logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Forest Tales: ಏಷ್ಯಾದ ಮೊದಲ ಆನೆ ಮಾವುತೆ ಪಾರ್ವತಿ ಗಜ ಪ್ರಣಯ, ಅಸ್ಸಾಂ ಗಟ್ಟಿಗಿತ್ತಿಗೆ ಪದ್ಮಶ್ರೀ ಹಿರಿಮೆ

Forest Tales: ಏಷ್ಯಾದ ಮೊದಲ ಆನೆ ಮಾವುತೆ ಪಾರ್ವತಿ ಗಜ ಪ್ರಣಯ, ಅಸ್ಸಾಂ ಗಟ್ಟಿಗಿತ್ತಿಗೆ ಪದ್ಮಶ್ರೀ ಹಿರಿಮೆ

Umesha Bhatta P H HT Kannada

Feb 06, 2024 09:33 PM IST

google News

ಏಷ್ಯಾದ ಮೊದಲ ಆನೆ ಮಾವುತೆ ಪಾರ್ವತಿ ಬರುವಾ ಅವರಿಗೆ ಈ ಬಾರಿ ಪದ್ಮಶ್ರೀ ಗೌರವ.

    • ಆನೆಗಳಿಗೂ ಮಾವುತನಿಗೂ ದೊಡ್ಡ ನಂಟು. ಅಸ್ಸಾಂನ ಈ ಮಹಿಳೆ ಏಷಿಯಾದ ಮೊದಲ ಮಹಿಳಾ ಮಾವುತೆ. ಆನೆಗಳೊಂದಿಗೆ ಏಳು ದಶಕದ ಬದುಕು. ಅವರ ಆನೆ ಕಾಯಕಕ್ಕೆ ಈ ಬಾರಿ ಪದ್ಮಶ್ರೀ ಗೌರವ. ಅವರ ಕಾಡು ಮತ್ತು ಆನೆಗಳೊಂದಿಗಿನ ಬದುಕಿನ ರೋಚಕ ಕಥನ ಇಲ್ಲಿದೆ. 
ಏಷ್ಯಾದ ಮೊದಲ ಆನೆ ಮಾವುತೆ ಪಾರ್ವತಿ ಬರುವಾ ಅವರಿಗೆ ಈ ಬಾರಿ ಪದ್ಮಶ್ರೀ ಗೌರವ.
ಏಷ್ಯಾದ ಮೊದಲ ಆನೆ ಮಾವುತೆ ಪಾರ್ವತಿ ಬರುವಾ ಅವರಿಗೆ ಈ ಬಾರಿ ಪದ್ಮಶ್ರೀ ಗೌರವ.

ನಾನು ಹುಟ್ಟಿ ಒಂದು ತಿಂಗಳು ಆಗಿರಲಿಲ್ಲ. ಆಗಲೇ ನಾನು ಆನೆಯನ್ನು ನೋಡಿದ್ದೆ. ಅದು ಮನೆಯ ಅಂಗಳದಲ್ಲಿ. ಆನೆಯೊಂದಿಗೆ ನನ್ನ ಬದುಕು ಮಿಳಿತವಾಗಿ ಹೋಯಿತು. ಆನೆಗಳೇ ನನ್ನ ಬದುಕಿ ಸಂಗಾತಿಗಳೂ ಆಗಿ ಹೋದರು. ಆನೆ ಮಾವುತಳಾಗಿ ನನ್ನ ಬದುಕನ್ನೇ ಬದಲಿಸಿಕೊಂಡೆ. 14 ವರ್ಷದವಳಿದ್ದಾಗಲೇ ಆನೆ ಸೆರೆ ಹಿಡಿದಿದ್ದೆ. ಆನೆ ಪಳಗಿಸಿದ್ದೆ. ಆನೆಗೆ ಪ್ರೀತಿ ಕೊಟ್ಟೆ. ಆವುಗಳು ಕೊಟ್ಟ ಪ್ರೀತಿ ಅದೆಷ್ಟು. ಅದಕ್ಕೆ ಲೆಕ್ಕವೇ ಇಲ್ಲ. ಅಬ್ಬಾ ಅದಲ್ಲೆನ್ನಾ ನಾನು ಮಾಡಿದ್ದೇನೆಯೇ ಎಂದು ಒಮ್ಮೆ ಮೆಲುಕು ಹಾಕಿದರೆ ನಿಜಕ್ಕೂ ಆಶ್ಚರ್ಯವೇ ಆಗಿ ಹೋಗುತ್ತದೆ. ಈಗಲೂ ಆನೆ ಇಲ್ಲದೇ ಒಂದು ದಿನವೂ ನನ್ನದಿಲ್ಲ. ಆನೆಯನ್ನು ನೋಡುತ್ತೇನೆ. ಅವುಗಳಿಗೆ ಊಟ ಮಾಡಿಸುತ್ತೇನೆ. ಅವುಗಳೊಂದಿಗೆ ಕಳೆಯದೇ ಇದ್ದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ..

