logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂಪಾದಕೀಯ: ಅತಂತ್ರವಾಗದಿರಲಿ ಅಂತರ್‌ಧರ್ಮೀಯ ವಿವಾಹ ಆದವರ ಬದುಕು, ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನಿಗೆ ಇನ್ನಷ್ಟು ಬಲ

ಸಂಪಾದಕೀಯ: ಅತಂತ್ರವಾಗದಿರಲಿ ಅಂತರ್‌ಧರ್ಮೀಯ ವಿವಾಹ ಆದವರ ಬದುಕು, ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನಿಗೆ ಇನ್ನಷ್ಟು ಬಲ

D M Ghanashyam HT Kannada

Aug 02, 2024 06:00 AM IST

google News

ಸಂಪಾದಕೀಯ: ಅತಂತ್ರವಾಗದಿರಲಿ ಅಂತರ್‌ಧರ್ಮೀಯ ವಿವಾಹ ಆದವರ ಬದುಕು, ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನಿಗೆ ಇನ್ನಷ್ಟು ಬಲ

    • ಅಂತರ್‌ಧರ್ಮೀಯ ವೈವಾಹಿಕ ಸಂಬಂಧಗಳಿಗೆ 'ಲವ್ ಜಿಹಾದ್' ಹಣೆಪಟ್ಟಿ ಕಟ್ಟಲಾಗಿದೆ. ಆದರೆ ಬಹುಪಾಲು ಆರೋಪಗಳನ್ನು ಸಾಬೀತುಪಡಿಸಲು ಆಗಿಲ್ಲ. ಲವ್ ಜಿಹಾದ್ ಹೆಸರಿನಲ್ಲಿ ವೈರಲ್ ಅದ ಎಷ್ಟೋ ಸಂದೇಶಗಳು ಸುಳ್ಳು ಎಂದು ಫ್ಯಾಕ್ಟ್‌ಚೆಕ್ ಜಾಲತಾಣಗಳು ಸಾರಿ ಹೇಳಿದ್ದವು.
ಸಂಪಾದಕೀಯ: ಅತಂತ್ರವಾಗದಿರಲಿ ಅಂತರ್‌ಧರ್ಮೀಯ ವಿವಾಹ ಆದವರ ಬದುಕು, ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನಿಗೆ ಇನ್ನಷ್ಟು ಬಲ
ಸಂಪಾದಕೀಯ: ಅತಂತ್ರವಾಗದಿರಲಿ ಅಂತರ್‌ಧರ್ಮೀಯ ವಿವಾಹ ಆದವರ ಬದುಕು, ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನಿಗೆ ಇನ್ನಷ್ಟು ಬಲ

ಉತ್ತರ ಪ್ರದೇಶವು 2021 ರಲ್ಲಿ ಒತ್ತಾಯದ ಮತಾಂತರದ ವಿರುದ್ಧ ಮೊದಲ ಬಾರಿಗೆ ಕಾನೂನು ಜಾರಿಗೆ ತಂದಿತ್ತು. ಸಂವಿಧಾನವು ಭಾರತದ ಎಲ್ಲ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ಪ್ರಬಲ ಗುಂಪುಗಳು ತಮ್ಮ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಹೇರುವ ಪ್ರಯತ್ನಗಳಿಂದ ಸಾಮಾನ್ಯ ಜನರನ್ನು ರಕ್ಷಿಸುವುದು ಸರ್ಕಾರಗಳ ಕರ್ತವ್ಯವಾಗುತ್ತದೆ. ಮತಾಂತರ ಎನ್ನುವುದು ನಮ್ಮ ದೇಶದಲ್ಲಿ ಧಾರ್ಮಿಕ ಪ್ರಶ್ನೆಯಾಗಿಯಷ್ಟೇ ಉಳಿದಿಲ್ಲ. ಹಲವು ರೀತಿಯ ಸಂಸ್ಕೃತಿ, ಆರ್ಥಿಕ ವಿಷಯಗಳೂ ಅದರೊಂದಿಗೆ ಬೆಸೆದುಕೊಂಡಿವೆ. ಇದೀಗ ಲವ್ ಜಿಹಾದ್ ಹೆಸರಿನಲ್ಲಿ ದೇಶಾದ್ಯಂತ ಅಕ್ಷರಶಃ ಅತಿರೇಕಗಳು ನಡೆಯುತ್ತಿವೆ. ಇದೀಗ ಉತ್ತರ ಪ್ರದೇಶ ಸರ್ಕಾರ ಮತಾಂತರ ನಿಷೇಧ ಕಾಯ್ದೆಗೆ ತಂದಿರುವ ಹೊಸ ತಿದ್ದುಪಡಿಗಳು ಇಂಥ ಅತಿರೇಕಗಳಿಗೆ ಬಲಕೊಡುವಂತೆ ಆಗಬಾರದು.

ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮತಾಂತರ ನಿಷೇಧ ಮಸೂದೆ ಜಾರಿಗೆ ಬಂದಾಗ, ಉನ್ನತ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ವಿವಾಹಿತ ಮುಸ್ಲಿಂ ಪುರುಷರು ಮತ್ತು ಹಿಂದೂ ಮಹಿಳೆಯರ ನಡುವಿನ ಅಂತರ್‌ಧರ್ಮೀಯ ವೈವಾಹಿಕ ಸಂಬಂಧಗಳಿಗೆ 'ಲವ್ ಜಿಹಾದ್' ಹಣೆಪಟ್ಟಿ ಕಟ್ಟಿದರು. ಇದರಲ್ಲಿ ಬಹುಪಾಲು ಆರೋಪಗಳನ್ನು ಸಾಬೀತುಪಡಿಸಲು ಆಗಲಿಲ್ಲ. ಲವ್ ಜಿಹಾದ್ ಹೆಸರಿನಲ್ಲಿ ವೈರಲ್ ಅದ ಎಷ್ಟೋ ಸಂದೇಶಗಳು ಸುಳ್ಳು ಎಂದು ಫ್ಯಾಕ್ಟ್‌ಚೆಕ್ ಜಾಲತಾಣಗಳು ಸಾರಿ ಹೇಳಿದವು.

ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ರಾಜ್ಯವು 2021 ರ ಈ ಕಾನೂನಿಗೆ ಇದೀಗ ಹೆಚ್ಚಿನ ಬಲ ತುಂಬಿದೆ. ಈ ಕಾನೂನಿನ ಅಡಿಯಲ್ಲಿನ ಎಲ್ಲಾ ಅಪರಾಧಗಳು ಇನ್ನು ಮುಂದೆ ಜಾಮೀನು ರಹಿತವಾಗುತ್ತದೆ. ಸರಣಿ ಅಪರಾಧಗಳಿಗೆ ಶಿಕ್ಷೆಗಳನ್ನು ಹೆಚ್ಚಿಸುತ್ತದೆ. ಈ ಕಾನೂನಿಗೆ ಬಲ ತುಂಬಿರುವ ಸಂದರ್ಭವನ್ನೂ ಗಮನಿಸಬೇಕಿದೆ. ಭಾರತದಲ್ಲಿ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿರುವ ಉತ್ತರ ಪ್ರದೇಶದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಪ್ರದರ್ಶನ ಕಳಪೆಯಾಗಿತ್ತು. ರಾಜ್ಯದಲ್ಲಿ ಅಧಿಕಾರಕ್ಕಾಗಿ ಆಡಳಿತಾರೂಢರ ನಡುವೆ ಬಣಗಳು, ಒಳಜಗಳಗಳು ಹೆಚ್ಚಾಗಿವೆ.

