Budget 2024: ಈ ಸಲ ನೀಲಿ-ಕೆನೆ ಬಣ್ಣದ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್; ಪ್ರತಿ ವರ್ಷ ಸುದ್ದಿಯಾಗುತ್ತೆ ವಿತ್ತ ಸಚಿವರ ಸೀರೆ
ಕೇಂದ್ರ ಮಧ್ಯಂತರ ಬಜೆಟ್ ಇಂದು (ಫೆ.1) ಮಂಡನೆಯಾಗಲಿದೆ. ಸತತ 6ನೇ ಬಾರಿಗೆ ಬಜೆಟ್ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ನೀಲಿಬಣ್ಣದ ಸೀರೆಯುಟ್ಟು ಬಜೆಟ್ ಮಂಡಿಸಲಿದ್ದಾರೆ. ಪ್ರತಿ ಬಜೆಟ್‌ನಲ್ಲೂ ನಿರ್ಮಲಾ ಅವರು ಉಡುವ ಸೀರೆ ಸುದ್ದಿಯಾಗುತ್ತದೆ.
ಈ ಬಾರಿ ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ಈ ಬಾರಿ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಇಂದು (ಫೆ.1) ಇಂದು 11 ಗಂಟೆಗೆ ಬಜೆಟ್ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಸೀರೆ ಬಣ್ಣದ ಸೀರೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯದ ಕಚೇರಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ನೀಲಿ ಹಾಗೂ ಕೆನೆಬಣ್ಣದ ಸೀರೆ ಉಟ್ಟಿರುವುದು ಗಮನಿಸಬಹುದು. ಟಸ್ಸರ್ ಸಿಲ್ಕ್ ಸೀರೆಯಲ್ಲಿ ಇಂದು ನಿರ್ಮಲಾ ಬಜೆಟ್ ಮಂಡಿಸಲಿದ್ದಾರೆ.
ಸೀರೆ ಹೀಗಿದೆ
ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಅವರು ಧರಿಸುವ ಸೀರೆ ಸಂಪೂರ್ಣ ನೀಲಿ ಬಣ್ಣದ್ದಾಗಿದ್ದು, ಮಧ್ಯದಲ್ಲಿ ಕೆನೆ ಬಣ್ಣದ ಚಿತ್ತಾರವಿದೆ. ಬಳ್ಳಿ ಹಾಗೂ ಎಲೆಗಳಿಂದ ಕೂಡಿರುವ ಚಿತ್ತಾರವನ್ನು ಸೀರೆಯಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಸೀರೆಗೊಪ್ಪುವ ಕೆನೆ ಬಣ್ಣದ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಾರೆ. ಎಂದಿನಂತೆ ಸರಳ ಸುಂದರಿಯಾಗಿ ಬಜೆಟ್ ಮಂಡಿಸಲಿದ್ದಾರೆ ನಿರ್ಮಲಾ.
ಪ್ರತಿ ಬಾರಿ ಬಜೆಟ್‌ನಲ್ಲೂ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ ಜೊತೆಗೆ ಅವರ ಸೀರೆ ಕೂಡ ಸುದ್ದಿಯಾಗುತ್ತಿತ್ತು.
ನಿರ್ಮಲಾ ಸೀತಾರಾಮನ್ ಅವರ ಭಾರತೀಯ ಜವಳಿಗಳ ಮೇಲಿನ ಪ್ರೀತಿ ಅಪಾರ. ಅವರು ಯಾವಾಗಲೂ ಸ್ಥಳೀಯ ಕೈಮಗ್ಗಗಳನ್ನು ಬಳಸುವಂತೆ ಕರೆ ನೀಡುತ್ತಾರೆ. ಅವರು ಕೂಡ ಇಳ್‌ಕಲ್, ಕೊಚಂಪಲ್ಲಿ ಇಂತಹ ಸ್ಥಳೀಯ ಕೈಮಗ್ಗದ ಸೀರೆಗಳನ್ನೇ ಹೆಚ್ಚು ಬಳಸುತ್ತಾರೆ.
ಕಳೆದ ವರ್ಷ ನವಲಗುಂದ ಕಸೂತಿ ಇರುವ ಕೈಮಗ್ಗದ ಕೆಂಪು ಇಳಕಲ್ ಸೀರೆ ಧರಿಸಿದ್ದರು. ಈ ಸೀರೆಯನ್ನು ಕರ್ನಾಟಕ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಉಡುಗೊರೆ ನೀಡಿದ್ದರು. ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಅವರು ಸೀರೆ ಆಯ್ಕೆ ಮಾಡಿಕೊಂಡ ನಂತರ ಅದರ ಮೇಲೆ ಕಸೂತಿ ಮಾಡಲಾಯಿತು ಎನ್ನಲಾಗುತ್ತದೆ.
ಕೆನೆ ಬಣ್ಣ ಅಂದ್ರೆ ನಿರ್ಮಲಾ ಅವರಿಗೆ ಇಷ್ಟ
ಆಫ್ ವೈಟ್ ಅಥವಾ ಕೆನೆ ಬಣ್ಣವು ನಿರ್ಮಲಾ ಸೀತಾರಾಮನ್ ಅವರಿಗೆ ಅಚ್ಚುಮೆಚ್ಚು. ಏಕೆಂದರೆ ಇವರು ಆಗಾಗ್ಗೆ ಈ ಬಣ್ಣದ ಸೀರೆಯನ್ನು ಉಡುತ್ತಿರುತ್ತಾರೆ. 2021ರ ಬಜೆಟ್ ಮಂಡಿಸುವಾಗ ಕೂಡ ನಿರ್ಮಲಾ ಅವರು ಕೆಂಪು ಹಾಗೂ ಆಫ್ ವೈಟ್ ಪೋಚಂಪಲ್ಲಿ ಸೀರೆ ಧರಿಸಿದ್ದರು.
2022ರಂದು ಕಂದು ಬಣ್ಣದ ಬೊಮ್ಕೈ ಸೀರೆ ಆರಿಸಿಕೊಂಡಿದ್ದರು ವಿತ್ತ ಸಚಿವೆ. 2020ರಲ್ಲಿ ತೆಳುವಾದ ನೀಲಿ ಅಂಚಿರುವ ಹಳದಿ ರೇಷ್ಮೆ ಸೀರೆ ಧರಿಸಿದ್ದರು.