logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹರಿಯಾಣ ಲೋಕಸಭಾ ಫಲಿತಾಂಶ; ಬಿಜೆಪಿ, ಕಾಂಗ್ರೆಸ್ ಸಮಬಲದ ಸಾಧನೆ, ಪ್ರಾದೇಶಿಕ ಪಕ್ಷ ಜೆಜೆಪಿಗೆ ಭಾರಿ ಹಿನ್ನಡೆ

ಹರಿಯಾಣ ಲೋಕಸಭಾ ಫಲಿತಾಂಶ; ಬಿಜೆಪಿ, ಕಾಂಗ್ರೆಸ್ ಸಮಬಲದ ಸಾಧನೆ, ಪ್ರಾದೇಶಿಕ ಪಕ್ಷ ಜೆಜೆಪಿಗೆ ಭಾರಿ ಹಿನ್ನಡೆ

Umesh Kumar S HT Kannada

Jun 05, 2024 10:49 AM IST

google News

ಹರಿಯಾಣ ಲೋಕಸಭಾ ಫಲಿತಾಂಶ; ಬಿಜೆಪಿ ಮತ್ತೊಮ್ಮೆ ಉತ್ತಮ ಸಾಧನೆ, ಜೆಜೆಪಿ, ಕಾಂಗ್ರೆಸ್,ಎಎಪಿಗೆ ಹಿನ್ನಡೆ (ಸಾಂಕೇತಿಕ ಚಿತ್ರ)

  • ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಹರಿಯಾಣದ 10 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್ ಸಮಬಲದ ಸಾಧನೆ ತೋರಿವೆ. ಪ್ರಾದೇಶಿಕ ಪಕ್ಷ ಜೆಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ಲೋಕಸಭಾ ಫಲಿತಾಂಶದ ವಿವರ ವರದಿ ಇಲ್ಲಿದೆ.

ಹರಿಯಾಣ ಲೋಕಸಭಾ ಫಲಿತಾಂಶ; ಬಿಜೆಪಿ ಮತ್ತೊಮ್ಮೆ ಉತ್ತಮ ಸಾಧನೆ, ಜೆಜೆಪಿ,  ಕಾಂಗ್ರೆಸ್,ಎಎಪಿಗೆ ಹಿನ್ನಡೆ (ಸಾಂಕೇತಿಕ ಚಿತ್ರ)
ಹರಿಯಾಣ ಲೋಕಸಭಾ ಫಲಿತಾಂಶ; ಬಿಜೆಪಿ ಮತ್ತೊಮ್ಮೆ ಉತ್ತಮ ಸಾಧನೆ, ಜೆಜೆಪಿ, ಕಾಂಗ್ರೆಸ್,ಎಎಪಿಗೆ ಹಿನ್ನಡೆ (ಸಾಂಕೇತಿಕ ಚಿತ್ರ)

ಚಂಡೀಗಢ: ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದ್ದು ಹರಿಯಾಣದ 10 ಲೋಕಸಭಾ ಕ್ಷೇತ್ರಗಳ ಪೈಕಿ ಈ ಬಾರಿ ಕೂಡ ಬಿಜೆಪಿ, ದುಶ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಕ್ಷ (ಜೆಜೆಪಿ), ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (ಎಎಪಿ) ಅನ್ನು ಒಳಗೊಂಡಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು. 10 ಕ್ಷೇತ್ರಗಳ ಪೈಕಿ ಬಿಜೆಪಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಪಕ್ಷ 5 ಸ್ಥಾನಗಳಲ್ಲಿ, ಎಎಪಿ, ಜೆಜೆಪಿಗಳದ್ದು ಶೂನ್ಯ ಸಾಧನೆ.

ಹರಿಯಾಣದ ಅಂಬಾಲಾ, ಕುರುಕ್ಷೇತ್ರ, ಸಿರ್ಸಾ, ಹಿಸಾರ್, ಕರ್ನಾಲ್, ಸೋನಿಪತ್, ರೋಹ್ಟಕ್, ಭಿವಾನಿ-ಮಹೇಂದ್ರಗಢ, ಗುರ್ಗಾಂವ್ ಮತ್ತು ಫರಿದಾಬಾದ್ ಈ 10 ಲೋಕಸಭಾ ಕ್ಷೇತ್ರಗಳಿಗೆ ಮೇ 25 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಕರ್ನಾಲ್ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಎದುರಿಸಲು ಕಾಂಗ್ರೆಸ್‌ ದಿವ್ಯಾಂಶು ಬುಧಿರಾಜ ಅವರನ್ನು ಕಣಕ್ಕೆ ಇಳಿಸಿತ್ತು. ಕುರುಕ್ಷೇತ್ರದಲ್ಲಿ ಉದ್ಯಮಿ ನವೀನ್ ಜಿಂದಾಲ್ ಬಿಜೆಪಿ ಅಭ್ಯರ್ಥಿಯಾಗಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ಸುಶೀಲ್ ಗುಪ್ತಾ ಮತ್ತು ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್‌ಎಲ್‌ಡಿ) ಅಭಯ್ ಸಿಂಗ್ ಚೌತಾಲಾ ಅವರನ್ನು ಎದುರಿಸಿದ್ದರು.

