Home Loan Tips: ಗೃಹ ಸಾಲ ಮಾಡಿ ಇಎಂಐ ಕಟ್ಟಲು ಪರದಾಡ್ತಾ ಇದ್ದೀರಾ; ಸಾಲದ ಹೊರೆ ಇಳಿಸಲು ಈ ಟಿಪ್ಸ್ ಅನುಸರಿಸಿ ನೋಡಿ
Jun 04, 2023 07:30 AM IST
ಗೃಹ ಸಾಲದ ಹೊರೆಯನ್ನು ಇಳಿಸಿಕೊಳ್ಳುವ ಬಗ್ಗೆ ಈ ಟಿಪ್ಸ್‌ಗಳನ್ನು ಅನುಸರಿಸಿ ನೋಡಿ
ಗೃಹ ಸಾಲ ಮಾಡಿ ಇಎಂಐ ಕಟ್ಟಲು ಪರದಾಡುತ್ತಿದ್ದೀರಾ? ಪ್ರತಿ ತಿಂಗಳ ಆರಂಭದಲ್ಲಿ ಸಾಲ ಮರು ಪಾವತಿಯ ಚಿಂತೆ ಕಾಡುತ್ತಿದ್ದರೆ ನಿಮಗೆ ಒಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇದರಿಂದ ನಿಮ್ಮ ಗೃಹ ಸಾಲದ ಹೊರೆೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.
ಬೆಂಗಳೂರು: ಉದ್ಯೋಗ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಒಮ್ಮೆಯಾದರೂ ಒಂದು ಸ್ವಂತ ಮನೆ ಕಟ್ಟಿಸಬೇಕು ಎಂಬ ಕನಸು ಇರುತ್ತದೆ. ತಮಗೆ ಬರುವ ಸಂಬಳದಲ್ಲಿ ಉಳಿಸಿದ ಅಲ್ಪ ಸ್ವಲ್ಪ ಹಣದ ಜೊತೆಗೆ ಸಾಲ-ಸೋಲ ಮಾಡುತ್ತಾರೆ. ಸಂಬಳಕ್ಕೆ ಅನುಗುಣವಾಗಿ ಬ್ಯಾಂಕ್‌ಗಳಿಂದ ಲೋನ್ (Bank Loan) ತೆಗೆದುಕೊಂಡು ಮನೆಯನ್ನ ಕಟ್ಟಿಸಿ ಕನಸಿನ ಮನೆಯಲ್ಲಿ ವಾಸ ಮಾಡಲು ಆರಂಭಿಸುತ್ತಾರೆ.
ಆದರೆ ದಿನ ಕಳೆದಂತೆ ತೆಗೆದುಕೊಂಡ ಗೃಹ ಸಾಲದ ಇಎಂಐ (Home Loan EMI) ಪಾವತಿಸುವುದು ಕಷ್ಟವಾಗಬಹುದು. ಹಣಕಾಸು ನೀತಿಗಳ (Financial Policies) ಪರಿಣಾಮ ತೆಗೆದುಕೊಂಡ ಸಾಲಕ್ಕೆ ಬಡ್ಡಿದರಗಳು (Interest Rates) ಹೆಚ್ಚಾದಾಗ ಸಾಲದ ಹೊರೆ ಜಾಸ್ತಿಯಾಗಿ ಇಎಂಐ (EMI) ಮೊತ್ತವು ಜಾಸ್ತಿಯಾಗುತ್ತಾ ಹೋಗುತ್ತದೆ. ದೀರ್ಘಕಾಲದ ಸಾಲದ ಮೇಲೆ ಇಂತಹ ಪರಿಣಾಮಗಳು ಬೀರುತ್ತದೆ. 2023ರ ಹಣಕಾಸು ವರ್ಷದಲ್ಲಿ ಗೃಹ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಸಲಹೆಗಳನ್ನು (Home Loan Tips) ಇಲ್ಲಿ ನೀಡಲಾಗಿದೆ.
