ಮನೆ ಖರೀದಿಗೂ ಮುನ್ನ ಈ 6 ಅಂಶಗಳು ಗಮನದಲ್ಲಿರಲಿ; ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಸೂಕ್ತ ಹಣಕಾಸು ಯೋಜನೆ ರೂಪಿಸಿ-business news savings and investment points to follow if you are buying first home personal finance jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆ ಖರೀದಿಗೂ ಮುನ್ನ ಈ 6 ಅಂಶಗಳು ಗಮನದಲ್ಲಿರಲಿ; ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಸೂಕ್ತ ಹಣಕಾಸು ಯೋಜನೆ ರೂಪಿಸಿ

ಮನೆ ಖರೀದಿಗೂ ಮುನ್ನ ಈ 6 ಅಂಶಗಳು ಗಮನದಲ್ಲಿರಲಿ; ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಸೂಕ್ತ ಹಣಕಾಸು ಯೋಜನೆ ರೂಪಿಸಿ

ಮನೆ ಖರೀಸಿಸುವುದು ಒಂದೋ ಎರಡೋ ದಿನದ ನಿರ್ಧಾರವಲ್ಲ. ಅದನ್ನು ಒಂದಷ್ಟು ಬಾರಿ ಯೋಚಿಸಿ, ಹಣಕಾಸಿನ ಬಾಧ್ಯತೆಗಳನ್ನು ನೋಡಿಕೊಂಡು ಮನೆ ಖರೀದಿಯ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತ. ಹಣಕಾಸಿನ ಕುರಿತು ಈ ಅಂಶಗಳು ನಿಮ್ಮ ಗಮನದಲ್ಲಿರಲಿ.

ಮನೆ ಖರೀದಿಗೂ ಮುನ್ನ ಈ 6 ಅಂಶಗಳು ಗಮನದಲ್ಲಿರಲಿ; ಸೂಕ್ತ ಹಣಕಾಸು ಯೋಜನೆ ರೂಪಿಸಿ
ಮನೆ ಖರೀದಿಗೂ ಮುನ್ನ ಈ 6 ಅಂಶಗಳು ಗಮನದಲ್ಲಿರಲಿ; ಸೂಕ್ತ ಹಣಕಾಸು ಯೋಜನೆ ರೂಪಿಸಿ (Pixabay)

ಪ್ರತಿಯೊಬ್ಬರಿಗೂ ಕನಸಿನ ಮನೆ ಕಟ್ಟುವ ಅಥವಾ ಖರೀದಿಸುವ ಆಸೆ-ಕನಸುಗಳಿರುತ್ತವೆ. ಅವರವರ ಸಾಮರ್ಥ್ಯಕ್ಕೆ ತಕ್ಕನಾಗಿ ಬಜೆಟ್‌ ಆಧಾರದಲ್ಲಿ ಮನೆ ಹೊಂದುವ ಬಯಕೆ ಬಹುತೇಕರದ್ದು. ಮನೆಯೊಂದರ ಮಾಲೀಕತ್ವ ಪಡೆಯುವುದೆಂದರೆ ಅದೊಂದು ಸುದೀರ್ಘ ಪ್ರಕ್ರಿಯೆ. ತ್ವರಿತ ನಿರ್ಧಾರದೊಂದಿಗೆ ಮನೆ ಖರೀದಿ ಕೆಲಸಕ್ಕೆ ಕೈಹಾಕುವುದು ಸರಿಯಲ್ಲ. ಯಾವುದೇ ಕ್ಷೇತ್ರದಲ್ಲೂ ಹೂಡಿಕೆ ಮಾಡುವ ಮುನ್ನ ಹತ್ತು ಬಾರಿ ಯೋಚನೆ ಮಾಡುವುದು ಮುಖ್ಯ. ಅಲ್ಲದೆ ಒಂದಷ್ಟು ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ, ಮನೆ ಖರೀದಿ ಮಾಡುವುದು ಜಾಣತನ.

ಮನೆ ಖರೀದಿ ಮಾಡಲು ಸೂಕ್ತ ಹಣಕಾಸು ವ್ಯವಸ್ಥೆ ಮಾಡಿಕೊಳ್ಳುವುದು ಸಹಜವಾಗಿ ಮೊದಲ ಆದ್ಯತೆ. ಆರ್ಥಿಕ ಪರಿಸ್ಥಿತಿಯ ಆಧಾರದಲ್ಲಿ ಲಭ್ಯವಿರುವ ಹಣಕಾಸು ಆಯ್ಕೆಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ಮಾಡಬೇಕು. ಉಳಿದಂತೆ ಸಾಲ ಮರುಪಾವತಿ ತಂತ್ರಗಳು, ಖರೀದಿಗೆ ಸೂಕ್ತ ಸಮಯ, ಹೆಚ್ಚುವರಿ ವೆಚ್ಚಗಳು ಸೇರಿದಂತೆ ಒಂದಷ್ಟು ಆಯಾಮಗಳಲ್ಲಿ ಯೋಚನೆ ಮಾಡುವುದು ಮುಖ್ಯ. ಇಲ್ಲಿ, ಮನೆ ಖರೀದಿಗೂ ಮುನ್ನ ಮಾಡಬೇಕಾದ ಪ್ರಮುಖ ಅಂಶಗಳನ್ನು ಗಮನಿಸಿ.

