logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತುಟ್ಟಿಭತ್ಯೆ ಹೆಚ್ಚಳ, ಆಧಾರ್ ಅಪ್ಡೇಟ್‌ಗೆ ಕೊನೆ; ಸೆಪ್ಟೆಂಬರ್‌ ತಿಂಗಳಲ್ಲಿ ಆಗುವ ಮಹತ್ವದ ಬದಲಾವಣೆಗಳಿವು

ತುಟ್ಟಿಭತ್ಯೆ ಹೆಚ್ಚಳ, ಆಧಾರ್ ಅಪ್ಡೇಟ್‌ಗೆ ಕೊನೆ; ಸೆಪ್ಟೆಂಬರ್‌ ತಿಂಗಳಲ್ಲಿ ಆಗುವ ಮಹತ್ವದ ಬದಲಾವಣೆಗಳಿವು

Jayaraj HT Kannada

Aug 26, 2024 03:29 PM IST

google News

ಸೆಪ್ಟೆಂಬರ್‌ ತಿಂಗಳಲ್ಲಿ ಆಗುವ ಮಹತ್ವದ ಬದಲಾವಣೆಗಳಿವು

    • ಸೆಪ್ಟೆಂಬರ್ ತಿಂಗಳಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಸಾಧ್ಯತೆ ಒಂದೆಡೆಯಾದರೆ, ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳದ ಖುಷಿ ಸಿಗಲಿದೆ. ಸೆಪ್ಟೆಂಬರ್‌ನಲ್ಲಿ ಯಾವೆಲ್ಲಾ ನಿಯಮಗಳು ಬರಲಿವೆ ಎಂಬ ಮಾಹಿತಿ ಇಲ್ಲಿದೆ.
ಸೆಪ್ಟೆಂಬರ್‌ ತಿಂಗಳಲ್ಲಿ ಆಗುವ ಮಹತ್ವದ ಬದಲಾವಣೆಗಳಿವು
ಸೆಪ್ಟೆಂಬರ್‌ ತಿಂಗಳಲ್ಲಿ ಆಗುವ ಮಹತ್ವದ ಬದಲಾವಣೆಗಳಿವು

ಇನ್ನೇನು ಆಗಸ್ಟ್ ತಿಂಗಳು ಮುಗಿಯುತ್ತಾ ಬಂತು. ಹೊಸ ತಿಂಗಳು ಸೆಪ್ಟೆಂಬರ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ತಿಂಗಳಿಗೆ ಒಂದಷ್ಟು ಬದಲಾವಣೆಗಳು ಆಗುತ್ತಿವೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂಥಾ ಸಾಧ್ಯತೆಯೂ ಇದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸ, ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಬಗ್ಗೆ ವಿಶೇಷ ಪ್ರಕಟಣೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಎಲ್‌ಪಿಜಿ ಬೆಲೆ

ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ದರದಲ್ಲಿ ವ್ಯತ್ಯಾಸಗಳಾಗುವುದು ಸಾಮಾನ್ಯ. ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ ಈ ಬಾರಿ ಮತ್ತೆ ಬದಲಾವಣೆ ಸಾಧ್ಯತೆ ಇದೆ. ಕಳೆದ ತಿಂಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 8.50 ರೂಪಾಯಿವರೆಗೂ ಏರಿಕೆಯಾಗಿತ್ತು. ಹೀಗಾಗಿ ಈ ಬಾರಿಯೂ ಏರಿಕೆ ಅಥವಾ ಬದಲಾವಣೆಯಾಗುವ ಸಂಭವವಿದೆ. ಸಿಲಿಂಡರ್ ಬೆಲೆಗಳ ಜೊತೆಗೆ, ತೈಲ ಮಾರುಕಟ್ಟೆ ಕಂಪನಿಗಳು ಏರ್ ಟರ್ಬೈನ್ ಇಂಧನ (ATF), CNG-PNG ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ಕಾರಣದಿಂದಾಗಿ, ಸೆಪ್ಟೆಂಬರ್ ಆರಂಭದಲ್ಲಿ ಅವುಗಳ ಬೆಲೆಯಲ್ಲಿ ಬದಲಾವಣೆಗಳಾಗಬಹುದು.

ತುಟ್ಟಿಭತ್ಯೆ ಹೆಚ್ಚಳ

ಸೆಪ್ಟೆಂಬರ್‌ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಕೇಂದ್ರದಿಂದ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ನೌಕರರ ವೇತನವನ್ನು ಶೇ 3ರಷ್ಟು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಪ್ರಸ್ತುತ, ಸರ್ಕಾರಿ ನೌಕರರಿಗೆ ಶೇ 50 ರಷ್ಟು ತುಟ್ಟಿಭತ್ಯೆ (ಡಿಎ) ನೀಡಲಾಗುತ್ತದೆ. ಇದು 3 ಪ್ರತಿಶತ ಹೆಚ್ಚಳದ ಬಳಿಕ 53 ಶೇಕಡಕ್ಕೆ ಹೆಚ್ಚಾಗುತ್ತದೆ.

