Opening Bell: ಜಾಗತಿಕ ಷೇರುಗಳ ಪ್ರಭಾವ, ನೀರಸ ಆರಂಭಕ್ಕೆ ಮುಂದಾದ ಭಾರತೀಯ ಷೇರುಪೇಟೆ, ಇಂದು ಗಮನಿಸಬಹುದಾದ ಷೇರುಗಳಿವು
Aug 07, 2023 09:28 AM IST
Opening Bell: ಜಾಗತಿಕ ಷೇರುಗಳ ಪ್ರಭಾವ, ನೀರಸ ಆರಂಭಕ್ಕೆ ಮುಂದಾದ ಭಾರತೀಯ ಷೇರುಪೇಟೆ
Indian shares open: ಇಂದು ಭಾರತೀಯ ಷೇರುಪೇಟೆ ಫ್ಲಾಟ್ ಆಗಿ ವಹಿವಾಟು ಆರಂಭಿಸುವ ಸೂಚನೆಯಿದೆ. ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿ ಪ್ರಕಟಿಸಲಿದೆ. ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಆರ್‌ಬಿಐಯು ಯಾವುದೇ ಬಡ್ಡಿದರ ಏರಿಕೆ ಮಾಡಿರಲಿಲ್ಲ.
ಬೆಂಗಳೂರು: ಭಾರತದ ಷೇರುಪೇಟೆ ಇಂದು ನೀರಸ ಆರಂಭಕ್ಕೆ ಮುನ್ನುಡಿ ಬರೆಯುವ ಸೂಚನೆಯಿದೆ. ಏಷ್ಯಾ ಷೇರುಪೇಟೆ ಮತ್ತು ಅಮೆರಿಕ ಹಾಗೂ ಚೀನಾದ ಹಣದುಬ್ಬರ ಬಹಿರಂಗವಾಗಲಿರುವುದು ಇದಕ್ಕೆ ಕಾರಣ. ಜತೆಗೆ, ಈ ವಾರದ ಬಳಿಕ ಭಾರತದ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಪ್ರಕಟವಾಗಲಿರುವುದು ಕೂಡ ಸೋಮವಾರದ ನೀರಸ ಆರಂಭಕ್ಕೆ ಕಾರಣವಾಗಲಿದೆ.
ಎನ್‌ಎಸ್‌ಇ ಅಂತಾರಾಷ್ಟ್ರೀಯ ಷೇರುಪೇಟೆಯಲ್ಲಿ ಭಾರತದ ಗಿಫ್ಟ್ ನಿಫ್ಟಿ (GIFT Nifty)ಯು ಇಂದು ಬೆಳಗ್ಗೆ 7:56 ಗಂಟೆಗೆ ಶೇಕಡ 0.09ರಷ್ಟು ಏರಿಕೆ ಕಂಡು 19,607.50ಕ್ಕೆ ತಲುಪಿದೆ.
ಏಷ್ಯಾ ಷೇರುಗಳು ಇಳಿಕೆ ಟ್ರೆಂಡ್‌ನಲ್ಲಿವೆ. ಆದರೆ, ಎಂಎಸ್‌ಸಿಐ ಏಷ್ಯಾ ಎಕ್ಸ್-ಜಪಾನ್ ಷೇರುಪೇಟೆ ಶೇಕಡ 0.05ರಷ್ಟು ಏರಿಕೆ ದಾಖಲಿಸಿದೆ.
ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿ ಪ್ರಕಟಿಸಲಿದೆ. ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಆರ್‌ಬಿಐಯು ಯಾವುದೇ ಬಡ್ಡಿದರ ಏರಿಕೆ ಮಾಡಿರಲಿಲ್ಲ.
ಸತತವಾಗಿ ಎರಡು ವಾರಗಳ ಕಾಲ ಭಾರತದ ಷೇರುಪೇಟೆಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ನಷ್ಟವನ್ನು ದಾಖಲಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸತತ ಆರು ಅವಧಿಗಳಲ್ಲಿ ಭಾರತೀಯ ಷೇರುಗಳ ನಿವ್ವಳ ಮಾರಾಟಗಾರರಾಗಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 5.56 ಶತಕೋಟಿ ರೂಪಾಯಿ (67.25 ದಶಲಕ್ಷ ಡಾಲರ್) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
"ದೇಶದ ಷೇರುಗಳಲ್ಲಿನ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಟ್ರೆಂಡ್ ಮುಂದಿನ ಅವಧಿಗಳಲ್ಲಿಯೂ ಅಸ್ಥಿರವಾಗಬಹುದು" ಎಂದು ಕೋಟಾಕ್ ಸೆಕ್ಯುರಿಟೀಸ್‌ನ ಸಂಶೋಧನಾ (ರಿಟೇಲ್) ವಿಭಾಗದ ಮುಖ್ಯಸ್ಥರಾದ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.
"ಆದರೆ, ಭಾರತದ ಆರ್ಥಿಕ ಸ್ಥಿರತೆಯ ಅಂಕಿಅಂಶಗಳು, ಮೋರ್ಗಾನ್ ಸ್ಟಾನ್ಲಿಯು ಭಾರತದ ರಾಂಕಿಂಗ್ ಅಪ್‌ಗ್ರೇಡ್ ಮಾಡಿರುವುದರ ಹೊರತಾಗಿಯೂ ಸಾಗರೋತ್ತರ ಹೂಡಿಕೆದಾರರು ಭಾರತವನ್ನು ನಿರ್ಲಕ್ಷಿಸುವುದು ಕಷ್ಟಕರವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.
ಇಂದು ಗಮನಿಸಬಹುದಾದ ಷೇರುಗಳು
ಬ್ರಿಟಾನಿಯಾ ಇಂಡಸ್ಟ್ರೀಸ್: ಪ್ಯಾಕೇಜ್ ಮಾಡಿದ ಆಹಾರಗಳಿಗೆ ಸ್ಥಿರವಾದ ಬೇಡಿಕೆ ಇರುವ ಕಾರಣದಿಂದ ಬಿಸ್ಕತ್ತು ತಯಾರಕ ಕಂಪನಿ ಬ್ರಿಟಾನಿಯಾ ಇಂಡಸ್ಟ್ರೀಸ್ ಲಾಭವು ಶೇಕಡ 36 ರಷ್ಟು ಏರಿಕೆಯಾಗಿದೆ.
ಬ್ಯಾಂಕ್ ಆಫ್ ಬರೋಡಾ: ಜೂನ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾದ ನಿವ್ವಳ ಲಾಭವು ಎರಡು ಪಟ್ಟು ಹೆಚ್ಚಾಗಿದೆ.
ಐಸಿಐಸಿಐ ಬ್ಯಾಂಕ್: ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿಯಲ್ಲಿನ ಷೇರುಗಳನ್ನು ಶೇಕಡ 4 ವರೆಗೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಖಾಸಗಿ ವಲಯದ ಬ್ಯಾಂಕ್ ಅನುಮೋದನೆ ಪಡೆದಿದೆ.
ಗುಜರಾತ್ ಫ್ಲೋರೋಕೆಮಿಕಲ್ಸ್: ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಫಲಿತಾಂಶ ಕುಸಿದಿದೆ.
ಕರೆನ್ಸಿ ಮೌಲ್ಯ: 1 ಡಾಲರ್ = 82.6740 ಭಾರತೀಯ ರೂಪಾಯಿ
(ಮೂಲ ವರದಿ: ರಾಯಿಟರ್ಸ್: ಕನ್ನಡಕ್ಕೆ ಹಿಂದೂಸ್ತಾನ್ ಟೈಮ್ಸ್ ಕನ್ನಡ)