ಈ ವರ್ಷ ಗೃಹ ಸಾಲದ ಸಮೀಕರಿಸಿದ ಮಾಸಿಕ ಕಂತು (Equated Monthly Instalment)-ಇಎಂಐ ಕಡಿಮೆ ಮಾಡಲು ನೆರವಾಗುವಂತಹ ಕೆಲವು ಸಲಹೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಸಾಲದ ಮೇಲೆ ಇಎಂಐ ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದರಿಂದ ಹೊಸದಾಗಿ ಗೃಹ ಸಾಲ ಪಡೆಯಲು ಇಎಂಐ ಆಯ್ಕೆ, ಗೃಹ ಸಾಲದ (Home Loan) ನಿರ್ವಹಣೆ ಕೂಡ ತುಂಬಾ ಸುಲಭವಾಗುತ್ತದೆ.
ಸಾಲದ ಅವಧಿ ಹೆಚ್ಚಿಸಿ: ಸಾಲದ ಅವಧಿಯನ್ನು ಹೆಚ್ಚಿಸುವುದರಿಂದ ಮಾಸಿಕ ಕಂತುಗಳಾಗಿ ಪಾವತಿಸುವ ಮೊತ್ತವನ್ನು ಕಡಿಮೆ ಮಾಡುವ ಒಂದು ಮಾರ್ಗವಾಗಿದೆ. ನಿಮಗೆ ತಿಂಗಳಿಗೆ ಎಷ್ಟು ಸಾಲ ಮರು ಪಾವತಿಸುವ ಶಕ್ತಿಯಿದೆ ಎಂದು ಖಚಿತ ಪಡಿಸಿಕೊಳ್ಳಿ. ಅಷ್ಟು ಮೊತ್ತದ ಇಎಂಐ ಪಾವತಿಸಲು ಗೃಹ ಸಾಲದ ಅವಧಿ ವಿಸ್ತರಿಸಿಕೊಳ್ಳಬಹುದು.
ಅಂದರೆ, ಹದಿನೈದು ವರ್ಷದಲ್ಲಿ ಸಾಲ ಮುಗಿಸಿಕೊಳ್ಳಬೇಕು ಅಂತ ಪ್ಲಾನ್ ಮಾಡುವವರು ಸಾಲದ ಅವಧಿಯನ್ನು ಇಪ್ಪತ್ತು ವರ್ಷಕ್ಕೆ ವಿಸ್ತರಿಸಿಕೊಳ್ಳಬಹುದು. ಗೃಹಸಾಲ ಪಡೆಯುವಾಗಲೇ ಸಾಲದ ಅವಧಿಯನ್ನು ವಿಸ್ತರಿಸಿಕೊಂಡು ಮಾಸಿಕ ಇಂಎಐ ಕಡಿಮೆ ಮಾಡಿಕೊಳ್ಳಬಹುದು. ಆದರೆ ಈ ಆಯ್ಕೆಯಿಂದ ನೀವು ದೀರ್ಘಾವಧಿಗೆ ಹೆಚ್ಚು ಮೊತ್ತವನ್ನು ಬಡ್ಡಿ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.
ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸಿ: ನೀವು ನಿಗದಿತ ಸಮಯಕ್ಕೆ ಇಎಂಐ ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿಗದಿತ ಸಮಯದೊಳಗೆ ಇಎಂಐ ಕಟ್ಟದಿದ್ದರೆ ಲೇಟ್ ಫೀ ಕಟ್ಟುವ ಅನಿವಾರ್ಯತೆ ಇರುತ್ತದೆ. ಇದು ಕೂಡ ಒಂದು ರೀತಿಯಲ್ಲಿ ಅನಗತ್ಯ ಹೊರೆಯಾಗುತ್ತದೆ. ಜೊತೆಗೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆಯಾದರೆ ಹೊಸದಾಗಿ ಸಾಲ ಪಡೆಯಲು ತೊಂದರೆಯಾಗಬಹುದು. ಇಎಂಐ ಪಾವತಿಯ ದಿನಾಂಕಕ್ಕೂ ಮುನ್ನ ನಿಮ್ಮ ಖಾತೆಯಲ್ಲಿ ಅಗತ್ಯವಾದ ಹಣ ಇದೆಯೇ ಎಂಬುದನ್ನು ಪರಿಶೀಲಿಸಿಕೊಂಡು ಸಾಕಷ್ಟು ಹಣವನ್ನು ಮೀಸಲಿರಿಸಿಕೊಂಡಾಗ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದು.
