ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ 180 ಕೋಟಿ ರೂ ಸಾಲ ವಂಚನೆ, ವಿಜಯ್ ಮಲ್ಯ ಸೇರಿ 10 ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್
Jul 02, 2024 10:25 AM IST
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ 180 ಕೋಟಿ ರೂ ಸಾಲ ವಂಚನೆ, ವಿಜಯ್ ಮಲ್ಯ ಸೇರಿ 10 ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ (ಕಡತ ಚಿತ್ರ)
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ 180 ಕೋಟಿ ರೂ ಸಾಲ ವಂಚನೆ ಪ್ರಕರಣದಲ್ಲಿ, ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಸೇರಿ 10 ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
ನವದೆಹಲಿ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ)ಗೆ ಸಂಬಂಧಿಸಿದ 180 ಕೋಟಿ ರೂಪಾಯಿ ಸುಸ್ತಿ ಸಾಲ ಪ್ರಕರಣದಲ್ಲಿ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಮುಂಬೈನ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಪಿ.ನಾಯಕ್ ನಿಂಬಾಳ್ಕರ್ ಅವರು ಜೂನ್ 29 ರಂದು ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 2007-2012ರ ಅವಧಿಯಲ್ಲಿ ವಿಜಯ್ ಮಲ್ಯ ಮತ್ತು ಅವರ ಕಂಪನಿಗೆ ಸುಮಾರು 180 ಕೋಟಿ ರೂಪಾಯಿ ಸಾಲವನ್ನು ನೀಡಿದೆ. ಆದರೆ ವಿಜಯ್ ಮಲ್ಯ ಮತ್ತು ಅವರ ಕಂಪನಿ ಈ ಸಾಲವನ್ನು ಮರುಪಾವತಿಸದೆ ವಂಚಿಸಿದೆ. ಈ ಪ್ರಕರಣದಲ್ಲಿ ವಿಜಯ್ ಮಲ್ಯ ಸೇರಿ ಒಟ್ಟು 10 ಆರೋಪಿಗಳಿದ್ದು, ಈ ಪ್ರಕರಣದಲ್ಲಿ 2016ರ ಆಗಸ್ಟ್ ಎಫ್ಐಆರ್ ದಾಖಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆಗೆ ಹಾಜರಾಗಲು ವಿಜಯ್ ಮಲ್ಯ ಸೇರಿ 10 ಆರೋಪಿಗಳಿಗೆ ಕೋರ್ಟ್ ಸಮನ್ಸ್
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ ಪಡೆದ 180 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ವಿಜಯ್ ಮಲ್ಯ ಸೇರಿ 10 ಆರೋಪಿಗಳಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಸಿಬಿಐ ನ್ಯಾಯಾಲಯ ಈ ಸಮನ್ಸ್ ಜಾರಿಗೊಳಿಸಿದ್ದು, ಇದು ಜಾಮೀನು ರಹಿತ ವಾರೆಂಟ್ ಅನ್ನು ಒಳಗೊಂಡಿದೆ ಎಂದು ವರದಿ ಹೇಳಿದೆ.
ವಹಿವಾಟು ಬಂದ್ ಮಾಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಪ್ರವರ್ತಕರು ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ. ಪರಿಣಾಮ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗೆ 180 ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟವಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆರೋಪಿಸಿದೆ.
ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಈಗಾಗಲೇ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಮದ್ಯದ ದೊರೆ ಪ್ರಸ್ತುತ ಲಂಡನ್‌ನಲ್ಲಿ ವಾಸವಿದ್ದಾರೆ, ಭಾರತ ಸರ್ಕಾರವು ಅವರನ್ನು ಗಡಿಪಾರು ಮಾಡಿಸಿಕೊಳ್ಳಲು ಸಕ್ರಿಯವಾಗಿ ಪ್ರಯತ್ನಿಸುತ್ತಿದೆ.
2007 ಮತ್ತು 2012 ರ ನಡುವೆ ಐಒಬಿಯಿಂದ ಕಿಂಗ್‌ಫಿಶರ್ ಏರ್‌ಲೈನ್ಸ್ ಪಡೆದ ಸಾಲವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸಿಬಿಐ ಸಲ್ಲಿಸಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈ ವಾರಂಟ್ ಹೊರಡಿಸಲಾಗಿದೆ.
ವಿಜಯ್ ಮಲ್ಯ, ಕಿಂಗ್‌ಫಿಶರ್ ಸುಸ್ತಿ ಸಾಲ ಪ್ರಕರಣ; ಸಿಬಿಐ ಹೇಳಿರುವುದೇನು
ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಇತ್ತೀಚೆಗೆ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್ ಪ್ರಕಾರ, ಬ್ಯಾಂಕ್ ಈ ಸಾಲಗಳನ್ನು ನಿರ್ದಿಷ್ಟ ಒಪ್ಪಂದದ ಅಡಿಯಲ್ಲಿ ನಿಷ್ಕ್ರಿಯ ವಿಮಾನಯಾನ ಸಂಸ್ಥೆಗೆ ವಿಸ್ತರಿಸಿದೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್ (ಕೆಎಎಲ್) ತನ್ನ ಪ್ರಸ್ತುತ ಸೌಲಭ್ಯಗಳನ್ನು ಪುನರ್‌ರಚಿಸುವ ಪ್ರಸ್ತಾಪವನ್ನು ಪರಿಶೀಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2010ರ ಆಗಸ್ಟ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ ಸೂಚನೆ ನೀಡಿತು. ತನಿಖಾ ಸಂಸ್ಥೆಯ ದಾಖಲೆಯ ಪ್ರಕಾರ, ಈ ನಿರ್ದೇಶನವು ವಾಯುಯಾನ ಕ್ಷೇತ್ರಕ್ಕೆ ಮಾರ್ಗಸೂಚಿಗಳನ್ನು ಸಡಿಲಿಸುವುದನ್ನು ಒಳಗೊಂಡಿದೆ.
ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ವಿಶೇಷ ನ್ಯಾಯಾಲಯವು 2019 ರ ಜನವರಿಯಲ್ಲಿ ಮಾಜಿ ರಾಜ್ಯಸಭಾ ಸಂಸದನನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದುಘೋಷಿಸಿತು. ಸಾಲ ಮರುಪಾವತಿ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಲ್ಯ 2016ರ ಮಾರ್ಚ್ ನಲ್ಲಿ ಭಾರತದಿಂದ ಪಲಾಯನ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.