ವಾಸ್ತವಕ್ಕೆ ಅನುಗುಣವಾದ ಬಜೆಟ್ ರಚನೆ

ನಿಮ್ಮ ಆದಾಯ ಮತ್ತು ಬಜೆಟ್ ಎಷ್ಟಿದೆಯೋ ಅದಕ್ಕೆ ತಕ್ಕನಾಗಿ ಮನೆ ಖರೀದಿ ಮಾಡಬೇಕು. ಇದಕ್ಕೆ '5-20-40' ಹಣಕಾಸು ನಿಯಮವೇ ಪ್ರಮುಖ ಮಾನದಂಡ. ಇದರ ಪ್ರಕಾರ, ನೀವು ಖರೀದಿಸುವ ಅಥವಾ ಕಟ್ಟುವ ಮನೆಯ ವೆಚ್ಚವು ನಿಮ್ಮ ವಾರ್ಷಿಕ ಆದಾಯದ ಐದು ಪಟ್ಟು ಮೀರಬಾರದು. ಇದೇ ವೇಳೆ ನೀವು ಪಡೆಯುವ ಸಾಲದ ಅವಧಿಯು 20 ವರ್ಷಗಳನ್ನು ಮೀರಬಾರದು. ನಿಮ್ಮ ಗರಿಷ್ಠ ಇಎಂಐ ಕೂಡಾ ನಿಮ್ಮ ಮಾಸಿಕ ಆದಾಯದ 40 ಪ್ರತಿಶತದ ಒಳಗಿರಬೇಕು.

ಇದಕ್ಕೆ ಉದಾಹರಣೆ ಹೀಗಿದೆ. ನಿಮ್ಮ ವಾರ್ಷಿಕ ಆದಾಯವು 10 ಲಕ್ಷ ರೂಪಾಯಿ ಆಗಿದ್ದರೆ, ನಿಮ್ಮ ಮನೆಯ ಒಟ್ಟು ಬಜೆಟ್ 50 ಲಕ್ಷ ರೂಪಾಯಿ ಆಗಿರಬೇಕು.

ಸಾಲ ಮರುಪಾವತಿಗೆ ಸೂಕ್ತ ವಿಧಾನದ ಆಯ್ಕೆ

ಗೃಹ ಸಾಲ ಪಡೆಯುವವರು ಸಾಲದ ಮರುಪಾವತಿಗೆ ಸೂಕ್ತ ತಂತ್ರಗಳನ್ನು ರಚಿಸಬೇಕು. ಇಎಂಐಯಲ್ಲಿ ಸ್ವಲ್ಪ ಹೆಚ್ಚಳ ಮಾಡಿದರೆ, ಅಥವಾ ವಾರ್ಷಿಕವಾಗಿ ಸ್ವಲ್ಪ ಹೆಚ್ಚುವರಿ ಮೊತ್ತ ಪಾವತಿ ಮಾಡುವುದರಿಂದ ಸಾಲದ ಅವಧಿ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದ ಬೇಗನೆ ಸಾಲದಿಂದ ಮುಕ್ತರಾಗಬಹುದು.

ಹಣಕಾಸು ತಂತ್ರಗಳು ಅಗತ್ಯ

ಒಂದೇ ಬಾರಿಗೆ ಸಂಪೂರ್ಣ ಪಾವತಿ ಮಾಡುವ ಮೂಲಕ ಸಾಲವನ್ನೇ ಮಾಡದೆ ಇರುವುದು ಒಂದು ಆಯ್ಕೆ. ಇದೇ ವೇಳೆ ಸಾಲದ ನಿರ್ಧಾರ ಕೂಡಾ ಗಮನಾರ್ಹ ಪರಿಣಾಮಗಳನ್ನು ಹೊಂದಿದೆ. ಸಾಲವನ್ನು ತೆಗೆದುಕೊಳ್ಳುವುದರಿಂದ ತೆರಿಗೆ ವಿನಾಯಿತಿ ಸಿಗುತ್ತದೆ. ಇದೇ ವೇಳೆ ತುರ್ತು ಪರಿಸ್ಥಿತಿಗಳಿಗೆ ನಿಮ್ಮ ಬಳಿ ನಗದು ಲಭ್ಯವಿರುತ್ತದೆ.‌ ಆದರೆ ಬಡ್ಡಿ ವೆಚ್ಚ, ಇಎಂಐ ಮತ್ತು ಪಾವತಿ ಬಾಧ್ಯತೆಗಳು ಸರಿಯಾಗಿ ಆಗದಿದ್ದರೆ ನೀವು ಖರೀದಿಸಿದ ಆಸ್ತಿಯನ್ನು ಕಳೆದುಕೊಳ್ಳುವ ಅಪಾಯ ಕೂಡಾ ಇರುತ್ತದೆ.

