logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024 Highlights: ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ ಇಲ್ಲ, ತೆರಿಗೆ ಬಾಕಿದಾರರಿಗೆ ಒಂದಿಷ್ಟು ಅನುಕೂಲ; ಕೇಂದ್ರ ಬಜೆಟ್‌ನ ಮುಖ್ಯಾಂಶ

Budget 2024 Highlights: ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ ಇಲ್ಲ, ತೆರಿಗೆ ಬಾಕಿದಾರರಿಗೆ ಒಂದಿಷ್ಟು ಅನುಕೂಲ; ಕೇಂದ್ರ ಬಜೆಟ್‌ನ ಮುಖ್ಯಾಂಶ

Rakshitha Sowmya HT Kannada

Feb 01, 2024 01:34 PM IST

google News

ಕೇಂದ್ರ ಬಜೆಟ್ 2024

  • ಕೇಂದ್ರ ಬಜೆಟ್ 2024: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ (ಫೆ 1) ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ನೆನಪಿಸಿಕೊಂಡ ಅವರು, ದೇಶದ ಅಭಿವೃದ್ಧಿಗೆ ರೂಪಿಸಿರುವ ಹಲವು ಯೋಜನೆಗಳ ಮಾಹಿತಿ ನೀಡಿದರು.  -Budget 2024 in Kannada LIVE Updates

ಕೇಂದ್ರ ಬಜೆಟ್ 2024
ಕೇಂದ್ರ ಬಜೆಟ್ 2024 (PC: Manjunath Kotagunasi)

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ (ಫೆ 1) ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದರು. ಜನ್‌ಧನ್ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, "ವಿಕಸಿತ ಭಾರತ"ದ ಕನಸು ನನಸು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪುನರುಚ್ಚರಿಸಿದರು. ಕೇವಲ ಒಂದು ವರ್ಷದ ಆಗುಹೋಗು ಅಥವಾ ಮುಂದಿನ ಒಂದು ವರ್ಷದ ಬೆಳವಣಿಗೆಯನ್ನು ವಿವರಿಸಲಷ್ಟೇ ವಿತ್ತ ಸಚಿವರು ತಮ್ಮ ಬಜೆಟ್ ಭಾಷಣ ಸೀಮಿತಗೊಳಿಸಲಿಲ್ಲ. ಬದಲಿಗೆ ಕಳೆದ 10 ವರ್ಷಗಳ ಸಾಧನೆಯನ್ನು ವಿವರಿಸಲು ಬಜೆಟ್ ಭಾಷಣವನ್ನು ವೇದಿಕೆಯಾಗಿ ಬಳಸಿಕೊಂಡರು. ಬಡವರು, ಮಹಿಳೆಯರು, ರೈತರ ಅಭಿವೃದ್ಧಿಗೆ ಕೇಂದ್ರ ರೂಪಿಸಿರುವ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಜೊತೆಗೆ ಸಾಧನೆಯ ರಿಪೋರ್ಡ್ ಅನ್ನೂ ದೇಶದ ಮುಂದಿಟ್ಟರು. ಚುನಾವಣೆ ಕಾಲದ ಬಜೆಟ್‌ನ ಪ್ರಾಮುಖ್ಯತೆಯನ್ನು ಅರಿತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಹೇಗಿರಬಹುದು ಎಂಬ ಇಣುಕುನೋಟವನ್ನೂ ತಮ್ಮ ಬಜೆಟ್ ಭಾಷಣದಲ್ಲಿ ನೀಡಿದರು. ಬಜೆಟ್‌ ಭಾಷಣದ ಲೈವ್ ಅಪ್‌ಡೇಟ್ಸ್, ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೆಲ್ಲಾ ಬಂತು, ಬಜೆಟ್ ಘೋಷಣೆಗಳ ವಿಸ್ತೃತ ವರದಿ, ವಿಶ್ಲೇಷಣೆ, ಆದಾಯ ತೆರಿಗೆ ವಿಚಾರ ಸೇರಿದಂತೆ "ಕೇಂದ್ರ ಬಜೆಟ್ 2024" ಕುರಿತು ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. -Nirmala Sitharaman Budget Speech Live Updates

1.30: ಬಜೆಟ್‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್‌ ಮಂಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನಿರ್ಮಲಾ ಸೀತಾರಾಮನ್‌ ಹಾಗೂ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಬಜೆಟ್‌ನಲ್ಲಿ 2 ಮಹತ್ವದ ನಿರ್ಣಯಗಳಾಗಿವೆ. ಇದು ದೇಶದ ಭವಿಷ್ಯ ನಿರ್ಮಿಸುವ ಬಜೆಟ್‌, ಈ ಬಜೆಟ್‌ ವಿಶ್ವಾಸ ಹಾಗೂ ನಂಬಿಕೆಯನ್ನು ಒಳಗೊಂಡಿದೆ. ಬಡವರಿಗೆ ಮಧ್ಯಮ ವರ್ಗದವರಿಗೆ ಸಹಾಯಕಾರಿ ಆಗಲಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ, 1 ಕೋಟಿ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಪ್ರಧಾನಿ ಮೋದಿ ಬಜೆಟ್‌ ಬಗ್ಗೆ ಮಾತನಾಡಿದ್ದಾರೆ.