ಭಾರತ ಸರ್ಕಾರ ನಾನಾ ಕ್ಷೇತ್ರಗಳಲ್ಲಿನ ಅನನ್ಯ ಸಾಧಕರ ಕೊಡ ಮಾಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಸ್ಸಾಂನ ಪಾರ್ವತಿ ಬರುವಾ(Parbati Baruah) ಹೀಗೆ ಒಂದೇ ಗುಕ್ಕಿನಲ್ಲಿ ಹೇಳುತ್ತಾ ಹೋಗುತ್ತಿದ್ದರೆ ಆ ಮಾತುಗಳು ನಿಜಕ್ಕೂ ಅಚ್ಚರಿ ಎನ್ನಿಸದೇ ಇರವು. ನೋಡಲು ಸಣಕಲು ದೇಹದ, ಆನೆಯಂತಹ ಗಜಗಾತ್ರದ ಪ್ರಾಣಿಯ ಮುಂದೆ ನಿಲ್ಲಲು ಆಗದ ಈ ಮಹಿಳೆ ಆನೆಗಳೊಂದಿಗೆ ಏಳು ದಶಕ ಕಳೆದಿರಲು ಸಾಧ್ಯವೇ ಎನ್ನಿಸದೇ ಇರಬಹುದು.

ಈ ಬಾರಿಯ ಪದ್ಮಶ್ರೀ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದಕ್ಕೆ ಅವರಿಗೂ ಅಚ್ಚರಿ. ಕೇಂದ್ರ ಸರ್ಕಾರದಿಂದ ಕರೆ ಮಾಡಿ ನನಗೆ ಪ್ರಶಸ್ತಿ ಬಂದಿರುವ ಮಾಹಿತಿ ನೀಡಿದರು. ನನಗೆ ನಂಬಲಾಗಲಿಲ್ಲ. ನನ್ನ ಕೆಲಸ ಗುರುತಿಸಿ ನನಗೆ ಪ್ರಶಸ್ತಿ ನೀಡಿದ್ದಾರೆ. ನನ್ನಪ್ಪನ ಪ್ರೀತಿ, ಹಾರೈಕೆಯಿಂದ ನಾನೂ ಆನೆ ಮಾವುತಳಾಗಿ ಅವುಗಳೊಂದಿಗೆ ಬದುಕು ಕಳೆದುಬಿಟ್ಟೆ. ನನ್ನ ಜೀವನ ಅವುಗಳಿಗೆ ಮುಡಿಪು ಎಂದು ಕಣ್ಣರಳಿಸಿದರು ಪಾರ್ವತಿ.

