Phalodi Satta Bazaar: ಸಟ್ಟಾ ಬಜಾರ್ ಎಂದರೇನು, ಕುಪ್ರಸಿದ್ಧ ಫಲೋಡಿ ಬೆಟ್ಟಿಂಗ್ ಮಾರುಕಟ್ಟೆಯ 6 ವಿಶೇಷ ಅಂಶಗಳು
Nov 30, 2023 04:24 PM IST
ಸಟ್ಟಾ ಬಜಾರ್ ಕುರಿತ ವಿಶೇಷ ಮಾಹಿತಿ (ಸಾಂಕೇತಿಕ ಚಿತ್ರ)
ಪ್ರಮುಖ ಉದ್ಯಮಿ ಹರ್ಷ ಗೋಯೆಂಕಾ ಅವರು ಸಟ್ಟಾ ಬಜಾರ್ ಮಾಹಿತಿಯನ್ನು ಟ್ವೀಟ್ ಮಾಡಿದ್ದು, ರಾಜಸ್ಥಾನದಲ್ಲಿ ಬಿಜೆಪಿ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪರ ಬೆಟ್ಟಿಂಗ್ ಒಲವನ್ನು ಫಲಿತಾಂಶದ ಮುನ್ಸೂಚನೆಯಾಗಿ ನೀಡಿದ್ದರು. ಇದು ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಸಟ್ಟಾ ಬಜಾರ್ ಎಂದರೇನು? ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್‌ನ ವಿಶೇಷ ಏನು ಎಂಬುದರ ವಿವರ ನೋಡೋಣ.
ತೆಲಂಗಾಣ ಚುನಾವಣೆಯ ಮತದಾನ ಕೊನೆಯ ಹಂತಕ್ಕೆ ಬಂದಿದೆ. ಸಂಜೆ ಮೇಲೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಲಿದೆ. ಎಲ್ಲರ ಗಮನವೂ ಅತ್ತ ಹೋಗುತ್ತಿರುವಾಗಲೇ ಸಟ್ಟಾ ಬಜಾರ್ ಅಥವಾ ಬೆಟ್ಟಿಂಗ್ ಮಾರ್ಕೆಟ್ ವಿದ್ಯಮಾನಗಳು ಜನಸಾಮಾನ್ಯರ ನಡುವೆ ಚರ್ಚೆಗೆ ಒಳಗಾಗಿದೆ.
ಸಟ್ಟಾ ಬಜಾರಲ್ಲಿ ಕಂಡುಬರುವ ಒಲವು ನಿಖರ ಫಲಿತಾಂಶಕ್ಕೆ ಸಮೀಪ ಇರುತ್ತದೆ ಎಂಬ ನಂಬಿಕೆ ಜನಮಾನಸದ ನಡುವೆ ಬಲವಾಗಿ ಬೇರೂರಿದೆ. ಇದಕ್ಕೆ ಪೂರಕ ಎಂಬಂತೆ ಖ್ಯಾತ ಉದ್ಯಮಿ ಹರ್ಷ ಗೋಯೆಂಕಾ ಅವರ ಟ್ವೀಟ್ ಈ ಸಟ್ಟಾ ಬಜಾರ್ ಒಲವಿನ ಕುರಿತು ನೆಟ್ಟಿಗರು ಚರ್ಚಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಸಟ್ಟಾ ಬಜಾರ್ ಎಂದರೇನು? ಅದರ ಇತಿಹಾಸ ಮುಂತಾದವುಗಳ ಹುಡುಕಾಟವೂ ಶುರುವಾಗಿದೆ. ಸಟ್ಟಾ ಬಜಾರ್ ಎಂದಾಗ ಉತ್ತರ ಭಾರತದಲ್ಲಿ ಪ್ರಮುಖವಾಗಿ ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್ ಬಹಳ ಫೇಮಸ್. ಅದರ ವಿಶೇಷಗಳೇನು ಎಂಬಿತ್ಯಾದಿ ವಿವರ ತಿಳಿದುಕೊಳ್ಳವುದಕ್ಕೆ ಈ ಸನ್ನಿವೇಶ ಒಂದು ನಿಮಿತ್ತ.
ಏನಿದು ಸಟ್ಟಾ ಬಜಾರ್?
