logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ, ಒಂದು ಅಮೆರಿಕನ್ ಡಾಲರ್ ಎಂದರೆ ಈಗ ಭಾರತದ 84 ರೂಪಾಯಿ!

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ, ಒಂದು ಅಮೆರಿಕನ್ ಡಾಲರ್ ಎಂದರೆ ಈಗ ಭಾರತದ 84 ರೂಪಾಯಿ!

Umesh Kumar S HT Kannada

Oct 11, 2024 03:57 PM IST

google News

ಒಂದು ಅಮೆರಿಕನ್ ಡಾಲರ್ ಎಂದರೆ ಈಗ ಭಾರತದ 84 ರೂಪಾಯಿ

  • ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಂದು ಅಮೆರಿಕನ್ ಡಾಲರ್ ಎಂದರೆ ಈಗ ಭಾರತದ 84 ರೂಪಾಯಿ. ಭಾರತದ ರೂಪಾಯಿ ಮೌಲ್ಯ ಕುಸಿದುದೇಕೆ ಎಂಬ ವಿವರ ಇಲ್ಲಿದೆ.

ಒಂದು ಅಮೆರಿಕನ್ ಡಾಲರ್ ಎಂದರೆ ಈಗ ಭಾರತದ 84 ರೂಪಾಯಿ
ಒಂದು ಅಮೆರಿಕನ್ ಡಾಲರ್ ಎಂದರೆ ಈಗ ಭಾರತದ 84 ರೂಪಾಯಿ

ಮುಂಬಯಿ: ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಈವರೆಗಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ಸಾರ್ವಕಾಲಿಕ ಕನಿಷ್ಠ ದರವಾಗಿದ್ದು, ಇಂದಿನ ವಹಿವಾಟಿನ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯ 84 ರೂಪಾಯಿಗೆ ಇಳಿದಿತ್ತು. ಗುರುವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 83.98 ರೂಪಾಯಿ ಆಗಿತ್ತು. ಇದಕ್ಕೂ ಮೊದಲು 2022ರ ಜುಲೈ 19 ರಂದು ಡಾಲರ್ ಎದುರು ರೂಪಾಯಿ 80ಕ್ಕೆ ಕುಸಿದಿತ್ತು. ಅಲ್ಲಿಂದ ನಂತರ ಕುಸಿತದ ಆ ಮಟ್ಟ ಮೀರಿ ಏರಿದ್ದಿಲ್ಲ. ಕುಸಿತವನ್ನೇ ದಾಖಲಿಸಿದೆ.

ಡಾಲರ್ ಸೂಚ್ಯಂಕದ ಸ್ಥಿತಿ: ಏತನ್ಮಧ್ಯೆ, ಆರು ಪ್ರಮುಖ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಸ್ಥಾನವನ್ನು ಅಳೆಯುವ ಡಾಲರ್ ಸೂಚ್ಯಂಕವು 0.11 ಶೇಕಡಾ ಕಡಿಮೆಯಾಗಿ 102.87 ಕ್ಕೆ ತಲುಪಿದೆ. ಡಾಲರ್ ಸೂಚ್ಯಂಕ - ಯೆನ್, ಪೌಂಡ್, ಕೆನಡಿಯನ್ ಡಾಲರ್, ಸ್ವೀಡಿಷ್ ಕ್ರೋನಾ, ಸ್ವಿಸ್ ಫ್ರಾಂಕ್ ಮತ್ತು ಯೂರೋ ವಿರುದ್ಧ ಅಮೆರಿಕದ ಕರೆನ್ಸಿಯನ್ನು ಅಳೆಯುತ್ತದೆ.

ರೂಪಾಯಿ ದುರ್ಬಲಗೊಳ್ಳುವುದರ ಅರ್ಥ

ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ದುರ್ಬಲವಾಗುತ್ತಿರುವುದು ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ದುಬಾರಿಯಾಗಲಿದೆ. ಕಚ್ಚಾ ತೈಲದ ಬೆಲೆಯಿಂದಾಗಿ, ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತದೆ. ಡಾಲರ್‌ನಲ್ಲಿ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಬೆಲೆಯೂ ಹೆಚ್ಚಾಗುತ್ತದೆ. ವಿದೇಶದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಹಾಸ್ಟೆಲ್‌ಗಳು, ಕಾಲೇಜು ಶುಲ್ಕಗಳು, ಆಹಾರ ಮತ್ತು ಸಾರಿಗೆಗಾಗಿ ಡಾಲರ್‌ಗಳಲ್ಲಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಷೇರು ಮಾರುಕಟ್ಟೆ ಕುಸಿತ; ವಿದೇಶಿ ಬಂಡವಾಳ ಹೂಡಿಕೆ ಹಿಂಪಡೆತ