ರಾಜವಂಶಸ್ಥ ಮಾವುತೆ

ಅಸ್ಸಾಂನ ಗೌರಿಪುರ ಎನ್ನುವ ಪುಟ್ಟ ಹಳ್ಳಿ. ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಊರು. ಇಲ್ಲಿನ ಕಾಡಿನಲ್ಲಿ ದಶಕಗಳ ಹಿಂದೆ ಆನೆಗಳ ಹಿಂಡೇ ಇದ್ದವು. ಅವುಗಳು ಕಾಡಿನ ಸುತ್ತಲಲ್ಲಿ ಮಾತ್ರವಲ್ಲ. ಅಕ್ಕಪಕ್ಕದ ಹಳ್ಳಿಗಳಿಗೂ ಬಂದು ಹೋಗುತ್ತಿದ್ದವು. ಸಮೃದ್ದ ಕಾಡಿನ ಪ್ರದೇಶಕ್ಕೆ ಹತ್ತಿರವಿದ್ದ ಗೌರಿಪುರದ ರಾಜವಂಶಸ್ಥೆ ಪಾರ್ವತಿ ಬರುವಾ. ಹುಟ್ಟಿದ್ದು ಶ್ರೀಮಂತರ ಮನೆಯಲ್ಲಿ. ಅವರ ತಂದೆ ಪ್ರಕೃತೇಶ್ ಬರುವಾ ಆನೆಗಳ ತಜ್ಞರು. 40-50 ದಶಕದಲ್ಲಿಯೇ ಆನೆಗಳನ್ನು ಸೆರೆ ಹಿಡಿಯುವಲ್ಲಿ ಅವರು ನಿಷ್ಣಾತರಾಗಿದ್ದರು. ಸೆರೆ ಹಿಡಿದ ಆನೆಗಳನ್ನು ಪಳಗಿಸುವುದು, ಅವುಗಳನ್ನು ದೇಶ ಹೊರ ದೇಶಗಳಿಗೆ ಮಾರಾಟ ಮಾಡುವುದು ಬರುವಾ ಅವರ ಮೂಲ ಕಸುಬೇ ಆಗಿ ಹೋಗಿತ್ತು. ಇದಕ್ಕಾಗಿ ಅವರ ಅರಮನೆಯಲ್ಲಿ ಆನೆ ಹಿಡಿಯುವ ಜನರೇ ಇದ್ದರು. ಆನೆಗಳ ರಾಶಿಯೇ ಅವರ ಅರಮನೆ ಸುತ್ತಲೂ ಇರುತ್ತಿದ್ದವು. ಆನೆ ಸೆರೆ ಹಿಡಿಯುವ, ಪಳಗಿಸುವ ಹಾಗೂ ಮಾರಾಟ ಮಾಡುವ ದೊಡ್ಡ ತಂಡವನ್ನೇ ಕಟ್ಟಿದ್ದರು ಪ್ರಕೃತೇಶ್‌. ಆನೆ ವಹಿವಾಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಬರುವಾ ಕುಟುಂಬದ್ದು. ಭೂತಾನ್‌ ಸೇರಿ ಹಲವು ರಾಜ ಕುಟುಂಬಗಳಿಗೆ, ಭಾರತ ಹತ್ತಾರು ರಾಜವಂಶಸ್ಥರಿಗೆ ಬರುವಾ ಆನೆ ಕೊಡುತ್ತಿದ್ದರು.

ತುಂಬು ಕುಟುಂಬ

ಇಂತಹ ಮನೆಯಲ್ಲಿ 1954 ರಲ್ಲಿ ಜನಿಸಿದ್ದು ಪಾರ್ವತಿ ಬರುವಾ. ಎಂಟು ಮಂದಿ ಸಹೋದರ- ಸಹೋದರಿಯ ಬಳಿಕ ಒಂಬತ್ತನೆಯವರಾಗಿ ಜನಿಸಿದವರು. ಒಂದೂವರೆ ತಿಂಗಳ ಪುಟ್ಟ ಬಾಲಕಿ ಮೊದಲ ಬಾರಿ ಆನೆಯನ್ನು ನೋಡಿದ್ದು ಮನೆ ಎದುರಿನಲ್ಲಿ. ಹಸುಗೂಸಿನ ಕಣ್ಣಲ್ಲಿ ಆನೆಯ ಚಿತ್ರಣ ಹೇಗಿರಬೇಡ. ಆನೆಗಳನ್ನೇ ನೋಡುತ್ತಲೇ ಬೆಳೆದ ಪಾರ್ವತಿಗೆ ಆನೆಯೆ ಎಲ್ಲವೂ ಆಗತೊಡಗಿತು. ಮಗಳಿಗೂ ಆನೆಗಳ ಬಗ್ಗೆ ಇದ್ದ ಅಭಿಮಾನವನ್ನು ಅಪ್ಪ ಕಣ್ಣಾರೆ ಕಂಡು ಆಕೆಯನ್ನು ಆನೆಯೊಂದಿಗೆ ಇರಲು ಬಿಡತೊಡಗಿದರು.