1:05 ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒತ್ತು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಆರೋಗ್ಯ ಕ್ಷೇತ್ರಕ್ಕೆ ಆಶಾ-ಅಂಗನವಾಡಿ ಸಹಾಯಕಿಯರಿಗೆ ಆಯಷ್ಮಾನ್‌ ಯೋಜನೆ, ಆಶಾ ಅಂಗನವಾಡಿ ಸಹಾಯಕರಿಗೆ ಆರೋಗ್ಯ ವಿಮೆ ಯೋಜನೆ, ಹೊಸ ಮೆಡಿಕಲ್‌ ಕಾಲೇಜುಗಳ ಸ್ಥಾಪನೆಗೆ ಸಮಿತಿ ರಚನೆ, ಕ್ಯಾನ್ಸರ್‌ ತಡೆಗಟ್ಟಲು 9 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ, ಇಂಧ್ರ ಧನುಷ್‌ ಯೋಜನೆ ಮೂಲಕ U-Win ಯೋಜನೆ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

12.40: ಬಡ, ಮಧ್ಯಮ ವರ್ಗಕ್ಕೆ ಬಜೆಟ್‌ನಲ್ಲಿ ಏನಿದೆ?

1 ಕೋಟಿ ಲಕ್‌ಪತಿ ದೀದಿಯರನ್ನು 3 ಕೋಟಿಗೆ ಏರಿಸುವ ಗುರಿ, ಆಶಾ, ಅಂಗನವಾಡಿ ಸಹಾಯಕರಿಗೆ ಆಯುಷ್ಮಾನ್‌ ಯೋಜನೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಅಭಿವೃದ್ಧಿ, ಮೀನುಗಾರರಿಗೆ 55 ಲಕ್ಷ ಉದ್ಯೋಗ ಸೃಷ್ಟಿ, ಮುಂದಿನ 5 ವರ್ಷದಲ್ಲಿ 2 ಕೋಟಿ ಆವಾಸ್‌ ಮನೆಗಳ ನಿರ್ಮಾಣ.Union Budget 2024 Live updates in Kannada

12.05: ಆದಾಯ ತೆರಿಗೆ ನಿಯಮಗಳಲ್ಲಿ ಯಾವುದೇ ಬದಲಾವಣೆಯಿಲ್ಲ

ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ ತರಬಹುದು, ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಹಲವು ಅನುಕೂಲಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಇಂಥ ಯಾವುದೇ ಘೋಷಣೆಗಳು ಪ್ರಕಟವಾಗಿಲ್ಲ. ತೆರಿಗೆ ನಿಯಮಗಳು ಮತ್ತು ಹಂತಗಳಲ್ಲಿ (Tax slabs) ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಹಳೆಯ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವವರಿಗೆ ಇದು ನೆಮ್ಮದಿ ಮೂಡಿಸಿದೆ. Union Budget 2024 Live updates in Kannada

12.00: ರೂ 25,000 ವರೆಗೆ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ರಿಯಾಯ್ತಿ

ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೀಡಿರುವ ಆದಾಯ ತೆರಿಗೆ ನೊಟೀಸ್‌ ಹಿಂಪಡೆಯುವ ಮಹತ್ವದ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವರು ಪ್ರಕಟಿಸಿದರು. 25 ಸಾವಿರ ರೂಪಾಯಿ ವರೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ 1 ಕೋಟಿ ಮಂದಿಗೆ ಈ ಘೋಷಣೆಯಿಂದ ಅನುಕೂಲವಾಗಲಿದೆ. ಕಳೆದ 2009ರಿಂದ ಪೂರ್ವಾನ್ವಯವಾಗುವಂತೆ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. Union Budget 2024 Live updates in Kannada

11.55: ಬಜೆಟ್ ಭಾಷಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ ನೆನಪು

ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ "ಜೈ ಜವಾನ್, ಜೈ ಕಿಸಾನ್" ಘೋಷಣೆ ಕೊಟ್ಟಿದ್ದರು. ಇದಕ್ಕೆ ವಾಜಪೇಯಿ ಅವರು "ಜೈ ವಿಜ್ಞಾನ್" ಸೇರಿಸಿದ್ದರು. ಮೋದಿ ಅವರು ಇದೀಗ "ಜೈ ಅನುಸಂಧಾನ್" ಸೇರಿಸಿದ್ದಾರೆ. ನಮ್ಮ ಸರ್ಕಾರ ಈ ಆಶಯಗಳಿಗೆ ಬದ್ಧವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಮಧ್ಯಮ ವರ್ಗಗಳ ಮನೆಯ ಕನಸು ನನಸು ಮಾಡಲು ಸರ್ಕಾರ ನೆರವಾಗಲಿದೆ. ಅನಧಿಕೃತ ಕಾಲೊನಿಗಳು, ಕೊಳಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ನೆರವಾಗಲಿದೆ ಎಂದು ಭರವಸೆ ನೀಡಿದರು. Union Budget 2024 Live updates in Kannada