ಮನೆ ಖರೀದಿಗೆ ಸೂಕ್ತ ಸಮಯದ ಆಯ್ಕೆ

ಇದು ಕೂಡಾ ಪ್ರಮುಖ ವಿಷಯ. ಆರ್ಥಿಕ ಪರಿಸ್ಥಿತಿ ಮತ್ತು ಮಾರುಕಟ್ಟೆ ಪ್ರವೃತ್ತಿಯು ನಿಮ್ಮ ಮನೆ ಖರೀದಿ ಮೇಲೆ ಪ್ರಭಾವ ಬೀರುತ್ತದೆ. ಕಡಿಮೆ ಬೆಲೆ ಮತ್ತು ಅನುಕೂಲಕರ ಬಡ್ಡಿದರಗಳೊಂದಿಗೆ ಖರೀದಿದಾರರ ಮಾರುಕಟ್ಟೆ ಸುಸ್ಥಿತಿಯಲ್ಲಿರುವಾಗ ಮನೆ ಖರೀದಿ ಮಾಡಬೇಕು. ಸ್ಥಳೀಯವಾಗಿ ಪ್ರಭಾವ ಬೀರುವ ಅಂಶಗಳನ್ನು ಕೂಡಾ ಗಮನದಲ್ಲಿಟ್ಟುಕೊಳ್ಳಬೇಕು.

ಅಂತಿಮ ನಿರ್ಧಾರಕ್ಕೂ ಮುನ್ನ ಈ ಅಂಶ ಗಮನದಲ್ಲಿರಲಿ

ಯಾವುದೇ ಆಸ್ತಿ ಖರೀದಿ ನಿರ್ಧಾರ ಅಂತಿಮಗೊಳಿಸುವ ಮೊದಲು, ಮನೆ ಖರೀದಿದಾರರಿಗೆ ಪಾರದರ್ಶಕತೆ ಮತ್ತು ರಕ್ಷಣೆಯನ್ನು ನೀಡುವ, RERA ಅಡಿಯಲ್ಲಿ ನೋಂದಾಯಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳಿ. ರೆಡಿ-ಟು-ಮೂವ್-ಇನ್ ಆಸ್ತಿ ಆಯ್ಕೆ ಮಾಡುವುದು, ಕಾನೂನು ಪರಿಶೀಲನೆಗಳನ್ನು ನಡೆಸುವುದು, ಸ್ಥಳ ಮೌಲ್ಯಮಾಪನ ಮಾಡುವುದು, ಖರೀದಿಸಿದ ಬಳಿಕೆ ಮತ್ತೆ ಮರುಮಾರಾಟದ ಸಂದರ್ಭ ಬಂದರೆ ಇರುವ ಆಯ್ಕೆಗಳನ್ನು ನೋಡುವುದು, ಸರಿಯಾದ ಗೃಹ ವಿಮೆಯನ್ನು ಭದ್ರಪಡಿಸುವುದು, ಹೀಗೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಸಿದ್ಧರಿರುವುದು

ಒಂದು ಮನೆ ಖರೀದಿಸಿದ ಮೇಲೂ ಹಲವಾರು ಖರ್ಚುಗಳಿರುತ್ತವೆ. ಮನೆಯ ಮೂಲಭೂತ ವೆಚ್ಚವನ್ನು ಮೀರಿ, ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕಗಳು, ಬ್ರೋಕರೇಜ್, ನಿರ್ವಹಣಾ ಶುಲ್ಕ, ಸಾಲ ಪ್ರಕ್ರಿಯೆ ಶುಲ್ಕ, ಪೀಠೋಪಕರಣ, ಜಿಎಸ್‌ಟಿ ಹೀಗೆ ಹಲವಾರು ಖರ್ಚುಗಳು ಬರುತ್ತವೆ. ಇವುಗಳನ್ನು ಪರಿಗಣಿಸಿ ಸಿದ್ಧತೆ ನಡೆಸುವುದು ಅಗತ್ಯ.