Air Pollution: ಇಂದು ವಿಶ್ವದಲ್ಲೇ ಅತ್ಯಂತ ಕಲುಷಿತಗೊಂಡ ನಗರಗಳ ಪಟ್ಟಿಯಲ್ಲಿ ಭಾರತದ 3 ಸಿಟಿಗಳು: ದೆಹಲಿ ಕಥೆ ಕೇಳೋದೆಬೇಡ
Nov 05, 2023 08:57 PM IST
ದೆಹಲಿ ವಾಯು ಮಾಲಿನ್ಯ
- Delhi air pollution: ದೆಹಲಿ ಇಂದು 483 AQI ತಲುಪಿದ್ದು ತೀವ್ರ ವಾಯು ಮಾಲಿನ್ಯನಕ್ಕೆ ಸಾಕ್ಷಿಯಾಗಿದೆ. ದೆಹಲಿಯ ಅನೇಕ ನಿವಾಸಿಗಳಲ್ಲಿ ಕಣ್ಣು ಉರಿ, ಗಂಟಲಲ್ಲಿ ಕಿರಿಕಿರಿ, ಉಸಿರಾಟದ ಸಮಸ್ಯೆ ತಲೆದೂರಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿದೆ. ದೆಹಲಿಯ ಜೊತೆ ಇಂದು ಭಾರತದ ಮತ್ತೆರಡು ನಗರಗಳು ಕೂಡ ವಿಶ್ವದ ಇಂದಿನ ಅತ್ಯಂತ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.
ಸ್ವಿಸ್ ಗ್ರೂಪ್ ಐಕ್ಯೂ ಏರ್ (Swiss Group IQAir) ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತರ ದೆಹಲಿ, ಕೋಲ್ಕತ್ತಾ ಮತ್ತು ಮುಂಬೈ ಇಂದು ವಿಶ್ವದಲ್ಲೇ ಅತ್ಯಂತ ಕಲುಷಿತಗೊಂಡ ನಗರಗಳ ಪಟ್ಟಿಯಲ್ಲಿದೆ.
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ 483 AQIನೊಂದಿದೆ ದೆಹಲಿ ಇದೆ. ಅಂದರೆ ಇಂದು ಪ್ರಪಂಚದಲ್ಲೇ ಅತ್ಯಂತ ಕಲುಷಿತಗೊಂಡ ನಗರ ದೆಹಲಿಯಾಗಿದೆ. ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಲಾಹೋರ್ (371 AQI) ಇದೆ. ಮೂರನೇ ಸ್ಥಾನದಲ್ಲಿ ಭಾರತದ ಕೋಲ್ಕತ್ತಾ ( 206 AQI) ಇದೆ. ಮುಂಬೈ (162 AQI) 6ನೇ ಸ್ಥಾನದಲ್ಲಿದೆ.
ವಾಯು ಗುಣಮಟ್ಟ ಸೂಚ್ಯಂಕ (AQI):
- 0 ಯಿಂದ 50 ರ ನಡುವಿನ AQI 'ಉತ್ತಮ'
- 51 ರಿಂದ 100 'ತೃಪ್ತಿದಾಯಕ',
- 101 ರಿಂದ 200 ಇದ್ದರೆ 'ಮಧ್ಯಮ'
- 201 ರಿಂದ 300 ಇದ್ದರೆ 'ಕಳಪೆ'
- 301 ರಿಂದ 400 'ಅತಿ ಕಳಪೆ'
- 401 ರಿಂದ 500 ಇದ್ದರೆ 'ತೀವ್ರ'
ದೆಹಲಿ ಇಂದು 483 AQI ತಲುಪಿದ್ದು ತೀವ್ರ ವಾಯು ಮಾಲಿನ್ಯನಕ್ಕೆ ಸಾಕ್ಷಿಯಾಗಿದೆ. ವಾಯು ಗುಣಮಟ್ಟ ಸೂಚ್ಯಂಕವು 50ಕ್ಕಿಂತ ಕಡಿಮೆ ಇದ್ದಾಗ ಯಾವುದೇ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ. ಇದೀಗ ದೆಹಲಿಯ ಅನೇಕ ನಿವಾಸಿಗಳಲ್ಲಿ ಕಣ್ಣು ಉರಿ, ಗಂಟಲಲ್ಲಿ ಕಿರಿಕಿರಿ, ಉಸಿರಾಟದ ಸಮಸ್ಯೆ ತಲೆದೂರಿದೆ.
ಕಳೆದ 24 ಗಂಟೆಗಳಲ್ಲಿ ಶಿಶುಗಳು, ಮಕ್ಕಳು ಕೆಮ್ಮು, ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಬರುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂದು ದೆಹಲಿ ಮೂಲದ ವೈದ್ಯ ಅಹ್ಮದ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ನವೆಂಬರ್ 10 ರವರೆಗೆ 1-5 ತರಗತಿ ಮಕ್ಕಳಿಗೆ ಶಾಲೆಗೆ ರಜೆ ನೀಡಲಾಗಿದೆ.
ಇನ್ನು ದೆಹಲಿಯಲ್ಲಿ ವಾಯು ಮಾಲಿನ್ಯದ ಕಾರಣ ನಾಳೆ (ನವೆಂಬರ್ 6, ಸೋಮವಾರ) ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯ ರದ್ದಾಗುವ ಸಾಧ್ಯತೆಯಿದೆ.