11.50: ಭಾರತವನ್ನು ಅಭಿವೃದ್ಧಿ ಹೊಂದಿದೆ ದೇಶ ಮಾಡುತ್ತೇವೆ; ನಿರ್ಮಲಾ ಸೀತಾರಾಮನ್

ಭಾರತವನ್ನು ಹಲವು ವರ್ಷಗಳಿಂದ ಅಭಿವೃದ್ಧಿಶೀಲ ದೇಶ ಎಂದೇ ಹೇಳಲಾಗುತ್ತಿದೆ. ಈಗ ನಾವು ಅಮೃತಕಾಲದಲ್ಲಿದ್ದೇವೆ. 2047ರ ಒಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡುವ ಗುರಿಯನ್ನು ಮುಟ್ಟುವ ಆಶಯ ಹೊಂದಿದ್ದೇವೆ. ಎಂದು ನಿರ್ಮಲಾ ಸೀತಾರಾಮನ್ ಅಭಿವೃದ್ಧಿಗೆ ವೇಗ ಕೊಡಲಾಗುವುದು ಎಂದು ಒತ್ತಿ ಹೇಳಿದರು. ಇದಕ್ಕೂ ಮೊದಲು ಆರ್ಥಿಕವಾಗಿ ಹಿಂದುಳಿದವರ ಪರಿಸ್ಥಿತಿ ಬಗ್ಗೆ ಸಚಿವರು ಪ್ರಸ್ತಾಪಿಸಿದರು. "ನಾಲ್ಕು ಆಧಾರ ಸ್ತಂಭಗಳ ಬಗ್ಗೆ ನಾವು ಗಮನ ಹರಿಸಬೇಕು. ಬಡವರು, ಮಹಿಳೆಯರು, ಯುವಜನರು ಮತ್ತು ಅನ್ನದಾತರು ದೇಶದ ಆಧಾರ ಸ್ತಂಭಗಳು. ಯಾವುದೇ ತಾರತಮ್ಯವಿಲ್ಲದೆ ಎಲ್ಲ ಅರ್ಹರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

11:46: ಆತ್ಮವಿಶ್ವಾಸದ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್ 2024: ಬಜೆಟ್ ಭಾಷಣವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರರ್ಗಳವಾಗಿ ಓದುತ್ತಿದ್ದಾರೆ. ಭಾಷಣದಲ್ಲಿ ಲಕ್ಷದ್ವೀಪದ ಪ್ರಸ್ತಾಪ ಬಂದಾಗ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ವಿಕಸಿತ ಭಾರತ, ಅವಕಾಶಗಳ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಸೇರಿದಂತೆ ಹಲವು ಸಕಾರಾತ್ಮಕ ಆಶಯಗಳ ಬಗ್ಗೆ ಮಾತನಾಡುವಾಗ ಸಚಿವೆ ಆತ್ಮವಿಶ್ವಾಸದಿಂದ ಕತ್ತೆತ್ತಿ ಸ್ಪೀಕರ್ ಕಡೆಗೆ ನೋಡುತ್ತಿದ್ದರು. Union Budget 2024 Live update in Kannada

11.45: ಸಾಮಾನ್ಯ ಬೋಗಿಗಳಿಗೆ ವಂದೇ ಭಾರತ್ ಸ್ಪರ್ಶ; ರೈಲ್ವೆ ಬಜೆಟ್ 2024

ಬಜೆಟ್ 2024: ಭಾರತದಲ್ಲಿರುವ ಪ್ರಮುಖ ರೈಲ್ವೆ ಮಾರ್ಗಗಳ ಪೈಕಿ ಇಂಧನ, ಸಿಮೆಂಟ್, ಬಂದರು ಸಂಪರ್ಕ, ಹೆಚ್ಚಿನ ಜನಸಂಚಾರ ದಟ್ಟಣೆ ಇರುವ ಮಾರ್ಗಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. 40,000 ಸಾಮಾನ್ಯ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತಿಸಲಾಗುವುದು. ಮೆಟ್ರೋ ಮತ್ತು ನಮೋ ಭಾರತ್ ಯೋಜನೆಗಳಿಗೆ ಹೊಸ ಶಕ್ತಿ ತುಂಬುವ ಮೂಲಕ ದೇಶದ ಆಶೋತ್ತರಗಳಿಗೆ ರೈಲ್ವೆಯ ಒತ್ತಾಸೆ ದೊರಕಿಸಿಕೊಡಲಾಗುವುದು ಎಂದು ಕೆಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದರು. Union Budget 2024 Live update in Kannada