ಹರಿಯಾಣ ವಿಧಾನಸಭೆಗೆ ಈ ವರ್ಷ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿದೆ. 2019 ರಿಂದೀಚೆಗೆ ಬಿಜೆಪಿ ತನ್ನ ಬಲವನ್ನು ಇಲ್ಲಿ ಹೆಚ್ಚಿಸಿಕೊಂಡಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷವು ಎಲ್ಲಾ 10 ಸ್ಥಾನಗಳನ್ನು ಗೆದ್ದುಕೊಂಡಿತು.

ಹರಿಯಾಣದಲ್ಲಿ ಲೋಕಸಭಾ ಚುನಾವಣೆ 2024; ಹೈಪ್ರೊಫೈಲ್ ಕ್ಷೇತ್ರಗಳಿವು

ಕರ್ನಾಲ್ - ಮನೋಹರಲಾಲ್ ಕಟ್ಟರ್ (ಬಿಜೆಪಿ) ದಿವ್ಯಾಂಶು ಬುಧಿರಾಜ (ಕಾಂಗ್ರೆಸ್)

ಕುರುಕ್ಷೇತ್ರ - ನವೀನ್ ಜಿಂದಾಲ್ (ಬಿಜೆಪಿ), ಸುಶೀಲ್ ಗುಪ್ತಾ (ಎಎಪಿ), ಅಭಯ ಸಿಂಗ್ ಚೌತಾಲಾ (ಐಎನ್‌ಎಲ್‌ಡಿ)

ಹಿಸ್ಸಾರ್ - ರಣಜಿತ್ ಸಿಂಗ್ ಚೌತಾಲಾ (ಬಿಜೆಪಿ), ಜೈ ಪ್ರಕಾಶ್ (ಕಾಂಗ್ರೆಸ್‌), ನೈನಾ ಚೌತಾಲಾ (ಜೆಜೆಪಿ)

ಫರೀದಾಬಾದ್ - ಕೃಷ್ಣ ಪಾಲ್ ಗುರ್ಜರ್ (ಬಿಜೆಪಿ)

ಗುರ್ಗಾಂವ್- ರಾವ್ ಇಂದರ್‌ಜಿತ್ ಸಿಂಗ್‌ (ಬಿಜೆಪಿ) ರಾಜ್ ಬಬ್ಬರ್ (ಕಾಂಗ್ರೆಸ್‌)

ಸಿರ್ಸಾ- ಅಶೋಕ್ ತನ್ವರ್ (ಬಿಜೆಪಿ), ಕುಮಾರಿ ಸೆಲಿಯಾ (ಕಾಂಗ್ರೆಸ್)

ರೋಹ್ಟಕ್ - ದೀಪಿಂದರ್ ಸಿಂಗ್ ಹೂಡಾ (ಕಾಂಗ್ರೆಸ್‌) ಅರವಿಂದ ಶರ್ಮಾ (ಬಿಜೆಪಿ)

ಲೋಕಸಭಾ ಚುನಾವಣೆ ಮತ್ತು ಹರಿಯಾಣದ ರಾಜಕೀಯ

ಲೋಕಸಭಾ ಚುನಾವಣೆಗೆ ಈ ಬಾರಿ ಹರಿಯಾಣದ 10 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಇಳಿಸಿತ್ತು. ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ 9 ಮತ್ತು ಎಎಪಿಯ ಒಬ್ಬ ಅಭ್ಯರ್ಥಿ ಕಣದಲ್ಲಿದ್ದರು. 2019 ಲೋಕಸಭಾ ಚುನಾವಣೆಯಲ್ಲಿ 10ಕ್ಕೆ 10 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ಹಿನ್ನಡೆ ಯಾಗಿತ್ತು. 2019ರಲ್ಲಿ ಶೇಕಡ 70.34 ಮತದಾನವಾಗಿತ್ತು. ಈ ಬಾರಿ ಶೇಕಡ 65 ಮತದಾನವಾಗಿದೆ. 2014ರಲ್ಲಿ ಬಿಜೆಪಿ 7, ಐಎನ್‌ಎಲ್‌ಡಿ 2 ಮತ್ತು ಕಾಂಗ್ರೆಸ್ ಪಕ್ಷ 1 ಸ್ಥಾನಗಳನ್ನು ಗೆದ್ದುಕೊಂಡಿತ್ತು

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