ಆಧಾರ್ ಕಾರ್ಡ್ ಅಪ್ಡೇಟ್‌

ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್‌ ಮಾಡಲು ಸೆಪ್ಟೆಂಬರ್ 14 ಕೊನೆಯ ದಿನ. ಇದರ ನಂತರ ನೀವು ಆಧಾರ್ ಸಂಬಂಧಿತ ಯಾವುದೇ ನವೀಕರಣಗಳನ್ನು ಉಚಿತವಾಗಿ ಮಾಡಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಹಿಂದೆ ಆಧಾರ್ ಕಾರ್ಡ್ ಉಚಿತ ನವೀಕರಣಕ್ಕೆ ಜೂನ್ 14 ಕೊನೆಯ ದಿನ ಎಂದು ನಿಗದಿಪಡಿಸಲಾಗಿತ್ತು. ಇದೀಗ ಅದನ್ನು ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ.

ರಿವಾರ್ಡ್ ಪಾಯಿಂಟ್‌

ಸೆಪ್ಟೆಂಬರ್ 1ರಿಂದ, ಎಚ್‌ಡಿಎಫ್‌ಸಿ ಬ್ಯಾಂಕ್ ಯುಟಿಲಿಟಿ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳ ಮಿತಿಯನ್ನು ನಿಗದಿಪಡಿಸುತ್ತದೆ. ಹೀಗಾಗಿ ಗ್ರಾಹಕರು ಈ ವಹಿವಾಟುಗಳಲ್ಲಿ ತಿಂಗಳಿಗೆ 2,000 ಪಾಯಿಂಟ್‌ಗಳವರೆಗೆ ಮಾತ್ರ ಗಳಿಸಬಹುದು. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಪಾವತಿಗಳನ್ನು ಮಾಡಲು HDFC ಬ್ಯಾಂಕ್ ಯಾವುದೇ ರಿವಾರ್ಡ್‌ ಕೊಡುವುದಿಲ್ಲ. ಸೆಪ್ಟೆಂಬರ್ 2024ರಿಂದ, IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಪಾವತಿಸಬೇಕಾದ ಕನಿಷ್ಠ ಮೊತ್ತವನ್ನು ಕಡಿಮೆ ಮಾಡುತ್ತದೆ. ಪಾವತಿ ದಿನಗಳನ್ನು 18ರಿಂದ 15 ದಿನಗಳಿಗೆ ಇಳಿಸುತ್ತದೆ.

ನಕಲಿ ಕರೆ, ಸಂದೇಶಗಳಿಗೆ ತಡೆ

ಹೊಸ ತಿಂಗಳಿನಿಂದಲೇ ನಕಲಿ ಕರೆಗಳು ಮತ್ತು ಸಂದೇಶಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಫೇಕ್‌ ಕಾಲ್ ಮತ್ತು ಮೆಸೇಜ್‌ಗಳ ಮೇಲೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಟೆಲಿಕಾಂ ಕಂಪನಿಗಳಿಗೆ TRAI ಆದೇಶಗಳನ್ನು ನೀಡಿದೆ. ಇದಕ್ಕಾಗಿ ಟ್ರಾಯ್ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಜಿಯೋ, ಏರ್‌ಟೆಲ್‌, ವೊಡಾಫೋನ್‌ ಐಡಿಯಾ, ಬಿಎಸ್‌ಎನ್‌ಎಲ್‌ನಂಥ ಟೆಲಿಕಾಂ ದೈತ್ಯ ಕಂಪನಿಗಳಿಗೆ ಟೆಲಿಮಾರ್ಕೆಟಿಂಗ್ ಕರೆಗಳು, 140 ಮೊಬೈಲ್ ಸಂಖ್ಯೆ ಸೀರೀಸ್‌ನಿಂದ ಬರುವ ವಾಣಿಜ್ಯ ಸಂದೇಶಗಳನ್ನು ಬ್ಲಾಕ್‌ಚೈನ್ ಆಧಾರಿತ DLTಗೆ ವರ್ಗಾಯಿಸಲು TRAI ಹೇಳಿದೆ. ಹೀಗಾಗಿ ಸೆಪ್ಟೆಂಬರ್ 1ರಿಂದ ನಕಲಿ ಕರೆಗಳು ನಿಲ್ಲುವ ನಿರೀಕ್ಷೆಯಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