11.40: ಬಜೆಟ್‌ ಭಾಷಣದಲ್ಲಿ ಬಿಜೆಪಿ ಪ್ರಣಾಳಿಕೆ

ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳ ನಿರ್ಮಾಣ ಗುರಿ ಇದೆ. 1 ಕೋಟಿ ಮನೆಗಳಿಗೆ ಉಚಿತ 300 ಯೂನಿಟ್‌ ವಿದ್ಯುತ್‌, ಹೊಸ ಮೆಡಿಕಲ್‌ ಕಾಲೇಜುಗಳ ಸ್ಥಾಪನೆಗೆ ಸಮಿತಿ ರಚನೆ, ಮೀನುಗಾರಿಕೆಗೆ ಹೊಸ ಸಚಿವಾಲಯ ಆರಂಭ, 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿಸುವ ಗುರಿ, ಸಂಶೋಧನೆ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣದಲ್ಲಿ ಬಿಜೆಪಿ ಪ್ರಣಾಳಿಕೆ ಬಗ್ಗೆಯೂ ಮಾಹಿತಿ ನೀಡಿದರು.

11.25: ದೇಶದ ಅರ್ಥವ್ಯವಸ್ಥೆ ಬಹಳ ಬದಲಾಗಿದೆ

10 ವರ್ಷಗಳಲ್ಲಿ ದೇಶದ ಅರ್ಥವ್ಯವಸ್ಥೆ ಸಾಕಷ್ಟು ಬದಲಾಗಿದೆ. ದೇಶಾದ್ಯಂತ 390 ಯೂನಿವರ್ಸಿಟಿ ನಿರ್ಮಿಸಲಾಗಿದೆ, 25 ಕೋಟಿ ಕುಟುಂಬ ಬಡತನಿಂದ ಹೊರ ಬಂದಿದೆ. ಮುದ್ರಾ ಯೋಜನೆಯಡಿ 43 ಕೋಟಿ ರೂ. ಲೋನ್‌ ನೀಡಲಾಗಿದೆ. ಮಹಿಳೆಯರಿಗೂ ಮುದ್ರಾ ಯೋಜನೆಯಿಂದ ಸಾಕಷ್ಟು ಲಾಭವಾಗಿದೆ. ಮಹಿಳೆಯರ ಹಿತದೃಷ್ಟಿಯಿಂದ ತ್ರಿಬಲ್‌ ತಲಾಖ್‌ ರದ್ದು ಮಾಡಿದ್ದೇವೆ ಎಂದ ನಿರ್ಮಲಾ ಸೀತಾರಾಮನ್‌ ತಮ್ಮ ಸರ್ಕಾರದ ಸಾಧನೆಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರು.

11.15: ರೈತರ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡುತ್ತಿದ್ದೇವೆ

ಪಿಎಂ ಜನ್‌ ಧನ್‌ ಯೋಜನೆ ಎಲ್ಲರಿಗೂ ತಲುಪಿದೆ. ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದೇವೆ. ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. 1.8 ಕೋಟಿ ರೂ. ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿ ಹಣ ನೀಡಲಾಗಿದೆ. ರೈತರು ನಮಗೆ ಅನ್ನದಾತರು. ನಮ್ಮ ಸರ್ಕಾರ ಮಾಡಿದ ಉತ್ತಮ ಕೆಲಸಗಳಿಂದಲೇ ಜನರು ಮತ್ತೆ ನಮ್ಮನ್ನು ಆಶೀರ್ವದಿಸಲಿದ್ದಾರೆ.

11.09: ವಿಕಾಸ್‌ ಮಂತ್ರದೊಂದಿಗೆ ಬಜೆಟ್‌ ಭಾಷಣ ಆರಂಭಿಸಿದ ವಿತ್ತ ಸಚಿವೆ.

ಸಬ್‌ ಕಾ ಸಾತ್‌, ಸಬ್‌ ಕಾ‌ ವಿಕಾಸ್‌, ಸಬ್‌ ಕಾ ವಿಶ್ವಾಸ್ ( ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ) ಎಂಬ ಧ್ಯೇಯದಡಿ‌ ದೇಶದ ಜನರ ನಿರೀಕ್ಷೆಗೆ ತಕ್ಕಂತೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ದೇಶದ ಜನರು ನಮಗೆ ಬಹುಮತ ನೀಡಿ ಗೆಲ್ಲಿಸಿದ್ದಾರೆ, ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆ ತಲುಪಿದೆ ಎಂದ ವಿತ್ತ ಸಚಿವೆ.

11.02: ಬಜೆಟ್‌ ಭಾಷಣ ಆರಂಭ

ಬಜೆಟ್‌ ಭಾಷಣ ಆರಂಭಿಸಿದ ಕೆಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.‌

10.55: ಬಜೆಟ್‌ಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ

ಲೋಕಸಭೆ ಚುನಾವಣಾ ಪೂರ್ವದ ಮಧ್ಯಂತರ ಬಜೆಟ್‌ (ಕೇಂದ್ರ ಬಜೆಟ್ 2024) ಅನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಗುರುವಾರ (ಫೆ.1) ಅನುಮೋದಿಸಿದೆ. ಇನ್ನು ಕೆಲವೇ ನಿಮಿಷಗಳಲ್ಲಿ ಲೋಕಸಭೆಗೆ ತೆರಳಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಲ್ಲಿ ಈ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.