ಹಿಂದಿ ಭಾಷೆಯಲ್ಲಿ ಸಟ್ಟಾ ಬಜಾರ್ ಎಂದರೆ ಬೆಟ್ಟಿಂಗ್ ಮಾರುಕಟ್ಟೆ. ಇದು ಒಂದು ರೀತಿಯ ಜೂಜು. ಇದಕ್ಕೆ ಕಾನೂನು ಮಾನ್ಯತೆ ಇಲ್ಲ. ಜೂಜು ಆಗಿರುವ ಕಾರಣ ಇದು ಅಕ್ರಮ. ಇದು ಪರಸ್ಪರ ವಿಶ್ವಾಸದ ಮೇಲೆ ನಡೆಯುವ ವಹಿವಾಟಿನ ಮಾರುಕಟ್ಟೆ.
ಇಲ್ಲಿ ಕ್ರಿಕೆಟ್‌ನಿಂದ ಹಿಡಿದು ಚುನಾವಣೆ ತನಕ ನಾನಾ ವಿಷಯಗಳಿಗೆ ಬೆಟ್ಟಿಂಗ್ ನಡೆಯುತ್ತಲೇ ಇರುತ್ತದೆ. ಚುನಾವಣೆ ಸಂದರ್ಭ ಮತ್ತು ಕ್ರಿಕೆಟ್ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಎಂದೇ ಹೇಳಬಹುದು. ಬೆಟ್ಟಿಂಗ್ ಎಂದರೆ ಅಲ್ಲಿ ಹಣ/ ಸಂಪತ್ತು / ಬೆಲೆ ಬಾಳುವ ವಸ್ತುಗಳನ್ನು ಪಣವಾಗಿ ಇಡುವುದು ವಾಡಿಕೆ. ಜೂಜು ಗೆದ್ದವರಿಗೆ ಅದು ಆ ಸಂಪತ್ತು ದಕ್ಕುತ್ತದೆ.
ಈಗ ಚುನಾವಣೆ ನಡೆಯುತ್ತಿರುವ ಕಾರಣ ಫಲಿತಾಂಶಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಯುತ್ತಿದೆ. ಉದಾಹರಣೆಗೆ ಹೇಳುವುದಾದರೆ, ಆಂಧ್ರ ಪ್ರದೇಶದ ಪಂಟರ್‌ಗಳು ಬಿಆರ್‌ಎಸ್ ಮೇಲೆ 1ಕ್ಕೆ 3 ಮತ್ತು ಕಾಂಗ್ರೆಸ್ ಮೇಲೆ 1ಕ್ಕೆ 5ರಂತೆ ಬೆಟ್ಟಿಂಗ್ ನಡೆಸಿದ್ದಾರೆ. ಪಂಟರ್‌ಗಳು ಇಲ್ಲಿ ಬಿಆರ್‌ಎಸ್ ಮೇಲೆ 1 ರೂಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದು ಅದು ಗೆದ್ದು ಅಧಿಕಾರಕ್ಕೆ ಬಂದರೆ 3 ರೂಪಾಯಿ ಗೆಲ್ಲುತ್ತಾರೆ. ಸೋತವರು ಮೂರು ರೂಪಾಯಿ ಗೆದ್ದವರಿಗೆ ಕೊಡಬೇಕು. ಅದೇ ರೀತಿ ಕಾಂಗ್ರೆಸ್ ಗೆದ್ದರೆ 1 ರೂಪಾಯಿಗೆ 5 ರೂಪಾಯಿಯಂತೆ ಬೆಟ್ಟಿಂಗ್ ನಡೆಯುತ್ತಿದ್ದು, ಸೋತವರು ಗೆದ್ದವರಿಗೆ 5 ರೂಪಾಯಿ ಕೊಡಬೇಕಾಗುತ್ತದೆ ಎಂದು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿ ಅನುಭವ ಇರುವಂಥವರು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ನೀಡಿರುವ ಮಾಹಿತಿ.
ಫಲೋಡಿ ಸಟ್ಟಾ ಬಜಾರ್ ಎಲ್ಲಿದೆ, ಅದರ ಇತಿಹಾಸಕ್ಕೆ ಸಂಬಂಧಿಸಿದ 6 ಅಂಶಗಳು
1. ಫಲೋಡಿ ಎಂಬ ಜಿಲ್ಲೆ: ಫಲೋಡಿ ಎಂಬುದು ರಾಜಸ್ಥಾನದ ಜೋಧಪುರದಿಂದ 164 ಕಿ.ಮೀ. ದೂರದ ಒಂದು ಪಟ್ಟಣ. ಜನಸಂಖ್ಯೆ ದೃಷ್ಟಿಯಿಂದ ಇದು ಆ ರಾಜ್ಯದ ಎರಡನೇ ಅತಿದೊಡ್ಡ ನಗರ. ಈಗ ಹೊಸ ಜಿಲ್ಲೆ ಕೂಡ ಹೌದು.
