ಸಂಪಾದಕೀಯ: ಉದ್ಯೋಗದ ಸ್ಥಳದಲ್ಲಿ ಮಹಿಳೆಗೆ ಹತ್ತಾರು ಮುಜುಗರ, ಇನ್ನಾದರೂ ಬದಲಾಗಲಿ ನಾಯಕರ ಮನಃಸ್ಥಿತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂಪಾದಕೀಯ: ಉದ್ಯೋಗದ ಸ್ಥಳದಲ್ಲಿ ಮಹಿಳೆಗೆ ಹತ್ತಾರು ಮುಜುಗರ, ಇನ್ನಾದರೂ ಬದಲಾಗಲಿ ನಾಯಕರ ಮನಃಸ್ಥಿತಿ

ಸಂಪಾದಕೀಯ: ಉದ್ಯೋಗದ ಸ್ಥಳದಲ್ಲಿ ಮಹಿಳೆಗೆ ಹತ್ತಾರು ಮುಜುಗರ, ಇನ್ನಾದರೂ ಬದಲಾಗಲಿ ನಾಯಕರ ಮನಃಸ್ಥಿತಿ

Kiss Controversy: ಕೇರಳದ ಒಬ್ಬ ರಾಜಕಾರಿಣಿ ತನಗೆ ಪ್ರಶ್ನೆ ಕೇಳಿದ ಪತ್ರಕರ್ತೆಯ ಹೆಗಲ ಮೇಲೆ ಕೈ ಹಾಕಿದರೆ, ಕ್ರೊವೇಶಿಯಾದ ವಿದೇಶಾಂಗ ಸಚಿವ, ತುಂಬಿದ ಸಭೆಯಲ್ಲಿಯೇ ಮತ್ತೋರ್ವ ಸಚಿವೆಯೊಬ್ಬರಿಗೆ ಮುತ್ತು ಕೊಡಲು ಹೋದ. ವಿಶ್ವದೆಲ್ಲೆಡೆ ಮಹಿಳೆಗೆ ಮುಜುಗರ.

ಸ್ಪೇನ್ ಫುಟ್‌ಬಾಲ್ ಆಟಗಾರ್ತಿಗೆ ಮುತ್ತುಕೊಟ್ಟ ಕೋಚ್, ಜರ್ಮನಿ ವಿದೇಶಾಂಗ ಸಚಿವರಿಗೆ ಮುತ್ತುಕೊಟ್ಟ ಕ್ರೊವೇಶಿಯಾ ಸಚಿವ, ಪತ್ರಕರ್ತೆಯ ಹೆಗಲ ಮೇಲೆ ಕೈಹಾಕಿದ ಕೇರಳದ ರಾಜಕಾರಿಣಿ ಸುರೇಶ್ ಗೋಪಿ
ಸ್ಪೇನ್ ಫುಟ್‌ಬಾಲ್ ಆಟಗಾರ್ತಿಗೆ ಮುತ್ತುಕೊಟ್ಟ ಕೋಚ್, ಜರ್ಮನಿ ವಿದೇಶಾಂಗ ಸಚಿವರಿಗೆ ಮುತ್ತುಕೊಟ್ಟ ಕ್ರೊವೇಶಿಯಾ ಸಚಿವ, ಪತ್ರಕರ್ತೆಯ ಹೆಗಲ ಮೇಲೆ ಕೈಹಾಕಿದ ಕೇರಳದ ರಾಜಕಾರಿಣಿ ಸುರೇಶ್ ಗೋಪಿ