10.48: ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ

92ನೇ ಬಜೆಟ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಿಹಿ ತಿನ್ನಿಸಿ ಶುಭ ಕೋರಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ ಆರಂಭವಾಗಲಿದೆ.

10.30: ಬಾಯಿ ಸಿಹಿ ಮಾಡ್ಕೊಳಿ ಸಚಿವರೇ, ನಿರ್ಮಲಾ ಸೀತಾರಾಮನ್‌ಗೆ ಸಿಹಿ ತಿನ್ನಿಸಿದ ರಾಷ್ಟ್ರಪತಿ

ಮಾನವೀಯ ನಡವಳಿಯಿಂದ ಹಲವು ಬಾರಿ ದೇಶದ ಗಮನ ಸೆಳೆದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಬಜೆಟ್ ಮಂಡನೆಯ ಮುನ್ನಾ ದಿನವೂ ಅಪರೂಪದ ನಡವಳಿಕೆ ತೋರಿದ್ದಾರೆ. ಶಿಷ್ಟಾಚಾರದಂತೆ ತಮ್ಮನ್ನು ಭೇಟಿಯಾಗಿ, ಬಜೆಟ್ ಮಂಡನೆಗೆ ಅನುಮತಿ ಕೋರಲು ಬಂದಿದ್ದ ವಿತ್ತ ಸಚಿವರ ಬಾಯಿಗೆ ಸಿಹಿ ತಿನ್ನಿಸಿದ್ದಾರೆ. ರಾಷ್ಟ್ರಪತಿ ತಿನ್ನಿಸಿದ್ದ "ಸಿಹಿ ಮೊಸರು" (ಯೋಗರ್ಟ್) ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ರಾಷ್ಟ್ರಪತಿ ತೋರಿದ ಪ್ರೀತಿಯಿಂದ ನಿರ್ಮಲಾ ಸಹ ಖುಷಿಯಾಗಿದ್ದನ್ನು ನಗುಮುಖ ಎತ್ತಿ ತೋರಿಸಿತು.

10.10: ಕೇಂದ್ರ ಬಜೆಟ್ ಮಂಡನೆಯ ದಿನ ನೀರಸ ಆರಂಭ ಕಂಡ ಷೇರುಪೇಟೆ

ಬಜೆಟ್ ಮಂಡನೆಯಾಗುವ ದಿನ ಷೇರುಪೇಟೆ ವಹಿವಾಟಿನ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಇರುತ್ತದೆ. ಬಜೆಟ್‌ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುವ ಹೂಡಿಕೆದಾರರು ತಕ್ಷಣ ಸ್ಪಂದಿಸುತ್ತಾರೆ. ಬಜೆಟ್ ದಿನವಾದ ಫೆ 1 ರಂದು ಭಾರತದ ಎರಡು ಪ್ರಮುಖ ಷೇರು ಸಂವೇದಿ ಸೂಚ್ಯಂಕಗಳು ನೀರಸ ಆರಂಭ ಕಂಡಿವೆ. ಬಿಎಸ್‌ಇ (Sensex) 71,760 ಮತ್ತು ನಿಫ್ಟಿ (Nifty) 21,730 ಅಂಶಗಳಲ್ಲಿ ವಹಿವಾಟು ಆರಂಭಿಸಿವೆ.

10.05: ಸಂಸತ್ ಭವನಕ್ಕೆ ನಿರ್ಮಲಾ ಸೀತಾರಾಮನ್, ಶೀಘ್ರ ಸಚಿವ ಸಂಪುಟ ಸಭೆ

ಬಜೆಟ್ ದಾಖಲೆ ಇರುವ 'ಬಹಿ ಖಾತಾ' ಜೊತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಭವನ ಪ್ರವೇಶಿಸಿದರು. ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆ ಆರಂಭವಾಗಲಿದ್ದು, ಸಂಪುಟ ಅನುಮೋದನೆ ಪಡೆದುಕೊಂಡ ನಂತರ ವಿತ್ತ ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. 11 ಗಂಟೆಗೆ ಬಜೆಟ್ ಭಾಷಣ ಶುರುವಾಗಲಿದೆ.