ಪಾರ್ವತಿಗೆ ಆಗ 14 ವರ್ಷ. ಅಸ್ಸಾಂನ ಕೊಕ್ರಾಜಾರ್‌ ಜಿಲ್ಲೆಯ ಕಚುಗಾಂವ್ ಎಂಬಲ್ಲಿ ಆನೆ ಹಿಡಿಯುವ ಕಾರ್ಯಾಚರಣೆ ನಡೆದಿತ್ತು. ಪಾರ್ವತಿ ತಾವು ಆನೆ ಸೆರೆ ಹಿಡಿಯಲು ಹೊರಟೇ ಬಿಟ್ಟರು. ಜತೆಯಲ್ಲಿದ್ದವರಿಗೂ ಆಶ್ಚರ್ಯ.ಮನೆಯ ಮುಂದೆ ಆನೆ ನೋಡಿಕೊಂಡಿದ್ದವಳು ಆನೆ ಹಿಡಿಯಲು ಆಗುತ್ತದೆಯೇ ಎಂದು ಮೂಗು ಮುರಿದಿದ್ದು ಉಂಟು. ಅದೇನೋ ಪಾರ್ವತಿಯಲ್ಲಿ ಅದಮ್ಯ ಆತ್ಮವಿಶ್ವಾಸ. ಆನೆಯನ್ನೂ ಒಂದು ಕೈ ನೋಡೇ ಬಿಡುವೆ ಎಂದು ಜತೆಯಲ್ಲಿದ್ದವರಿಗೆ ಹೇಳಿದರು. ಆಕೆ ಆನೆ ಸೆರೆ ಹಿಡಿಯುವಾಗ ತೋರಿದ ಉತ್ಸಾಹ, ಚಾಣಾಕ್ಷತೆ, ಕೌಶಲ್ಯತೆಗಳು ಅಲ್ಲಿದ್ದವರನ್ನು ಅಚ್ಚರಿಗೊಳಿಸಿದ್ದವು. ಆನೆ ಸೆರೆ ಹಿಡಿಯುವಲ್ಲಿ ಮುಂಚೂಣಿಯಲ್ಲಿದ್ದ ಆಕೆ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಳು. ಅಲ್ಲಿಂದ ಹಿಡಿದು ತಂದೆ ಆನೆ ಪಳಗಿಸುವಲ್ಲಿ ಪಾರ್ವತಿ ಪಾತ್ರ ಹೆಚ್ಚೇ ಇತ್ತು. ಅಷ್ಟು ಹೊತ್ತಿಗೆ ಆನೆ ಸೆರೆ ಹಿಡಿಯುವುದನ್ನು ಕೇಂದ್ರ ಸರ್ಕಾರ ನಿಷೇಧಿಸಲು ಶುರು ಮಾಡಿತ್ತು. ಪಾರ್ವತಿ ಪ್ರಾಯಕ್ಕೆ ಬರುವಾಗ ಹೊಸ ಆದೇಶಗಳು ಜಾರಿಗೆ ಬಂದಿದ್ದವು. ತಂದೆಯೂ ಕಾಲವಾದರು. ಆದರೆ ಅವರಲ್ಲಿದ್ದ ಆನೆಗಳನ್ನು ಇಟ್ಟುಕೊಂಡು ಅವುಗಳನ್ನು ಸಾಕುವುದಕ್ಕೇನು ನಿಷೇಧ ಇರಲಿಲ್ಲ. ಈ ನಡುವೆ ಪಾರ್ವತಿ ಅವರಿಗೆ 1970 ರ ದಶಕದಲ್ಲಿ ಬ್ಯಾಂಕ್ ಗುಮಾಸ್ತ ಪುಲಿನ್ ದಾಸ್ ಅವರೊಂದಿಗೆ ಮದುವೆಯೂ ಆಯಿತು. ಆದರೆ ಪತಿ ಆನೆಗಳ ವಹಿವಾಟು ಬಿಟ್ಟು ಬಿಡು ಎನ್ನುವ ಸಲಹೆ ಕೊಟ್ಟರು. ನಿಮ್ಮನ್ನು ಬಿಟ್ಟೇನೂ ಆನೆ ಮಾತ್ರ ಬಿಡುವುದಿಲ್ಲ ಎನ್ನುವ ಖಡಕ್‌ ಉತ್ತರವೇ ಪಾರ್ವತಿ ಅವರಿಂದ ಬಂದಿತು. ಆಗಲೇ ಪತಿದೇವ ಪಾರ್ವತಿಯಿಂದ ದೂರವಾಗಿಯೇ ಬಿಟ್ಟ. ಪತಿ ಬಿಟ್ಟು ಹೋದರೂ ಅರಮನೆ, ಆನೆಗಳು, ಮಾವುತ ವೃತ್ತಿ. ಜನರ ಒಡನಾಟ.. ಹೀಗೆ ಇದರಲ್ಲಿಯೇ ಪಾರ್ವತಿ ಅವರ ಬದುಕು ಸಾಗಿತು. ಆನೆ ಮಾವುತರ ಜತೆಗೆ ಆನೆ ತಜ್ಞರಾಗಿಯೂ ಪಾರ್ವತಿ ಗುರುತಿಸಿಕೊಂಡು ತಮ್ಮ ತಜ್ಞತೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋದರು.