ಏತನ್ಮಧ್ಯೆ, ಭಾರತೀಯ ಷೇರು ಮಾರುಕಟ್ಟೆ ವಹಿವಾಟು ಕೂಡ ಶುಕ್ರವಾರ ಮಂದಗತಿಯಲ್ಲಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಕೆಂಪು ಬಣ್ಣದ ವಹಿವಾಟಿನಲ್ಲಿರುವುದು ಕಂಡುಬಂದವು. ಕಳೆದ ಗುರುವಾರ, 30 ಷೇರುಗಳನ್ನು ಆಧರಿಸಿದ ಬಿಎಸ್‌ಇ ಸೆನ್ಸೆಕ್ಸ್ 81,611.41 ಪಾಯಿಂಟ್‌ಗಳಲ್ಲಿ 144.31 ಪಾಯಿಂಟ್‌ಗಳು ಅಥವಾ 0.18 ರಷ್ಟು ಏರಿಕೆಯಾಗಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ವೇಳೆ 535.74 ಪಾಯಿಂಟ್‌ಗಳಷ್ಟು ಏರಿತ್ತು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಕೂಡ 16.50 ಪಾಯಿಂಟ್ ಅಥವಾ 0.07 ರಷ್ಟು ಏರಿಕೆಯೊಂದಿಗೆ 24,998.45 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು. ಇಂಟ್ರಾ ಡೇ ವಹಿವಾಟಿನ ಸಮಯದಲ್ಲಿ 152.1 ಪಾಯಿಂಟ್‌ಗಳಷ್ಟು ಏರಿತ್ತು.

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಮಂಗಳವಾರ ಸತತ ಏಳನೇ ವಹಿವಾಟು ಅವಧಿಗೆ ತಮ್ಮ ಬಳಿ ಇರುವ ಷೇರುಗಳ ಮಾರಾಟವನ್ನು ಮುಂದುವರೆಸಿದ್ದಾರೆ. ಭಾರತೀಯ ಷೇರುಗಳಿಂದ ಹೆಚ್ಚುವರಿ 5,729 ಕೋಟಿ ರೂಪಾಯಿಯನ್ನು ಹಿಂತೆಗೆದುಕೊಂಡಿದ್ದಾರೆ. ಇದು ಕಳೆದ ಏಳು ದಿನಗಳಲ್ಲಿ ಒಟ್ಟು 55,742 ಕೋಟಿ ರೂಪಾಯಿಯನ್ನು ವಿದೇಶಿ ಬಂಡವಾಳ ಹೂಡಿಕೆದಾರರು ಹಿಂಪಡೆದುಕೊಂಡಿದ್ದಾರೆ. ಅಕ್ಟೋಬರ್ 4 ರಂದು ಎಫ್‌ಪಿಐಗಳು 15,506 ಕೋಟಿ ರೂಪಾಯಿ ಹಿಂಪಡೆದಾಗ ಷೇರುಪೇಟೆ ಸೂಚ್ಯಂಕಗಳು ಕುಸಿದಿವೆ. ಇದರ ಪರಿಣಾಮವೇ ಈಗ ಭಾರತದ ರೂಪಾಯಿ ಮೌಲ್ಯ ಕುಸಿತಕ್ಕೂ ಕಾರಣ ಎಂದು ಕರೆನ್ಸಿ ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಇದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಭಾರತಷೇರುಪೇಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಮಾಡುತ್ತಿದ್ದ ಮಾರಾಟದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಏಳು ದಿನಗಳ ಅವಧಿಯಲ್ಲಿ ನಿವ್ವಳ ಖರೀದಿದಾರರಾಗಿ ಒಟ್ಟು 60,206 ಕೋಟಿ ರೂಪಾಯಿ ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