logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ; ರತನ್ ಟಾಟಾ ಅವರ ಮಲಸಹೋದರನಿಗೆ ಪಟ್ಟ

ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ; ರತನ್ ಟಾಟಾ ಅವರ ಮಲಸಹೋದರನಿಗೆ ಪಟ್ಟ

Umesh Kumar S HT Kannada

Oct 11, 2024 06:03 PM IST

google News

ರತನ್ ಟಾಟಾ (ಎಡ ಚಿತ್ರ) ಅವರ ಮಲ ಸಹೋದರನಿಗೆ ಟಾಟಾ ಟ್ರಸ್ಟ್ ಮುನ್ನಡೆಸುವ ಪಟ್ಟ ಸಿಕ್ಕಿದೆ. ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ (ಬಲಚಿತ್ರ) ನೇಮಕವಾಗಿದೆ.

  • ಟಾಟಾ ಟ್ರಸ್ಟ್‌ನ ನಾಯಕತ್ವ ಯಾರಿಗೆ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಟಾಟಾ ಟ್ರಸ್ಟ್ ಇಂದು (ಅಕ್ಟೋಬರ್ 11) ಎರಡು ಸಭೆ ನಡೆಸಿದ್ದು, ಅದರಲ್ಲಿ ಹೊಸ ಅಧ್ಯಕ್ಷರ ನೇಮಕಾತಿಯನ್ನು ಅಂತಿಮಗೊಳಿಸಿದೆ. ಇದರಂತೆ, ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ರತನ್ ಟಾಟಾ (ಎಡ ಚಿತ್ರ) ಅವರ ಮಲ ಸಹೋದರನಿಗೆ ಟಾಟಾ ಟ್ರಸ್ಟ್ ಮುನ್ನಡೆಸುವ ಪಟ್ಟ ಸಿಕ್ಕಿದೆ. ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ (ಬಲಚಿತ್ರ) ನೇಮಕವಾಗಿದೆ.
ರತನ್ ಟಾಟಾ (ಎಡ ಚಿತ್ರ) ಅವರ ಮಲ ಸಹೋದರನಿಗೆ ಟಾಟಾ ಟ್ರಸ್ಟ್ ಮುನ್ನಡೆಸುವ ಪಟ್ಟ ಸಿಕ್ಕಿದೆ. ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ (ಬಲಚಿತ್ರ) ನೇಮಕವಾಗಿದೆ.

ಮುಂಬಯಿ: ಟಾಟಾ ಟ್ರಸ್ಟ್‌ನ ಹೊಸ ಅಧ್ಯಕ್ಷರಾಗಿ ನೋಯೆಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಶುಕ್ರವಾರ ನಡೆದ ಟಾಟಾ ಟ್ರಸ್ಟ್ ಸಭೆಯಲ್ಲಿ ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಸಿಎನ್‌ಬಿಸಿ ಟಿವಿ18 ವರದಿ ಮಾಡಿದೆ. ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ಮಲ ಸಹೋದರ. ಟಾಟಾ ಟ್ರಸ್ಟ್ ಶುಕ್ರವಾರ ಎರಡು ಸಭೆಗಳನ್ನು ನಡೆಸಿದ್ದು, ಒಂದು ಸಭೆಯಲ್ಲಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಇನ್ನೊಂದು ಸಭೆಯಲ್ಲಿ ಟಾಟಾ ಟ್ರಸ್ಟ್‌ ಹೊಸ ಅಧ್ಯಕ್ಷರ ನೇಮಕಾತಿ ವಿಚಾರ ಚರ್ಚೆ ನಡೆದು ನೋಯೆಲ್ ಟಾಟಾ ಹೆಸರು ಅಂತಿಮಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ. ಟಾಟಾ ಗ್ರೂಪ್‌ ಮುಖ್ಯಸ್ಥ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಮುಂಬೈನಲ್ಲಿ ನಿಧನರಾದರು. ಅವರ ಅಂತ್ಯ ಸಂಸ್ಕಾರ ಗುರುವಾರ (ನಿನ್ನೆ) ನಡೆಯಿತು.

ಟಾಟಾ ಸನ್ಸ್ ಪಾಲು ಶೇಕಡ 66

ನೋಯೆಲ್ ಟಾಟಾ ಅವರು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ 11 ನೇ ಅಧ್ಯಕ್ಷ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಆರನೇ ಅಧ್ಯಕ್ಷರಾಗಿದ್ದಾರೆ. ನೋಯೆಲ್ ಟಾಟಾ ಅವರು ನವಲ್‌ ಟಾಟಾ ಮತ್ತು ಸಿಮೋನ್ ಎನ್ ಟಾಟಾ ದಂಪತಿಯ ಪುತ್ರ. ಈಗಾಗಲೇ ನೋಯೆಲ್ ಟಾಟಾ ಅವರು ಈ ಎರಡೂ ಟ್ರಸ್ಟ್‌ಗಳಲ್ಲಿ ಟ್ರಸ್ಟಿ ಆಗಿದ್ದರು. ಈ ಎರಡು ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿವೆ. ಟಾಟಾ ಸನ್ಸ್ ವೈವಿಧ್ಯಮಯ ಟಾಟಾ ಸಮೂಹದ ಹೂಡಿಕೆ ಕಂಪನಿಯಾಗಿದೆ.

ಟಾಟಾ ಸನ್ಸ್ ಬಳಿ ಇರು ಶೇಕಡ 66 ಪಾಲು ಹಂಚಿಕೆಯಾಗಿರುವುದು ಹೀಗೆ - ದೊರಾಬ್ಜಿ ಟಾಟಾ ಟ್ರಸ್ಟ್‌ ಶೇಕಡ 28, ರತನ್ ಟಾಟಾ ಟ್ರಸ್ಟ್‌ ಶೇಕಡ 24 ಮತ್ತು ಉಳಿದ ಪಾಲು ಇನ್ನು ಕೆಲವು ಲಿಸ್ಟೆಡ್ ಕಂಪನಿಗಳ ಬಳಿ ಇದೆ. ಈ ಲಿಸ್ಟೆಡ್ ಕಂಪನಿಗಳ ಪೈಕಿ ಟಾಟಾ ಕೆಮಿಕಲ್ಸ್ ಮತ್ತು ಟಾಟಾ ಮೋಟಾರ್ಸ್ ಬಳಿ ಶೇಕಡ 3, ಟಾಟಾ ಪವರ್ ಬಳಿ ಶೇಕಡ 2 ಮತ್ತು ಇಂಡಿಯನ್‌ ಹೋಟೆಲ್ಸ್ ಬಳಿ ಶೇಕಡ 1 ಇದೆ.

ಚಾಲ್ತಿಯಲ್ಲಿತ್ತು ಹಲವರು ಹೆಸರು

ಟಾಟಾ ಟ್ರಸ್ಟ್ ಚೇರ್‌ಮನ್‌ ಪಟ್ಟಕ್ಕೆ ಹಲವರ ಹೆಸರು ಚಾಲ್ತಿಯಲ್ಲಿತ್ತು. ನೋಯೆಲ್ ಟಾಟಾ ಅವರ ಹೊರತಾಗಿ ಮೆಹಲಿ ಮಿಸ್ತ್ರಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಮೆಹಲಿ ಮಿಸ್ತ್ರಿ ಅವರು ರತನ್ ಟಾಟಾ ಆಪ್ತರೆಂದು ನಂಬಲಾಗಿದೆ. ಅವರು 2000ನೇ ಇಸವಿಯಿಂದಲೂ ಎರಡೂ ಟಾಟಾ ಟ್ರಸ್ಟ್‌ಗಳಲ್ಲಿ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. 2022ರ ಅಕ್ಟೋಬರ್‌ನಲ್ಲಿ ಅವರನ್ನು ಟ್ರಸ್ಟಿ ಎಂದು ಸೇರ್ಪಡೆಗೊಳಿಸಲಾಗಿದೆ.

ನೋಯೆಲ್ ಟಾಟಾ ಅವರು ಕಳೆದ 40 ವರ್ಷಗಳಿಂದ ಟಾಟಾ ಸಮೂಹದ ಭಾಗವಾಗಿದ್ದಾರೆ. ಅವರು ಟ್ರೆಂಟ್‌ನಂತಹ ಅನೇಕ ದೊಡ್ಡ ಕಂಪನಿಗಳನ್ನು ಮುನ್ನಡೆಸಿದ್ದಾರೆ. ಪ್ರಸ್ತುತ, ಅವರು ಅನೇಕ ಟಾಟಾ ಗ್ರೂಪ್ ಕಂಪನಿಗಳ ಮಂಡಳಿಯ ಸದಸ್ಯರಾಗಿದ್ದಾರೆ. ಅವರು ಪ್ರಸ್ತುತ ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿ ಲಿಮಿಟೆಡ್‌ನ ಉಪಾಧ್ಯಕ್ಷರಾಗಿದ್ದಾರೆ.

ನೋಯೆಲ್ ಟಾಟಾ ಅವರು ಆಗಸ್ಟ್ 2010 ರಿಂದ ನವೆಂಬರ್ 2021 ರವರೆಗೆ ಟ್ರೆಂಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರ ನಾಯಕತ್ವದಲ್ಲಿ, ಟ್ರೆಂಟ್‌ನ ವಹಿವಾಟು 500 ಮಿಲಿಯನ್‌ ಡಾಲರ್‌ನಿಂದ 3 ಬಿಲಿಯನ್‌ ಡಾಲರ್‌ಗೆ ಏರಿತು. ನೋಯೆಲ್ ಟಾಟಾ ಅವರು ಸಸೆಕ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

ರತನ್ ಟಾಟಾ ಅವರು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷ ಮತ್ತು ಟಾಟಾ ಸನ್ಸ್‌ನ ಗೌರವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಕೊನೆಯ ವ್ಯಕ್ತಿ. ಟಾಟಾ ಸನ್ಸ್ 2022 ರಲ್ಲಿ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ​​ಅನ್ನು ಬದಲಾಯಿಸಿತ್ತು. ಇದರಿಂದಾಗಿ ಇನ್ನು ಒಬ್ಬ ವ್ಯಕ್ತಿಯು ಎರಡೂ ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸಲಾಗದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