ಮತ್ತೊಂದೆಡೆ ಕನ್ವರ್ ಯಾತ್ರಾ ಮಾರ್ಗದಲ್ಲಿನ ಅಂಗಡಿಗಳು ಮತ್ತು ಹೊಟೆಲ್ ಮಾಲೀಕರ ಹೆಸರುಗಳು ಮತ್ತು ವಿವರಗಳನ್ನು ಪ್ರದರ್ಶಿಸುವಂತೆ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಈ ನಿರ್ದೇಶನಕ್ಕೂ ಸುಪ್ರೀಂಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಉತ್ತರ ಪ್ರದೇಶದ ರಾಜಕೀಯ ಪ್ರಕ್ಷುಬ್ಧತೆ, ಬಿಜೆಪಿಗೆ ಆದ ಹಿನ್ನಡೆ, ಅಧಿಕಾರದಲ್ಲಿರುವವರ ಒಳಜಗಳಗಳು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿದೆ. ಪ್ರಮುಖ ರಾಜ್ಯಗಳ ವಿಧಾನಸಭಾ ಉಪಚುನಾವಣೆಗಳಿಗೆ ಮುಂಚಿತವಾಗಿ ನಡೆದಿರುವ ಈ ಬೆಳವಣಿಗೆಯನ್ನು ಈ ಹಿನ್ನೆಲೆಯಲ್ಲಿಯೇ ವಿಮರ್ಶಿಸಬೇಕಾಗಿದೆ. ಉತ್ತರ ಪ್ರದೇಶ ಸರ್ಕಾರವು ನಂಬಿಕೆ ಮತ್ತು ಬಹುಸಂಖ್ಯಾತರ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ ಎನ್ನುವ ಸಂದೇಶ ರವಾನಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಬುಡಮೇಲು ಮಾಡಲು ಅಧಿಕಾರದಲ್ಲಿರುವವರು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಅಸ್ತ್ರವಾಗಿಸುತ್ತಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಅಂತರ್‌ಧರ್ಮೀಯ ವಿವಾಹವಾಗಿರುವ ದಂಪತಿಗಳ ವಿರುದ್ಧದ ಕಿರುಕುಳ ಮತ್ತು ಹಿಂಸಾಚಾರದ ವರದಿಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎನ್ನುವ ಆರೋಪಗಳೂ ಇವೆ. ಅಂತರ್‌ಧರ್ಮೀಯ ವಿವಾಹಗಳಿಗೆ ಇಂದಿಗೂ ಸಾಮಾಜಿಕ ಮಾನ್ಯತೆ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಬಲವಾದ ಕಾನೂನಿನ ಅಡಿಯಲ್ಲಿ ಸಂತ್ರಸ್ತೆಯ ಕುಟುಂಬ ಮಾತ್ರವಲ್ಲ, ಯಾರಿಗಾದರೂ ದೂರು ದಾಖಲಿಸಲು ಅವಕಾಶ ನೀಡುವುದು ಈಗಾಗಲೇ ಅನಿಶ್ಚಿತ ಸ್ಥಿತಿಗೆ ತಲುಪಿರುವ ಇಂಥ ದಂಪತಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ಮತ್ತಷ್ಟು ಮೊಟಕುಗೊಳಿಸುತ್ತದೆ.

ಬಲವಂತದ ಮತಾಂತರಗಳನ್ನು ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ವಿಚಾರಣೆಗೆ ಒಳಪಡಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅಂತರ್‌ಧರ್ಮೀಯ ದಂಪತಿಗಳು ತಮ್ಮ ಸಾಂವಿಧಾನಿಕ ಸ್ವಾತಂತ್ರ್ಯವನ್ನು ಚಲಾಯಿಸಲು ಪ್ರಾಣವನ್ನು ಪಣಕ್ಕಿಡುವ ಸಂದರ್ಭ ಸೃಷ್ಟಿಯಾಗಬಾರದು. ಸಾಮಾಜಿಕವಾಗಿ ಮೂಲೆಗುಂಪಾಗುವ ಇಂಥ ದಂಪತಿಗಳ ಪರವಾಗಿ ಸರ್ಕಾರ ನಿಲ್ಲುವಂತೆ ಆಗಬೇಕು. ಮುಖ್ಯವಾಗಿ ಉತ್ತರ ಪ್ರದೇಶದ ಮತಾಂತರ ನಿಷೇಧ ಕಾಯ್ದೆಯನ್ನು ಯಥಾವತ್ತು ಅನುಸರಿಸುವ ಮೊದಲು ಇತರ ರಾಜ್ಯಗಳು ಯೋಗ್ಯ ರೀತಿಯಲ್ಲಿ ವಿಮರ್ಶಿಸಬೇಕು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