವಿವರಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ದಾನಿ ನಾಯಿಗಳಿಗೆ ಅರ್ಹತೆಯ ಮಾನದಂಡವನ್ನು ಪ್ರಕಟಿಸುವ ಜೊತೆಗೆ ಅನಾರೋಗ್ಯಕ್ಕೆ ತುತ್ತಾದ ನಾಯಿಯ ಫೋಟೊವನ್ನು ಹಂಚಿಕೊಂಡಿದ್ದಾರೆ.
ʼಮುಂಬೈ ಜನರೇ, ನಿಮ್ಮ ಸಹಾಯ ನನಗೆ ಬೇಕುʼ ಎಂದು ಟಾಟಾ ಇನ್‌ಸ್ಟಾಗ್ರಾಂ ಮೂಲಕ ಮನವಿ ಮಾಡಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ರತನ್ ಟಾಟಾ ಈ ಪೋಸ್ಟ್ ಹಾಕಿದ್ದು, ಈಗಾಗಲೇ ವೈರಲ್ ಆಗಿದೆ. ಮಾತ್ರವಲ್ಲ ಸಾಕಷ್ಟು ಜನರು ಇದನ್ನು ಹಂಚಿಕೊಂಡಿದ್ದಾರೆ. ಹಲವರು ರತನ್ ಟಾಟಾರ ಪೋಸ್ಟ್‌ಗೆ ಕಾಮೆಂಟ್ ಕೂಡ ಮಾಡಿದ್ದಾರೆ.
ರತನ್ ಟಾಟಾ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು
ʼಒಂದು ನಾಯಿಗಾಗಿ ಕೋಟ್ಯಾಧಿಪತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ಖುಷಿಯ ಸಂಗತಿʼ ಎಂದು ಹೃದಯದ ಇಮೋಜಿ ಹಾಕಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ʼಮೋಸ್ಟ್ ಡೌನ್ ಟು ಅರ್ಥ್ ಮನುಷ್ಯʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ʼವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿದ್ದರೂ, ಅವರ ಕುಟುಂಬ ಮತ್ತು ವ್ಯಾಪಾರವು ತಮ್ಮ ಸಂಪತ್ತಿನ ಶೇ 65 ಕ್ಕಿಂತ ಹೆಚ್ಚು ಸಂಪತ್ತು ದಾನ ಮಾಡುತ್ತಾರೆʼ ಎಂದು ಇನ್ನೊಬ್ಬರು ರತನ್ ಟಾಟಾ ಕುಟುಂಬದ ಬಗ್ಗೆ ಗೌರವದಿಂದ ಕಾಮೆಂಟ್ ಮಾಡಿದ್ದಾರೆ.
ಸಂಕಷ್ಟದಲ್ಲಿರುವ ನಾಯಿಗೆ ಸಹಾಯ ಮಾಡಲು ಟಾಟಾ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವ ಮೊದಲ ನಿದರ್ಶನವಲ್ಲ. ಈ ಹಿಂದೆ, ರಕ್ಷಿಸಲ್ಪಟ್ಟ ನಾಯಿಯನ್ನು ಅದರ ಮಾಲೀಕರ ಬಳಿ ಮತ್ತೆ ತಲುಪಿಸಲು ಸಹಾಯ ಮಾಡುವಂತೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಟಾ ಟ್ರಸ್ಟ್‌ಗಳ ನಿರ್ವಹಣೆಯಡಿಯಲ್ಲಿರುವ ಸಣ್ಣ ಪ್ರಾಣಿ ಆಸ್ಪತ್ರೆ, ಬೆಕ್ಕುಗಳು ಮತ್ತು ನಾಯಿಗಳ ಆರೈಕೆಗೆ ಮೀಸಲಾಗಿರುವ ಅತ್ಯಾಧುನಿಕ ಪಶುವೈದ್ಯಕೀಯ ಕೇಂದ್ರವಾಗಿದೆ. ಮುಂಬೈನಲ್ಲಿರುವ ಆಸ್ಪತ್ರೆಯು ಸಂಕೀರ್ಣ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ವಿವಿಧ ವಿಭಾಗಗಳಲ್ಲಿ ತಜ್ಞರೊಂದಿಗೆ ಸಹಕರಿಸುತ್ತದೆ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರಾಣಿ ಕಲ್ಯಾಣಕ್ಕೆ ಅದರ ಬದ್ಧತೆಯನ್ನು ಪ್ರದರ್ಶಿಸುತ್ತದೆ.