ಮಹಿಳಾ ವಿಶ್ವಕಪ್ ಫುಟ್‌ಬಾಲ್‌ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಸ್ಪೇನ್‌ನ ಜೆನ್ನಿ ಹರ್‌ಮೊಸೊ ಅವರಿಗೆ ಕೋಚ್‌ ಲೂಯಿಸ್ ರುಬೆಲ್ಸ್ ಮುತ್ತು ಕೊಟ್ಟ ವಿವಾದ ನಿಮಗೆ ನೆನಪಿರಬಹುದು. ಈ ಘಟನೆಯ ನಂತರ ಲೂಯಿಸ್ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಫುಟ್‌ಬಾಲ್ ಫೆಡರೇಷನ್ ಸಹ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿತು. ಆದರೆ ನಂತರದ ದಿನಗಳಲ್ಲಿ ಈ ಫುಟ್‌ಬಾಲ್ ಆಟಗಾರ್ತಿ ಹಲವರ ಬೆದರಿಕೆಗಳನ್ನು ಎದುರಿಸಬೇಕಾಯಿತು. ಇದಾದ ಕೆಲವೇ ದಿನಗಳಲ್ಲಿ ಕೇರಳದ ನಟ ಮತ್ತು ರಾಜಕಾರಿಣಿ ಸುರೇಶ್ ಗೋಪಿ ತಮಗೆ ಪ್ರಶ್ನೆ ಕೇಳಿದ ಪತ್ರಕರ್ತೆಯ ಹೆಗಲ ಮೇಲೆ ಕೈ ಹಾಕಲು ಮುಂದಾಗಿದ್ದರು. ಇದನ್ನು ಖಂಡಿಸಿ ಆ ಪತ್ರಕರ್ತೆ ದೂರು ದಾಖಲಿಸಿದ್ದರು. ಆದರೆ ನಂತರ ಆಕೆಯನ್ನೇ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಯಿತು. ಈ ಎರಡೂ ಪ್ರಕರಣಗಳು ಈಗ ನೆನಪಾಗಲು ಕಾರಣವಿದೆ.

ಎರಡು ದಿನಗಳ ಹಿಂದಷ್ಟೇ ನಡೆದ (ನ 5) ಐರೋಪ್ಯ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದ ಜರ್ಮನಿಯ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಅನ್ನಲೆನಾ ಬೆರಕ್ ಅವರ ತುಟಿಗೆ ಕ್ರೊವೇಶಿಯಾದ ಸಚಿವ ಗಾರ್ಡನ್ ಗ್ರಲಿಕ್ ರಡ್‌ಮನ್ ಮುತ್ತು ಕೊಡಲು ಮುಂದಾದರು. ಈ ಅನಪೇಕ್ಷಿತ ವರ್ತನೆಯಿಂದ ಮುಜುಗರಕ್ಕೆ ಒಳಗಾದ ಅನ್ನಲೆನಾ ಕತ್ತು ಹಿಂದೆಳೆದುಕೊಂಡರು. ಅವರ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ಈ ಘಟನೆಯು ಈಗ ಇಡೀ ಜಗತ್ತಿನ ಗಮನ ಸೆಳೆದಿದೆ. ಉದ್ಯೋಗದ ಸ್ಥಳದಲ್ಲಿ ಮಹಿಳೆಯರು ಎದುರಿಸುವ ಮುಜುಗರದ ಸನ್ನಿವೇಶಗಳ ಬಗ್ಗೆಯೂ ಹಲವರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಆಕ್ರೋಶ ಹೊರಹಾಕಿದ್ದಾರೆ.

ಹೀಗೆ ಅನಪೇಕ್ಷಿತ ರೀತಿಯಲ್ಲಿ ಹೆಂಗಸರ ಮೈ ಮುಟ್ಟಿದ ಪುರುಷರು ತಮ್ಮ ವರ್ತನೆಯ ಹಿಂದೆ "ಅಂಥ" ಉದ್ದೇಶ ಇರಲಿಲ್ಲ ಎಂದು ನಂತರ ಸಮರ್ಥನೆ ಕೊಡುವುದು ಸಾಮಾನ್ಯ ಸಂಗತಿ ಎನಿಸಿದೆ. "ಅದರಲ್ಲಿ ತಪ್ಪೇನಿದೆ, ಹಾಗೇಕೆ ಯೋಚಿಸಬೇಕು" ಎಂದು ಟ್ರೋಲ್‌ ದಳಗಳು ರಾಜಕಾರಿಣಿಗಳನ್ನು ಸಮರ್ಥಿಸಿಕೊಳ್ಳುವುದೂ ನಡೆಯುತ್ತದೆ. ಆದರೆ ಸಮಾಜದ ಪ್ರಭಾವ ಬೀರುವ ಸ್ಥಾನದಲ್ಲಿರುವವರು ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿಯಿಂದ ಆಗುವ ಪರಿಣಾಮಗಳ ಬಗ್ಗೆಯೂ ನಾವು ಯೋಚಿಸಬೇಕಿದೆ.