ಅವಧಿಗೆ ಮೊದಲೇ ತೀರಿಸಲು ಯತ್ನಿಸಿ: ನಿಮಗೆ ಯಾವುದಾದರೂ ಬೇರೆ ಮೂಲಗಳಿಂದ ಹಣ ಬಂದರೆ, ಇಲ್ಲವೇ ಸಂಬಳ ಹೆಚ್ಚಾಗಿದ್ದರೆ ಸಾಲದ ಸ್ವಲ್ಪ ಮೊತ್ತವನ್ನು ರಿಪೇಮೆಂಟ್ ಮಾಡಿ. ಆಗ ಸ್ವಲ್ಪ ಬಡ್ಡಿ ಕಡಿಮೆಯಾಗಬಹುದು. ಆದರೆ ನೀವು ಒಮ್ಮೆ ಸಾಲ ಪಡೆದ ಮೇಲೆ ಅವಧಿಗೂ ಮುನ್ನವೇ ಮರು ಪಾವತಿ ಮಾಡುವ ಆಯ್ಕೆ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.
ಭಾಗಶಃ ಸಾಲದ ಮೊತ್ತವನ್ನು ಕಟ್ಟಬಹುದೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಒಂದು ವೇಳೆ ಇಂತಹ ಆಯ್ಕೆಗಳು ಇದ್ದಾಗ ನಿಮ್ಮ ಬಳಿ ಹೆಚ್ಚಿನ ಹಣ ಇದ್ದಾಗ ಸಾಲವನ್ನು ಹೆಚ್ಚುವರಿ ಇಎಂಐ ಇಲ್ಲವೇ, ಸಾಲದ ಮೊತ್ತವನ್ನು ಪಾವತಿಸಿಕೊಂಡರೆ ಸಾಲದ ಹೊರೆ ಕಡಿಮೆಯಾಗುತ್ತದೆ. ಅವಧಿಗೆ ಮೊದಲೇ ಸಾಲ ತೀರಿಸಲು ಯತ್ನಿಸಿ.
ಇಎಂಐ ಮೊತ್ತ ಹೆಚ್ಚು ಇರಲಿ: ಸಮೀಕರಿಸಿದ ಮಾಸಿಕ ಕಂತು-ಇಎಂಐ ಹೆಚ್ಚು ಇದ್ದರೆ ನಿಮಗೆ ಒಳ್ಳೆಯದು. ನಿಮ್ಮ ತಿಂಗಳ ಸಂಬಳದಲ್ಲಿ ಶೇಕಡಾ 30 ರಿಂದ 40 ರಷ್ಟನ್ನು ಇದು ಮೀರದಂತೆ ನೋಡಿಕೊಳ್ಳಿ. ಮಾಸಿಕ ಆದಾಯ ಹೆಚ್ಚಾಗಿದ್ದಾರೆ ಅದಕ್ಕೆ ಅನುಗುಣವಾಗಿಯೇ ಇಎಂಐ ಮೊತ್ತವನ್ನು ನಿಗದಿ ಮಾಡಿಕೊಳ್ಳಿ. ಕಡಿಮೆ ಕಂತುಗಳಲ್ಲಿ ಗೃಹ ಸಾಲ ಪಾವತಿಯ ನಿಮ್ಮ ನಿರ್ಧಾರದಿಂದ ಬಡ್ಡಿಯನ್ನು ಕಡಿಮೆ ಮಾಡಿಕೊಳ್ಳಬಹುದು.
ವಿಭಾಗ