logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tata Nexon Ev: ಭಾರತದಲ್ಲಿ ಮಾರಾಟವಾಗುವ ಐದು ಇವಿಗಳಲ್ಲಿ ಮೂರು ಇವಿ ನೆಕ್ಸಾನ್‌! ಟಾಟಾ ವಿದ್ಯುತ್‌ ವಾಹನಗಳಿಗೆ ಹೆಚ್ಚಿದ ಬೇಡಿಕೆ

Tata Nexon EV: ಭಾರತದಲ್ಲಿ ಮಾರಾಟವಾಗುವ ಐದು ಇವಿಗಳಲ್ಲಿ ಮೂರು ಇವಿ ನೆಕ್ಸಾನ್‌! ಟಾಟಾ ವಿದ್ಯುತ್‌ ವಾಹನಗಳಿಗೆ ಹೆಚ್ಚಿದ ಬೇಡಿಕೆ

HT Kannada Desk HT Kannada

Oct 21, 2022 11:49 AM IST

google News

Tata Nexon EV: ಭಾರತದಲ್ಲಿ ಮಾರಾಟವಾಗುವ ಐದು ಇವಿಗಳಲ್ಲಿ ಮೂರು ಇವಿ ನೆಕ್ಸಾನ್‌!

    • Tata Nexon EV: ಈ ವರ್ಷದ ಮೊದಲ 9 ತಿಂಗಳಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು ಸುಮಾರು 30 ಸಾವಿರ ಎಲೆಕ್ಟ್ರಿಕ್‌ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡಿದೆ. ಇವುಗಳಲ್ಲಿ ನೆಕ್ಸಾನ್‌ ಇವಿ ಮತ್ತು ಟೈಗರ್‌ ಇವಿ ಸೇರಿವೆ. ಕಳೆದ ವರ್ಷ ಕಂಪನಿಯು ಭಾರತದಲ್ಲಿ ಮಾರಾಟ ಮಾಡಿರುವ ಎಲೆಕ್ಟ್ರಿಕ್‌ ವಾಹನಗಳಿಗೆ ಹೋಲಿಸಿದರೆ ಇದು ಎರಡು ಪಟ್ಟು ಹೆಚ್ಚಳವಾಗಿದೆ.
Tata Nexon EV: ಭಾರತದಲ್ಲಿ ಮಾರಾಟವಾಗುವ ಐದು ಇವಿಗಳಲ್ಲಿ ಮೂರು ಇವಿ ನೆಕ್ಸಾನ್‌!
Tata Nexon EV: ಭಾರತದಲ್ಲಿ ಮಾರಾಟವಾಗುವ ಐದು ಇವಿಗಳಲ್ಲಿ ಮೂರು ಇವಿ ನೆಕ್ಸಾನ್‌!

ಬೆಂಗಳೂರು: ಭಾರತದಲ್ಲಿ ವಿದ್ಯುತ್‌ ವಾಹನ ವಿಭಾಗದಲ್ಲಿ ಟಾಟಾ ಮೋಟಾರ್ಸ್‌ ತನ್ನ ಷೇರನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಟಾಟಾ ಎಲೆಕ್ಟ್ರಿಕ್‌ ವಾಹನಗಳ ಪಾಲು ಗಮನಾರ್ಹವಾಗಿ ಏರಿಕೆ ಕಂಡಿದೆ. ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಕಂಪನಿಯು ತನ್ನ ಇವಿ ಪಾಲನ್ನು ಕಳೆದ ವರ್ಷಕ್ಕಿಂತ ಶೇಕಡ ಹತ್ತರಷ್ಟು ಹೆಚ್ಚಿಸಿಕೊಂಡಿದೆ.

ಮುಂದಿನ ವರ್ಷದ ಆರಂಭದಲ್ಲಿ ಟಾಟಾ ಮೋಟಾರ್ಸ್‌ನ ಟಿಯಾಗೊ ಇವಿ ರಸ್ತೆಗಿಳಿಯಲಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ದೇಶದ ಕಾರು ಮಾರುಕಟ್ಟೆಯಲ್ಲಿ ಟಾಟಾ ವಿದ್ಯುತ್‌ ವಾಹನಗಳ ಪಾಲು ಗಮನಾರ್ಹವಾಗಿ ಹೆಚ್ಚಲಿದೆ.