"ಉದ್ಯೋಗದ ಸ್ಥಳದಲ್ಲಿ ಮಹಿಳೆಯರನ್ನು ನೀವು ವಿಶೇಷವಾಗಿ ಕಾಣಬೇಕಿಲ್ಲ. ಪುರುಷರು ತಮ್ಮ ಪುರುಷ ಸಹೋದ್ಯೋಗಿಯೊಂದಿಗೆ ಹೇಗೆ ವರ್ತಿಸುತ್ತಾರೋ ಹಾಗೆ ವರ್ತಿಸಿದರೆ ಸಾಕು. ಹಸ್ತಲಾಘವ (ಶೇಕ್ ಹ್ಯಾಂಡ್), ಹೈ ಫೈ ಸಾಕು. ಅಪ್ಪಿಕೊಳ್ಳುವುದು, ಮುತ್ತು ಕೊಡುವುದು ಮಹಿಳೆಯರಿಗೆ ಮುಜುಗರ" ಎಂದು ಹಿರಿಯ ಪತ್ರಕರ್ತೆ ಪಾಲ್ಕಿ ಶರ್ಮಾ ಹೇಳಿದ್ದಾರೆ.

ಕಾಲೇಜಿಗೆ ಹೋಗಲೆಂದು ರಸ್ತೆಯ ಮೇಲೆ ನಡೆದು ಹೋಗುತ್ತಿದ್ದ ಯುವತಿಯರೊಂದಿಗೆ ಪುಂಡರು ಅನುಚಿತವಾಗಿ ವರ್ತಿಸಿದರೆ ಪೊಲೀಸರು ಹೆಡೆಮುರಿ ಕಟ್ಟುತ್ತಾರೆ, ಕಟ್ಟಬೇಕು ಎಂದು ಸಮಾಜವೂ ನಿರೀಕ್ಷಿಸುತ್ತದೆ. "ನಮ್ಮ ನಾಯಕರೇ ಹೆಣ್ಮಕ್ಕಳ ಮೈಮುಟ್ಟುತ್ತಾರೆ, ನಮ್ಮನ್ನೇಕೆ ಪ್ರಶ್ನಿಸುತ್ತೀರಿ? ಅದರಲ್ಲೇನು ತಪ್ಪು" ಎಂದು ಆ ಪುಂಡರು ಮರುಪ್ರಶ್ನಿಸುವ ಸನ್ನಿವೇಶವನ್ನು ನಾಯಕರು ಸೃಷ್ಟಿಸಬಾರದು. ಅಂಥ ಎಚ್ಚರ ನಮ್ಮನ್ನಾಳುವ ರಾಜಕಾರಿಣಿಗಳಿಗೆ ಸದಾ ಇರಬೇಕು.

ಪತ್ರಕರ್ತೆ ಬಿಂದಿ ಹಚ್ಚಿಲ್ಲ ಎಂದು ಮಹಾರಾಷ್ಟ್ರದ ಒಬ್ಬ ರಾಜಕಾರಿಣಿ ಆಕೆ ಕೇಳಿದ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಹಿಂದೆ ಹೇಳಿದ್ದ. ಕೇರಳದ ಒಬ್ಬ ರಾಜಕಾರಿಣಿ ತನಗೆ ಪ್ರಶ್ನೆ ಕೇಳಿದ ಪತ್ರಕರ್ತೆಯ ಹೆಗಲ ಮೇಲೆ ಕೈ ಹಾಕಲು ಮುಂದೆ ಬಂದ. ಕ್ರೊವೇಶಿಯಾದ ವಿದೇಶಾಂಗ ಸಚಿವ ಸಭೆಯಲ್ಲಿಯೇ ಮತ್ತೋರ್ವ ಸಚಿವೆಗೆ ಮುತ್ತು ಕೊಡಲು ಹೋದ. ಇದೇಕೆ ಹೀಗೆ?