09.57: ಬಜೆಟ್ ದಾಖಲೆ ಇರುವ ಬಹಿ ಖಾತಾ ಪ್ರದರ್ಶಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೂ ಮೊದಲು ಹಣಕಾಸು ಸಚಿವಾಲಯಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಕೊನೆಯ ಕ್ಷಣದ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವಾಲಯದ ಎದುರು ಹಿರಿಯ ಅಧಿಕಾರಿಗಳು ಮತ್ತು ಬಜೆಟ್ ಸಿದ್ಧತೆಗಾಗಿ ರೂಪಿಸಿದ್ದ ವಿಶೇಷ ತಂಡದ ಮಧ್ಯೆ ನಿಂತು ಬಜೆಟ್ ದಾಖಲೆ ಇರುವ "ಬಹಿ ಖಾತಾ" ಪ್ರದರ್ಶಿಸಿದರು. ಕೆಂಪು ಬಟ್ಟೆಯ ಆಕರ್ಷಕ ಬ್ಯಾಗ್ ರೂಪದಲ್ಲಿರುವ "ಬಹಿ ಖಾತಾ"ದ ಮೇಲೆ ರಾಷ್ಟ್ರ ಲಾಂಛನವು ಚಿನ್ನದ ಬಣ್ಣದಲ್ಲಿ ಹೊಳೆಯುತ್ತಿರುವುದು ಎದ್ದು ಕಂಡಿತು.

9.50: ಸಂಸತ್ ಭವನ ತಲುಪಿದ ಬಜೆಟ್ ಪ್ರತಿಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ 6ನೇ ಬಜೆಟ್ ಮಂಡಿಸಲಿದ್ದಾರೆ. ಸಂಸತ್ ಸದಸ್ಯರಿಗೆ ವಿತರಿಸಲೆಂದು ಗುರುವಾರ ಮುಂಜಾನೆ ಸಂಸತ್ ಭವನಕ್ಕೆ ಬಜೆಟ್ ಪ್ರತಿಗಳನ್ನು ಬಿಗಿ ಭದ್ರತೆಯಲ್ಲಿ ತರಲಾಯಿತು.

09.35 AM: ಅನ್ನದಾತರ ನಿರೀಕ್ಷೆಗಳು

ರೈತರ ಸಾಲ ಮನ್ನಾ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನಿಗದಿ, ಕೃಷಿಕರ ಸಾಲ ಸೌಲಭ್ಯಕ್ಕೆ ಸಿಬಿಲ್‌ ವಿನಾಯಿತಿ ನೀಡುವುದು, ಕೃಷಿ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡುವುದು, ಉಚಿತ ಗೊಬ್ಬರ ಪೂರೈಕೆಗೆ ನಿರ್ಧಾರ, ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ10 ಲಕ್ಷ ರೂ ಸಾಲ ಸೌಲಭ್ಯ ಒದಗಿಸುವುದು ಸೇರಿದಂತೆ ಈ ಬಾರಿ ಸಾಕಷ್ಟು ನಿರೀಕ್ಷೆಗಳಿವೆ.

09.15 AM: ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ವಿತ್ತ ಸಚಿವೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಣಕಾಸು ಸಚಿವಾಲಯಕ್ಕೆ ಆಗಮಿಸಿ ಮಾಧ್ಯಮಗಳ ಎದುರು ಬಜೆಟ್‌ ಪ್ರತಿ ಪ್ರದರ್ಶಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಅನುಮೋದನೆ ಪಡೆದ ನಂತರ ಬಜೆಟ್‌ ಮಂಡಿಸಲಿದ್ದಾರೆ.

09.05 AM: ಭಾರತೀಯ ರೈಲ್ವೆ ನಿರೀಕ್ಷೆಗಳು ಹಲವು

ಈ ಬಾರಿಯ ಬಜೆಟ್‌ನಲ್ಲಿ ಭಾರತೀಯ ರೈಲ್ವೆಯು ಬಂಡವಾಳ ಹೂಡಿಕೆ ಮೇಲೆ ಹೆಚ್ಚಿನ ಒತ್ತು ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದೆ. ಹೊಸ ರೈಲ್ವೆ ಯೋಜನೆಗಳ ಜತೆಗೆ ಈಗಾಗಲೇ ಜಾರಿಯಲ್ಲಿರುವ ಯೋಜನಗಳಿಗೂ ಹೆಚ್ಚಿನ ಆರ್ಥಿಕ ನೆರವು ಸಿಗುವ ಲೆಕ್ಕಚಾರಗಳಿವೆ. ಕಳೆದ ವರ್ಷ ರೈಲ್ವೆ ಆಯವ್ಯಯ 2.4 ಲಕ್ಷ ಕೋಟಿ ರೂ.ಗಳಿತ್ತು. ಅದು ಈ ಬಾರಿ ಬಜೆಟ್‌ನಲ್ಲಿ 3 ಲಕ್ಷ ಕೋಟಿ ರೂ.ವರೆಗೂ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ.

8.45 AM: ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗ ಬಯಸುವ ತೆರಿಗೆ ವಿನಾಯಿತಿಗಳು

ಈ ಬಾರಿಯ ಕೇಂದ್ರ ಮದ್ಯಂತರ ಬಜೆಟ್‌ನಲ್ಲಿ ಮಧ್ಯಮವರ್ಗದವರು ಒಟ್ಟು 5 ವಿಭಾಗಗಳಲ್ಲಿ ತೆರಿಗೆ ವಿನಾಯಿತಿ ಬಯಸುತ್ತಿದ್ದಾರೆ. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ರಿಯಾಯಿತಿ, ಸೆಕ್ಷನ್ 80 ಸಿ ಮಿತಿಯಲ್ಲಿ ಹೆಚ್ಚಳ, ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳ, ಮನೆ ಖರೀದಿದಾರರಿಗೆ ಪರಿಹಾರ, 80ಡಿ ಕಡಿತ ಮಿತಿ ಹೆಚ್ಚಳ ಈ ವಿಭಾಗಗಳಲ್ಲಿ ತೆರಿಗೆ ವಿನಾಯಿತಿ ಬಯಸುತ್ತಿದ್ದಾರೆ.