2. ಸಾಲ್ಟ್ ಸಿಟಿ ಮತ್ತು ಹಣ್ಣಿನ ಮಾರುಕಟ್ಟೆ: ಫಲೋಡಿ ಅಥವಾ ಫಲೌದಿ ಎಂಬುದು ಹಣ್ಣಿನ ಮಾರುಕಟ್ಟೆ. ಈ ಪಟ್ಟಣಕ್ಕೆ ಫಲವಿದ್ರಿಕಾ ಎಂಬ ಹೆಸರೂ ಇತ್ತು. ಅದು ಅಪಭ್ರಂಶಗೊಂಡು ಫಲೋಡಿ ಆಗಿದೆ. ಫಲೋಡಿ ಸಾಲ್ಟ್ ಸಿಟಿ ಎಂದೂ ಗುರುತಿಸಿಕೊಂಡಿತ್ತು. ಇಲ್ಲಿ ಉಪ್ಪಿನ ಉತ್ಪಾದನೆ ಆಗುತ್ತಿತ್ತು.
3. ಹಣ್ಣಿನ ಮಾರುಕಟ್ಟೆಯಲ್ಲಿ ಸಟ್ಟಾ ಬಜಾರ್: ಇದು ಸ್ವಾತಂತ್ರ್ಯ ಪೂರ್ವದ ಮಾರುಕಟ್ಟೆ. ಇಲ್ಲಿ ಬೆಳಗ್ಗೆಯಿಂದ ತಡರಾತ್ರಿವರೆಗೂ ಜನದಟ್ಟಣೆ. ಹೆಚ್ಚಿನವರು ದಲ್ಲಾಳಿಗಳು ಮತ್ತು ಸಟ್ಟಾ ವ್ಯಾಪಾರಿಗಳು. ಹಣ್ಣಿನ ಮಾರುಕಟ್ಟೆಯಲ್ಲಿ ಇವರು ನಿಧಾನವಾಗಿ ಬೆಟ್ಟಿಂಗ್ ಶುರುಮಾಡಿದರು. ಹಾಗೆ ಶುರುವಾಯಿತು ಸಟ್ಟಾ ಬಜಾರ್.
4. ಸಟ್ಟಾ ಬಜಾರ್ ಅಕ್ರಮ: ಬೆಟ್ಟಿಂಗ್ ಅನ್ನು ಅಕ್ರಮ ಎಂದು ಸರ್ಕಾರ ಘೋಷಿಸಿರುವ ಕಾರಣ, ಇದು ರಾಜಾರೋಷವಾಗಿ ನಡೆಯಲ್ಲ. ಎಲ್ಲವೂ ಗೌಪ್ಯವಾಗಿ ನಡೆಯುತ್ತದೆ. ಎಲ್ಲವೂ ಬಾಯಿ ಮಾತು ಮತ್ತು ಪರಸ್ಪರ ನಂಬಿಕೆಯ ಮೇಲೆ ಅವಲಂಬಿತ.
5. ಬೆಟ್ಟಿಂಗ್ ನಡೆಯುವುದು ಹೇಗೆ: ಸಟ್ಟಾ ಬಜಾರ್‌ನಲ್ಲಿ 20-22 ಮಂದಿ ಬೆಟ್ಟಿಂಗ್ ದಂಧೆಕೋರರು ಸೇರಿ ಇದನ್ನು ನಡೆಸುತ್ತಾರೆ. ಈ ವ್ಯವಹಾರದಲ್ಲಿ ಬ್ರೋಕರ್, ಲಗೈವಾಲ್ (ಊಹಕ) ಮತ್ತು ಖೈವಾಲ್ (ಸ್ಟೇಕ್‌ಹೋಲ್ಡರ್) ಎಂಬ ಮೂರು ಪ್ರಮುಖ ಕೊಂಡಿಗಳು ಅಥವಾ ಪಾತ್ರಧಾರಿಗಳು.
6. ಯಾವುದರ ಮೇಲೆಲ್ಲ ಬೆಟ್ಟಿಂಗ್: ಈ ಮಾರುಕಟ್ಟೆಯಲ್ಲಿ ಹತ್ತಿ ದರ, ಮಳೆ, ಚಂಡಮಾರುತ, ಕ್ರಿಕೆಟ್, ಚುನಾವಣೆ ಹೀಗೆ ಹಲವು ವಿಷಯಗಳ ಮೇಲೆ ಬೆಟ್ಟಿಂಗ್ ನಡೆಯುತ್ತಲೇ ಇರುತ್ತದೆ. ಸಟ್ಟಾ ಬಜಾರ್‌ನಲ್ಲಿ ಇದಕ್ಕೆ ಶತಮಾನಗಳ ಇತಿಹಾಸ.