ಮಹಿಳೆ ಇವರ ಕಣ್ಣಿಗೆ ಇಂದಿಗೂ (ಆಟದ) ಒಂದು ಗೊಂಬೆಯಂತಷ್ಟೇ ಕಾಣುತ್ತಿರುವುದೇ ಇದಕ್ಕೆ ಕಾರಣ ಎನಿಸುತ್ತದೆ. ಒಬ್ಬ ನಾಯಕಿಯಾಗಿ, ಸಹೋದ್ಯೋಗಿಯಾಗಿ ಮಹಿಳೆಯನ್ನು ಕಾಣುವ ಮನಃಸ್ಥಿತಿ ಪುರುಷರಲ್ಲಿ ರೂಢಿಯಾಗದಿದ್ದರೆ ಅದನ್ನು ರೂಢಿ ಮಾಡಿಸುವುದು ನಾಗರಿಕ ಸಮಾಜದ ಅನಿವಾರ್ಯ ಕರ್ತವ್ಯ ಆಗುತ್ತದೆ. "ಸೇನೆಯಲ್ಲಿ ಮಹಿಳೆಯರು ಕಮಾಂಡರ್‌ಗಳಾದರೆ ಅವರ ಆದೇಶಗಳನ್ನು ಪಾಲಿಸಲು ಪುರುಷ ಸೈನಿಕರಿಗೆ ಇಷ್ಟವಾಗುವುದಿಲ್ಲ" ಎಂದು ವಕೀಲರೊಬ್ಬರು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾಗ, "ಇಲ್ಲಿ ಸಮಸ್ಯೆ ಇರುವುದು ಪುರುಷರ ಮನಃಸ್ಥಿತಿಯಲ್ಲಿ. ಅದನ್ನು ಸರಿಪಡಿಸಿ" ಎಂದು ನ್ಯಾಯಮೂರ್ತಿಗಳು ಹೇಳಿದ್ದರು.

ನ್ಯಾಯಮೂರ್ತಿಗಳ ಹೇಳಿಕೆಯನ್ನು ಒಂದು ಸಮಾಜವಾಗಿ ಗಂಭೀರವಾಗಿ ಪರಿಗಣಿಸಬೇಕು. "ಲಿಂಗತ್ವ ಸೂಕ್ಷ್ಮ"ಗಳನ್ನು ರೂಢಿಸುವ ವಿಚಾರಗಳು ನಮ್ಮ ಪಠ್ಯಕ್ರಮದ ಭಾಗವೂ ಆಗಬೇಕು. "ಒಪ್ಪಿಗೆ ಇಲ್ಲದೆ ತಬ್ಬಿಕೊಳ್ಳುವುದು, ಮುತ್ತು ಕೊಡುವುದು ತಪ್ಪು ಅಂದ್ರೆ ತಪ್ಪಷ್ಟೇ. ಅದಕ್ಕೆ ಯಾವ ವಿವರದ ಅಗತ್ಯವೂ ಇಲ್ಲ" ಎಂಬುದು ಅರ್ಥವಾಗುವವರೆಗೆ, ಅದನ್ನು ಸರ್ಕಾರಗಳು ಜನರಿಗೆ ಅರ್ಥ ಮಾಡಿಸುವವರೆಗೆ ಮಹಿಳೆಯರಿಗೆ ಇಂಥ ಮುಜುಗರಗಳು ತಪ್ಪಿದ್ದಲ್ಲ. ಅದು ಭಾರತವಾದರೂ ಅಷ್ಟೇ, ಜರ್ಮನಿ-ಸ್ಪೇನ್ ಆದರೂ ಅಷ್ಟೇ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.