08.10 AM: ಇಂದು ಮಂಡನೆಯಾಗುತ್ತಿರುವುದು 92ನೇ ಬಜೆಟ್

ಕೇಂದ್ರ ಸರ್ಕಾರವು ಇದುವರೆಗೆ 77 ನಿಯತ ಬಜೆಟ್‌ಗಳನ್ನು ಮತ್ತು 14 ಮಧ್ಯಂತರ ಬಜೆಟ್‌ಗಳನ್ನು ಮಂಡಿಸಿದೆ. ಒಟ್ಟಾರೆ ಇಲ್ಲಿಯವರೆಗೆ 91 ಕೇಂದ್ರ ಬಜೆಟ್‌ಗಳು ಸಂಸತ್ತಿನಲ್ಲಿ ಮಂಡನೆಯಾಗಿದೆ. ಇಂದು ಮಂಡನೆಯಾಗುತ್ತಿರುವುದು 92 ನೇ ಬಜೆಟ್. ಭಾರತಕ್ಕೆ ಸ್ವಾತಂತ್ರ್ಯ ದೊರೆತು 3 ತಿಂಗಳ ಬಳಿಕ ಮೊದಲ ಬಾರಿಗೆ ಮಧ್ಯಂತರ ಬಜೆಟ್‌ ಮಂಡನೆ ಆಗಿತ್ತು.

07.45 AM:‌ ಮಧ್ಯಮ ವರ್ಗದ ನಿರೀಕ್ಷೆಗಳು

ಇದು ಮಧ್ಯಂತರ ಬಜೆಟ್‌ ಆದರೂ ಸಾಕಷ್ಟು ನಿರೀಕ್ಷೆಗಳಿವೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಮಧ್ಯಮ ವರ್ಗವು ತಮ್ಮ ತೆರಿಗೆ ವೆಚ್ಚವನ್ನು ಕಡಿತಗೊಳಿಸಲು ಅನುವು ಮಾಡಿಕೊಡುವ ಕೆಲವು ಆದಾಯ ತೆರಿಗೆ ಸುಧಾರಣೆಗಳನ್ನು ನಿರೀಕ್ಷಿಸುತ್ತಿದೆ.

07.15 AM : ಗಮನ ಸೆಳೆಯುವ ನಿರ್ಮಲಾ ಸೀತಾರಾಮನ್‌ ಅವರ ಸೀರೆ

ಪ್ರತಿ ಬಾರಿಯೂ ಬಜೆಟ್‌ ಮಂಡನೆ ಮಾತ್ರವಲ್ಲದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಧರಿಸುವ ಸೀರೆ ಕೂಡಾ ಗಮನ ಸೆಳೆಯುತ್ತದೆ. ಕಳೆದ ವರ್ಷ ಕೆಂಪು ಬಣ್ಣದ ಸೀರೆ ಧರಿಸಿ ಆಯವ್ಯಯ ಮಂಡಿಸಿದ್ದರು.

06.50 AM: 2022ರಲ್ಲಿ ಮೊದಲ ಬಾರಿಗೆ ಟ್ಯಾಬ್ಲೆಟ್‌ನಲ್ಲಿ ಪಿಡಿಎಫ್‌ ಪ್ರತಿ ಓದಿದ್ದ ವಿತ್ತ ಸಚಿವೆ

2022-23 ರಲ್ಲಿ ಡಿಜಿಟಲ್ ಇಂಡಿಯಾ ಚಿಂತನೆಗೆ ಪೂರಕವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರಲಾಂಛನ ಹೊಂದಿರುವ ಕೆಂಪು ವೆಲ್ವೆಟ್‌ ಬ್ಯಾಗಿನಲ್ಲಿ ಡಿಜಿಟಲ್ ಬಜೆಟ್‌ ಪ್ರತಿ (ಟ್ಯಾಬ್ಲೆಟ್‌) ಹಿಡಿದು ಸಂಸತ್‌ ಪ್ರವೇಶಿಸಿದ್ದರು. ಲೋಕಸಭೆಯಲ್ಲಿ ಮುದ್ರಿತ ಹಣಕಾಸು ಹೇಳಿಕೆಯ ಪುಸ್ತಕ ಹಿಡಿದು ಓದುವ ಬದಲು, ಟ್ಯಾಬ್ಲೆಟ್‌ನಲ್ಲಿದ್ದ ಪಿಡಿಎಫ್‌ ಪ್ರತಿಯನ್ನು ಓದಿ ಗಮನ ಸೆಳೆದಿದ್ದರು.