ಸಾಕ್ಷ್ಯಚಿತ್ರ ತಂದ ತಿರುವು

ಮೂರು ದಶಕ ಹಿಂದಿನ ಮಾತು. ಖ್ಯಾತ ನಿರ್ದೇಶಕ ಮಾರ್ಕ್‌ ಶಂಡ್‌( mark Shand ) ಅವರು ಸಾಧಕರ ಕಿರುಚಿತ್ರಗಳನ್ನು ಬಿಬಿಸಿಗೆ ತೆಗೆಯುವಲ್ಲಿ ನಿರತರಾಗಿದ್ದರು. ಅವರಿಗೆ ಪಾರ್ವತಿ ಬರುವಾ ಅವರ ಆನೆ ಕಥನವೂ ತಿಳಿದಿತ್ತು. ಅಸ್ಸಾಂಗೆ ತಂಡದೊಂದಿಗೆ ಹೊರಟರು. ಅಗ ಸಿದ್ದವಾಗಿದ್ದೇ ಕ್ವೀನ್‌ ಆಫ್‌ ದಿ ಎಲಿಫೆಂಟ್ಸ್‌(Queen of Elephant ). ಆ ಸಾಕ್ಷ್ಯಚಿತ್ರ ಹೇಗಿತ್ತೆಂದರೆ ಪಾರ್ವತಿ ಅವರನ್ನು ಪುಟ್ಟ ಹಳ್ಳಿ, ಸುತ್ತಮುತ್ತಲ ಪ್ರದೇಶದಿಂದ ಇಡೀ ಜಗತ್ತಿಗೆ ಪರಿಚಯಿಸಿತು. ಆ ಮಟ್ಟಿಗೆ ಕ್ವೀನ್‌ ಆಫ್‌ ಎಲಿಫೆಂಟ್‌ ಚಿತ್ರೀಕರಣಗೊಂಡಿತ್ತು. ಆ ಕಿರು ಚಿತ್ರ ನೋಡಿದರೆ ಪಾರ್ವತಿ ಅವರ ಪ್ರತಿಭೆ ತಿಳಿಯದೇ ಇರದು. ಆನೆಯನ್ನು ಹತ್ತಿರದಿಂದ ನೋಡಿದರೆ ಎದೆ ಝಲ್ಲೆನಿಸುತ್ತದೆ. ಇನ್ನು ಆನೆ ಮುಟ್ಟುವುದು, ಅದನ್ನು ನಿಯಂತ್ರಿಸುವುದು ಎಂದರೆ ಎಂಟೆದೆಯೇ ಬೇಕು ಎನ್ನುವುದು ನಂಬಿಕೆ. ಅದೂ ಮಹಿಳೆಯೊಬ್ಬರು ಆನೆಯನ್ನು ನಿಯಂತ್ರಿಸುವುದು ಹೇಗೆ ಎನ್ನುವ ಅರಿವು ಬರುತ್ತದೆ.