ಈ ವರ್ಷದ ಮೊದಲ 9 ತಿಂಗಳಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು ಸುಮಾರು 30 ಸಾವಿರ ಎಲೆಕ್ಟ್ರಿಕ್‌ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡಿದೆ. ಇವುಗಳಲ್ಲಿ ನೆಕ್ಸಾನ್‌ ಇವಿ ಮತ್ತು ಟೈಗರ್‌ ಇವಿ ಸೇರಿವೆ. ಕಳೆದ ವರ್ಷ ಕಂಪನಿಯು ಭಾರತದಲ್ಲಿ ಮಾರಾಟ ಮಾಡಿರುವ ಎಲೆಕ್ಟ್ರಿಕ್‌ ವಾಹನಗಳಿಗೆ ಹೋಲಿಸಿದರೆ ಇದು ಎರಡು ಪಟ್ಟು ಹೆಚ್ಚಳವಾಗಿದೆ. ಭಾರತದ ಎಲೆಕ್ಟ್ರಿಕ್‌ ವಾಹನ ಖರೀದಿದಾರರ ನೆಚ್ಚಿನ ಕಂಪನಿಯಾಗಿ ಹೊರಹೊಮ್ಮಲು ಕಂಪನಿ ಪ್ರಯತ್ನಿಸುತ್ತಿದೆ.

ಟಾಟಾ ಮೋಟಾರ್ಸ್‌ ಈ ವರ್ಷ 21,997 ನೆಕ್ಸಾನ್‌ ಇವಿಗಳನ್ನು ಮಾರಾಟ ಮಾಡಿದೆ. 7,903 ಟೈಗೊರ್‌ ಇವಿ ಮಾರಾಟ ಮಾಡಿದೆ.

ಟಾಟಾ ಕಂಪನಿಗೆ ಎಲೆಕ್ಟ್ರಿಕ್‌ ಮಾರುಕಟ್ಟೆಯಲ್ಲಿ ಹತ್ತಿರದ ಪ್ರತಿಸ್ಪರ್ಧಿ ಎಂದರೆ ಎಂಜಿ ಮೋಟಾರ್‌. ಈ ಕಂಪನಿಯು ಝಡ್‌ಎಸ್‌ ಇವಿಯನ್ನು ಹೊಂದಿದೆ. ಎಂಜಿ ಮೋಟಾರ್‌ ಕಂಪನಿಯು ಇವಿ ಮಾರುಕಟ್ಟೆಯಲ್ಲಿ ಸುಮಾರು ಶೇಕಡ 7ರಷ್ಟು ಪಾಲು ಹೊಂದಿದೆ. ಮೂರನೇ ಸ್ಥಾನವನ್ನು ಹ್ಯುಂಡೈ ಕಂಪನಿಯು ಪಡೆದಿದೆ. ಮಹೀಂದ್ರ ಕಂಪನಿಯು ಇವಿ ಮಾರುಕಟೆಯಲ್ಲಿ ಅಗ್ರ ನಾಲ್ಕನೇ ಸ್ಥಾನ ಹೊಂದಿದೆ. ಕಿಯಾ ಕಂಪನಿಯು ಐದನೇ ಸ್ಥಾನ ಹೊಂದಿದೆ.

ಒಟ್ಟಾರೆಯಾಗಿ ಭಾರತದಲ್ಲಿ ಈ ವರ್ಷ 30 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್‌ ವಾಹನಗಳು ಮಾರಾಟವಾಗಿವೆ.

