ಭಾರತದಲ್ಲಿ 162ಕ್ಕೆ ಏರಿದ ಕೋವಿಡ್ ಜೆಎನ್.1 ಸೋಂಕಿತರ ಸಂಖ್ಯೆ; ಕರ್ನಾಟಕದಲ್ಲಿ ಹೊಸದಾಗಿ 173 ಮಂದಿಗೆ ಕರೋನಾ
Dec 30, 2023 11:47 AM IST
ದೇಶದಲ್ಲಿ ಕೋವಿಡ್ ಉಪತಳಿ ಜೆಎನ್.1 ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೋವಿಡ್ ಉಪತಳಿ ಜೆಎನ್.1 ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಶುಕ್ರವಾರ 173 ಕರೋನಾ ಪ್ರಕರಣಗಳು ದಾಖಲಾಗಿವೆ.
ದೆಹಲಿ: ದೇಶದಲ್ಲಿ ಕೋವಿಡ್ (India Covid) ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಅದರಲ್ಲೂ ಕೋವಿಡ್ ಉಪತಳಿ ಜೆಎನ್.1 (Covid JN.1) ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನವೆಂಬರ್‌ನಲ್ಲಿ 17 ಮಂದಿಯಲ್ಲಿ ಕೋವಿಡ್ ವೇರಿಯಂಟ್ ಜೆಎನ್.1 ಪತ್ತೆಯಾಗಿತ್ತು. ಇದು ಡಿಸೆಂಬರ್‌ನ ಮೊದಲಾರ್ಧದಲ್ಲಿ 145ಕ್ಕೆ ಏರಿಕೆಯಾಗಿದ್ದ ಸಂಖ್ಯೆ ಡಿಸೆಂಬರ್ 30ರ ಶನಿವಾರ ಬೆಳಗ್ಗೆ 8.30ರ ವೇಳೆಗೆ 162ಕ್ಕೆ ತಲುಪಿವೆ ಎಂದು ಹೇಳಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 3,997ಕ್ಕೆ ಏರಿಕೆಯಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರ ಸೂಚಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ-ಡಬ್ಲ್ಯೂಹೆಚ್‌ಒ, ಜೆಎನ್.1 ಪ್ರತ್ಯೇಕ ವೈರಸ್ ಆಗಿದೆ ಎಂದಿದ್ದು, ಅತಿ ವೇಗವಾಗಿ ಹರಡುವಿಕೆಯನ್ನು ಹೊಂದಿದೆ. ಆದರೆ ಸೋಂಕಿನಿಂದ ಆರೋಗ್ಯದ ಅಪಾಯ ಕಡಿಮೆ ಎಂದು ತಿಳಿಸಿದೆ.
ಕೋವಿಡ್ ಜೆಎನ್.1 ಪ್ರಕರಣಗಳಲ್ಲಿ ನೆರೆಯ ಕೇರಳ ಅಗ್ರ ಸ್ಥಾನದಲ್ಲಿದೆ. ಇಲ್ಲಿ ಉಪತಳಿಯ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ನಂತರದಲ್ಲಿ ಸ್ಥಾನದಲ್ಲಿ ಗುಜರಾತ್ 43, ಮಹಾರಾಷ್ಟ್ರ 10, ಕರ್ನಾಟಕ 8, ರಾಜಸ್ಥಾನ 5, ತಮಿಳುನಾಡು 4, ತೆಲಂಗಾಣ 2 ಹಾಗೂ ದೆಹಲಿಯಲ್ಲಿ 1 ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಿ ಎಷ್ಟು ಕೋವಿಡ್ ಪ್ರಕರಣಗಳಿವೆ?
ರಾಜ್ಯವಾರು ಕೋವಿಡ್ ಸೋಂಕಿತರ ಸಂಖ್ಯೆಯನ್ನು ನೋಡುವುದಾರೆ ಕರ್ನಾಟಕದಲ್ಲಿ ಶುಕ್ರವಾರ (ಡಿಸೆಂಬರ್ 29) ಹೊಸದಾಗಿ 173 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 568ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕಿಗೆ ಬಲಿಯಾದವರ ಸಂಖ್ಯೆ 40,327ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಒಟ್ಟು ಸೋಂಕಿತರ ಸಂಖ್ಯೆ 40,89,922ಕ್ಕೆ ತಲುಪಿದೆ.
ಒಡಿಶಾದಲ್ಲಿ ಹೊಸದಾಗಿ ಐವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಇದರೊಂದಿಗೆ ಅಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮಹಾರಾಷ್ಟದಲ್ಲಿ ಕಳೆದ 24 ಗಂಟೆಗಳಲ್ಲಿ 129 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಜೆಎನ್.1 ಸೋಂಕಿತರ ಸಂಖ್ಯೆ ಶೇಕಡಾ 10 ರಷ್ಟಿದೆ. 2023ರ ಜನವರಿ 1 ರಿಂದ ಈವರೆಗೆ ಮಹಾರಾಷ್ಟ್ರದಲ್ಲಿ ಕೋವಿಡ್‌ಗೆ 137 ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಶೇಕಡಾ 70.80 ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.
ಕೋವಿಡ್‌ನ ಇತರೆ ವೇರಿಯಂಟ್‌ಗಳಿಗೆ ಹೋಲಿಸಿದರೆ ಜೆಎನ್.1 ಹೆಚ್ಚು ಹರಡುತ್ತಿರುವ ಸಾಂಕ್ರಾಮಿಕ ವೈರಸ್ ಆಗಿದೆ. ಆದರೆ ಆರೋಗ್ಯದ ಅಪಾಯ ಕಡಿಮೆ ಇದೆ. ಇದಕ್ಕೆ ಕಾರಣ ನಾವೆಲ್ಲರೂ ರೋಗನಿರೋಧ ಶಕ್ತಿಯನ್ನು ಹೊಂದಿದ್ದೇವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ಐಸಿಎಂಆರ್‌ನ ಮಾಜಿ ಡಿಜಿ ಡಾ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.
ಇತರ ರೂಪಾಂತರಗಳಿಗೆ ಹೋಲಿಸಿದರೆ JN.1 ಕೋವಿಡ್ -19 ರೂಪಾಂತರವು ಹೆಚ್ಚು ಹರಡುತ್ತದೆ ಮತ್ತು ಸಾಂಕ್ರಾಮಿಕವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ನ ಮಾಜಿ ಡಿಜಿ ಡಾ.ಸೌಮ್ಯಾ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.