ಪಾರ್ವತಿ ಅವರು ಈಶಾನ್ಯ ರಾಜ್ಯಗಳು ಮಾತ್ರವಲ್ಲದೇ ಮಧ್ಯ ಭಾರತದ ಹಲವು ರಾಜ್ಯಗಳಿಗೆ ಆನೆ ಸಲಹಾ ಸಮಿತಿಯ ಪ್ರಮುಖ ಸ್ಥಾನ ಪಡೆದಿದ್ದಾರೆ. ಬಿಹಾರ, ಪಶ್ಚಿಮಬಂಗಾಲ, ಒರಿಸ್ಸಾ, ಅಸ್ಸಾಂ, ಛತ್ತೀಸಗಢ ಸಹಿತ ಹಲವು ಕಡೆ ಆನೆ ಸೆರೆ ಹಿಡಿಯುವ ತಂಡಕ್ಕೆ ಮಾರ್ಗದರ್ಶನವನ್ನೂ ನೀಡುತ್ತಾರೆ. ಪಶ್ಚಿಮ ಬಂಗಾಲದಲ್ಲೇ ಆನೆ ಹಿಂಡನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆಗೆ ಆಗದೇ ಇದ್ದಾಗ ಪಾರ್ವತಿ ಮತ್ತವರ ತಂಡವನ್ನು ಕರೆಯಿಸಲಾಯಿತು. ಅದನ್ನು ಯಶಸ್ವಿಯಾಗಿಯೇ ನಿಭಾಯಿಸಿದರು ಪಾರ್ವತಿ. ಈಗಲೂ ಹಲವು ರಾಜ್ಯಗಳಿಗೆ ಆನೆ ವಿಚಾರದಲ್ಲಿ ಅವರು ಮಾರ್ಗದರ್ಶನ ನೀಡುತ್ತಾರೆ.

ಆನೆಗಳಿಗೆ ಏನು ಇಷ್ಟ. ಅವುಗಳು ಏನು ಬಯಸುತ್ತವೆ ಎನ್ನುವುದು ಪಾರ್ವತಿ ಅವರಿಗೆ ಚೆನ್ನಾಗಿ ಗೊತ್ತು. ಅವುಗಳಿಗೆ ಪ್ರೀತಿ ಕೊಟ್ಟರೆ ನಿಜವಾಗಿಯೂ ಅವುಗಳ ಸಾವಿರ ಪಟ್ಟು ಪ್ರೀತಿ ತೋರುತ್ತವೆ. ನಮ್ಮನ್ನು ಬಿಟ್ಟು ಇರುವುದೇ ಇಲ್ಲ. ನಿಜಕ್ಕೂ ಆನೆಗಳ ಅಂತಃಕರಣದ ಬದುಕು ಅನನ್ಯ ಎಂದು ಪಾರ್ವತಿ ಅವರು ಹತ್ತಾರು ಉದಾಹರಣೆಗಳನ್ನು ಕೊಡುತ್ತಾರೆ.