ಟಾಟಾ ಎಲೆಕ್ಟ್ರಿಕ್‌ ವಾಹನಗಳಿಗೆ ಅತ್ಯಧಿಕ ಬೇಡಿಕೆ ಇರುವ ಸಂಗತಿ ಇತ್ತೀಚೆಗೆ ಟಿಯಾಗೊ ಬುಕ್ಕಿಂಗ್‌ ಸಮಯದಲ್ಲಿ ಮತ್ತೊಮ್ಮೆ ಸಾಬೀತಾಗಿತ್ತು. ಟಾಟಾ ಮೋಟಾರ್ಸ್‌ ಬುಕ್ಕಿಂಗ್‌ ಆರಂಭಿಸಿದ ನೂತನ ಎಲೆಕ್ಟ್ರಿಕ್‌ ಕಾರು "ಟಿಯಾಗೊ ಇವಿʼʼ ಕುರಿತು ಅತ್ಯಧಿಕ ಗ್ರಾಹಕರು ಕುತೂಹಲಗೊಂಡ ಕಾರಣ ಟಿಯಾಗೊ ವೆಬ್‌ಸೈಟ್‌ ಪಲ್ಟಿ ಹೊಡೆದಿತ್ತು.

"ಟಿಯಾಗೊ.ಇವಿಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡೀಲರ್‌ಶೀಪ್‌ ಮತ್ತು ವೆಬ್‌ಸೈಟ್‌ಗಳಲ್ಲಿ ಅತ್ಯಧಿಕ ಜನರು ಈ ಕಾರಿನ ಕುರಿತು ವಿಚಾರಿಸಿದ್ದಾರೆ. ಇದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಸಾವಿರಾರು ಜನರು ನೂತನ ಕಾರಿನ ಬುಕ್ಕಿಂಗ್‌ಗೆ ಆಗಮಿಸಿದ್ದಾರೆ. ಮೊದಲ ಹತ್ತು ಸಾವಿರ ಗ್ರಾಹಕರಿಗೆ ವಿಶೇಷ ದರದಲ್ಲಿ ನೂತನ ಎಲೆಕ್ಟ್ರಿಕ್‌ ಕಾರು ನೀಡುವ ಉದ್ದೇಶವನ್ನು ಕಂಪನಿ ಹೊಂದಿದೆ. ಗ್ರಾಹಕರ ರಶ್‌ಗೆ ವೆಬ್‌ಸೈಟ್‌ ನಿಧಾನವಾಯಿತು. ಬಳಿಕ ಈ ತೊಂದರೆ ಸರಿಯಾಗಿದೆʼʼ ಎಂದು ಬಳಿಕ ಟಾಟಾ ಮೋಟಾರ್ಸ್‌ ಸ್ಪಷ್ಟನೆ ನೀಡಬೇಕಾಯಿತು.

ನೂತನ ಟಿಯಾಗೊ ಎಲೆಕ್ಟ್ರಿಕ್‌ ಕಾರಿನ ಎರಡು ಮಾಡೆಲ್‌ ಅನ್ನು ಕಂಪನಿಯು ಸೆಪ್ಟೆಂಬರ್‌ 28ರಂದು ಪರಿಚಯಿಸಿತ್ತು. ಮೊದಲ ಹತ್ತು ಸಾವಿರ ಗ್ರಾಹಕರಿಗೆ ಎರಡು ಆವೃತ್ತಿಗಳಿಗೆ ತಲಾ 8.49 ಲಕ್ಷ ರೂ. ಮತ್ತು 11.79 ಲಕ್ಷ ರೂ. ಎಕ್ಸ್‌ಶೋರೂಂ ದರಗಳಲ್ಲಿ ಕಾರು ಬುಕ್ಕಿಂಗ್‌ ಮಾಡುವ ಅವಕಾಶ ನೀಡಲಾಗಿತ್ತು.

ಟಿಯಾಗೊ ಇವಿ ಬುಕಿಂಗ್ಸ್ ಅಕ್ಟೋಬರ್ 10ರಿಂದ ಆರಂಭವಾಗಿದೆ. ಟಾಟಾ ಮೋಟಾರ್ಸ್‌ನ ಅಧಿಕೃತ ಡೀಲರ್‌ಗಳು ಅಥವಾ ಟಿಯಾಗೊ ಇವಿ, ಟಾಟಾ ಮೋಟಾರ್ಸ್‌ ವೆಬ್‌ಸೈಟ್‌ಗಳಲ್ಲಿ 21,000 ಮೊತ್ತ ಪಾವತಿಸುವ ಮೂಲಕ ಬುಕ್ಕಿಂಗ್‌ ಮಾಡಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