Controversy and Chowdhury: ಅಧೀರ್ ಬಾಯಿಬಿಟ್ಟರೆ ವಿವಾದ; ಪೇಚಿಗೆ ಸಿಲುಕಿದ ಕಾಂಗ್ರೆಸ್
Jul 28, 2022 04:36 PM IST
ಸಂಸತ್ ಭವನದ ಸಮೀಪ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (PTI Photo/Arun Sharma)
- ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ ವಿವಾದವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಸಲ ಅವರ ಹೇಳಿಕೆ ವಿವಾದಕ್ಕೀಡಾಗಿವೆ. ಇವರ ಹೇಳಿಕೆ ಕಾರಣ ಕಾಂಗ್ರೆಸ್ ಪೇಚಿಗೆ ಸಿಲುಕುವುದು ಸಾಮಾನ್ಯವೆನಿಸಿಬಿಟ್ಟಿದೆ.
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury) ನಿನ್ನೆ ನೀಡಿದ ಹೇಳಿಕೆ ವಿಚಾರ ಇಂದು ಸಂಸತ್‌ನಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ಗದ್ದಲಕ್ಕೆ ಕಾರಣವಾಯಿತು. ಆದರೆ, ಅಧೀರ್ ಅವರ ಹೇಳಿಕೆಗಳು ವಿವಾದಕ್ಕೀಡಾಗುತ್ತಿರುವುದು ಇದೇ ಮೊದಲೇನಲ್ಲ.
ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆ ಸೇರಿ ಹಲವು ವಿಚಾರಗಳಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಅಧೀರ್ ರಂಜನ್ ನೀಡಿದ ಹೇಳಿಕೆ ವಿವಾದಕ್ಕೆ ಈಡಾಗಿದೆ. ವಿಜಯ್ ಚೌಕ್‌ನಲ್ಲಿ ಬುಧವಾರ ನಡೆದ ಪ್ರತಿಭಟನೆಯ ವೇಳೆ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರ ಪತ್ನಿ' ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಬಗ್ಗೆ ಗದ್ದಲ ಎದ್ದಿದ್ದು, ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಿಜೆಪಿ ಗದ್ದಲ ಸೃಷ್ಟಿಸಿತ್ತು.
ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಅವರಂತಹ ಮಹಿಳಾ ನಾಯಕರು ಸಂಸತ್ತಿನಲ್ಲಿ ಮುಂದಾಳುತ್ವ ವಹಿಸಿದಾಗ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಯಿತು. ಸ್ಮೃತಿ ಇರಾನಿ ಅವರು ನೇರವಾಗಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಇಷ್ಟು ಮಾತ್ರವಲ್ಲದೆ ಸದನದಲ್ಲಿ ಕಲಾಪ ಮುಂದೂಡಲ್ಪಟ್ಟ ಬಳಿಕ ಹೊರಬಂದ ನಂತರವೂ ಸೋನಿಯಾ ಗಾಂಧಿ ಮತ್ತು ಸ್ಮೃತಿ ಇರಾನಿ ನಡುವೆ ವಾಗ್ವಾದ ನಡೆದಿದೆ. ಆದರೆ, ಅಧೀರ್ ಮಾತಿಗೆ ಈ ರೀತಿ ಗಲಾಟೆ ಆಗುತ್ತಿರುವುದು ಇದೇ ಮೊದಲಲ್ಲ.
ಇಂದಿರಾ ಮತ್ತು ಮೋದಿಗೆ ಗಂಗಾ ಮತ್ತು ನಾಲೆಯ ಹೋಲಿಕೆ
ಅಧೀರ್ ರಂಜನ್ ಚೌಧರಿ ಅವರು 2020 ರ ಬಜೆಟ್ ಅಧಿವೇಶನದಲ್ಲಿ ತಮ್ಮ ಕಾಮೆಂಟ್‌ಗಳ ಮೂಲಕ ವಿವಾದಕ್ಕೀಡಾಗಿದ್ದರು. ಅಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತ, ಇಂದು ಅವರು ಮಹಾತ್ಮ ಗಾಂಧಿಯನ್ನು ನಿಂದಿಸುತ್ತಾರೆ. ಅವನು ರಾವಣನ ಮಗ. ರಾಮನ ಪೂಜಾರಿಯನ್ನು ಅವಮಾನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಸಂಸದರು ಮೋದಿಯ ಸಿಕೋಫಂಟ್‌ಗಳು ಎಂದು ಹೇಳಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ನಾವು ʻಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾʼ ಎಂದು ಹೇಳುವುದಿಲ್ಲ ಎಂದು ತಿರುಗೇಟು ನೀಡಿದ್ದರು. ಕೂಡಲೇ ಅಧೀರ್ ರಂಜನ್ ಚೌಧರಿ ಅವರು ಗಂಗಾ ಮತ್ತು ನಾಲೆಯನ್ನು ಹೋಲಿಕೆ ಮಾಡಲಾಗದು ಎಂದು ಹೇಳಿದ್ದರು.