ಆನೆಯ ಪ್ರೀತಿ ತುಂಬಿದ ಬದುಕು

ಆನೆಗಳ ಬಗ್ಗೆ ಅಷ್ಟೇಕೆ ಆಕರ್ಷಿತರಾಗಿದ್ದೀರಿ, ಬದುಕನ್ನೇ ಆನೆಗಳಿಗೆ ಮುಡುಪಿಟ್ಟಿರುವುದಕ್ಕೆ ಏನನಿಸುತ್ತದೆ ಎನ್ನುವ ಪ್ರಶ್ನೆ ಪಾರ್ವತಿ ಅವರಿಗೆ ಒಮ್ಮೆ ಎದುರಾಯಿತು. ಪ್ರೀತಿಯನ್ನು ವಿವರಿಸಲಾಗುವುದಿಲ್ಲ. ಬಹುಶಃ ಆನೆಗಳು ಬಹಳ ಸ್ಥಿರ, ನಿಷ್ಠಾವಂತ, ವಾತ್ಸಲ್ಯ ಮತ್ತು ಶಿಸ್ತಿನ ಪ್ರಾಣಿಗಳು. ಇಷ್ಟು ಪ್ರೀತಿ ನನಗೆ ಮನುಷ್ಯರಿಂದಲೂ ಸಿಕ್ಕಿಲ್ಲ. ಆನೆಗಳು ನನ್ನನ್ನು ಏಕೆ ಪ್ರೀತಿಸುತ್ತವೆ. ನಾನು ಒಂದು ಕರೆ ನೀಡಿದರೆ ತಕ್ಷಣ ಹತ್ತಿರ ಬಂದು ನಿಲ್ಲುತ್ತವೆ. ಇದರ ಹಿಂದೆ ಇರುವುದು ನಿರ್ವ್ಯಾಜ್ಯ ಪ್ರೀತಿಯೊಂದೆ ಎಂದು ಯಾನವನ್ನು ವಿವರಿಸುತ್ತಲೇ ಹೋದರು.

ಕೆಲ ವರ್ಷದ ಹಿಂದೆ ಛತ್ತೀಸಗಢದಲ್ಲಿ ಕಾಡಾನೆ ಸೆರೆ ಹಿಡಿಯಲು ತಾವು ತೆಗೆದುಕೊಂಡು ಹೋಗಿದ್ದ ಆನೆಯೇ ವ್ಯಘ್ರವಾಗಿತ್ತು. ಅದು ಇತರರ ಜೀವ ತೆಗೆಯುತ್ತದೆ ಎನ್ನುವ ಸ್ಥಿತಿ ಎದುರಾದಾಗ ಅದನ್ನು ಕೊಲ್ಲಲೇಬೇಕಾದ ಸನ್ನಿವೇಶವೂ ನಿರ್ಮಾಣವಾಯಿತು. ಇದು ನನ್ನ ಜೀವನದ ಅತೀ ಬೇಸರದ ಕ್ಷಣ ಎಂದು ಪಾರ್ವತಿ ಆ ಘಟನೆ ನೆನಪಿಸಿಕೊಂಡು ಭಾವುಕರಾಗುತ್ತಾರೆ.

ಅವರಿಗೆ ಈಗ ವಯಸ್ಸು 70. ವಯಸ್ಸು ದೇಹಕ್ಕಷ್ಟೆ ಮನಸಿಗಲ್ಲ ಎನ್ನುವ ರೀತಿಯಲ್ಲೇ ಪಾರ್ವತಿ ಅವರು ಬದುಕು ನಡೆದಿದೆ. ಏಷ್ಯಾದ ಮೊದಲ ಮಹಿಳಾ ಮಾವುತರೆಂಬ ಹಿರಿಮೆಗೆ ಪಾತ್ರರಾಗಿರುವ ಪಾರ್ವತಿ ಅವರಿಗೆ ಪದ್ಮಶ್ರೀ ಗರಿಮೆ ಕೂಡ ಸೇರಿದೆ. ಹಿರಿಮೆ- ಗರಿಮೆಗಳಿಗಿಂತ ನನಗೆ ಆನೆಗಳೇ ಎಲ್ಲಾ. ನನ್ನ ಕೆಲಸ ಆನೆಗಳಿಂದ ಮನುಷ್ಯನನ್ನು ರಕ್ಷಿಸುವುದು ಮತ್ತು ಆನೆಗಳನ್ನು ಮನುಷ್ಯರಿಂದ ರಕ್ಷಿಸುವುದು. ಆನೆಗೆ ಬೇಕಾಗಿರುವುದು ಶಾಂತಿ ಮತ್ತು ಸುರಕ್ಷತೆ. ಅದನ್ನು ಜೀವ ಇರುವವರೆಗೂ ಕೊಡುತ್ತಲೇ ಇರುತ್ತೇನೆ ಎಂದು ನಸುನಗುತ್ತಾ ಆನೆಗಳನ್ನು ತೋರಿಸುತ್ತಾರೆ ಪಾರ್ವತಿ.

-ಕುಂದೂರು ಉಮೇಶಭಟ್ಟ, ಮೈಸೂರು

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