06.25 AM: ರಾಜಕೀಯಕ್ಕೆ ಬರುವ ಮುನ್ನ ಸೇಲ್ಸ್‌ ವುಮನ್‌ ಆಗಿ ಕೆಲಸ ಮಾಡುತ್ತಿದ್ದ ನಿರ್ಮಲಾ ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಗ್ಗೆ ಹೇಳುವುದಾದರೆ, ತಮಿಳುನಾಡಿನ ಮಧುರೈಗೆ ಸೇರಿದ ಇವರು ಮೊದಲು ಲಂಡನ್‌ನಲ್ಲಿ ಸೇಲ್ಸ್‌ ವುಮನ್‌ ಆಗಿ ಕೆಲಸ ಮಾಡುತ್ತಿದ್ದರು. 2003ರಲ್ಲಿ ಮಹಿಳಾ ಆಯೋಗದ ಸದಸ್ಯರಾಗಿದ್ದ ಇವರು 2017ರಲ್ಲಿ ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದರು. 2019ರಲ್ಲಿ ವಿತ್ತ ಸಚಿವೆಯಾದ ನಿರ್ಮಲಾ ಸೀತಾರಾಮನ್‌, ನರೇಂದ್ರ ಮೋದಿ ಸರ್ಕಾರದಲ್ಲಿ ಇದುವರೆಗೂ 5 ಬಾರಿ ಬಜೆಟ್‌ ಮಂಡಿಸಿದ್ದು, ಇದು ಅವರು ಮಂಡಿಸುತ್ತಿರುವ 6ನೇ ಬಜೆಟ್‌ ಆಗಿದೆ.

06.05 AM: ಬಜೆಟ್‌ ಮಂಡನೆ ಆಗುವರೆಗೂ ಹಣಕಾಸು ಸಚಿವಾಲಯದಲ್ಲಿ ಉಳಿಯುವ ಸಿಬ್ಬಂದಿ

ಬಜೆಟ್‌ ಮುದ್ರಣ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿ ಫೋನ್‌ ಬಳಸುವಂತಿಲ್ಲ, ಯಾರನ್ನೂ ಸಂಪರ್ಕಿಸುವಂತಿಲ್ಲ. ಗೌಪ್ಯತೆ ಕಾಪಾಡಲು ಹೊರ ಜಗತ್ತಿನ ಸಂಪರ್ಕದಿಂದ ದೂರ ಇರುತ್ತಾರೆ. ಇಲ್ಲಿ ಗುಪ್ತಚರರ ಕಣ್ಗಾವಲು ಇರುತ್ತದೆ. ತುರ್ತು ಕರೆಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ ಪ್ರಬಲ ಸೈಬರ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿರುತ್ತದೆ. ಹಣಕಾಸು ಸಚಿವರು ಅಂತಿಮವಾಗಿ ಬಜೆಟ್ ಮಂಡಿಸುವವರೆಗೆ ಅಧಿಕಾರಿಗಳು ಹಣಕಾಸು ಸಚಿವಾಲಯದಲ್ಲಿ ಇರಬೇಕಾಗುತ್ತದೆ.

05.45 AM: ಜ.24 ರಂದು ಹಲ್ವಾ ಹಂಚುವ ಮೂಲಕ ಬಜೆಟ್‌ ಕಾರ್ಯ ಆರಂಭ

ಜನವರಿ 24 ರಂದು ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಕೇಂದ್ರ ಹಣಕಾಸು ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಬಜೆಟ್‌ ಮುದ್ರಿಸುವವರಿಗೆ ಸಾಂಪ್ರದಾಯಿಕವಾಗಿ ಹಲ್ವಾ ಹಂಚುವ ಮೂಲಕ ಬಜೆಟ್‌ ಪ್ರಕ್ರಿಯೆಯನ್ನು ಆರಂಭಿಸಿದ್ದರು.

05.25 AM: ಮಧ್ಯಂತರ ಬಜೆಟ್‌

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಮಧ್ಯಂತರ ಬಜೆಟ್‌ ಮಂಡಿಸುತ್ತಿದ್ದಾರೆ. ಶೀಘ್ರದಲ್ಲೇ ಲೋಕಸಭೆ ಚುನಾವಣೆ ನಡೆಯಲಿದ್ದು ಹೊಸ ಸರ್ಕಾರ ಬಂದ ನಂತರ ಮತ್ತೆ ಜುಲೈನಲ್ಲಿ 2024-25 ನೇ ಸಾಲಿನ ಬಜೆಟ್‌ ಮಂಡಿಸಲಾಗುವುದು. ಈ ಬಾರಿ ಬರೀ ಲೇಖಾನುದಾನಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆಗಳು ಮಾತ್ರ ನಡೆಯುತ್ತದೆ ಎಂದು ವಿತ್ತ ಸಚಿವರು ಸ್ಪಷ್ಟಪಡಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