ರಾಜೀವ್ ಅವರ ಪುಣ್ಯತಿಥಿ ಪೋಸ್ಟರ್
ರಾಜೀವ್ ಗಾಂಧಿ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಮೇ 21ರಂದು ಅಧೀರ್ ರಂಜನ್ ಚೌಧರಿ ಮಾಡಿದ ಟ್ವೀಟ್ ಭಾರೀ ಸಂಚಲನ ಸೃಷ್ಟಿಸಿತ್ತು. ಅದರಲ್ಲಿ 'ದೊಡ್ಡ ಮರ ಬಿದ್ದಾಗ ಭೂಮಿ ಕಂಪಿಸುತ್ತದೆ' ಎಂದು ಬರೆದಿದ್ದರು.
ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಿಖ್ ದಂಗೆಗಳ ಬಗ್ಗೆ ಪ್ರತಿಕ್ರಿಯಿಸುವ ಭರದಲ್ಲಿ ರಾಜೀವ್ ಗಾಂಧಿಯವರ ಬಗ್ಗೆ ಈ ರೀತಿ ಬರೆದುಕೊಂಡಿದ್ದರು. ಇದು ವಿವಾದವಾದಾಗ ಕೊನೆಗೆ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಆದರೆ ಅವರಿಂದಾಗಿ ಕಾಂಗ್ರೆಸ್ ಸಂಕಷ್ಟ ಎದುರಿಸಬೇಕಾಯಿತು. ಇದಾಗಿ ನನ್ನ ಟ್ವಿಟರ್ ಖಾತೆಯೇ ಹ್ಯಾಕ್ ಆಗಿದೆ ಎಂದು ಅಧೀರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಧಾನಿ ಮೋದಿ ಮತ್ತು ಅಮಿತ್ ಷಾ ನುಸುಳುಕೋರರು
ಅಧೀರ್ ರಂಜನ್ ಚೌಧರಿ ಅವರು ಈ ಹಿಂದೆ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ನುಸುಳುಕೋರರು ಎಂದು ಹೇಳಿದ್ದರು. ಎನ್‌ಆರ್‌ಸಿ ಕುರಿತ ಚರ್ಚೆಯ ವೇಳೆ ಅಧೀರ್ ರಂಜನ್ ಚೌಧರಿ ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಅವರನ್ನು ಇತರ ದೇಶಗಳ ನುಸುಳುಕೋರರಿಗೆ ಹೋಲಿಸಿದ್ದಾರೆ. ಅಧೀರ್, 'ಹೌದು, ನಾನು ಒಳನುಗ್ಗುವವನು. ನಾನು ಗೆದ್ದಲು; ಮೋದಿ ಒಬ್ಬ ನುಸುಳುಕೋರ. ಅಮಿತ್ ಶಾ ನುಸುಳುಕೋರ. ಎಲ್ ಕೆ ಆಡ್ವಾಣಿ ಕೂಡ ನುಸುಳುಕೋರರು ಎಂದು ಹೇಳಿದ್ದರು.
ನಿನ್ನೆ ಮತ್ತು ಇಂದು ಚೌಧರಿ ಹೇಳಿದ್ದೇನು?
ಇಡಿ ವಿಚಾರಣೆ ವಿರುದ್ಧ ಕಾಂಗ್ರೆಸ್ಸಿಗರು ನಿನ್ನೆ ಪ್ರತಿಭಟನೆ ನಡೆಸಿದಾಗ, ಅಧೀರ್ ರಂಜನ್ ಚೌಧರಿ ಅವರು ʻರಾಷ್ಟ್ರಪತ್ನಿʼ (Rashtrapatni) ಹೇಳಿಕೆ ನೀಡಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಅಧೀರ್ ಚೌಧರಿ ಈ ದ್ರೌಪದಿ ಮರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದಾರೆ.
ಬಿಜೆಪಿಯ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅಧೀರ್ ಚೌಧರಿ, ನನ್ನ ಹೇಳಿಕೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ತಪ್ಪಾಗಿ ‘ರಾಷ್ಟ್ರಪತ್ನಿ’ ಎಂದು ಹೇಳಿದ್ದೇನೆ. ಅದಕ್ಕಾಗಿ ಅವರು ನನ್ನನ್ನು ಗಲ್ಲಿಗೇರಿಸಲು ಬಯಸಿದರೆ ಗಲ್ಲಿಗೇರಿಸಬಹುದು ಎಂದಿದ್ದಾರೆ. ಕೊನೆಗೆ ಕ್ಷಮೆ ಕೋರಿ, ರಾಷ್ಟ್ರಪತಿ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದರು.